More

    ಅನುದಾನ ಬಳಸದಿದ್ದರೆ ಮೊಕದ್ದಮೆ

    ಹಾವೇರಿ: ಎಸ್​ಸಿ, ಎಸ್​ಟಿ ಕಲ್ಯಾಣಕ್ಕಾಗಿ ಇಲಾಖಾವಾರು ಬಿಡುಗಡೆಯಾದ ಅನುದಾನವನ್ನು ಕಾಲಮಿತಿಯೊಳಗೆ ವೆಚ್ಚ ಮಾಡದ ಅಧಿಕಾರಿಗಳ ಮೇಲೆ ಎಸ್​ಸಿ, ಎಸ್​ಟಿ ಅಧಿನಿಯಮದಡಿ ಮೊಕದ್ದಮೆ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟಣ್ಣವರ ಎಚ್ಚರಿಸಿದರು.

    ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಅನುಸೂಚಿತ ಜಾತಿಗಳ ಉಪಯೋಜನೆ ಹಾಗೂ ಬುಡಕಟ್ಟು ಉಪಯೋಜನೆಯಡಿ ವಿವಿಧ ಇಲಾಖೆಗೆ ಹಂಚಿಕೆಯಾದ ಅನುದಾನದ ಬಳಕೆ, ಕಾರ್ಯಕ್ರಮದ ಅನುಷ್ಠಾನ ಕುರಿತು ಪರಿಶೀಲನೆ ನಡೆಸಿದ ಅವರು, ಸರ್ಕಾರ ಬಿಡುಗಡೆಗೊಳಿಸಿರುವ ಅನುದಾನವನ್ನು ಸಕಾರಣವಿಲ್ಲದೆ ಯೋಜನೆಯ ಅನುಷ್ಠಾನದಲ್ಲಿ ನಿರ್ಲಕ್ಷ್ಯ ವಹಿಸಿ ಅನುದಾನ ಉಳಿಸಿಕೊಂಡ ಅಧಿಕಾರಿಗಳ ಮೇಲೆ ಖುದ್ದಾಗಿ ಮೊಕದ್ದಮೆ ದಾಖಲಿಸುತ್ತೇನೆ ಎಂದರು.

    ಯಾವುದೇ ಕಾರಣಕ್ಕೂ ಈ ಜನಾಂಗದ ಅಭಿವೃದ್ಧಿಗಾಗಿ ಬಿಡುಗಡೆಯಾದ ಅನುದಾನ ಬೇರೆಡೆ ಬಳಕೆಯಾಗಬಾರದು. ಈ ಹಂತದಲ್ಲಿ ಯಾವುದೇ ಕಾರ್ಯಕ್ರಮಗಳ ಬದಲಾವಣೆ, ಏಜೆನ್ಸಿಗಳ ಬದಲಾವಣೆ ಮಾಡಬಾರದು. ಈಗಾಗಲೇ ಕಾಮಗಾರಿ ವಹಿಸಿರುವ ಏಜೆನ್ಸಿಗಳ ಮೂಲಕವೇ ಕೆಲಸ ಮಾಡಿಸಬೇಕು. ಏಜೆನ್ಸಿಗಳು ಅನುಷ್ಠಾನದಲ್ಲಿ ವಿಳಂಬ ಮಾಡಿದರೆ ಕ್ರಮವಹಿಸಲಾಗುವುದು ಎಂದರು.

    ಗ್ರಾಮೀಣ ಮತ್ತು ಸಣ್ಣ ಉದ್ಯಮ ಇಲಾಖೆಗೆ ಎಸ್​ಇಪಿ ಮತ್ತು ಟಿಎಸ್​ಪಿ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ ಬಿಡುಗಡೆಯಾದ ಅನುದಾನ ಹಾಗೂ ಬಳಕೆ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ಕೇವಲ ಹೊಲಿಗೆ ಯಂತ್ರ ನೀಡುವ ಏಕ ತರಹದ ಕಾರ್ಯಕ್ರಮಗಳನ್ನು ರೂಪಿಸುತ್ತ ಬರಲಾಗಿದೆ. ಬೇರೆ ಬೇರೆ ಕೌಶಲಗಳನ್ನು ಪ್ರೋತ್ಸಾಹಿಸುವ ಯೋಜನೆಗಳನ್ನು ರೂಪಿಸಿ ಎಂದರು.

    ಸಭೆಗೆ ಗೈರು ಹಾಜರಾದ ತುಂಗಾ ಮೇಲ್ದಂಡೆ ಯೋಜನೆಯ ಇಂಜಿನಿಯರ್, ಪಿಡಬ್ಲ್ಯುಡಿ ಇಂಜಿನಿಯರ್, ಸಣ್ಣ ನೀರಾವರಿ ಸೇರಿ ವಿವಿಧ ಇಲಾಖೆ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಲು ಸೂಚಿಸಿದರು.

    ಯಾವುದಕ್ಕೆ ಎಷ್ಟು?: ಲೋಕೋಪಯೋಗಿ ಇಲಾಖೆ ರಾಜ್ಯ ಹೆದ್ದಾರಿ ಮತ್ತು ಪ್ರಮುಖ ಜಿಲ್ಲಾ ರಸ್ತೆಗಳ ದುರಸ್ತಿಗೆ 2.98ಕೋಟಿ ರೂ. ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಗ್ರಾಮೀಣ ರಸ್ತೆಗಳು ಮತ್ತು ಸೇತುವೆಗಳ ದುರಸ್ತಿಗೆ 10.45ಕೋಟಿ ರೂ. ಹೆಸ್ಕಾಂಗೆ 1.27 ಕೋಟಿ ರೂ. ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳ ಕೊಠಡಿ ನಿರ್ಮಾಣ ಹಾಗೂ ದುರಸ್ತಿಗೆ 9.16 ಕೋಟಿ ರೂ. ಅಂಗನವಾಡಿ ಕಟ್ಟಡ ದುರಸ್ತಿಗೆ 3.38 ಕೋಟಿ ರೂಪಾಯಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts