More

    ಆಯಾ ಮತಕ್ಷೇತ್ರದ ಮತದಾರರು ಮತಗಟ್ಟೆ ಖಚಿತಪಡಿಸಿಕೊಳ್ಳಲಿ

    ಬಾಗಲಕೋಟೆ: ಆಯಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಸ್ಥಾಪಿಸಲಾಗಿರುವ ಮತಗಟ್ಟೆಗಳಿಗೆ ಮತದಾರರು ಹೋಗಿ ತಮ್ಮ ಮತಗಟ್ಟೆಗಳನ್ನು ಖಚಿತಪಡಿಸಿಕೊಳ್ಳಬೇಕು ಎಂದು ರಾಜ್ಯ ಸ್ವೀಪ್ ನೋಡಲ್ ಅಧಿಕಾರಿ ಪಿ.ಎಸ್.ವಸ್ತ್ರದ ಹೇಳಿದರು.

    ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಬುಧವಾರ ಜಿಲ್ಲಾ ಸ್ವೀಪ್ ಸಮಿತಿ ಸದಸ್ಯರೊಂದಿಗೆ ಸ್ವೀಪ್ ಕಾರ್ಯಚಟುವಟಿಕೆ ಕುರಿತು ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮತದಾನ ದಿನ ಮತಗಟ್ಟೆಗಳನ್ನು ಹುಡುಕಾಡುವ ಬದಲು ಮತದಾನದ ಪೂರ್ವದಲ್ಲಿಯೇ ತಮ್ಮ ಮತಗಟ್ಟೆ ಯಾವುದೆಂಬುದನ್ನು ಖಚಿತಪಡಿಸಿಕೊಳ್ಳುವುದು ಅವಶ್ಯವಾಗಿದೆ. ಇದಕ್ಕಾಗಿ ಏಪ್ರಿಲ್ 25 ಮತ್ತು 26 ರಂದು ಮತಗಟ್ಟೆಗಳಿಗೆ ಭೇಟಿ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

    ಮತಗಟ್ಟೆಗಳಲ್ಲಿ ನೀಡಿರುವ ಸೌಲಭ್ಯಗಳ ಬಗ್ಗೆಯೂ ಮತದಾರರಲ್ಲಿ ಅರಿವು ಮೂಡಿಸಬೇಕು. ಮತದಾರರ ಪಟ್ಟಿ ಹಾಗೂ ಮತಗಟ್ಟೆಗಳ ಬಗ್ಗೆ ಸಮಸ್ಯೆಗಳಿದ್ದಲ್ಲಿ 1950 ಸಹಾಯವಾಣಿ ಮೂಲಕ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳುವ ಕಾರ್ಯವಾಗಬೇಕು. ಮತದಾರರ ಪ್ರತಿಯೊಂದು ಮತ ಅಮೂಲ್ಯವಾಗಿದ್ದು, ಪ್ರತಿಯೊಬ್ಬರೂ ಮತ ಚಲಾಯಿಸುವಂತೆ ಮಾಡಲು ಕ್ರಮ ವಹಿಸಬೇಕು ಎಂದು ತಿಳಿಸಿದರು.

    ರಾಜ್ಯದ 10 ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಾಗಿದೆ. ಬಾಗಲಕೋಟೆ ಜಿಲ್ಲೆ ಬಾದಾಮಿ ಮತಕ್ಷೇತ್ರದ ಕೆಲವು ಮತಗಟ್ಟೆಗಳಿಗೆ ಭೇಟಿ ನೀಡಲಾಗಿದೆ. ಮತಗಟ್ಟೆಗಳನ್ನು ವ್ಯವಸ್ಥಿತ ರೀತಿಯಲ್ಲಿ ಸಜ್ಜುಗೊಳಿಸಬೇಕು. ಅಧಿಕಾರಿಗಳು, ಸೂಪರ್‌ವೈಸರ್‌ಗಳು ಮತಗಟ್ಟೆಗಳಿಗೆ ಭೇಟಿ ನೀಡುತ್ತಿಲ್ಲ. ಇದರಿಂದ ಮತಗಟ್ಟೆ ವ್ಯವಸ್ಥೆಗಳ ಬಗ್ಗೆ ಗೊತ್ತಾಗುವುದಿಲ್ಲ. ಆದ್ದರಿಂದ ಕಡ್ಡಾಯವಾಗಿ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲಿಸಲು ನೋಡಲ್ ಅಧಿಕಾರಿಗಳು ಸೂಚಿಸಿದರು. ಮತದಾನ ಪ್ರಮಾಣ ಹೆಚ್ಚಳಕ್ಕೆ ಕ್ರಮವಹಿಸಬೇಕು. ಸ್ವೀಪ್ ಎಕ್ಸ್‌ಪ್ರೆಸ್ ಮೂಲಕ ಯುವ ಮತದಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಂಚಾರಿ ಕಲ್ಪಿತ ಮತಗಟ್ಟೆ ಸೃಷ್ಟಿಸಲಾಗಿದೆ ಎಂದು ತಿಳಿಸಿದರು.

    ಜಿಪಂ ಸಿಇಒ ಹಾಗೂ ಸ್ವೀಪ್ ಜಿಲ್ಲಾಧ್ಯಕ್ಷ ಟಿ.ಭೂಬಾಲನ್ ಮಾತನಾಡಿ, ಜಿಲ್ಲೆಯಲ್ಲಿರುವ ಪ್ರತಿಯೊಂದು ಮತಕ್ಷೇತ್ರದಲ್ಲಿ ಕಡಿಮೆ ಮತದಾನವಾಗುತ್ತಿರುವ ಮತಗಟ್ಟೆಯನ್ನು ಗುರುತಿಸಲಾಗಿದ್ದು, ಆ ವ್ಯಾಪ್ತಿಯಲ್ಲಿ ಹೆಚ್ಚಿನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶ ಸೇರಿ ಒಟ್ಟು 504 ಕಡಿಮೆ ಮತದಾನವಾದ ಮತಗಟ್ಟೆಗಳಿವೆ. ಕಳೆದ 2018ರ ಚುನಾವಣೆಯಲ್ಲಿ ಶೇ.74.95 ರಷ್ಟು ಮತದಾನವಾಗಿದೆ. ಈ ಬಾರಿ ಚುನಾವಣೆಯಲ್ಲಿ ಹೆಚ್ಚಿನ ಮತದಾನಕ್ಕೆ ಶ್ರಮಿಸಲಾಗುತ್ತಿದೆ. ಪೌರಕಾರ್ಮಿಕರ ಮೂಲಕ ರಂಗೋಲಿ, ಸೈಕಲ್ ಜಾಥಾ ಹಾಗೂ ಮನೆ ಮನೆ ತೆರಳಿ ಮತದಾನ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

    ಸಭೆಯಲ್ಲಿ ಪ್ರೊಬೇಷನರಿ ಐಎಎಸ್ ಅಧಿಕಾರಿ ಕನಿಷ್ಕ, ಜಿಪಂ ಯೋಜನಾಧಿಕಾರಿ ಸಿ.ಆರ್.ಮುಂಡರಗಿ ಸೇರಿ ಸ್ವೀಪ್ ಸಮಿತಿ ಸದಸ್ಯರಾದ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ನಂದಾ ಹನಮರಟ್ಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಯಶ್ರೀ ಎಮ್ಮಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ಅರುಣಕುಮಾರ ಗಾಳಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕಾಳಪ್ಪ ಬಡಿಗೇರ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಗುರುಪಾದ ಡೂಗನವರ, ಜಿಲ್ಲಾ ವಾರ್ತಾಧಿಕಾರಿ ಕಸ್ತೂರಿ ಪಾಟೀಲ ಇತರರು ಉಪಸ್ಥಿತರಿದ್ದರು. ಸಭೆ ನಂತರ ಸಹಿ ಸಂಗ್ರಹದ ಮೂಲಕ ಮತದಾನ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

    ಮತದಾನ ಜಾಗೃತಿ ಹಾಗೂ ಯುವ ಮತದಾರರಿಗೆ ಮತದಾನ ಪ್ರಕ್ರಿಯೆ ಬಗ್ಗೆ ತಿಳಿವಳಿಕೆ ನೀಡುವ ದೃಷ್ಟಿಯಿಂದ ಜಿಲ್ಲಾಡಳಿತದಿಂದ ತಯಾರಿಸಿದ ಸ್ವೀಪ್ ಎಕ್ಸ್‌ಪ್ರೆಸ್ ಬಸ್‌ನಲ್ಲಿ ರಾಜ್ಯ ಸ್ವೀಪ್ ನೋಡಲ್ ಅಧಿಕಾರಿ ಪಿ.ಎಸ್.ವಸದ, ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ, ಜಿಪಂ ಸಿಇಒ ಟಿ.ಭೂಬಾಲನ್, ಪ್ರೊಬೇಷನರಿ ಐಎಎಸ್ ಅಧಿಕಾರಿ ಕನಿಷ್ಕ, ಜಿಪಂ ಯೋಜನಾಧಿಕಾರಿ ಸಿ.ಆರ್.ಮುಂಡರಗಿ ಸೇರಿದಂತೆ ಇತರ ಅಧಿಕಾರಿಗಳು ನಗರದಲ್ಲಿ ಸಂಚರಿಸಿ ಕಲಾಭವನಕ್ಕೆ ಆಗಮಿಸಿ ಚಿತ್ರ ಬಿಡಿಸುವ ಮೂಲಕ ಮತದಾರರಲ್ಲಿ ಜಾಗೃತಿ ಮೂಡಿಸಿದರು.

    ಮತದಾನದ ದಿನದಂದು ಮತ ಚಲಾಯಿಸಲು ಕ್ಯೂ ನಿಲ್ಲುವಂತಿಲ್ಲ. ಮತದಾರರಿಗೆ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗುತ್ತಿದೆ. ಇಲ್ಲವೆ ಶಾಮಿಯಾನ ಹಾಕಲಾಗುತ್ತಿದೆ. ಟೋಕನ್ ಕೊಡುವ ವ್ಯವಸ್ಥೆ ಮಾಡಲಾಗುತ್ತಿದೆ. ಮತದಾರರಿಗೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ಎಲ್ಲ ರೀತಿಯ ಸೌಲಭ್ಯ ಮಾಡಲಾಗುತ್ತಿದ್ದು, ಈ ಬಗ್ಗೆ ಮತದಾರರಲ್ಲಿ ಅರಿವು ಮೂಡಿಸಬೇಕಿದೆ.

    ಪಿ.ಎಸ್.ವಸ್ತ್ರದ, ರಾಜ್ಯ ಸ್ವೀಪ್ ನೋಡಲ್ ಅಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts