More

    ಸೋಂದಾ ಕೋಟೆ ರಕ್ಷಣೆಯಾಗಲಿ

    ಶಿರಸಿ: ತಾಲೂಕಿನ ಸೋಂದಾ ಕೋಟೆ ಪ್ರದೇಶವನ್ನು ಜೈವಿಕ ಪಾರಂಪರಿಕ ತಾಣವಾಗಿ ಘೊಷಿಸಿ ರಕ್ಷಿಸುವ ಕಾರ್ಯ ಮಾಡಲು ಭೈರುಂಬೆ ಗ್ರಾಮ ಪಂಚಾಯಿತಿ ಜೀವೈವಿಧ್ಯ ಸಮಿತಿ ಸಭೆಯಲ್ಲಿ ನಿರ್ಣಯಿಸಲಾಯಿತು.

    ಇಲ್ಲಿನ ಪಂಚಾಯಿತಿ ಸಭಾಂಗಣದಲ್ಲಿ ಭಾನುವಾರ ನಡೆದ ಸಮಿತಿ ಸಭೆಯಲ್ಲಿ ಸೋಂದಾ ಕೋಟೆ ರಕ್ಷಿಸಲು ತೀರ್ವನಿಸಲಾಯಿತು.

    ಸೋಂದಾ ಕೋಟೆ ಪ್ರದೇಶ ಐತಿಹಾಸಿಕ ಪ್ರಸಿದ್ಧ ಸ್ಥಳವಾಗಿದೆ. ಇಲ್ಲಿ ಅಪರೂಪದ 300 ವರ್ಷಕ್ಕೂ ಹಳೆಯದಾದ ಪಾರಂಪರಿಕ ವೃಕ್ಷಗಳಿವೆ. ಶಾಲ್ಮಲಾ ನದಿ ತೀರದ ಈ ಕೋಟೆ ಸಂರಕ್ಷಣೆ ಆಗಬೇಕು. ಈ ಹಿನ್ನೆಲೆಯಲ್ಲಿ ಕೋಟೆ ಪ್ರದೇಶವನ್ನು ಜೈವಿಕ ಪಾರಂಪರಿಕ ತಾಣ ಎಂದು ಗುರುತಿಸಿ ಪೂರ್ಣ ರಕ್ಷಣೆ ನೀಡಬೇಕು. ಸೋಂದಾ ಜಾಗೃತ ವೇದಿಕೆ ಮುಂತಾದ ಸ್ಥಳೀಯ ಸಂಸ್ಥೆಗಳ ಸಹಕಾರದಿಂದ ಕೋಟೆ ರಕ್ಷಣೆ, ಜಾಗೃತಿ ಮಾಡಲು ಗ್ರಾಮ ಪಂಚಾಯಿತಿ ಮುಂದಾಗಬೇಕು ಎಂದು ನಿರ್ಧರಿಸಲಾಯಿತು.

    ಪಂಚಾಯಿತಿ ವ್ಯಾಪ್ತಿಯಲ್ಲಿರುವ ಸಹಸ್ರಲಿಂಗ-ಶಾಲ್ಮಲಾ ಪ್ರದೇಶದಲ್ಲಿ ಬೇಡ್ತಿ-ವರದಾ ನದಿ ಜೋಡಣೆ ಯೋಜನೆಯ ಡಿಪಿಆರ್ ಕಾರ್ಯ ನಡೆಸಲು ಅವಕಾಶ ನೀಡಬಾರದು. ಯೋಜನೆ ಅನುಷ್ಠಾನವಾದರೆ ಅಪಾರ ಜೀವವೈವಿಧ್ಯ ನಾಶ, ರೈತರಿಗೆ ನೀರಿನ ತೊಂದರೆ, ಮುಳುಗಡೆ, ರೈತರು ಭೂಮಿ ಕಳೆದುಕೊಳ್ಳುವುದು ಸೇರಿದಂತೆ ಭಾರಿ ದುಷ್ಪರಿಣಾಮ ಉಂಟಾಗಲಿದೆ ಎಂದು ಜೀವವೈವಿಧ್ಯ ಸಮಿತಿ ಅಭಿಪ್ರಾಯ ನೀಡಿತು.

    ಗೋಳಿಕೊಪ್ಪ ಗ್ರಾಮದ ಅರಣ್ಯದಲ್ಲಿ ನೂರಾರು ಜಾಲಾರಿ ಮರಗಳು ಸತ್ತಿದ್ದರೂ ಅವುಗಳನು ಕಟಾವು ಮಾಡದೇ ಇರುವುದರಿಂದ ರೋಗ ವ್ಯಾಪಿಸಿ ಇನ್ನಷ್ಟು ಅರಣ್ಯ ನಾಶವಾಗಲಿದೆ. ಆದ್ದರಿಂದ ತುರ್ತಾಗಿ ಆ ಮರಗಳ ಕಟಾವು ಮಾಡಲು ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಜೀವವೈವಿಧ್ಯ ಸಮಿತಿ ಅಭಿಪ್ರಾಯಪಟ್ಟಿತು.

    ಸಭೆಯಲ್ಲಿ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಅಶೀಸರ ಮಾತನಾಡಿ, ನೈಸರ್ಗಿಕ ಸಂಪನ್ಮೂಲ ನಿರ್ವಹಣೆಯಲ್ಲಿ ಜೀವವೈವಿಧ್ಯ ಸಮಿತಿಯ ಜವಾಬ್ದಾರಿ ತುಂಬ ಮುಖ್ಯ ಎಂದರು. ರಾಜ್ಯದ ಎಲ್ಲಾ ಪಂಚಾಯಿತಿ ಪ್ರತಿನಿಧಿಗಳಿಗೆ ಮೇ ತಿಂಗಳಲ್ಲಿ ತರಬೇತಿ ನೀಡುವ ಯೋಜನೆ ರೂಪಿಸಲಾಗಿದೆ ಎಂದು ಅಶೀಸರ ತಿಳಿಸಿದರು.

    ಸಭೆಯ ಅಧ್ಯಕ್ಷತೆ ವಹಿಸಿದ್ದ ಪಂಚಾಯಿತಿ ಅಧ್ಯಕ್ಷ ರಾಘವೇಂದ್ರ ನಾಯ್ಕ ಮಾತನಾಡಿ, ಬೇಡ್ತಿ-ವರದಾ ಯೋಜನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಇನ್ನಷ್ಟು ಜಾಗೃತಿ ಮಾಡಬೇಕು ಎಂದು ಅಭಿಪ್ರಾಯ ನೀಡಿದರು. ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಫ್.ಜಿ.ಚನ್ನಣ್ಣನವರ, ಆರ್.ಎಫ್.ಒ. ಬಸವರಾಜ ಬೋಚಳ್ಳಿ, ಮಂಜುನಾಥ ಹೆಬ್ಬಾರ, ಪಿಡಿಒ ಹೆಚ್.ಆರ್.ಶಿಗ್ಗಾಂವಿ, ಗ್ರಾಮ ಪಂಚಾಯಿತಿ ಸದಸ್ಯರಾದ ಪ್ರಕಾಶ ಹೆಗಡೆ, ಕಿರಣ ಭಟ್ಟ, ಸವಿತಾ ಪಟಗಾರ, ಅಜಿತಾ ಗೌಡ, ಸುನಂದಾ ತಳವಾರ, ನಾಗರತ್ನ, ಸಾಮಾಜಿಕ ಕಾರ್ಯಕರ್ತರಾದ ಆರ್.ಎನ್.ಹೆಗಡೆ ಉಳ್ಳಿಕೊಪ್ಪ, ನಾರಾಯಣ ಗಡೀಕೈ, ಸುರೇಶ ಹಕ್ಕಿಮನೆ, ಅನಂತ ಭಟ್ಟ ಹುಳಗೋಳ ಇದ್ದರು. ಸಭೆಯ ನಂತರ ಜೀವವೈವಿಧ್ಯ ಮಂಡಳಿ ಅಧ್ಯಕ್ಷರು ಮತ್ತು ಪಂಚಾಯಿತಿ ಜೀವವೈವಿಧ್ಯ ಸಮಿತಿ ಸದಸ್ಯರು ಹುಳಗೋಳ ಗ್ರಾಮದ ಬಳಿ ಸಹಸ್ರಲಿಂಗದ ಮೇಲ್ಭಾಗದ ಶಾಲ್ಮಲಾ ನದಿ ಅರಣ್ಯ ಪ್ರದೇಶಕ್ಕೆ ಭೇಟಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts