More

    ಲೈಬ್ರರಿ ಪುಸ್ತಕ ಮಾಫಿಯಾ: ಹಳೆಯದನ್ನೇ ಮರುಮುದ್ರಿಸಿ ಲೂಟಿ; ಅಧಿಕಾರಿಗಳ ಕಮಿಷನ್ ದಂಧೆ..

    ರಮೇಶ ದೊಡ್ಡಪುರ ಬೆಂಗಳೂರು

    ಇದು ಅಕ್ಷರದ ಹೆಸರಿನಲ್ಲಿ ನಡೆಯುತ್ತಿರುವ ದಂಧೆ. ರಾಜ್ಯದ ಗ್ರಂಥಾಲಯ ಇಲಾಖೆಯ ಕೆಲ ಭ್ರಷ್ಟ ಅಧಿಕಾರಿಗಳ ಕೈಚಳಕದಿಂದಾಗಿ ವಾರ್ಷಿಕ ಮೀಸಲಿಟ್ಟಿರುವ 10 ಕೋಟಿ ರೂ.ನಲ್ಲಿ ಸುಮಾರು ಶೇ.50 ಪಾಲು ಲೂಟಿಯಾಗುತ್ತಿದೆ. ಹಣ ಗಳಿಸುವ ಉದ್ದೇಶದಿಂದ ಅಧಿಕಾರಿಗಳೇ ಬೇನಾಮಿ ಹೆಸರಿನಲ್ಲಿ ಪ್ರಕಾಶನ ಸಂಸ್ಥೆಗಳನ್ನು ಹುಟ್ಟುಹಾಕಿರುವ ಸಂಗತಿ ಬಯಲಾಗಿದೆ.

    ಉಪಯೋಗಕ್ಕೆ ಬಾರದ ಸಾವಿರಾರು ಪುಸ್ತಕಗಳು ಪ್ರತಿ ವರ್ಷ ಗ್ರಂಥಾಲಯಗಳಲ್ಲಿ ಭರ್ತಿ ಯಾಗುತ್ತವೆ. ಈ ಪುಸ್ತಕಗಳಲ್ಲಿ ಬಹುತೇಕವು ಹಿಂದಿನ ವರ್ಷಗಳಲ್ಲಿ ಬಂದಿರುವಂಥದ್ದಾಗಿರುತ್ತವೆ. ಹಳೇ ಪುಸ್ತಕಗಳ ಹೆಸರು ಬದಲಿಸಿ ಹೊಸ ಪುಸ್ತಕಗಳ ರೂಪದಲ್ಲಿ ಮುದ್ರಿಸಲಾಗಿರುತ್ತದೆ. ಇಷ್ಟೇ ಅಲ್ಲ. ಎರಡು ಪುಸ್ತಕಗಳ ಲೇಖನಗಳನ್ನೇ ಮರು ಹೊಂದಿಸಿ ಇನ್ನೊಂದು ಪುಸ್ತಕ ಪ್ರಕಟಿಸುವುದು, ಆಯ್ಕೆ ಸಮಿತಿ ಗಮನಕ್ಕೆ ತಾರದೆ ಪುಸ್ತಕ ಖರೀದಿಸಿ ಲೈಬ್ರರಿಗಳಿಗೆ ಕಳುಹಿಸಿ ವಂಚಿಸುತ್ತಿರುವುದು ಈ ಮಾಫಿಯಾದ ಕೃತ್ಯಗಳಾಗಿವೆ.

    ಶೇ.30/50 ಕಮಿಷನ್: ಅಧಿಕಾರಿಗಳು ಬೆಂಗಳೂರಿನ ಅನೇಕ ಸಂಸ್ಥೆಗಳಿಂದ ಶೇ.30 ಕಮಿಷನ್ ಹಾಗೂ ಹೊರಗಿನ ಸಂಸ್ಥೆಗಳಿಂದ ಶೇ.50ರವರೆಗೆ ಕಮಿಷನ್ ಪಡೆಯುತ್ತಾರೆ. ಹಣ ನೀಡುವುದೇ 2-3 ವರ್ಷದ ನಂತರ. ಇದರ ಪರಿಹಾರಕ್ಕಾಗಿ ಪ್ರಕಾಶಕರು ಕಂಡುಕೊಂಡಿರುವ ದಾರಿಯೇ ಗುಣಮಟ್ಟದಲ್ಲಿ ರಾಜಿ. ಪುಸ್ತಕ ಆಯ್ಕೆ ಸಮಿತಿಗೆ ನೀಡುವಾಗ ಇದ್ದ ಹಾಳೆಗಳ ಗುಣಮಟ್ಟ, ಸರಬರಾಜು ವೇಳೆ ಇರುವುದಿಲ್ಲ.

    ಹಾಳೆಗಳ ಸಂಖ್ಯೆ ಹೆಚ್ಚಳ: ಖರೀದಿಗೆ ಆಯ್ಕೆಯಾದ ಪುಸ್ತಕದ ಪ್ರತಿ ಹಾಳೆಗೆ 75 ಪೈಸೆ ನೀಡಲಾಗುತ್ತದೆ. ಇದೇ ಕಾರಣಕ್ಕೆ ಲೈಬ್ರರಿ ಪುಸ್ತಕ ವಿಚಾರದಲ್ಲಿ ‘ಡಿಟಿಪಿ’ ಎಂಬ ಪದ ಚಾಲ್ತಿಯಲ್ಲಿದೆ. ಸಾಮಾನ್ಯವಾಗಿ 12 ಫಾಂಟ್(ಗಾತ್ರದ)ಪದ ಬಳಕೆ ಮಾಡಲಾಗುತ್ತದೆ. ಫಾಂಟ್​ನ ಗಾತ್ರ ಒಂದು ಹೆಚ್ಚಿಸಿ, ಸಾಲುಗಳ ನಡುವಿನ ಅಂತರ ಹೆಚ್ಚಿಸಿದರೆ 200 ಪುಟದ ಪುಸ್ತಕ 240 ಪುಟ ಆಗುತ್ತದೆ. ಪುಸ್ತಕದಲ್ಲಿರುವ ಕೆಲ ಪ್ಯಾರಾಗಳನ್ನೇ ಕತ್ತರಿಸಿ ಬಾಕ್ಸ್ ಮಾಡುವುದು ಸೇರಿ ಅನೇಕ ರೀತಿಗಳಲ್ಲಿ ಪುಟ ಸಂಖ್ಯೆ ಹೆಚ್ಚಿಸಲಾಗುತ್ತದೆ.

    ಬೇನಾಮಿ ವ್ಯವಹಾರ: ಕೆಲ ಪ್ರಕಾಶಕರ ಪ್ರಕಾರ, ರಾಜ್ಯದ ಒಟ್ಟು ಪ್ರಕಾಶನ ಸಂಸ್ಥೆಗಳಲ್ಲಿ ಮೂರನೇ ಒಂದು ಭಾಗ ಗ್ರಂಥಾಲಯ ಇಲಾಖೆ ಅಧಿಕಾರಿಗಳ ಕುಟುಂಬ, ಭಾವಮೈದುನ ಹಾಗೂ ಸ್ನೇಹಿತರ ಹೆಸರಿನಲ್ಲಿ ಬೇನಾಮಿಯಾಗಿ ನಡೆಯುತ್ತವೆ. ಇನ್ನು ಅನೇಕ ನಿವೃತ್ತ ಅಧಿಕಾರಿಗಳ ಸಂಸ್ಥೆಗಳೂ ಇವೆ. ಹಿಂದಿನ ವರ್ಷ ಬಿಡುಗಡೆಯಾದ ಎರಡು ಪ್ರತ್ಯೇಕ ಕವನ ಸಂಕಲನದಲ್ಲಿ ತಲಾ ಒಂದಷ್ಟು ಕವಿತೆಗಳನ್ನು ಆಯ್ದು ಮುಂದಿನ ವರ್ಷ ಬೇರೆ ಪುಸ್ತಕ ಮಾಡುತ್ತಾರೆ. ಅದನ್ನೇ ಲೈಬ್ರರಿಗೆ ಖರೀದಿಸಲಾಗುತ್ತದೆ. ಇದನ್ನು ಪತ್ತೆಹಚ್ಚಲು ಯಾವುದೇ ವ್ಯವಸ್ಥೆ ಇಲ್ಲ.

    ಅದೇ ವರ್ಷ ಆಯ್ಕೆ ಮಾಡಲಿ: ಪುಸ್ತಕ ಖರೀದಿಯಲ್ಲಿ ಅನೇಕ ಸಮಸ್ಯೆಗಳಿವೆ. ಇವುಗಳನ್ನು ಒಂದೊಂದಾಗಿ ಪರಿಹರಿಸಬೇಕು ಎಂದು ಸ್ನೇಹ ಬುಕ್ ಹೌಸ್​ನ ಪರಶಿವಪ್ಪ ಹೇಳುತ್ತಾರೆ. 2018ರ ಕೃತಿಗಳನ್ನು ಈಗ ಆಯ್ಕೆ ಮಾಡುತ್ತಾರೆ, ಮೂರು ವರ್ಷದ ನಂತರ ಹಣ ನೀಡುತ್ತಾರೆ. ಅದರ ಬದಲಿಗೆ ಈ ವರ್ಷದ ಕೃತಿಗಳನ್ನು ಮುಂದಿನ ವರ್ಷವೇ ಆಯ್ಕೆ ಮಾಡುವಂತಾದರೆ ಪ್ರಸ್ತುತತೆಯೂ ಇರುತ್ತದೆ. ಆಯಾ ವರ್ಷದಲ್ಲೇ ಹಣ ನೀಡಬೇಕು. ಆ ಮೂಲಕ ಬೇಲಿಯೇ ಎದ್ದು ಹೊಲ ಮೇಯದಂತೆ(ಅಧಿಕಾರಿಗಳ ಭ್ರಷ್ಟಾಚಾರ) ತಡೆಯಬೇಕೆಂಬುದು ಅವರ ಆಗ್ರಹ.

    ತಪ್ಪುಗಳ ಪುಸ್ತಕಕ್ಕೆ 450 ರೂ.: ಪುಸ್ತಕದ ಹೆಸರು ‘ಚುನಾವಣೆಗಳು ಮತ್ತು ರಾಜಕಾರಣ’. ಮೈಸೂರಿನ ಪ್ರಕಾಶನ ಸಂಸ್ಥೆಯೊಂದು ಪ್ರಕಟಿಸಿರುವ ಪುಸ್ತಕ ಇದು. ಇಬ್ಬರು ಸಂಪಾದಕರಿರುವ ಪುಸ್ತಕದಲ್ಲಿರುವುದು 2018-19ರ ಚುನಾವಣೆಗಳಲ್ಲಿ ವಿವಿಧ ಕನ್ನಡ ಪತ್ರಿಕೆಗಳಲ್ಲಿ ಬಂದಿರುವ ಸುದ್ದಿಗಳು, ವಿಶೇಷ ವರದಿಗಳ ನಕಲು. ಅದರಲ್ಲೂ ಅರ್ದಂಬರ್ಧ ಲೇಖನ, ಲೇಖಕರ ಹಾಗೂ ಪತ್ರಿಕೆಯ ಹೆಸರುಗಳೂ ತಪು್ಪ. ಪುಸ್ತಕದ ಕುರಿತು ಮುನ್ನುಡಿಯಲ್ಲಿ ಬರೆದ ನಾಲ್ಕು ಸಾಲುಗಳನ್ನೇ ಹಿಂದಿನ ಪುಟದಲ್ಲೂ ಮುದ್ರಿಸಿದ ಈ ಪುಸ್ತಕದ(ಕ್ರಮ ಸಂಖ್ಯೆ: 324.6.ಎಎನ್​ಎನ್.ಪಿ19) ಬೆಲೆ 450 ರೂ.

    ಸಮಸ್ಯೆಗೆ ಪರಿಹಾರವೇನು?: ಆಯ್ಕೆ ಸಮಿತಿ ರಚನೆ ಬೇರೆ ರೀತಿಯಲ್ಲಿ ನಡೆಯಬೇಕು. ಸಮಿತಿ ಪರಾಮರ್ಶೆ ಇಲ್ಲದೆ ಯಾವ ಕೃತಿಯೂ ಅನುಮೋದನೆ ಆಗಬಾರದೆಂಬ ಮಾರ್ಗದಿಂದ ಕೆಲವು ಸಮಸ್ಯೆಗಳು ಬಗೆಹರಿಯ ಬಹುದೆಂಬುದು ಬೆಂಗಳೂರಿನ ಚಾರುಮತಿ ಪ್ರಕಾಶನದ ಬಿ.ಎಸ್. ವಿದ್ಯಾರಣ್ಯ ಅವರ ಅಭಿಪ್ರಾಯ.

    ಆಯ್ಕೆ ಸಮಿತಿಗೇ ಧೋಖಾ

    ರಾಜ್ಯಮಟ್ಟದಲ್ಲಿ ಪುಸ್ತಕಗಳ ಆಯ್ಕೆಗೆ 12 ಸದಸ್ಯರು ಮತ್ತು ಅಧ್ಯಕ್ಷರ ಸಮಿತಿಯನ್ನು ಸರ್ಕಾರ ರಚಿಸುತ್ತದೆ. 2018ನೇ ಸಾಲಿನ ಪುಸ್ತಕ ಆಯ್ಕೆಗೆ ರಚಿಸಿದ್ದ ಸಮಿತಿ ಅಧ್ಯಕ್ಷ ಪ್ರೊ.ದೊಡ್ಡರಂಗೇಗೌಡರೇ ಹೇಳಿರುವಂತೆ 10 ಸಾವಿರಕ್ಕೂ ಹೆಚ್ಚು ಕೃತಿಗಳು ಆಯ್ಕೆಗೆ ಸಲ್ಲಿಕೆಯಾಗುತ್ತವೆ. 13 ಜನರ ಸಮಿತಿ ಇಷ್ಟೂ ಪುಸ್ತಕಗಳನ್ನು ಕೂಲಂಕಷವಾಗಿ ಪರಿಶೀಲಿಸುವುದು ಅಸಾಧ್ಯ. ಇಲ್ಲಿ ಅಧಿಕಾರಿಗಳ ಕರಾಮತ್ತು ನಡೆಯುತ್ತದೆ. ಸದಸ್ಯರುಗಳಿಗೆ ತಲಾ 250-300 ಕೃತಿ ನೀಡಿ ಪರಿಶೀಲಿಸಲು 2-3 ದಿನ ಸಮಯ ನೀಡಲಾಗುತ್ತದೆ. ಸುಮಾರು 3 ಸಾವಿರ ಕೃತಿಗಳನ್ನು ಸಮಿತಿ ಸದಸ್ಯರು ಪರಾಮಶಿಸಿ ಅದರ ಆಯ್ಕೆ ಬಗ್ಗೆ ನಿರ್ಧರಿಸುತ್ತಾರೆ. ಉಳಿದ ಆರೇಳು ಸಾವಿರದಲ್ಲಿ ಅಧಿಕಾರಿಗಳು ಆಡಿದ್ದೇ ಆಟ. ಆಯ್ಕೆಯಾದ ಪುಸ್ತಕಗಳ ಉದ್ದ ಪಟ್ಟಿ ನೀಡಿ ಸಮಿತಿ ಸದಸ್ಯರಿಂದ ಸಹಿ ಪಡೆದುಕೊಳ್ಳುತ್ತಾರೆ. ಇದೇ ಕಾರಣಕ್ಕೆ, ಅರ್ಹತೆಯಿಲ್ಲದ ಕೃತಿಗಳೂ ಗ್ರಂಥಾಲಯದಲ್ಲಿ ಭರ್ತಿಯಾಗುತ್ತವೆ ಎಂದು ಪ್ರಕಾಶಕರೊಬ್ಬರು ಹೇಳುತ್ತಾರೆ.

    ಅಕ್ರಮಗಳು

    • ಆಯ್ಕೆ ಸಮಿತಿ ಆಯ್ಕೆ ಮಾಡದ ಪುಸ್ತಕ ಖರೀದಿಗೆ ಅನುಮತಿ ಪಡೆದು ಮೋಸ
    • ಬೇರೆ ಬೇರೆ ಪುಸ್ತಕಗಳ ಕಥೆ, ಕವನಗಳನ್ನೇ ಬಳಸಿಕೊಂಡು ಹೊಸ ಪುಸ್ತಕ
    • ಅಧಿಕಾರಿಗಳಿಂದಲೇ ಕುಟುಂಬ ಸದಸ್ಯರು, ಸ್ನೇಹಿತರ ಹೆಸರಿನಲ್ಲಿ ಪ್ರಕಾಶನ ಸಂಸ್ಥೆ
    • ಹೆಚ್ಚುವರಿ ಹಣ ಪಡೆಯಲು ಪುಸ್ತಕದ ಹಾಳೆಗಳ ಸಂಖ್ಯೆ ಹೆಚ್ಚಿಸುವ ತಂತ್ರಗಾರಿಕೆ
    • ಆಯ್ಕೆ ಸಮಿತಿಗೆ ಕೊಟ್ಟ ಪುಸ್ತಕದ ಹಾಳೆ ಗುಣಮಟ್ಟ ಪೂರೈಸುವಾಗ ಬದಲಾಗಿರುತ್ತದೆ
    • ರಾಜ್ಯದ ಪ್ರಕಾಶನ ಸಂಸ್ಥೆಗಳಿಂದ ಕಮಿಷನ್ ನಿಗದಿಪಡಿಸಿರುವ ಅಧಿಕಾರಿಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts