More

    ರಾಗಿ ಗುಣಮಟ್ಟದಿಂದ ಕೂಡಿರಲಿ

    ಪಿರಿಯಾಪಟ್ಟಣ: ಸರ್ಕಾರದ ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿ ರೈತರು ಮಾರಾಟ ಮಾಡಲು ತರುವ ರಾಗಿ ಗುಣಮಟ್ಟದಿಂದ ಕೂಡಿರಬೇಕು ಎಂದು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ.ವೆಂಕಟೇಶ್ ತಿಳಿಸಿದರು.

    ಪಟ್ಟಣದ ಎಪಿಎಂಸಿ ಆವರಣದಲ್ಲಿ ಕರ್ನಾಟಕ ಕೃಷಿ ಮಾರಾಟ ಮಂಡಳಿ ವತಿಯಿಂದ ತೆರೆಯಲಾಗಿರುವ 2023-24ನೇ ಸಾಲಿನ ಸರ್ಕಾರದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ ಕೇಂದ್ರವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು. ರೈತರಿಗೆ ಕನಿಷ್ಠ ಬೆಂಬಲ ಬೆಲೆಯಲ್ಲಿ ಗುಣಮಟ್ಟದ ರಾಗಿಯನ್ನು ಮಾರುಕಟ್ಟೆಗೆ ತಂದು ಮಾರಾಟ ಮಾಡಲು ಅವಕಾಶ ನೀಡಲಾಗಿದೆ. ಆದ್ದರಿಂದ ರೈತರು ಯಾವುದೇ ಕಾರಣಕ್ಕೂ ಕಲ್ಲು ಮತ್ತು ಮಣ್ಣು ಮಿಶ್ರಣ ಇರುವ ರಾಗಿ ತರಬಾರದು ಎಂದು ಹೇಳಿದರು.

    ರೈತರಿಂದ ರಾಗಿ ಖರೀದಿ ಸಂದರ್ಭದಲ್ಲಿ ತೂಕದಲ್ಲಿ ಅನ್ಯಾಯವಾಗಬಾರದು ಮತ್ತು ರಾಗಿ ಮಾರಾಟ ಕೇಂದ್ರದಲ್ಲಿ ಯಾವುದೇ ಮಧ್ಯವರ್ತಿಗಳಿಗೆ ಅವಕಾಶವಿಲ್ಲದಂತೆ ಎಚ್ಚರವಹಿಸುವಂತೆ ಅಧಿಕಾರಿಗಳಿಗೆ ತಿಳಿಸಿದ ಸಚಿವರು, ಯಾವುದೇ ಅಕ್ರಮ ಪ್ರಕರಣಗಳು ವರದಿಯಾದಲ್ಲಿ ಅಧಿಕಾರಿಗಳೇ ನೇರ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

    ರಾಗಿ ಮಾರಾಟ ಮಾಡಲು ರೈತರಿಗೆ ಕ್ರಮ ಸಂಖ್ಯೆ ಆಧಾರದ ಮೇಲೆ ಟೋಕನ್‌ಗಳನ್ನು ವಿತರಿಸಲಾಗುತ್ತಿದೆ. ಪಿರಿಯಾಪಟ್ಟಣ ಕೇಂದ್ರದಲ್ಲಿ 4,125 ರೈತರು ಮಾರಾಟ ಮಾಡಲು ನೋಂದಣಿ ಮಾಡಿಕೊಂಡಿದ್ದಾರೆ ಎಂದರು.

    ಪಿರಿಯಾಪಟ್ಟಣ, ಬೆಟ್ಟದಪುರ ಮತ್ತು ರಾವಂದೂರು ಸೇರಿದಂತೆ ಒಟ್ಟು ಮೂರು ಕಡೆ ಮಾರಾಟ ಕೇಂದ್ರಗಳನ್ನು ತೆರೆಯಲಾಗಿದೆ. ಮಾರಾಟ ಮಾಡುವ ರಾಗಿಯನ್ನು ಖರೀದಿ ಕೇಂದ್ರಕ್ಕೆ ತಂದು ಹಾಕುವುದು ಮತ್ತು ಸುರಿಯುವುದು ರೈತರ ಜವಾಬ್ದಾರಿಯಾಗಿರುತ್ತದೆ. ರಾಗಿಯನ್ನು ಖರೀದಿಸಿದ ಬಳಿಕ ಅದನ್ನು ತುಂಬಿಕೊಳ್ಳುವುದು ಖರೀದಿದಾರರ ಕೆಲಸವಾಗಿರುತ್ತದೆ ಎಂದರು. ಸರ್ಕಾರ ಕಳೆದ ಬಾರಿ ಪ್ರತಿ ಕ್ವಿಂಟಾಲ್ ರಾಗಿಗೆ 3,546 ರೂ. ನಿಗದಿ ಮಾಡಿ ಖರೀದಿಸಿತ್ತು. ಈ ಬಾರಿ ಕ್ವಿಂಟಾಲ್ ರಾಗಿಗೆ 300 ರೂ. ದರ ಹೆಚ್ಚಿಸಲಾಗಿದೆ ಎಂದರು.

    ಬೆಂಬಲ ಬೆಲೆಯ ಯೋಜನಾಧಿಕಾರಿ ಎಂ.ವಾಣಿಶ್ರೀ, ಕರ್ನಾಟಕ ಕೃಷಿ ಮಾರಾಟ ಮಂಡಳಿಯ ಜಿಲ್ಲಾ ವ್ಯವಸ್ಥಾಪಕಿ ಮಮತಾ, ಕಾರ್ಯದರ್ಶಿ ರೇವತಿ, ಆಡಳಿತಾಧಿಕಾರಿ ಸಂಗೀತಾ, ತಾಲೂಕು ಆಹಾರ ಇಲಾಖೆ ಶಿರಸ್ತೇದಾರ್ ಸಣ್ಣಸ್ವಾಮಿ, ಖರೀದಿ ಅಧಿಕಾರಿ ಮಂಜುನಾಥ್, ತಾಪಂ ಇಒ ಸುನಿಲ್ ಕುಮಾರ್, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಡಿ.ಟಿ.ಸ್ವಾಮಿ, ರಹಮತ್ ಜಾನ್ ಬಾಬು, ಮುಖಂಡರಾದ ಬಿ.ಜೆ.ಬಸವರಾಜ್, ಲೋಕೇಶ್ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts