More

    ಉತ್ಸಾಹ, ನೆಮ್ಮದಿಯಿಂದ ಬಾಳುವಂತಾಗಲಿ

    ನರಗುಂದ: ಮನುಷ್ಯನ ಜೀವನ ಸಾವಿನ ದಾರಿಗೆ ದೂಡುವುದರ ಬದಲಾಗಿ ಉತ್ಸಾಹ, ನೆಮ್ಮದಿಯಿಂದ ಬದುಕುವುದನ್ನು ಕಲಿಸಿಕೊಡಬೇಕು ಎಂದು ತಾಳಿಕೋಟಿ ಖಾಸ್ಗತೇಶ್ವರ ಮಠದ ಬಾಲ ಶಿವಯೋಗಿ ಶ್ರೀ ಸಿದ್ಧಲಿಂಗ ದೇವರು ಹೇಳಿದರು.

    ಪಟ್ಟಣದ ಪುಣ್ಯಾರಣ್ಯ ಪತ್ರಿವನಮಠದಲ್ಲಿ ಗುರುವಾರ ಜರುಗಿದ ಶ್ರೀಗುರು ಶಿವಯ್ಯಜ್ಜನವರ 72ನೇ, ಶಂಭುಲಿಂಗ ಶ್ರೀಗಳ 14ನೇ ಪುಣ್ಯ ಸ್ಮರಣೋತ್ಸವ, ಡಾ. ಗುರುಸಿದ್ಧವೀರ ಶಿವಯೋಗಿ ಶಿವಾಚಾರ್ಯರ ದ್ವಾದಶ ಪಟ್ಟಾಧಿಕಾರ ಮಹೋತ್ಸವದ ಧರ್ಮ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು. ಮಠಗಳು ಉತ್ತರೋತ್ತರವಾಗಿ ಬೆಳೆಯಬೇಕಾದರೆ ಒಳ್ಳೆಯ ಉತ್ತರಾಧಿಕಾರಿಗಳ ನೇತೃತ್ವ ಅತ್ಯವಶ್ಯಕ. ಮಠದಿಂದ ಘಟ ಅಲ್ಲ. ಘಟದಿಂದಲೇ ಮಠಗಳ ಅಭಿವೃದ್ಧಿ ಎಂಬರ್ಥದಲ್ಲಿ ನರಗುಂದದ ಪುಣ್ಯಾರಣ್ಯ ಪತ್ರಿವನಮಠದ ಗುರುಸಿದ್ಧವೀರ ಶಿವಾಚಾರ್ಯರು ಸಲ್ಲಿಸುತ್ತಿರುವ ಕಾರ್ಯ ಅವಿಸ್ಮರಣೀಯವಾದುದು ಎಂದು ಬಣ್ಣಿಸಿದರು.

    ಭೈರನಹಟ್ಟಿ ಶಾಂತಲಿಂಗ ಸ್ವಾಮೀಜಿ ಮಾತನಾಡಿ, ಜಗತ್ತಿನ ಎಲ್ಲ ಧರ್ಮಗಳು ಶಾಂತಿ ಮತ್ತು ಸಹಬಾಳ್ವೆಯನ್ನು ಬೋಧಿಸಿವೆ. ಇದನ್ನು ಸರಿಯಾಗಿ ತಿಳಿಯದೆ ಇರುವುದರಿಂದ ಸಮಾಜದಲ್ಲಿ ಅಶಾಂತಿಯ ವಾತಾವರಣ ನಿರ್ವಣವಾಗುತ್ತಿದೆ. ಪ್ರತಿಯೊಬ್ಬರೂ ನಮ್ಮ ಧರ್ಮಗಳನ್ನು ಪ್ರೀತಿಸುವುದರ ಜತೆಗೆ ಅನ್ಯ ಧರ್ಮಗಳನ್ನು ಗೌರವಿಸಬೇಕು ಎಂದರು.

    ಡಾ.ಗುರುಸಿದ್ಧವೀರ ಶಿವಯೋಗಿ ಶಿವಾಚಾರ್ಯರು, ಹುಬ್ಬಳ್ಳಿಯ ಶ್ರೀ ಶಂಕರಾಚಾರ್ಯ ಕಡ್ಲಾಸ್ಕರ್, ಬೀಳಗಿಯ ಶಿವಾನಂದ ಮಹಾಸ್ವಾಮಿಗಳು ಮಾತನಾಡಿದರು. ಶ್ರೀಮಠದ ಆವರಣದಲ್ಲಿ ಬೆಳಗ್ಗೆ ಚಂಡಿಕಾಯಾಗ, ಶ್ರೀದೇವಿ ಪಾರಾಯಣ, ವಿಶೇಷ ಪೂಜೆ, ಪುನಸ್ಕಾರ, ಹೋಮ, ಹವನ, ಗಣ್ಯರಿಗೆ ಸತ್ಕಾರ ಹಾಗೂ ಬಾಲ ಕನ್ಯೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಿದವು. ಕುರ್ಲಗೇರಿ ಸದ್ಭಕ್ತರಿಂದ ಹೋಳಿಗೆ ಊಟದ ಸೇವೆ ನೀಡಲಾಯಿತು. ವಿಶ್ವನಾಥ ಗುಡಿಸಾಗರ, ವಿಠ್ಠಲ ಶಿಂಧೆ, ಪ್ರಕಾಶ ಪಟ್ಟಣಶೆಟ್ಟಿ, ಬಿ.ಎಂ. ಬೀರನೂರ, ಚಂದ್ರಶೇಖರ ಕೋಟಿ, ಈಶ್ವರಯ್ಯ ಮಠಪತಿ, ಆರ್.ಬಿ. ಚಿನಿವಾಲರ, ಕುಮಾರಗೌಡ ಗುರಪ್ಪಗೌಡ್ರ, ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts