More

    ಶಿಕ್ಷಕರಿಂದ ಕನ್ನಡ ಸಾಹಿತ್ಯದ ಸುಗಂಧ ಪಸರಿಸಲಿ

    ಶಿಕಾರಿಪುರ: ಕನ್ನಡ ಸಾಹಿತ್ಯ ಎಂಬುದು ಸಮುದ್ರ ಇದ್ದಂತೆ. ಸಾಹಿತ್ಯ ಅಧ್ಯಯನದಿಂದ ಶಿಕ್ಷಕರಿಗೆ ಅಧ್ಯಾಪನಕ್ಕೆ ಅನುಕೂಲವಾಗುತ್ತದೆ. ಅವರು ಸಾಹಿತ್ಯದ ಸಿಹಿಯನ್ನು ಮಕ್ಕಳಿಗೂ ಹಂಚಬಲ್ಲರು ಎಂದು ಕಸಪಾ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್ ಹೇಳಿದರು.

    ನಗರದ ವಿಶ್ವಕರ್ಮ ಸಭಾಭವನದಲ್ಲಿ ಶುಕ್ರವಾರ ಕಸಾಪ, ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ, ಜಾನಪದ ಪರಿಷತ್, ಸಂಗಮೇಶ್ವರ ವಿದ್ಯಾಸಂಸ್ಥೆ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಆಶ್ರಯದಲ್ಲಿ ಪ್ರೌಢಶಾಲೆಗಳ ಉರ್ದು ಮತ್ತು ಕನ್ನಡ ಶಿಕ್ಷಕರಿಗಾಗಿ ಆಯೋಜಿಸಿದ್ದ ಒಂದು ದಿನದ ರಸಗ್ರಹಣ ಶಿಬಿರದಲ್ಲಿ ಮಾತನಾಡಿದರು.
    ಕನ್ನಡದ ನೆಲ-ಜಲ, ಭಾಷೆ-ಸಂಸ್ಕೃತಿಯನ್ನು ನಾವು ಉಳಿಸಿ, ಬೆಳೆಸಬೇಕು. ಕನ್ನಡ ಸಾಹಿತ್ಯದ ದಿಗ್ಗಜರ ಮೇರು ಕೃತಿಗಳನ್ನು ಅಭ್ಯಸಿಸಬೇಕು. ಜನಸಾಮಾನ್ಯರ ಹೃದಯಕ್ಕೆ ತಲುಪುವಂತೆ ಬರೆದ ಶರಣ-ಶರಣೆಯರ ವಚನಗಳನ್ನು ನಮ್ಮ ಮಕ್ಕಳಿಂದ ವಾಚಿಸಬೇಕು. ಅವುಗಳ ಸಾಮಾಜಿಕ ಕಳಕಳಿಯನ್ನು ಮಕ್ಕಳಿಗೆ ಅರ್ಥ ಮಾಡಿಸಬೇಕು. ಕನ್ನಡವನ್ನು ಸ್ಪಷ್ಟವಾಗಿ ಬರೆಯುವ ಹಾಗೂ ಓದುವಲ್ಲಿ ಮಕ್ಕಳು ವಿಫಲರಾಗುತ್ತಿದ್ದಾರೆ. ಓದಲು, ಬರೆಯಲು ಬಾರದ ವಿದ್ಯಾರ್ಥಿಗಳನ್ನು ಸೃಷ್ಟಿ ಮಾಡಿದರೆ ಕಥೆ ಏನು ಎಂದು ಪ್ರಶ್ನಿಸಿದ ಅವರು, ಕನ್ನಡ ಭಾಷೆ ಜ್ಞಾನ ವೃದ್ಧಿಸುವಲ್ಲಿ ಕನ್ನಡ ಭಾಷಾ ಶಿಕ್ಷಕರ ಪಾತ್ರ ಮಹತ್ವದ್ದು ಎಂದರು.
    ಅಧ್ಯಕ್ಷತೆ ವಹಿಸಿದ್ದ ತಾಲೂಕು ಕಸಾಪ ಅಧ್ಯಕ್ಷ ಎಚ್.ಎಸ್.ರಘು ಮಾತನಾಡಿ, ಪ್ರಸ್ತುತ ಪಿಯುಸಿ ಓದುತ್ತಿರುವ ಮಕ್ಕಳಿಗೆ ಕನ್ನಡ ಭಾಷೆಯನ್ನು ಸ್ಪಷ್ಟವಾಗಿ ಬರೆಯಲು ಹಾಗೂ ಓದಲು ಬಾರದಿರುವುದನ್ನು ನಾವು ನೋಡುತ್ತಿದ್ದೇವೆ. ವಿದ್ಯಾರ್ಥಿಗಳಿಗೆ ಕನ್ನಡ ಭಾಷೆಯನ್ನು ಕಲಿಸುವ ಮಹತ್ವದ ಜವಾಬ್ದಾರಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಮೇಲಿದೆ. ಈ ಕಾರ್ಯಾಗಾರವನ್ನು ಶಿಕ್ಷಕರು ಸದ್ಬಳಕೆ ಮಾಡಿಕೊಳ್ಳುವ ಮೂಲಕ ವಿದ್ಯಾರ್ಥಿಗಳು ಲೇಖಕರಾಗಿ ಹಾಗೂ ಕವಿಗಳಾಗಿ ಹೊರಹೊಮ್ಮುವಂತೆ ಕನ್ನಡ ಜ್ಞಾನವನ್ನು ವಿಸ್ತರಿಸಬೇಕು ಎಂದು ಸಲಹೆ ನೀಡಿದರು.
    ಭಾಷೆ-ವ್ಯಾಕರಣ ಕುರಿತು ಸಾಹಿತಿ ಹೊಸನಗರದ ಶಾಂತಾರಾಮ ಪ್ರಭು, ಪ್ರಾಚೀನ-ಆಧುನಿಕ ಕಾವ್ಯ ಓದು ವಿಶ್ಲೇಷಣೆ ಕುರಿತು ತೀರ್ಥಹಳ್ಳಿ ಸಾಹಿತಿ ಬಿ.ಎಂ.ಜಯಶೀಲ, ಕಥೆ-ಪ್ರಬಂಧ-ಓದು-ಸಾರಗೊಳಿಸುವ ಕ್ರಮ ಕುರಿತು ಶಿವಮೊಗ್ಗದ ಸಾಹಿತಿ ಡಾ. ಎಚ್.ಟಿ.ಕೃಷ್ಣಮೂರ್ತಿ, ವಾಚನ-ಪ್ರದರ್ಶನ(ನಾಟಕ-ಜಾನಪದ) ಕುರಿತು ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನ ರಂಗ ನಿರ್ದೇಶಕ ಜಿ.ಆರ್.ಲವ ವಿಷಯ ಮಂಡಿಸಿದರು.
    ಶಿಕ್ಷಣ ಇಲಾಖೆ ಇಸಿಒ ಸೋಮಶೇಖರ್, ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ತಾಲೂಕು ಅಧ್ಯಕ್ಷ ಕೆ.ಎಸ್.ಹುಚ್ರಾಯಪ್ಪ, ಕಜಾಪ ತಾಲೂಕು ಅಧ್ಯಕ್ಷ ಬಿ.ಪಾಪಯ್ಯ, ಪ್ರೌಢಶಾಲಾ ಕನ್ನಡ ಭಾಷಾ ಶಿಕ್ಷಕರ ಸಂಘದ ಅಧ್ಯಕ್ಷ ರಾಘವೇಂದ್ರ ಕುಲಕರ್ಣಿ, ಸಂಗಮೇಶ್ವರ ವಿದ್ಯಾಸಂಸ್ಥೆ ಕಾರ್ಯದರ್ಶಿ ಜೆ.ಮಂಜಾನಾಯ್ಕ, ತಾಲೂಕು ವಿಶ್ಚಕರ್ಮ ಸಮಾಜ ಅಧ್ಯಕ್ಷ ಮಲ್ಲಿಕಾರ್ಜುನ್ ಆಚಾರ್, ಜಾನಪದ ಪರಿಷತ್ ಪ್ರಧಾನ ಕಾರ್ಯದರ್ಶಿ ಎಂ.ಎಚ್.ಸತ್ಯನಾರಾಯಣ್, ಕಸಾಪ ಕಾರ್ಯದರ್ಶಿ ಮೋಹನ್‌ರಾಜ್, ಶಿರಾಳಕೊಪ್ಪ ಹೋಬಳಿ ಅಧ್ಯಕ್ಷ ಮಂಜುನಾಥ್, ಅಂಜನಾಪುರ ಹೋಬಳಿ ಪ್ರಧಾನ ಕಾರ್ಯದರ್ಶಿ ಕರಿಬಸಪ್ಪ, ಬಾಪೂಜಿ ಪ್ರೌಢಶಾಲೆ ಮುಖ್ಯಶಿಕ್ಷಕ ರಾಘವೇಂದ್ರ ಕುಲಕರ್ಣಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts