More

    ಮೂರು ತಿಂಗಳು ಕಡ್ಡಾಯ ಬರ ನಿರ್ವಹಣೆ- ಶಾಸಕ ಬಸವಂತಪ್ಪ ದಾವಣಗೆರೆ ತಾಪಂ ಕೆಡಿಪಿ ಸಭೆ

    ದಾವಣಗೆರೆ: ಮುಂಬರುವ ಮೂರು ತಿಂಗಳಲ್ಲಿ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು, ಗಂಭೀರವಾಗಿ ಬರ ನಿರ್ವಹಣೆ ಮಾಡಬೇಕು. ಲೋಪ ಎಸಗುವವರ ವಿರುದ್ಧ ಮೇಲಧಿಕಾರಿಗಳು ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಸೂಚಿಸಿದರು.
    ಇಲ್ಲಿನ ತಾಪಂ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ದಾವಣಗೆರೆ ತಾಪಂ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
    ಕುಡಿವ ನೀರು, ಮೇವು, ರೈತರಿಗೆ ಬಿತ್ತನೆ ಬೀಜ ಅಗತ್ಯ ಸಲಕರಣೆಗಳನ್ನು ಪೂರೈಸಬೇಕು. ವಿದ್ಯುತ್ ಪರಿವರ್ತಕಗಳು ಸುಟ್ಟಲ್ಲಿ 24 ತಾಸಿನೊಳಗೆ ಬದಲಾಯಿಸಬೇಕು. ಬೆಳೆಗಳಿಗೆ ರೋಗಬಾಧೆ ಕಂಡುಬಂದಲ್ಲಿ ಅಗತ್ಯ ಕ್ರಮ ವಹಿಸಬೇಕು ಎಂದು ಹೇಳಿದರು.
    ಕೊಳವೆಬಾವಿಗಳಲ್ಲಿ ಅಂತರ್ಜಲ ಮಟ್ಟ ಕುಸಿದಿದೆ. ಈ ಹಿಂದೆ ಖಾಸಗಿ ಬೋರ್‌ವೆಲ್‌ಗಳಿಂದ ನೀರು ಪೂರೈಸಿದವರಿಗೆ ಹಣ ಪಾವತಿಸಿಲ್ಲ. ರೈತರ ಮನವೊಲಿಸಿ ಹಣ ಪಾವತಿ ಕುರಿತಂತೆ ಅವರಲ್ಲಿ ಭರವಸೆ ಮೂಡಿಸಬೇಕು ಎಂದು ತಿಳಿಸಿದರು.
    ತಹಸೀಲ್ದಾರ್ ಡಾ.ಎಂ.ಬಿ. ಅಶ್ವಥ್ ಮಾತನಾಡಿ ಬರ ನಿರ್ವಹಣೆಗಾಗಿ ಪ್ರತಿ ಪಂಚಾಯ್ತಿಗೆ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗುತ್ತಿದೆ. ತಾಲೂಕಿನ ಅಧಿಕಾರಿಗಳು ಮೂರು ತಿಂಗಳಲ್ಲಿ ದೀರ್ಘಾವಧಿ ರಜೆ ಪಡೆಯುವಂತಿಲ್ಲ. ಈ ಬಗ್ಗೆ ಮೇಲಧಿಕಾರಿಗಳನ್ನು ಸಂಪರ್ಕಿಸಬೇಕು. ಸೇವಾ ವ್ಯತ್ಯಯವಾದಲ್ಲಿ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
    ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶ್ರೀಧರಮೂರ್ತಿ ಮಾತನಾಡಿ ತಾಲೂಕಿನಲ್ಲಿ ಫ್ರೂಟ್ಸ್ ನೋಂದಣಿಯಡಿ ಸರಿಯಾದ ಮಾಹಿತಿ, ಲಿಂಕ್ ಇಲ್ಲದ್ದರಿಂದ 2001 ಅರ್ಜಿ ತಿರಸ್ಕರಿಸಲಾಗಿದೆ. ಮರು ನೋಂದಣಿಗೆ ಅವಕಾಶವಿದೆ. ಸ್ಪಿಂಕ್ಲರ್‌ಗಳನ್ನು ನೀಡಲಾಗುತ್ತಿದೆ ಎಂದರು.
    ಹನಿ ನೀರಾವರಿ ಯೋಜನೆಯಡಿ ರೈತರು ಅರ್ಜಿ ಸಲ್ಲಿಸಬಹುದು. ಪ್ಯಾಕಡ್‌ಹೌಸ್‌ಗಳಿಗೆ ಹೆಚ್ಚಿನ ಬೇಡಿಕೆ ಇದೆ. ಹೋಬಳಿವಾರು ನಾಲ್ಕಕ್ಕೆ ಮಾತ್ರ ಅವಕಾಶವಿದೆ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಹಂಸವೇಣಿ ತಿಳಿಸಿದರು. ಇದರ ಪ್ರಮಾಣ ಏರಿಕೆಗೆ ತೋಟಗಾರಿಕೆ ಸಚಿವರ ಗಮನಕ್ಕೆ ತರುವುದಾಗಿ ಶಾಸಕರು ತಿಳಿಸಿದರು.
    ಕೃಷಿಭಾಗ್ಯ ಯೋಜನೆಯಡಿ ಕೃಷಿ ಹೊಂಡಗಳ ನಿರ್ಮಾಣಕ್ಕೆ ಆದ್ಯತೆ ನೀಡಬೇಕು. ಶಾಲಾ ಕಟ್ಟಡಗಳ ನಿರ್ಮಾಣಕ್ಕೆ ಒಂದೇ ಏಜೆನ್ಸಿ ಮಿತಿಗೊಳಿಸಬೇಕು. ಜಿಲ್ಲೆಯಲ್ಲಿ ಬೆಳೆದ ಮೇವು ಇತರೆ ಜಿಲ್ಲೆಗಳಿಗೆ ಹೋಗದಂತೆ ತಡೆಗಟ್ಟಬೇಕು ಎಂದೂ ಹೇಳಿದರು. ಸಭೆಯಲ್ಲಿ ತಾಪಂ ಇಒ ರಾಮಭೋವಿ, ತಾಲೂಕು ಮಟ್ಟದ ಅಧಿಕಾರಿಗಳಿದ್ದರು
    ನೋಟಿಸ್‌ಗೆ ಆದೇಶ
    ಕಾಮಗಾರಿ ಕುರಿತು ಸಭೆಗೆ ತಪ್ಪು ಮಾಹಿತಿ ಪ್ರತಿಗಳನ್ನು ನೀಡಿದ್ದರ ಹಿನ್ನೆಲೆಯಲ್ಲಿ ದಾವಣಗೆರೆ ದಕ್ಷಿಣ ವಲಯದ ಶಿಕ್ಷಣ ಇಲಾಖೆ ಸಿಬ್ಬಂದಿಗೆ ಹಾಗೂ ಸಭೆಗೆ ದಾವಣಗೆರೆ ಉತ್ತರ ವಲಯದ ಬಿಇಒ ಕಚೇರಿ ವ್ಯವಸ್ಥಾಪಕರು ಗೈರಾಗಿದ್ದರ ಹಿನ್ನೆಲೆಯಲ್ಲಿ ನೋಟಿಸ್ ನೀಡುವಂತೆಯೂ ಶಾಸಕರು ಸೂಚನೆ ನೀಡಿದರು. ಸುಸ್ಥಿತಿಯಲ್ಲಿಲ್ಲದ ಆಸ್ಪತ್ರೆ ಕಟ್ಟಡ ಕೆಡವಬೇಕು. ಕೆಲವೆಡೆ ಆಸ್ಪತ್ರೆ ಕಾಂಪೌಂಡ್‌ನಲ್ಲೇ ತಿಪ್ಪೆ ಎಸೆಯಲಾಗುತ್ತಿದ್ದು ಇದು ನಿಲ್ಲಬೇಕು ಎಂದೂ ಹೇಳಿದರು.
    ತಾಲೂಕಿನಲ್ಲಿನ್ನು ಬಯೋಮೆಟ್ರಿಕ್
    ಶಿಕ್ಷಣ ಇಲಾಖೆ ಸಿಬ್ಬಂದಿ ಕಚೇರಿ ವೇಳೆಯಲ್ಲಿ ತಮ್ಮ ವೈಯಕ್ತಿಕ ಕೆಲಸಕ್ಕಾಗಿ ಇತರ ಕಚೇರಿಗಳಿಗೆ ಹೋಗಬಾರದು. ಶಿಕ್ಷಕರು ಕೂಡ ರಾಜಕೀಯ ಮಾಡುತ್ತಿದ್ದಾರೆ. ಎಲ್ಲ ಕಚೇರಿಗಳಲ್ಲೂ ಚಲನವಲನ ಪುಸ್ತಕ ನಿರ್ವಹಣೆ ಹಾಗೂ ಬಯೋಮೆಟ್ರಿಕ್ ಹಾಜರಾತಿ ನೋಂದಣಿ ಮಾಡುವುದು ಕಡ್ಡಾಯ ಎಂದು ತಾಪಂ ಆಡಳಿತಾಧಿಕಾರಿ ಎಲ್.ಎ.ಕೃಷ್ಣನಾಯ್ಕ ತಾಕೀತು ಮಾಡಿದರು.
    ತಿಂಗಳಿಗೆ 1 ಲೀ. ಎಣ್ಣೆ, ಕೊಳೆತ ತರಕಾರಿ ಬಳಕೆ!
    ಶಾಲೆಗಳಲ್ಲಿ ಹಾಜರಾತಿ ವಹಿ, ಬಿಸಿಯೂಟ ಆಹಾರಧಾನ್ಯ ಪೂರೈಕೆಯಲ್ಲಿ ವ್ಯತ್ಯಾಸ ಮಾಡಲಾಗುತ್ತಿದೆ ಎಂದು ಸಭೆಯುದ್ದಕ್ಕೂ ಅಸಮಾಧಾನ ವ್ಯಕ್ತಪಡಿಸಿದ ಶಾಸಕರು ಒಂದು ತಿಂಗಳಿಗೆ 1 ಲೀ. ಅಡುಗೆ ಎಣ್ಣೆಯನ್ನು ಬಿಸಿಯೂಟಕ್ಕೆ ಬಳಸಲಾಗಿದೆ ಎಂದರೆ ಒಂದು ಮಗುವಿಗೆ ದಿನಕ್ಕೆ ಎಷ್ಟು ಎಣ್ಣೆ ಪ್ರಮಾಣ ಬಳಸಿದ್ದಾರೆ ಎಂಬುದನ್ನು ನೀವೇ ಲೆಕ್ಕ ಹಾಕಿ ಎಂದೂ ಹೇಳಿದರು.
    ಡಿಡಿಪಿಐ, ಬಿಇಒಗಳು ಶಾಲೆಗಳಿಗೆ ನಿಯಮಿತ ಭೇಟಿ ನೀಡುತ್ತಿಲ್ಲ. ಹೀಗಾಗಿ ಅಲ್ಲಲ್ಲಿ ಲೋಪ ಆಗುತ್ತಿವೆ. ಕೊಡಗನೂರಲ್ಲಿ ಶಿಕ್ಷಕಿಯೊಬ್ಬರು ಒಂದು ದಿನ ಮುಂಗಡವಾಗಿ ಸಹಿ ಮಾಡಿದ್ದಾರೆ. ಐಗೂರು ಗೊಲ್ಲರಹಟ್ಟಿ ಶಾಲೆಯಲ್ಲಿ ಹಾಜರಾತಿಯಲ್ಲಿದ್ದ ಮಕ್ಕಳ ಸಂಖ್ಯೆ ವಾಸ್ತವವಾಗಿ ಇರಲಿಲ್ಲ. ಶಾಲಾ ವೇಳೆಯಲ್ಲಿ ಮಕ್ಕಳು ಅಪಘಾತಕ್ಕೀಡಾದರೆ ಯಾರು ಹೊಣೆ ಎಂದು ಪ್ರಶ್ನೆ ಮಾಡಿದರು.
    ವಿದ್ಯಾರ್ಥಿಗಳು ಗೈರಿದ್ದರೂ ತಿಂಗಳ ಕೊನೆಗೆ ಬಿಸಿಯೂಟದ ಎಲ್ಲ ಪಡಿತರ ಬಳಸಲಾಗಿದೆ ಎಂದು ಲೆಕ್ಕ ತೋರಿಸಲಾಗುತ್ತಿದೆ. ಗೈರಿನಿಂದಾಗಿ ಉಳಿದ ಆಹಾರಧಾನ್ಯವನ್ನು ಮುಂದಿನ ತಿಂಗಳಿಗೆ ಬಳಸಬೇಕು. ಕಲಪನಹಳ್ಳಿ ಶಾಲೆಯಲ್ಲಿ ಮೂರು ತಿಂಗಳಿಗೆ ಆಗುವಷ್ಟು ತರಕಾರಿ ಕೂಡಿಡಲಾಗಿತ್ತು. ಭೇಟಿ ವೇಳೆ ತರಕಾರಿಗಳು ಕೊಳೆತಿದ್ದವು. ಸಾಂಬಾರಿನಲ್ಲಿ ಬೇಳೆ ಕಾಣಲಿಲ್ಲ. ಅದು ದಕ್ಕಬೇಕಾದವರಿಗೆ ದಕ್ಕಿರಬಹುದು.
    ಮಕ್ಕಳು ದೇವರು. ಅವರ ವಿಷಯದಲ್ಲೂ ಮೋಸ ಮಾಡುವುದು ಸರಿಯಲ್ಲ. ಎಲ್ಲೆಡೆ ಸಂತೆ ನಡೆಯುವಾಗ ಅಂದಿನ ತರಕಾರಿ ಅಂದೇ ಕೊಳ್ಳಲು ಕಷ್ಟವೆ ಎಂದು ಪ್ರಶ್ನಿಸಿದ ಶಾಸಕರು, ಮಕ್ಕಳಿಗೆ ಗುಣಮಟ್ಟದ ಶೂ ನೀಡದ್ದರಿಂದ 15ದಿನದಲ್ಲೇ ಶೂ ಹರಿದು ಬಹುತೇಕ ಮಕ್ಕಳು ಬರಿಗಾಲಲಲ್ಲಿ ಶಾಲೆಗೆ ಹೋಗುತ್ತಿರುವುದನ್ನು ಕಂಡಿದ್ದೇನೆ. ಕನಿಷ್ಠ ಪಕ್ಷ 6 ತಿಂಗಳು ಬಾಳಿಕೆ ಬಾರದಿದ್ದರೆ ಹೇಗೆ ಎಂದೂ ಕಿಡಿ ಕಾರಿದರು.
    ಖಾಸಗಿ ಶಾಲೆಗಳ ಕಡತಗಳಿಗೂ ಅನುಮೋದನೆ ನೀಡುತ್ತಿಲ್ಲ ಎಂದು ಒಕ್ಕೂಟದವರು ದೂರು ನೀಡಿದ್ದಾರೆ. ಅನುಕಂಪದ ನೌಕರಿಗಾಗಿ ಅರ್ಜಿಯ ಜತೆಗೆ ಎಲ್ಲ ದಾಖಲೆ ಸಲ್ಲಿಸಿದರೂ ವಿಳಂಬ ಮಾಡಿದ ಪ್ರಕರಣ ನನ್ನ ಗಮನಕ್ಕಿದೆ. ಇಂತಹ ನಿರ್ಲಕ್ಷ್ಯ ಮುಂದುವರಿದಲ್ಲಿ ಶಿಸ್ತು ಕ್ರಮ ಅನಿವಾರ್ಯ ಎಂದು ಎಂದು ಎಚ್ಚರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts