More

    19, 28ರಂದು ಮತಗಟ್ಟೆಗಳಲ್ಲಿ ಜಾಗೃತಿ

    ಶಿವಮೊಗ್ಗ: ಮತದಾನ ಜಾಗೃತಿಗಾಗಿ ಏ.19 ಮತ್ತು 28ರಂದು ಎಲ್ಲ ಮತಗಟ್ಟೆಗಳಲ್ಲಿ ಸಾಂಸ್ಕೃತಿಕ ಮತ್ತು ವಿವಿಧ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಪಂ ಸಿಇಒ ಸ್ನೇಹಲ್ ಲೋಖಂಡೆ ಹೇಳಿದರು.

    ಮತದಾನ ಜಾಗೃತಿ ಅಭಿಯಾನದಲ್ಲಿ ಸಾರ್ವಜನಿಕರ ಭಾಗವಹಿಸುವಿಕೆಗೆ ಸಂಬಂಧಿಸಿ ವಿವಿಧ ಸಂಘ ಸಂಸ್ಥೆಗಳು, ಪಿಡಿಒ, ಬಿಎಲ್‌ಒಗಳ ಸಭೆ ನಡೆಸಿ ಮಾತನಾಡಿದ ಅವರು, ಬಿಎಲ್‌ಒ, ಪಿಡಿಒಗಳು, ಮತದಾರರ ವೇದಿಕೆಗಳು, ವಿವಿಧ ಸಂಘ ಸಂಸ್ಥೆಗಳವರು ಮತದಾನದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ಸಿ-ವಿಜಿಲ್ ಆ್ಯಪ್ ಬಳಕೆ ಬಗ್ಗೆ ಮಾಹಿತಿ ನೀಡಬೇಕು. ಮತದಾರರು ಆಮಿಷಗಳಿಗೆ ಒಳಗಾಗದಂತೆ ಅರಿವು ಮೂಡಿಸಬೇಕು ಎಂದರು.
    ಪ್ರತಿ ಮತಗಟ್ಟೆಗಳಲ್ಲಿ ಹಾಗೂ ಕಳೆದ ಬಾರಿ ಕಡಿಮೆ ಮತದಾನವಾದ ಕಡೆಗಳಲ್ಲಿ ಮತದಾನದ ಕುರಿತು ಪರಿಣಾಮಕಾರಿಯಾಗಿ ಜಾಗೃತಿ ಮೂಡಿಸುವ ಪ್ರಯತ್ನ ನಡೆದಿದೆ. ಸಾರ್ವಜನಿಕರು ಜಾಗೃತಿ ಕಾರ್ಯಕ್ರಮದಲ್ಲೂ ಭಾಗವಹಿಸಿ ಮತದಾನ ಪ್ರಕ್ರಿಯೆಯಲ್ಲೂ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.
    ಚುನಾವಣಾ ಅಕ್ರಮ, ಅವ್ಯವಹಾರಗಳು ಕಂಡುಬಂದಲ್ಲಿ ಸಾರ್ವಜನಿಕರು ಸಿ-ವಿಜಿಲ್ ಆ್ಯಪ್ ಮೂಲಕ ದೂರು ನೀಡಬಹುದು. ಮಾಹಿತಿ ನೀಡುವವರ ಹೆಸರನ್ನು ಗೌಪ್ಯವಾಗಿ ಇರಿಸಲಾಗುವುದು. ಎಲ್ಲರೂ ನೈತಿಕ ಚುನಾವಣೆಗೆ ಕೈಜೋಡಿಸಬೇಕು ಎಂದು ಹೇಳಿದರು.
    ಜಿಪಂ ಮುಖ್ಯ ಯೋಜನಾಧಿಕಾರಿ ಸಿ.ಎಸ್.ಗಾಯತ್ರಿ ಮಾತನಾಡಿ, ಜಿಲ್ಲೆಯಲ್ಲಿ ಕಡಿಮೆ ಮತದಾನ ಆಗುವ ಮತಗಟ್ಟೆಗಳು, ನಗರ ಭಾಗದಲ್ಲಿ ಸ್ಲಂ ಪ್ರದೇಶಗಳಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಆಮಿಷವೊಡ್ಡುವುದು, ಹೆದರಿಸಿ, ಬೆದರಿಸಿ ಮತ ಕೇಳುವುದು, ಕೋಮುದ್ವೇಷ ಬಿತ್ತುವುದು, ಚುನಾವಣಾ ಪ್ರಚಾರದಲ್ಲಿ ಮಕ್ಕಳನ್ನು ಬಳಸಿಕೊಳ್ಳುವುದು ಸೇರಿ ಯಾವುದೇ ರೀತಿಯ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಕುರಿತು ಸಾರ್ವಜನಿಕರು ಸಿ-ವಿಜಿಲ್ ಮೂಲಕ ದೂರು ಸಲ್ಲಿಸಬಹುದು ಎಂದರು.
    ರಾಜ್ಯ ಮಟ್ಟದ ಸ್ವೀಪ್ ತರಬೇತುದಾರ ನವೀದ್ ಅಹ್ಮದ್ ಪರ್ವೇಜ್ ಮಾತನಾಡಿ, ಚುನಾವಣಾ ಅಕ್ರಮಗಳ ಕುರಿತು ಆಡಿಯೋ, ವಿಡಿಯೋ, ಚಿತ್ರಗಳನ್ನು ಹಾಗೂ ದೂರನ್ನು ಸಿ-ವಿಜಿಲ್ ಮೂಲಕ ದೂರು ಸಲ್ಲಿಸಬಹುದು. ದೂರು ನೀಡಿದ 90 ನಿಮಿಷದೊಳಗೆ ಎಫ್‌ಎಸ್‌ಟಿ, ಎಸ್‌ಎಸ್‌ಟಿ ತಂಡಗಳು ಕ್ರಮ ಕೈಗೊಳ್ಳಲಿವೆ. 1950ಗೆ ಕರೆ ಮಾಡಿಯೂ ದೂರು ನೀಡಬಹುದು ಎಂದು ಹೇಳಿದರು. ಜಾಗೃತ ಮತದಾರರ ವೇದಿಕೆ ಅಧ್ಯಕ್ಷ ಕೆ.ಸಿ.ಬಸವರಾಜ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts