More

    ಶೈಕ್ಷಣಿಕ ಸಮಸ್ಯೆಗಳ ಪರಿಹಾರಕ್ಕೆ ಎಬಿವಿಪಿ ಒತ್ತಾಯ

    ಲಿಂಗಸುಗೂರು: ಕೋವಿಡ್ ಕಾರಣ ಬದಲಾದ ತರಗತಿಗಳ ಸಮಯಕ್ಕೆ ಹಾಜರಾಗಲು ಗ್ರಾಮೀಣ ವಿದ್ಯಾರ್ಥಿಗಳಿಗೆ ಸಾಧ್ಯವಾಗುತ್ತಿಲ್ಲ. ಶೀಘ್ರವೇ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕೆಂದು ಒತ್ತಾಯಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ವಿದ್ಯಾರ್ಥಿಗಳು ಎಸಿ ಕಚೇರಿ ಸಿಬ್ಬಂದಿ ಅಮರೇಶ್‌ಗೆ ಸೋಮವಾರ ಮನವಿ ಸಲ್ಲಿಸಿದರು.

    ಕರೊನಾ ಸಂಕಷ್ಟದ ಬಳಿಕ ಶಾಲಾ ಕಾಲೇಜು ಆರಂಭಗೊಂಡರೂ ಕೆಲ ಹಳ್ಳಿಗಳಲ್ಲಿ ಇನ್ನೂ ಬಸ್ ಸೇವೆ ಪುನರಾರಂಭಗೊಂಡಿಲ್ಲ. ಸಾರಿಗೆ ಇಲಾಖೆ ವಿದ್ಯಾರ್ಥಿಗಳ ಅವಶ್ಯಕತೆಗೆ ಅನುಗುಣವಾಗಿ ಗ್ರಾಮೀಣ ಭಾಗಕ್ಕೆ ಬಸ್ ವ್ಯವಸ್ಥೆ ಕಲ್ಪಿಸಬೇಕು. ಡಿಪ್ಲೊಮಾ, ಇಂಜಿನಿಯರಿಂಗ್, ಸ್ನಾತಕ-ಸ್ನಾತಕೋತ್ತರ, ಪಿಎಚ್‌ಡಿ ಮಾಡುವ ಎಸ್ಸಿ, ಎಸ್ಟಿ, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಪೂರ್ಣ ಪ್ರಮಾಣದಲ್ಲಿ ಶಿಷ್ಯವೇತನ ಪಡೆಯದೆ ಪರದಾಡುವಂತಾಗಿದೆ. ಸರ್ಕಾರ ಪೂರ್ಣ ಪ್ರಮಾಣದಲ್ಲಿ ವಿದ್ಯಾಸಿರಿ ಶಿಷ್ಯವೇತನ ಸೇರಿ ಎಲ್ಲ ವಿದ್ಯಾರ್ಥಿ ವೇತನ ತಕ್ಷಣ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದರು.

    ರಾಜ್ಯದ ಅನೇಕ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳು ವಸತಿ ನಿಲಯ ಅವಲಂಬಿತರಾಗಿದ್ದು, ವಸತಿ ನಿಲಯಗಳ ಆಯ್ಕೆ ಪ್ರಕ್ರಿಯೆ ಮುಗಿಯದೆ ಪರದಾಡುವಂತಾಗಿದೆ. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಹಿಂದುಳಿದ ವರ್ಗ, ಸಮಾಜ ಕಲ್ಯಾಣ ಮತ್ತು ಅಲ್ಪಸಂಖ್ಯಾತ ಇಲಾಖೆಗಳ ವ್ಯಾಪ್ತಿಯ ವಸತಿ ನಿಲಯಗಳಿಗೆ ಮೂಲ ಸೌಕರ್ಯ ಕಲ್ಪಿಸಿ ಬಡ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಬೇಕೆಂದು ಒತ್ತಾಯಿಸಿದರು.

    ಎಬಿವಿಪಿ ನಗರ ಘಟಕ ಸಹ ಕಾರ್ಯದರ್ಶಿ ಮೌನೇಶ ಕಟ್ಟಿಮನಿ, ತಾಲೂಕು ಸಂಚಾಲಕ ವಿರಾಜ್, ಹೇಮಂತ್, ಅಶ್ವಿನಿ, ಚಂದೂಲಾಲ್, ಮೌನೇಶ ನಾಯಕ, ನಾಗರಾಜ, ರಾಹುಲ್, ಸೂರ್ಯವಂಶಿ, ಬಸವರಾಜ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts