More

    ಜೀವನ ಸಂಸ್ಕಾರಯುತವಾಗಲಿ

    ಬೈಲಹೊಂಗಲ: ನಿರ್ಮಲವಾದ ಮನಸ್ಸಿನಿಂದ ಗುರುವಿನ ಸನಿಹದಲ್ಲಿ ಅಧ್ಯಾತ್ಮ ಅಳವಡಿಸಿಕೊಂಡು ಸಂಸ್ಕಾರಯುತ ಜೀವನ ನಡೆಸುವುದರಿಂದ, ಎಲ್ಲರ ಬದುಕು ಪಾವನಮಯವಾಗಿ ದೇಶದಲ್ಲಿ ಶಾಂತಿ ನೆಲೆಸಲಿದೆ. ಈ ನಿಟ್ಟಿನಲ್ಲಿ ನಾಡಿನಲ್ಲಿ ಆಧ್ಯಾತ್ಮಿಕತೆ ಪಸರಿಸುತ್ತಿರುವ ಡಾ. ಶಿವಾನಂದ ಭಾರತಿ ಅಪ್ಪನವರು ದೇವರ ಸ್ವರೂಪವಾಗಿ ನಮ್ಮನ್ನು ಹರಸುತ್ತಿದ್ದಾರೆ ಎಂದು ಹಂಪಿ ಹೇಮಕೂಟದ ಶಿವರಾಮಾವಧೂತಾಶ್ರಮದ ವಿದ್ಯಾನಂದ ಭಾರತಿ ಸ್ವಾಮೀಜಿ ಹೇಳಿದರು.

    ಸಮೀಪ ಸುಕ್ಷೇತ್ರ ಇಂಚಲ ಗ್ರಾಮದ ಶ್ರೀ ಶಿವಯೋಗೀಶ್ವರ ಸಾಧು ಸಂಸ್ಥಾನ ಮಠದ ಡಾ.ಶಿವಾನಂದ ಭಾರತಿ ಸ್ವಾಮೀಜಿ ಅವರ 84ನೇ ಜಯಂತ್ಯುತ್ಸವ ಹಾಗೂ ವಿಶ್ವಶಾಂತಿಗಾಗಿ 54ನೇ ಅಖಿಲ ಭಾರತ ವೇದಾಂತ ಪರಿಷತ್ತಿನಲ್ಲಿ ಶುಕ್ರವಾರ ಮೊದಲ ದಿನದ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದರು.

    ಭಕ್ತರಲ್ಲೇ ಗುರುನಾಥರೂಢರನ್ನು ಕಾಣುವ ಇಂಚಲ ಶಿವಾನಂದ ಅಪ್ಪನವರು ಸಮಾಜದಲ್ಲಿ ಆಧ್ಯಾತ್ಮಿಕತೆಯ ಸಾರ ಭಿತ್ತಿ ಸಮಾಜ ಸುಧಾರಿಸಬೇಕೆಂದು ದೇಶದ ಮೂಲೆ ಮೂಲೆಗಳ ಗುರುಗಳ ದರ್ಶನ ಭಾಗ್ಯದ ಜತೆಗೆ ಅವರ ಆಶೀರ್ವಾದ ವಾಣಿಯನ್ನು ವೇದಾಂತ ಪರಿಷತ್ ಮೂಲಕ ಉಣಬಡಿಸುತ್ತಿದ್ದಾರೆ. ಎಲ್ಲರೂ ಪಾಲ್ಗೊಳ್ಳಿ ಸಾಕು ನಿಮ್ಮ ಜೀವನ ಸಾರ್ಥಕವಾಗುತ್ತದೆ ಎಂದರು.

    ಶ್ರೀಮಠದ ಡಾ.ಶಿವಾನಂದ ಭಾರತಿ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಆಡಂಬರವಿಲ್ಲದ ಶುದ್ಧವಾದ ಭಕ್ತಿ ನಮ್ಮೊಳಗೆ ಹುಟ್ಟಬೇಕು. ದೇವರ ಪಾದವನ್ನು ಸೇರಲು ನಮ್ಮಲ್ಲಿ ಆಳವಾದ ಭಕ್ತಿ ಇರಲೇಬೇಕು. ಏಕಾಗ್ರತೆಯನ್ನು ಹೊಂದಿದ ಭಕ್ತಿಯೇ ಯಜ್ಞ, ತಪಸ್ಸು, ಮೊದಲಾದ ಪೂಜಾ ವಿಧಿ-ವಿಧಾನಗಳಿಗೆ ಮೂಲ ಎಂದರು.

    ಜ್ಞಾನವಿಲ್ಲದವನು ಕತ್ತಲನ್ನು ಓಡಿಸಲಾರ ಬೆಳಕನ್ನು ಅನುಭವಿಸಲಾರ. ದೇವರು ಎಂದರೆ ಮನುಷ್ಯನ ಸಂತೃಪ್ತ ಸ್ಥಿತಿಯ ಅದೃಶರೂಪ. ಮನುಷ್ಯನ ಒಳಗೆ ಸರ್ವಾಂತಯಾಮಿಯಾದ ದೇವರು ಇದ್ದಾನೆ. ದೇವರ ಒಲವಿಗಾಗಿ ಪರಿ ಪರಿಯಾಗಿ ಪೂಜಿಸುವ ನಾವು ಬಯಸುವುದು ಆತನ ಅನುಗ್ರಹ ಮತ್ತು ಅದರಿಂದ ದೊರೆಯುವ ಸಂತೃಪ್ತಿಯೇ ಜೀವನ ಎಂದರು.
    ಹುಬ್ಬಳ್ಳಿ ಜಡೆಸಿದ್ದಯೋಗೀಂದ್ರ ಮಠದ ರಾಮಾನಂದ ಭಾರತಿ ಸ್ವಾಮೀಜಿ, ಇಂಚಲದ ಪೂರ್ಣಾನಂದ ಭಾರತಿ ಸ್ವಾಮೀಜಿ, ಹುಬ್ಬಳ್ಳಿ ಸಿದ್ಧಾರೂಢ ಮಠದ ಸಚ್ಚಿದಾನಂದ ಸ್ವಾಮೀಜಿ, ತುಂಗಳದ ಅನಸೂಯಾತಾಯಿ, ಕುಳ್ಳೂರಿನ ಶಿವಯೋಗೀಶ್ವರ ಮಠದ ಬಸವಾನಂದ ಭಾರತಿ ಸ್ವಾಮೀಜಿ ಹಾಗೂ ವಿವಿಧ ಮಠಾಧೀಶರು ಇದ್ದರು.

    ಇದಕ್ಕೂ ಮುಂಚೆ ಪ್ರಾಥಕಾಲದಲ್ಲಿ ಡಾ.ಶಿವಾನಂದ ಭಾರತಿ ಸ್ವಾಮೀಜಿ ಸಾನ್ನಿಧ್ಯದಲ್ಲಿ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ಶಾಲಾ ಮಕ್ಕಳಿಂದ ಭಗವದ್ಗೀತೆ ಪಾರಾಯಣ ಜರುಗಿತು. ಹಂಪಿ ಹೇಮಕೂಟ ವಿದ್ಯಾನಂದ ಭಾರತಿ ಸ್ವಾಮೀಜಿ ಅವರಿಂದ ಪ್ರಣವ ಧ್ವಜಾರೋಹಣ ಮತ್ತು ಕಳಸ ಸ್ಥಾಪನೆ ಜರುಗಿತು. ಸಾವಿರಾರು ಸದ್ಭಕ್ತರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts