More

    ಪೊಲೀಸರಿಗೆ ಮುಂಬಡ್ತಿ ಪರ್ವ: ಎಸ್​ಐ ನೇಮಕಾತಿಗೆ ಕಾನೂನು ತೊಡಕು; ಕಾನ್​ಸ್ಟೆಬಲ್ ಭರ್ತಿಗೆ ಕ್ರಮ

    ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ 20 ಸಾವಿರ ಹುದ್ದೆಗಳು ಖಾಲಿ ಇದ್ದು, ಹಂತ ಹಂತವಾಗಿ ಅವುಗಳ ಭರ್ತಿಗೆ ಚಾಲನೆ ನೀಡಲು ನಿರ್ಧರಿಸಿರುವ ಸರ್ಕಾರ, ಪಿಎಸ್​ಐ ಕೊರತೆ ನೀಗಿಸಲು 700 ಎಎಸ್​ಐ ಗಳಿಗೆ ಬಡ್ತಿ ನೀಡಲಿದೆ. ಒಂದು ಸಾವಿರ ಸಬ್ ಇನ್​ಸ್ಪೆಕ್ಟರ್ ಹುದ್ದೆಗಳ ಕೊರತೆ ಇದೆ. ಈ ವರ್ಷ ಮತ್ತಷ್ಟು ಜನ ನಿವೃತ್ತರಾಗುತ್ತಿದ್ದಾರೆ. ಆದ್ದರಿಂದ ನಿಯಮ 32 ಬಳಸಿ ಬಡ್ತಿ ನೀಡಲಾಗುತ್ತಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಮಾಹಿತಿ ನೀಡಿದ್ದಾರೆ.

    ಪಿಎಸ್​ಐ 545 ಹುದ್ದೆಗಳ ನೇಮಕದ ಅಕ್ರಮದಿಂದಾಗಿ ನೇಮಕಾತಿ ನಿಂತಿದೆ. ಅಂದಾಜು 50 ಸಾವಿರ ಜನ ಪರೀಕ್ಷೆ ಬರೆದಿದ್ದಾರೆ. ಮರು ಪರೀಕ್ಷೆಗೆ ಅನುಮತಿ ನೀಡುವಂತೆ ಅಡ್ವೋಕೇಟ್ ಜನರಲ್ ಮೂಲಕ ನ್ಯಾಯಾಲಯಕ್ಕೆ ಮನವಿ ಮಾಡಿದ್ದೇವೆ. ನ್ಯಾಯಾಲಯದ ತೀರ್ಪಿನಂತೆ ಸರ್ಕಾರ ನಡೆದುಕೊಳ್ಳಲಿದೆ ಎಂದು ಸ್ಪಷ್ಟಪಡಿಸಿದರು.

    400 ಪಿಎಸ್​ಐಗಳ ನೇಮಕಕ್ಕೆ ಪ್ರಸ್ತಾವನೆ ಸಿದ್ಧವಾಗಿದೆ. ಆದರೆ, 545 ಹುದ್ದೆಗಳಿಗೆ ಪರೀಕ್ಷೆ ಬರೆದವರು ಸೇವಾ ಹಿರಿತನ ಹೋಗುತ್ತದೆ ಎಂಬ ಕಾರಣಕ್ಕೆ ಮತ್ತೆ ನ್ಯಾಯಾಲಯಕ್ಕೆ ಮೊರೆ ಹೋಗುವ ಸಾಧ್ಯತೆ ಇರುವುದರಿಂದ ಸದ್ಯಕ್ಕೆ ಈ ಪ್ರಕ್ರಿಯೆ ತಡೆ ಹಿಡಿದಿದ್ದೇವೆ. ಆ ಕೊರತೆ ತುಂಬಿಕೊಳ್ಳುವುದಕ್ಕಾಗಿಯೇ ಎಎಸ್​ಐಗಳಿಗೆ ಬಡ್ತಿ ನೀಡಲು ಕಡತ ಸಿದ್ಧವಾಗುತ್ತಿದೆ. 700 ಎಎಸ್​ಐಗಳಿಗೆ ಬಡ್ತಿ ಸಿಕ್ಕರೆ ಅವರ ಕೆಳಹಂತದ ಮುಖ್ಯಪೇದೆ ಹಾಗೂ ಪೇದೆಗಳಿಗೂ ಬಡ್ತಿ ಸಿಗಲಿದೆ ಎಂದು ಹೇಳಿದರು.

    ಸುಳ್ಳು ಸುದ್ದಿಗೆ ಕಡಿವಾಣ: ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಸುಳ್ಳು ಸುದ್ದಿಗಳಿಗೆ ಕಡಿವಾಣ ಹಾಕುವ ಬಗ್ಗೆ ಚರ್ಚೆ ನಡೆಸಿದ್ದೇವೆ. ಗೃಹ ಮತ್ತು ಐಟಿ- ಬಿಟಿ ಇಲಾಖೆಗೆ ಜವಾಬ್ದಾರಿ ನೀಡಲಾಗಿದೆ. ಸೈಬರ್ ಕಾನೂನುಗಳನ್ನು ಪರಿಶೀಲನೆ ಮಾಡಲಾಗುತ್ತಿದೆ. ತಜ್ಞರನ್ನು ಒಳಗೊಂಡ ಸಮಿತಿ ರಚನೆ ಮಾಡಲಾಗುವುದು. ಸಾಮಾಜಿಕ ಜಾಲತಾಣ ಸಂಸ್ಥೆಗಳು ಅನೇಕ ಸಂದರ್ಭದಲ್ಲಿ ಉತ್ತರವನ್ನೇ ನೀಡುತ್ತಿಲ್ಲ. ಸುಳ್ಳು ಸುದ್ದಿಗಳಿಗೆ ಕಡಿವಾಣ ಹಾಕದಿದ್ದರೆ ರಾಜ್ಯದಲ್ಲಿ ಶಾಂತಿಯುತ ಜೀವನ ಸಾಧ್ಯವಿಲ್ಲ ಎಂದು ಪರಮೇಶ್ವರ್ ಅಭಿಪ್ರಾಯಪಟ್ಟರು. ಸಾಮಾಜಿಕ ಜಾಲತಾಣ ಸಂಸ್ಥೆಗಳ ದೇಶದ ಮುಖ್ಯಸ್ಥರ ಸಭೆಯನ್ನು ಶೀಘ್ರದಲ್ಲಿಯೇ ಸಿಎಂ ಅಧ್ಯಕ್ಷತೆಯಲ್ಲಿ ಕರೆಯಲಾಗುವುದು. ಅವರಿಗೂ ಎಚ್ಚರಿಕೆ ಕೊಟ್ಟು ಕಳುಹಿಸಲಾಗುವುದು ಎಂದು ಹೇಳಿದರು.

    3,500 ಪೇದೆಗಳ ನೇಮಕ: ರಾಜ್ಯದಲ್ಲಿ ಒಟ್ಟು 16 ಸಾವಿರ ಪೊಲೀಸ್ ಪೇದೆಗಳ ಹುದ್ದೆ ಖಾಲಿ ಇದೆ. ಅದರಲ್ಲಿ ಬೆಂಗಳೂರು ನಗರಕ್ಕೆ ಸಂಬಂಧಿಸಿದಂತೆ 2,500 ಪೇದೆಗಳ ನೇಮಕಕ್ಕೆ ಆರ್ಥಿಕ ಇಲಾಖೆಯ ಅನುಮೋದನೆ ಸಿಕ್ಕಿದೆ. ನೇಮಕಾತಿ ಪ್ರಕ್ರಿಯೆ ತಕ್ಷಣ ಆರಂಭಿಸಲಾಗುವುದು. ರಾಜ್ಯದ ಇತರೆ ಭಾಗಗಳಿಗೆ 3,500 ಪೇದೆಗಳನ್ನು ನೇಮಕ ಮಾಡಿಕೊಳ್ಳಲು ಒಪ್ಪಿಗೆ ನೀಡುವಂತೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗುವುದು. ಉಳಿದ 10 ಸಾವಿರ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಿಕೊಳ್ಳಲಾಗುವುದು ಎಂದು ಸಚಿವ ಪರಮೇಶ್ವರ್ ತಿಳಿಸಿದರು.

    ಸಿಬಿಐಗೆ ನಿರ್ಬಂಧಕ್ಕೆ ಒತ್ತಡ: ರಾಜ್ಯದಲ್ಲಿ ಸಿಬಿಐ ಸ್ವಯಂಪ್ರೇರಿತ ತನಿಖೆಗೆ ಮುಂದಾಗುವುದಕ್ಕೆ ತಡೆ ಹಾಕುವ ಕುರಿತು ತಮಿಳುನಾಡು ಮಾದರಿಯಲ್ಲಿಯೇ ಕಾನೂನು ರೂಪಿಸುವಂತೆ ಒತ್ತಡ ಇದೆ. ಆದರೆ ತಾವಾಗಲಿ, ಮುಖ್ಯಮಂತ್ರಿ ಅವರಾಗಲಿ ಈ ಬಗ್ಗೆ ಚರ್ಚೆ ಮಾಡಿಲ್ಲ ಎಂದು ಗೃಹ ಸಚಿವರು ತಿಳಿಸಿದರು. ಸಣ್ಣ ಪುಟ್ಟ ಪ್ರಕರಣಗಳಲ್ಲಿಯೂ ಸಿಬಿಐ ತನಿಖೆ ನಡೆಸುವಂತೆ ಬಿಜೆಪಿ ಒತ್ತಾಯ ಮಾಡುತ್ತಿದೆ. ಆದರೆ, ಆ ರೀತಿಯಲ್ಲಿ ಮಾಡಲು ಸಾಧ್ಯವಿಲ್ಲ. ತಮಿಳುನಾಡಿನಲ್ಲಿ ಮಂತ್ರಿಗಳು, ಮುಖಂಡರ ಮೇಲೆ ಸಿಬಿಐ ದಾಳಿ ಮಾಡಿದೆ. ಅದೇ ಮಾದರಿ ರಾಜ್ಯ ದಲ್ಲಿಯೂ ಆಗಬಹುದು ಎಂಬುದು ಕೆಲವರ ಆತಂಕ. ಆದ್ದರಿಂದ ರಾಜ್ಯ ಸರ್ಕಾರದ ಅನುಮತಿ ಇಲ್ಲದೇ ತನಿಖೆ ನಡೆಸುವಂತಿಲ್ಲ ಎಂಬ ಕಾನೂನನ್ನು ತರಲು ನಮ್ಮ ಮೇಲೆ ಒತ್ತಡ ಇದೆ. ಆದರೆ, ನನ್ನ ಮಟ್ಟದಲ್ಲಿ ಆಗಲಿ, ಸಿಎಂ ಮಟ್ಟದಲ್ಲಿಯೇ ಆಗಲಿ ಚರ್ಚೆಯಾಗಿಲ್ಲ. ನಮ್ಮ ಆದ್ಯತೆ 5 ಗ್ಯಾರಂಟಿಗಳನ್ನು ಜಾರಿಗೆ ತರುವುದಾಗಿತ್ತು, ಆ ಕೆಲಸ ಮಾಡಿದ್ದೇವೆ ಎಂದು ಹೇಳಿದರು.

    ಸಂಪುಟ ಒಪ್ಪಬೇಕು: ಡಿ.ಜೆ. ಹಳ್ಳಿ, ಕೆ.ಜಿ. ಹಳ್ಳಿ ಪ್ರಕರಣದಲ್ಲಿ ಯಾವುದೇ ಮೊಕದ್ದಮೆ ಹಿಂದಕ್ಕೆ ಪಡೆದಿಲ್ಲ. ಶಾಸಕರಿಂದ ಬಂದ ಪತ್ರವನ್ನು ಅಧಿಕಾರಿಗಳಿಗೆ ಕಳುಹಿಸಿದ್ದೇನೆ. ಯಾವುದೇ ಪ್ರಕರಣ ಹಿಂದಕ್ಕೆ ಪಡೆಯಬೇಕಾದರೆ ಮೊದಲು ಸಚಿವ ಸಂಪುಟ ಉಪ ಸಮಿತಿಯಲ್ಲಿ ಚರ್ಚೆಯಾಗಬೇಕಾಗುತ್ತದೆ. ಅಲ್ಲಿ ಒಪ್ಪಿಗೆ ಸಿಕ್ಕರೆ ಅಂತಿಮವಾಗಿ ಸಚಿವ ಸಂಪುಟ ಸಭೆಯಲ್ಲಿ ಅಂತಿಮ ನಿರ್ಧಾರವಾಗುತ್ತದೆ. ಶಾಸಕರ ಪತ್ರವನ್ನು ಅಧಿಕಾರಿಗಳಿಗೆ ಕಳುಹಿಸಿರುವುದನ್ನೇ ವಿವಾದ ಮಾಡಲು ಬಿಜೆಪಿ ಮುಂದಾಯಿತು ಎಂದು ಗೃಹ ಸಚಿವ ಪರಮೇಶ್ವರ್ ತರಾಟೆಗೆ ತೆಗೆದುಕೊಂಡರು.

    ಕೋಮು ನಿಗ್ರಹ ಪಡೆ: ಕರಾವಳಿಯ ಜಿಲ್ಲೆಗಳಲ್ಲಿ ಶಾಂತಿ ಸೌಹಾರ್ದತೆ ಕಾಪಾಡುವ ಉದ್ದೇಶದಿಂದ ಕೋಮು ನಿಗ್ರಹ ಪಡೆ (ಆಂಟಿ ಕಮ್ಯೂನಲ್ ವಿಂಗ್) ತನ್ನ ಕೆಲಸ ಆರಂಭಿಸಿದೆ. ಕೋಮು ಭಾವನೆ ಕೆರಳಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಜನರನ್ನು ಕೋಮುವಾದಿ ಮನಸ್ಥಿತಿಯಿಂದ ಹೊರ ತರುವುದು ಮುಖ್ಯ ಉದ್ದೇಶ ಎಂದು ಸಚಿವ ಪರಮೇಶ್ವರ್ ತಿಳಿಸಿದರು.

    ನೀಗಲಿದೆ ಕೊರತೆ

    • ಪಿಎಸ್​ಐ ಕೊರತೆ ನೀಗಿಸಲು 700 ಎಎಸ್​ಐಗಳಿಗೆ ಬಡ್ತಿ
    • ಬೆಂಗಳೂರು ನಗರಕ್ಕೆ 2,500 ಪೇದೆಗಳ ನೇಮಕಕ್ಕೆ ಆರ್ಥಿಕ ಇಲಾಖೆ ಅನುಮತಿ
    • 3,500 ಪೇದೆಗಳ ನೇಮಕಕ್ಕೆ ಪ್ರಸ್ತಾವನೆ ಸಲ್ಲಿಕೆ
    • ಪಿಎಸ್​ಐ ಅಕ್ರಮ ಮರು ಪರೀಕ್ಷೆಗೆ ಕೋರ್ಟ್​ಗೆ ಮನವಿ
    • ಹೊಸದಾಗಿ 400 ಪಿಎಸ್​ಐ ನೇಮಕಕ್ಕೆ ಸಿದ್ಧತೆ

    ನಿದ್ರಿಸಲು ಯಾರಾದರೂ ಅಡ್ಡಿಪಡಿಸಿದರೆ ಅವರ ವಿರುದ್ಧ ಕೇಸು ದಾಖಲಿಸಬಹುದಾ?

    ಏಯ್.. ಎಲ್ಲಿಗೆ ಬಂತು ಎಐ(AI)?; ಸೆX ರೋಬೋಗಳಲ್ಲೂ ಕೃತಕ ಬುದ್ಧಿಮತ್ತೆ; ಹಾಸಿಗೆಯಲ್ಲಿ ಸಂಗಾತಿಯೇ ಬೇಕಾಗಲ್ವಂತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts