More

    ವೈದ್ಯರು, ಸಿಬ್ಬಂದಿ ಸಮನ್ವಯದಿಂದ ಕಾರ್ಯನಿರ್ವಹಿಸಲಿ

    ಲಕ್ಷ್ಮೇಶ್ವರ: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರ ಮತ್ತು ಕೋವಿಡ್ ಕೇರ್ ಸೆಂಟರ್​ಗೆ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭರತ್ ಎಸ್. ಸೋಮವಾರ ಭೇಟಿ ನೀಡಿ ಮಾಹಿತಿ ಪಡೆದರು.

    ಕೋವಿಡ್ ಚಿಕಿತ್ಸಾ ಕೇಂದ್ರ ಪರಿಶೀಲಿಸಿ ರೋಗಿಗಳಿಗೆ ಸಿಗುವ ಆಕ್ಸಿಜನ್, ಔಷಧೋಪಚಾರ, ಊಟೋಪಚಾರ ಮತ್ತು ಚಿಕಿತ್ಸೆಯ ಬಗ್ಗೆ ತಾಲೂಕು ವೈದ್ಯಾಧಿಕಾರಿ ಸುಭಾಸ ದಾಯಗೊಂಡ ಅವರಿಂದ ಮಾಹಿತಿ ಪಡೆದರು. ಬಳಿಕ ರೋಗಿಗಳ ಸಂಬಂಧಿಕರನ್ನು ಮಾತನಾಡಿಸಿ, ಸೌಲಭ್ಯಗಳ ಕುರಿತು ಮಾಹಿತಿ ಸಂಗ್ರಹಿಸಿದರು.

    ಬಳಿಕ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಸಭೆ ನಡೆಸಿ, ಪ್ರಸ್ತುತ ಸಂದರ್ಭದಲ್ಲಿ ವೈದ್ಯರ ಸೇವೆ ಅತ್ಯಂತ ಮಹತ್ವದ್ದಾಗಿದೆ. ವೈದ್ಯರು ಮತ್ತು ವೈದ್ಯಕೀಯೇತರ ಸಿಬ್ಬಂದಿ ವಿನಾಕಾರಣ ಸೇವೆಯಿಂದ ಹೊರಗೆ ಉಳಿಯಬಾರದು. ನಿತ್ಯ ಸೋಂಕಿನ ಪ್ರಕರಣಗಳು ಹೆಚ್ಚುತ್ತಿದ್ದು, ಎಲ್ಲರೂ ಸಮನ್ವಯತೆಯಿಂದ ಕೆಲಸ ಮಾಡಬೇಕು ಎಂದರು.

    ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 3 ದಿನಗಳ ಹಿಂದೆ ಆರೋಗ್ಯ ಸಚಿವರು ಗದಗಕ್ಕೆ ಭೇಟಿ ನೀಡಿದ ವೇಳೆ ಶಾಸಕ ರಾಮಣ್ಣ ಲಮಾಣಿ ಅವರು ಲಕ್ಷ್ಮೇಶ್ವರ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಆರೋಪಿಸಿದ್ದರು. ಈ ಹಿನ್ನೆಲೆ ಸತ್ಯಾಸತ್ಯತೆ ಅರಿಯಲು ಮತ್ತು ಕೋವಿಡ್ ಹಿನ್ನೆಲೆ ವಸ್ತುಸ್ಥಿತಿ ಅರಿಯಲು ಭೇಟಿ ನೀಡಲಾಗಿದೆ. ಲಕ್ಷ್ಮೇಶ್ವರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಸಮರ್ಪಕ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ, ಅರೆ ವೈದ್ಯಕೀಯ ಸಿಬ್ಬಂದಿ ಸೇವೆಯಲ್ಲಿ ಒಂದಷ್ಟು ವ್ಯತ್ಯಾಸ ಕಂಡುಬಂದಿದೆ. ಆದರೆ, ಈ ಸಿಬ್ಬಂದಿಯಲ್ಲಿ ಕೆಲವರಿಗೆ ಪಾಸಿಟಿವ್ ಬಂದಿದ್ದು, 14 ದಿನಗಳ ಕಾಲ ಹೋಂ ಕ್ವಾರಂಟೈನ್ ಇದ್ದಾರೆ. ಈ ಹೊರತಾಗಿಯೂ ಕೆಲವರು ವಿನಾಕಾರಣ ಕೆಲಸಕ್ಕೆ ಗೈರಾಗಿದ್ದರೆ, ಅಂತಹವರ ಮೇಲೆ ಕ್ರಮ ಕೈಗೊಳ್ಳಲು ಜಿಲ್ಲಾ ವೈದ್ಯಾಧಿಕಾರಿಗೆ ಸೂಚಿಸಲಾಗುವುದು ಎಂದರು.

    ಜಿಲ್ಲಾ ಆರೋಗ್ಯಾಧಿಕಾರಿ ಸತೀಶ ಬಸರಿಗಿಡದ, ಡಾ. ಶ್ರೀಕಾಂತ ಕಾಟೆವಾಲೆ, ಡಾ. ಗುರುರಾಜ ಕುಡಗಿ, ಹಿರಿಯ ಆರೋಗ್ಯ ಸಹಾಯಕ ಬಿ.ಎಸ್ . ಹಿರೇಮಠ, ಹಿರಿಯ ಶುಶ್ರೂಷಕಿ ಎಸ್.ಬಿ. ನಾಗರೆಡ್ಡಿ, ಬಿ.ಎಂ. ಕಾತರಾಳ, ಶಿವಯ್ಯ ಕುಲಕರ್ಣಿ, ಸಿಬ್ಬಂದಿ ಇದ್ದರು.

    ಗುಣಮಟ್ಟದ ಊಟ, ಚಿಕಿತ್ಸೆ ಒದಗಿಸಲು ಸೂಚನೆ

    ಒಡೆಯರ ಮಲ್ಲಾಪುರ ಮುರಾರ್ಜಿ ವಸತಿ ಶಾಲೆಯ ಕೋವಿಡ್ ಕೇರ್ ಸೆಂಟರ್​ಗೆ ಭೇಟಿ ನೀಡಿದ ಭರತ್ ಎಸ್., ಅಲ್ಲಿರುವ 22 ಸೋಂಕಿನ ಲಕ್ಷಣಗಳುಳ್ಳ ಜನರ ಆರೋಗ್ಯದ ಬಗ್ಗೆ ಮಾಹಿತಿ ಪಡೆದರು. ಗ್ರಾಮೀಣ ಭಾಗದಲ್ಲಿ ಹೋಮ್ ಐಸೋಲೇಷನ್​ನಲ್ಲಿರುವವರಿಗೆ ಔಷಧ ಕಿಟ್ ತಪ್ಪದೆ ತಲುಪಬೇಕು. ಪ್ರತ್ಯೇಕ ವ್ಯವಸ್ಥೆ ಇಲ್ಲದವರನ್ನು ಕೋವಿಡ್ ಸೆಂಟರ್​ಗೆ ಸೇರಿಸಬೇಕು. ಈ ನಿಟ್ಟಿನಲ್ಲಿ ಗ್ರಾಮ ಮಟ್ಟದ ಟಾಸ್ಕ್​ಫೋರ್ಸ್ ಕ್ರಿಯಾಶೀಲತೆಯಿಂದ ಕಾರ್ಯನಿರ್ವಹಿಸುವಂತಾಗಬೇಕು. ಕೋವಿಡ್ ಸೆಂಟರ್​ನಲ್ಲಿರುವವರಿಗೆ ಗುಣಮಟ್ಟದ ಊಟೋಪಚಾರ, ವೈದ್ಯಕೀಯ ಚಿಕಿತ್ಸೆ ಸಿಗಬೇಕು ಎಂದು ತಹಸೀಲ್ದಾರ್ ಎಸ್.ಆರ್. ಸಿದ್ದನಗೌಡರ ಮತ್ತು ತಾಪಂ ಇಒ ಆರ್.ವೈ. ಗುರಿಕಾರ ಅವರಿಗೆ ಸೂಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts