More

    ಕುವೆಂಪು ವೈಜ್ಞಾನಿಕತೆಗಳ ಸಂಗಮ

    ಕಾರಟಗಿ: ಕುವೆಂಪು ವೈಚಾರಿಕ ಮತ್ತು ವೈಜ್ಞಾನಿಕತೆಗಳ ಅಪೂರ್ವ ಸಂಗಮ ಎಂದು ಉಪನ್ಯಾಸಕ ಡಾ.ಹನುಮಂತಪ್ಪ ಚಂದಲಾಪುರ ಅಭಿಪ್ರಾಯಪಟ್ಟರು.

    ಪಟ್ಟಣದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕ ಏರ್ಪಡಿಸಿದ್ದ ಕನ್ನಡ ಕಾರ್ತಿಕೋತ್ಸವ ಸಮಾರೋಪ ಸಮಾರಂಭದಲ್ಲಿ ಶುಕ್ರವಾರ ಮಾತನಾಡಿದರು. ಸಾಹಿತ್ಯದ ಮೂಲಕ ಮನುಷ್ಯಕುಲಕ್ಕೆ ಅತ್ಯುತ್ತಮ ಜೀವನ ಮಾದರಿ ತೋರಿಸಿದ ಕುವೆಂಪು ಓರ್ವ ಮಹಾಮಾನವತವಾದಿ. ಅವರ ಸಾಹಿತ್ಯ ಸರ್ವಕಾಲಕ್ಕೂ ಅನ್ವಯವಾಗುತ್ತದೆ. ಮನುಜಮತ, ವಿಶ್ವಪಥದ ಮೂಲಕ ಎಲ್ಲ ಧರ್ಮಗಳು ಮನುಷ್ಯ ಧರ್ಮವೇ ಶ್ರೇಷ್ಠವೆಂದು ಸಾರಿವೆ.

    ಇದನ್ನು ಸರಿಯಾಗಿ ಅರ್ಥೈಸಿಕೊಳ್ಳದೆ ಸೋತ ನಾವುಗಳು ನಮ್ಮದೇ ಶ್ರೇಷ್ಠ ಎನ್ನುತ್ತೇವೆ. ಹುಟ್ಟುವಾಗ ವಿಶ್ವಮಾನವರಾಗಿಯೇ ಹುಟ್ಟಿದ ಮಗುವನ್ನು ನಾವು ದೇಶ, ಭಾಷೆ, ಮತ, ಜಾತಿ, ಜನಾಂಗ, ವರ್ಣ ಸೇರಿದಂತೆ ಅನೇಕ ಉಪಾಧಿಗಳಿಂದ ಬದ್ಧನನ್ನಾಗಿ ಮಾಡುತ್ತೇವೆ. ಅವೆಲ್ಲವುಗಳಿಂದ ಪಾರುಮಾಡಿ ಅವನನ್ನು ವಿಶ್ವಮಾನವನನ್ನಾಗಿ ಪರಿವರ್ತಿಸುವುದೇ ನಮ್ಮ ವಿದ್ಯೆ, ಸಂಸ್ಕೃತಿ, ನಾಗರಿಕತೆ. ಇವು ಎಲ್ಲರ ಆದ್ಯ ಕರ್ತವ್ಯವಾಗಬೇಕು. ಈ ಲೋಕ ಉಳಿದು, ಬಾಳಿ ಬದುಕಬೇಕಾದರೆ ಪ್ರಪಂಚದ ಮಕ್ಕಳೆಲ್ಲ ಅನಿಕೇತನವಾಗಬೇಕೆಂದು ಕುವೆಂಪು ಕನಸಿದ್ದರು. ಅವರ ಕನಸಿನ ಕಲ್ಪನೆಗಳನ್ನು ನಾವು ಕೇವಲ ಓದಿ, ಭಾಷಣ ಮಾಡಿ ಬಿಡುವುದಲ್ಲ. ಆಚರಣೆಗೆ ತಂದಾಗ ಮಾತ್ರ ಸುಸ್ತಿರ, ಸೌಹಾರ್ದ ಸಮಸಮಾಜ ನಿರ್ಮಾಣವಾಗುತ್ತದೆ ಎಂದು ತಿಳಿಸಿದರು.

    ಕಸಾಪ ಜಿಲ್ಲಾಧ್ಯಕ್ಷ ಶರಣೇಗೌಡ ಪೊಲೀಸ್ ಪಾಟೀಲ್ ಮಾತನಾಡಿ, ಕುವೆಂಪು ಆಧುನಿಕ ಕನ್ನಡ ಸಾಹಿತ್ಯದ ದೈತ್ಯ ಪ್ರತಿಭೆ. ವೈಜ್ಞಾನಿಕ ಚಿಂತನೆಗಳು ಬಡತನ, ದಾರಿದ್ರ್ಯಗಳನ್ನು ದೂರವಾಗಿಸಿ ನೆಮ್ಮದಿಯ ಬದುಕು ಸಾಗಿಸಲು ಸಹಕಾರಿಯಾಗಲಿವೆಯೆಂದು ಸಾರಿದರು ಎಂದು ತಿಳಿಸಿದರು.

    ಖಜಾನೆ ಇಲಾಖೆಯ ಹನುಮಂತಪ್ಪ ನಾಯಕ ತೊಂಡಿಹಾಳ, ಪ್ರಮುಖರಾದ ಮಂಜುನಾಥ ಮಸ್ಕಿ, ಎಂ.ಅಮರೇಶಗೌಡ, ಸೋಮನಾಥ ದೊಡ್ಡಮನಿ, ಶಿಕ್ಷಕರಾದ ಗುರಪ್ಪಯ್ಯ, ವಿಜಯಕುಮಾರ, ಬಿ.ಸಂತೋಷ, ದಾಕ್ಷಾಯಣಿ, ಶಕುಂತಲಾ, ಗಿರಿಜಾ ಐಲಿ, ಅನ್ನಪೂರ್ಣಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts