More

    ಮಳೆನೀರು ಕಾಲುವೆಗೆ ತ್ಯಾಜ್ಯನೀರು ಹರಿಸಿದರೆ ಕ್ರಮ

    ಬೆಂಗಳೂರು: ಒಳಚರಂಡಿ ಹಾಗೂ ಮಳೆನೀರು ಕಾಲುವೆಗೆ ಅನಧಿಕೃತವಾಗಿ ತ್ಯಾಜ್ಯನೀರು ಹರಿಸುತ್ತಿರುವವರನ್ನು ಪತ್ತೆ ಹಚ್ಚಿ ಅಂತಹವರಿಗೆ ಮೇ 1ರಿಂದ ನೋಟಿಸ್ ಜಾರಿಗೊಳಿಸುವಂತೆ ಜಲಮಂಡಳಿ ಅಧ್ಯಕ್ಷ ಡಾ. ವಿ. ರಾಮ್ ಪ್ರಸಾತ್ ಮನೋಹರ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

    ಸೋಮವಾರ ಸಂಸ್ಥೆಯ ಸಭಾಂಗಣದಲ್ಲಿ ಆಯೋಜಿಸಿದ್ದ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಜಲಮಂಡಳಿಯಿಂದ ಸಂಪರ್ಕ ಪಡೆಯದೆ ಅನಧಿಕೃತವಾಗಿ ತ್ಯಾಜ್ಯ ನೀರನ್ನು ಒಳಚರಂಡಿಗೆ ಹರಿಸಲಾಗುತ್ತಿದೆ ಎಂದು ದೂರು ಕೇಳಿಬಂದಿದೆ. ಹೆಚ್ಚಿನ ಕಡೆಗಳಲ್ಲಿ ಮಳೆನೀರು ಕಾಲುವೆಗೆ ಹರಿಯ ಬಿಡಲಾಗುತ್ತಿದೆ. ಇದನ್ನು ತಪ್ಪಿಸಿ ಒಳಚರಂಡಿ ಸಂಪರ್ಕವನ್ನು ಅಧಿಕೃತಗೊಳಿಸಲು ಮೇ 7ರವರೆಗೆ ಅವಕಾಶ ನೀಡಲಾಗಿದೆ. ತಪ್ಪು ಮಾಡುವ ವ್ಯಕ್ತಿ, ಕಂಪನಿಗಳ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.

    ಕಳೆದ ಒಂದು ವಾರದಿಂದ ಜಲಮಂಡಳಿ ಅಧಿಕಾರಿಗಳು ತಮ್ಮ ವ್ಯಾಪ್ತಿಯ 528 ಕಟ್ಟಡಗಳಲ್ಲಿ ಪರಿಶೀಲನೆ ನಡೆಸಿದ್ದಾರೆ. ಇವುಗಳಲ್ಲಿ 446 ಕಡೆಗಳಲ್ಲಿ ಅನಧಿಕೃತವಾಗಿ ತ್ಯಾಜ್ಯ ನೀರನ್ನು ಒಳಚರಂಡಿಗೆ ಹರಿಸುತ್ತಿರುವುದು ಪತ್ತೆಯಾಗಿದೆ. ಈ ಪೈಕಿ 221 ಸಂಪರ್ಕಗಳನ್ನು ಶುಲ್ಕ ಪಾವತಿಸಿಕೊಂಡು ಅಧಿಕೃತಗೊಳಿಸುವ ಪ್ರಕ್ರಿಯೆ ಆರಂಭಿಸಲಾಗಿದೆ. ಇನ್ನೂ 390 ಸಂಪರ್ಕಗಳಿಗೆ ನೋಟೀಸ್ ಜಾರಿಗೊಳಿಸಲಾಗಿದ್ದು, ಪರಿಶೀಲನೆಯ ಕಾರ್ಯವನ್ನು ಮತ್ತಷ್ಟು ಚುರುಕುಗೊಳಿಸಬೇಕು ಎಂದು ಅವರು ತಿಳಿಸಿದರು.

    ನೊಟೀಸ್ ಜಾರಿಗೊಳಿಸಿ:

    ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿರುವ 20ಕ್ಕೂ ಹೆಚ್ಚು ಅಪಾರ್ಟ್‌ಮೆಂಟ್‌ಗಳನ್ನು ಹೊಂದಿರುವ ವಸತಿ ಸಮುಚ್ಚಯ, ಹೋಟೆಲ್, ವಾಣಿಜ್ಯ ಕಟ್ಟಡಗಳನ್ನು ಪರಿಶೀಲಿಸಬೇಕು. ಮೇ 7ರ ನಂತರವೂ ಒಳಚರಂಡಿ ಸಂಪರ್ಕವನ್ನು ಅಧಿಕೃತಗೊಳಿಸಲು ಅರ್ಜಿ ಸಲ್ಲಿಸದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಂತಹವರು 15 ದಿನಗಳೊಳಗಾಗಿ ಜಲಮಂಡಳಿಯ ಅಧಿಕೃತ ಸಂಪರ್ಕ ಪಡೆಯದಿದ್ದಲ್ಲಿ ಕಾನೂನು ಅನ್ವಯ ಕ್ರಮಕ್ಕೆ ಮುಂದಾಗಬೇಕು ಎಂದು ಅಧಿಕಾರಿಗಳಿಗೆ ಅಧ್ಯಕ್ಷರು ಸೂಚನೆ ನೀಡಿದರು.

    ಸಭೆಯಲ್ಲಿ ಪ್ರಧಾನ ಮುಖ್ಯ ಎಂಜನಿಯರ್ ಸುರೇಶ, ಮುಖ್ಯ ಎಂಜನಿಯರ್‌ಗಳಾದ ಎಲ್.ಕುಮಾರನಾಯಕ್, ಕೆ.ಎನ್.ಪರಮೇಶ, ಎಸ್.ವಿ.ವೆಂಕಟೇಶ, ಎ.ರಾಜಶೇಖರ್, ಮಹೇಶ ಕೆ.ಎನ್., ರಾಜೀವ್ ಕೆ.ಎನ್, ಗಂಗಾಧರ್ ಬಿ.ಸಿ ಸೇರಿ ಇತರ ಅಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts