More

    ಸಹಜೀವನ ಕೊಲೆಯಲ್ಲಿ ಪರ್ಯವಸಾನ!; ಬೆಂಗಳೂರಲ್ಲೂ ನಡೆದಿವೆ ಬರ್ಬರ ಕೊಲೆಗಳು, ಕೆಲ ತಿಂಗಳಲ್ಲಿ ಹಲವು ಪ್ರಕರಣ ದಾಖಲು

    ಮದುವೆಗೂ ಮುನ್ನವೇ ಹುಡುಗ-ಹುಡುಗಿ ‘ಲಿವಿಂಗ್ ಟುಗೆದರ್’ ಹೆಸರಲ್ಲಿ ಒಂದೇ ಮನೆಯಲ್ಲಿ ವಾಸಿಸುವ ರೂಢಿ ಇತ್ತೀಚೆಗೆ ದೇಶದಲ್ಲಿ ಹೆಚ್ಚಾಗುತ್ತಿದೆ. ಇದೇ ರೀತಿ ಸಹಜೀವನದಲ್ಲಿರುವ ಯುವತಿಯರ ಬರ್ಬರ ಹತ್ಯೆ ಪ್ರಕರಣಗಳೂ ಜಾಸ್ತಿಯಾಗುತ್ತಿವೆ. ಮುಂಬೈ, ದೆಹಲಿಯಂತಹ ಮಹಾನಗರಗಳಲ್ಲಿ ನಡೆಯುತ್ತಿದ್ದ ಇಂತಹ ಕೊಲೆ ಕೇಸ್​ಗಳು ಬೆಂಗಳೂರಿನಲ್ಲೂ ಹೆಚ್ಚಾಗಿ ವರದಿಯಾಗುತ್ತಿರುವುದು ಆತಂಕ ಮೂಡಿಸಿದೆ.

    | ಮಂಜುನಾಥ ಕೆ. ಬೆಂಗಳೂರು

    ಇಡೀ ದೇಶವನ್ನು ಬೆಚ್ಚಿಬೀಳಿಸಿದ್ದ ದೆಹಲಿಯ ಶ್ರದ್ಧಾ ವಾಲ್ಕರ್ ಹತ್ಯೆ, ಮುಂಬೈನ ವೈದ್ಯ ಸರಸ್ವತಿ ಕೊಲೆ ಪ್ರಕರಣದ ಮಾದರಿಯಲ್ಲೇ ಸಹಜೀವನ ನಡೆಸುತ್ತಿದ್ದ ಜೋಡಿಗಳ ಮಧ್ಯೆ ಕಲಹ ಉಂಟಾಗಿ ಕೊನೆಗೆ ಯುವತಿಯನ್ನು ಕೊಲೆ ಮಾಡುತ್ತಿರುವ ಪ್ರಕರಣಗಳು ಬೆಂಗಳೂರಲ್ಲೂ ಜಾಸ್ತಿಯಾಗಿವೆ.

    ಕೆಲ ತಿಂಗಳಿಂದ ಬೆಂಗಳೂರಿನ ಅಶೋಕನಗರ, ಅಮೃತಹಳ್ಳಿ, ಜ್ಞಾನಭಾರತಿ, ಪರಪ್ಪನ ಅಗ್ರಹಾರ, ರಾಮಮೂರ್ತಿನಗರ ಸೇರಿ ಹಲವು ಠಾಣೆಗಳಲ್ಲಿ ಲಿವಿನ್ ರಿಲೇಷನ್​ಶಿಪ್ ಹತ್ಯೆ ಹಾಗೂ ಹಲ್ಲೆ ಪ್ರಕರಣಗಳು ವರದಿಯಾಗಿವೆ. ಈ ಮೊದಲು ಪ್ರತಿ ವರ್ಷ 10-15 ಲಿವಿಂಗ್ ಟುಗೆದರ್​ನಲ್ಲಿ ಮೋಸ ಹೋದ ಪ್ರಕರಣಗಳು ದಾಖಲಾಗುತ್ತಿದ್ದವು. ಆದರೆ, ಈ ವರ್ಷ 20-25 ಪ್ರಕರಣಗಳು ದಾಖಲಾಗಿವೆ. ಮಹಿಳಾ ಆಯೋಗದ ಮೆಟ್ಟಿಲೇರಿದ 98 ಪ್ರಕರಣದಲ್ಲಿ 23 ಕೇಸ್​ಗಳನ್ನು ಇತ್ಯರ್ಥಗೊಳಿಸಲಾಗಿದೆ. ಉಳಿದ 75 ಕೇಸ್​ಗಳ ವಿಚಾರಣೆಯು ಚಾಲ್ತಿಯಲ್ಲಿವೆ ಎಂಬ ಮಾಹಿತಿ ಸಿಕ್ಕಿದೆ.

    ಕೇಸ್-1

    ಲಿವ್-ಇನ್ ರಿಲೇಶನ್​ಶಿಪ್​ನಲ್ಲಿದ್ದ ತೆಲಂಗಾಣ ಮೂಲದ 23 ವರ್ಷದ ಆಕಾಂಕ್ಷಾ ಎಂಬ ಯುವತಿಯನ್ನು ಪ್ರಿಯಕರ ದೆಹಲಿ ಮೂಲದ ಅರ್ಪಿತ್ ಉಸಿರುಗಟ್ಟಿಸಿ ಜೂ. 8ರಂದು ಕೊಲೆ ಮಾಡಿದ್ದ. ಆಕಾಂಕ್ಷಾ ವೃತ್ತಿಯಲ್ಲಿ ಸಾಫ್ಟ್​ವೇರ್ ಇಂಜಿನಿಯರ್ ಆಗಿದ್ದು, ಕಳೆದ ಹಲವು ದಿನಗಳಿಂದ ದೆಹಲಿ ಮೂಲದ ಅರ್ಪಿತ್ (27) ಎಂಬ ಯುವಕನೊಂದಿಗೆ ಜೀವನ್​ಬಿಮಾನಗರದ ಕೋಡಿಹಳ್ಳಿಯಲ್ಲಿ ವಾಸವಾಗಿದ್ದಳು. ಕೆಲದಿನಗಳ ಮಟ್ಟಿಗೆ ಅರ್ಪಿತ್ ವಾಪಸ್ ದೆಹಲಿಗೆ ಹೋಗಿದ್ದ. ಈ ವೇಳೆ ಆಕಾಂಕ್ಷಾ ಮತ್ತೆ ಸ್ನೇಹಿತರ ಜತೆ ಬೇರೆಡೆ ವಾಸವಿದ್ದಳು. ಪುನಃ ವಾಪಸ್ಸಾಗಿದ್ದ ಅರ್ಪಿತ್ ಜಗಳ ತೆಗೆದು ಕೊಲೆ ಮಾಡಿದ್ದ. ಕೊನೆಗೆ ಕುತ್ತಿಗೆ ಬಟ್ಟೆ ಬಿಗಿದು ನೇಣು ಹಾಕಿಕೊಂಡಂತೆ ಬಿಂಬಿಸಲು ಯತ್ನಿಸಿದ್ದ. ಆದರೆ, ಸಾಧ್ಯವಾಗದೆ ದೆಹಲಿಗೆ ಪರಾರಿಯಾಗಿದ್ದ.

    ಕೇಸ್-2

    ಪ್ರಿಯತಮೆಯ ಮೇಲೆ ಅನುಮಾನಗೊಂಡು ರಾಡ್​ನಿಂದ ಬಲವಾಗಿ ಹೊಡೆದು ಹತ್ಯೆ ಮಾಡಿದ್ದ ಘಟನೆ ರಾಮಮೂರ್ತಿ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು. ನೇಪಾಳ ಮೂಲದ ಕೃಷ್ಣಕುಮಾರಿ ಹಾಗೂ ಆರೋಪಿ ಸಂತೋಷ್ ಒಟ್ಟಿಗೆ ವಾಸಿಸುತ್ತಿದ್ದರು. ಆದರೆ, ಕೃಷ್ಣಕುಮಾರಿ ಮೇಲೆ ಅನುಮಾನಗೊಂಡಿದ್ದ ಸಂತೋಷ್ ಇದೇ ವಿಚಾರಕ್ಕೆ ಜಗಳ ತೆಗೆಯುತ್ತಿದ್ದ. ಕೊನೆಗೆ ಒಮ್ಮೆ ಜಗಳ ವಿಕೋಪಕ್ಕೆ ತಿರುಗಿ ಸಂತೋಷನು ರಾಡ್​ನಿಂದ ಬಲವಾಗಿ ಹೊಡೆದು ಕೃಷ್ಣಕುಮಾರಿಯನ್ನು ಕೊಲೆ ಮಾಡಿದ್ದ..

    ಕೇಸ್-3

    ಅಶೋಕನಗರ ಠಾಣಾ ವ್ಯಾಪ್ತಿಯಲ್ಲಿ ಯುವತಿ ಕೌಸರ್ ಹಾಗೂ ಆರೋಪಿ ನದೀಂ ಪಾಷ 4 ವರ್ಷಗಳಿಂದ ಲಿವಿಂಗ್ ರಿಲೇಷನ್​ಶಿಪ್​ನಲ್ಲಿದ್ದರು. ಎಲ್ಲವೂ ಚೆನ್ನಾಗಿಯೇ ಇತ್ತು. ಈ ವೇಳೆ ಹುಟ್ಟುಹಬ್ಬಕ್ಕೆ ಬೆಳ್ಳಿ ಚೈನ್ ತಂದುಕೊಡದಿದ್ದಕ್ಕೆ ಕೌಸರ್ ಜಗಳ ತೆಗೆದು, ಇಬ್ಬರ ನಡುವೆ ವಾಗ್ವಾದ ಏರ್ಪಟ್ಟಿತ್ತು. ಈ ವೇಳೆ ನದೀಂ ಪಾಷಾನು ಕೌಸರಳನ್ನು ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿದ್ದ. ಅಶೋಕನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಕೇಸ್-4

    ಲಿವ್-ಇನ್ ರಿಲೇಷನ್​ಶಿಪ್​ನಲ್ಲಿದ್ದ ಯುವತಿ ಬೇರೊಬ್ಬನ ಜತೆ ಸ್ನೇಹ ಮಾಡಿದ್ದಳು. ಇದರಿಂದ ಆಕ್ರೋಶಗೊಂಡ ಪ್ರಿಯತಮನು ಯುವತಿ ಜತೆ ಸ್ನೇಹ ಮಾಡಿದವನನ್ನು ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದ. ಆರೋಪಿ ವಿಕ್ಟರ್ ತನ್ನ ಪ್ರಿಯತಮೆಯೊಂದಿಗೆ ಕೆಲ ವರ್ಷಗಳಿಂದ ಅಮೃತಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ವಾಸವಿದ್ದ. ಆದರೆ, ಯುವತಿ ತನ್ನ ಸ್ನೇಹಿತ ಸುಲೇಮಾನ್ ಜತೆ ಸಲುಗೆಯಿಂದ ಇದ್ದಿದ್ದನ್ನು ನೋಡಿದ ವಿಕ್ಟರ್, ಸುಲೇಮಾನ್​ನನ್ನು ಭೀಕರವಾಗಿ ಕೊಲೆ ಮಾಡಿದ್ದ. ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಕೇಸ್-5

    ಮಾಜಿ ಪ್ರಿಯತಮೆಗೆ ಪದೇಪದೆ ಕರೆ ಮಾಡುತ್ತಿದ್ದುದಕ್ಕಾಗಿ ಆರೋಪಿ ಶ್ರೀಕಾಂತ್​ನನ್ನು ಕೊಲೆ ಮಾಡಿದ್ದ ಘಟನೆ ಜ್ಞಾನಭಾರತಿ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು. ಮಹಿಳೆಯೊಬ್ಬಳು ಮೊದಲು, ಕೊಲೆಯಾದ ಶ್ರೀಕಾಂತ್ ಜತೆಗೆ ಲಿವಿಂಗ್ ರಿಲೇಷನ್​ಶಿಪ್​ನಲ್ಲಿದ್ದಳು. ನಂತರ ಅವನೊಂದಿಗೆ ಜಗಳವಾಡಿಕೊಂಡು ಬೇರ್ಪಟ್ಟು, ಅರುಣ್ ಕುಮಾರ್ ಜತೆಗಿದ್ದಳು. ಆದರೆ ಶ್ರೀಕಾಂತನು ಪದೇಪದೆ ಮಹಿಳೆಗೆ ಕರೆ ಮಾಡ್ತಿದ್ದ. ಹೀಗಾಗಿ, ಅರುಣನು ಶ್ರೀಕಾಂತನನ್ನು ಕೊಲೆ ಮಾಡಿಸಿದ. ಸಿಸಿಬಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.

    ಕೇಸ್-6

    ಮದುವೆಯಾಗುವಂತೆ ಒತ್ತಾಯಿಸಿದಕ್ಕಾಗಿ ಪ್ರಿಯತಮೆಯನ್ನು ಕೊಲೆ ಮಾಡಿದ್ದ ಘಟನೆ ಪರಪ್ಪನ ಅಗ್ರಹಾರ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು. ಪ್ರಿಯತಮೆ ಸುನೀತಾ ಕೆಲ ವರ್ಷಗಳಿಂದ ಆರೋಪಿ ಪ್ರಿಯತಮ ಪ್ರಶಾಂತ್ ಜತೆಗೆ ಲಿವಿಂಗ್ ರಿಲೇಷನ್​ಶಿಪ್​ನಲ್ಲಿದ್ದಳು. ಲಿವಿಂಗ್ ಸಾಕು ಮದುವೆಯಾಗು ಎಂದು ಸುನೀತಾ ಒತ್ತಾಯಿಸಿದ್ದರಿಂದ ಶ್ರೀಕಾಂತನು ಆಕೆಯನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದ.

    ಕೇಸ್-7

    ಲಿವ್-ಇನ್ ರಿಲೇಷನ್​ಶಿಪ್​ನಲ್ಲಿದ್ದ ಪ್ರಿಯರಕನನ್ನೇ ಕಿಡ್ನ್ಯಾಪ್ ಮಾಡಿಸಿದ ಪ್ರೇಯಸಿ ಆತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣ ಹನುಮಂತನಗರದಲ್ಲಿ ನಡೆದಿತ್ತು. ಮೂರು ವರ್ಷಗಳ ಹಿಂದೆ ಮೊಬೈಲ್​ಫೋನ್ ರಿಪೇರಿ ಮಾಡಿಸಲು ಹೋದ ಕ್ಲಾರಾ ಎಂಬಾಕೆಗೆ ಮಹದೇವ ಪ್ರಸಾದ್ ಪರಿಚಯವಾಗಿತ್ತು. ನಂತರ ಇಬ್ಬರೂ ಲಿವಿಂಗ್ ಟುಗೆದರ್ ರಿಲೇಷನ್​ಶಿಪ್​ನಲ್ಲಿ ಇದ್ದರು. ಕ್ಲಾರಾ, ಮಹದೇವ ಪ್ರಸಾದ್​ಗಾಗಿ ಗಂಡನಿಂದ ವಿಚ್ಛೇದನ ಪಡೆದುಕೊಳ್ಳಲು ಮುಂದಾಗಿದ್ದಳು. ಈ ನಡುವೆ ಇವರಿಬ್ಬರಿಗೂ ಪರಸ್ಪರ ಅನುಮಾನ ಮೂಡಿತ್ತು. ಬೇರೆಯವರ ಜತೆ ಸಂಬಂಧವಿದೆ ಎಂದು ಪರಸ್ಪರ ಆರೋಪಿಸಿ ದೂರವಾಗಿದ್ದರು. ಈ ವಿಚಾರವನ್ನು ಕ್ಲಾರಾ ತನ್ನ ಸ್ನೇಹಿತೆ ಹೇಮಾವತಿಗೆ ಹೇಳಿದ್ದಳು. ಆತನಿಗೆ ಬುದ್ಧಿ ಕಲಿಸಬೇಕು ಎಂದು ಹೇಮಾವತಿ ತನ್ನ ಗಂಡ ಸಂತೋಷ್​ಗೆ ಹೇಳಿದ್ದಳು. ಸಂತೋಷ್ ಈ ವಿಚಾರವನ್ನು ತಾನು ಕೆಲಸ ಮಾಡುತ್ತಿದ್ದ ಬಾಸ್ ಕಿರಣ್​ಗೆ ಹೇಳಿದ್ದ. ಮಹದೇವ ಪ್ರಸಾದ್​ನನ್ನು ಕಿಡ್ನ್ಯಾಪ್ ಮಾಡಿ ಹಲ್ಲೆ ಮಾಡಲು ಸಂಚು ರೂಪಿಸಲಾಗಿತ್ತು. ಅದರಂತೆ ಕ್ಲಾರಾ, ಮಹದೇವನನ್ನು ಕರೆಸಿಕೊಂಡು ಕಾರಿನಲ್ಲಿ ಕಿಡ್ನ್ಯಾಪ್ ಮಾಡಿ ಜಿಂಕೆ ಪಾರ್ಕ್ ಬಳಿ ಇರುವ ಸ್ಮಶಾನಕ್ಕೆ ಕರೆದೊಯ್ದಿದ್ದಳು. ಕ್ಲಾರಾ ಸೇರಿ 8 ಮಂದಿ ಬಿದಿರಿನ ಕೋಲಿನಲ್ಲಿ ಹಿಗ್ಗಾಮುಗ್ಗಾ ಥಳಿಸಿದ್ದರು. ನಂತರ ಚಾಮರಾಜಪೇಟೆಯ ಗೋದಾಮಿನಲ್ಲಿ ಕೂಡಿ ಹಾಕಿ ಚಿತ್ರಹಿಂಸೆ ಕೊಟ್ಟಿದ್ದರು.

    ಲಿವ್-ಇನ್ ರಿಲೇಷನ್​ಶಿಪ್​ಗೆ ಯಾವುದೇ ಕಾನೂನಿನ ಮಾನ್ಯತೆ ಇಲ್ಲ. ಆದರೆ, ಕೆಲವೊಂದು ಕಮಿಟ್​ವೆುಂಟ್​ಗಳಿಗಾಗಿ ಯುವತಿ-ಯುವಕ ಸಹಜೀವನ ನಡೆಸುತ್ತಾರೆ. ಮದುವೆಯಲ್ಲಿ ನಂಬಿಕೆ, ಆಚಾರ ಮತ್ತು ಧರ್ಮದಲ್ಲಿ ನಂಬಿಕೆ ಇಲ್ಲದವರು ಬರೀ ನಾವಿಬ್ಬರು ಒಟ್ಟಿಗೆ ಇದ್ದರೆ ಸಾಕು ಎಂಬ ಭಾವನೆಯಲ್ಲಿ ಸಹ ಜೀವನ ನಡೆಸುತ್ತಾರೆ. ಮಹಾನಗರದಲ್ಲಿ ಲಿವಿಂಗ್ ರಿಲೇಷನ್​ಶಿಪ್ ಸಂಸ್ಕೃತಿ ಜಾಸ್ತಿ. ಈ ಸಂಬಂಧ ಇಬ್ಬರ ಮಧ್ಯೆ ಮಾತ್ರ ಇರುತ್ತೆ. ಕುಟುಂಬದವರ ಮತ್ತು ಸಮಾಜದ ಒಪ್ಪಿಗೆ ಇರುವುದಿಲ್ಲ. ಇವರೇ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕಾಗುತ್ತದೆ. ಈ ಸಂಬಂಧದಲ್ಲಿ ಕೆಲವೊಮ್ಮೆ ಅನುಮಾನಗಳು ಮೂಡಿ ಕೂಗಾಟ, ಹಲ್ಲೆ ಮಾಡುವುದು, ಬೆದರಿಸುವಂತಹ ಘಟನೆಗಳು ನಡೆಯಬಹುದು. ಅಲ್ಲದೆ, ಕೊಲೆ ಮಾಡುವಂತಹ ಹಂತಕ್ಕೂ ಇದು ತಲುಪಬಹುದು.

    | ಡಾ.ಪ್ರದೀಪ್ ಕುಮಾರ್ ಪಿ.ಸಿ., ಸಹಾಯಕ ಪ್ರಾಧ್ಯಾಪಕ, ಮನೋ ವೈದ್ಯಕೀಯ ವಿಭಾಗ, ಜೆಎಸ್​ಎಸ್ ಮೆಡಿಕಲ್ ಕಾಲೇಜು, ಮೈಸೂರು

    ಮೂರನೇ ಮಗುವಾದರೆ 5 ಲಕ್ಷ ರೂ. ಕೊಡ್ತಾರಂತೆ!; ಶಿಕ್ಷಣ-ಚಿಕಿತ್ಸೆಯೂ ಉಚಿತ, ಮದ್ವೆ ಖರ್ಚಿಗೂ ಧನಸಹಾಯ: ಇಲ್ಲಿದೆ ವಿವರ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts