More

    ಮಾನಸಿಕ ಆರೋಗ್ಯ ಸೌಲಭ್ಯ ಸುಧಾರಿಸಲಿ, ಕಾನೂನು ಚೌಕಟ್ಟಿನ ನೀತಿಗಳ ಸುಧಾರಣೆಯಾಗಲಿ…

    ಮಾನಸಿಕ ಆರೋಗ್ಯ ಸೌಲಭ್ಯ ಸುಧಾರಿಸಲಿ, ಕಾನೂನು ಚೌಕಟ್ಟಿನ ನೀತಿಗಳ ಸುಧಾರಣೆಯಾಗಲಿ...ಕೋವಿಡ್​- 19ರ ಹಾವಳಿಯಿಂದಾಗಿ ಅನೇಕ ಬಗೆಯ ಸಂಕಷ್ಟಗಳು ಎದುರಾಗಿರುವುದು ಗೊತ್ತಿರುವಂಥದೇ. ಈ ಸಾಂಕ್ರಾಮಿಕದ ಪರಿಣಾಮಗಳನ್ನು ನಿರ್ವಹಿಸುವ ಸಂದರ್ಭದಲ್ಲಿ, ಜನರ ಮಾನಸಿಕ ಆರೋಗ್ಯ ನಿಭಾಯಿಸುವ ವಿಚಾರ ಅತ್ಯಂತ ಮಹತ್ವದ ವಿಷಯವಾಗುತ್ತದೆ. ಮಾನಸಿಕ ಆರೋಗ್ಯ ವೃತ್ತಿಪರರನ್ನು ನಿಯೋಜಿಸಿ ಜನರು ಅವರ ಸೇವೆ ಪಡೆಯುವಂಥ ಅವಕಾಶ ಕಲ್ಪಿಸುವುದು ತುಂಬಾ ಅಗತ್ಯವಾಗಿದೆ. ಭಾರತದಲ್ಲಿ ಮಾನಸಿಕ ಆರೋಗ್ಯ ರಕ್ಷಣೆ ವಿಚಾರವು ಸಾಮಾಜಿಕ, ಆಥಿರ್ಕ ಮತ್ತು ಸಾಂಸ್ಕೃತಿಕ ಅಡ್ಡಿಆತಂಕಗಳಿಂದ ಜರ್ಝರಿತವಾಗಿದೆ ಎಂದು ವಿಷಾದದಿಂದಲೇ ಹೇಳಬೇಕಾಗಿದೆ. ಪ್ರಸಕ್ತ ಸನ್ನಿವೇಶದಿಂದಾಗಿ ಈಗ ಅಸ್ತಿತ್ವದಲ್ಲಿರುವ ಕಾನೂನು ಚೌಕಟ್ಟಿನ ನೀತಿಗಳ ಸುಧಾರಣೆ ಹಾಗೂ ಪರಿಣಾಮಕಾರಿ ಅನುಷ್ಠಾನ ಸಮಯದ ಅಗತ್ಯವಾಗಿದೆ.

    ಮಾನಸಿಕ ಆರೋಗ್ಯ ಎಂದರೇನು ಹಾಗೂ ಇಂಥ ಪರಿಸ್ಥಿತಿಗಳನ್ನು ನಿಭಾಯಿಸುವ ಬಗೆಯ ಕುರಿತೂ ನಮ್ಮಲ್ಲಿ ಹಲವರಿಗೆ ಅರಿವಿನ ಕೊರತೆಯಿದೆ. ಮಾನಸಿಕ ಆರೋಗ್ಯ ಚಿಕಿತ್ಸೆಯ ದುಬಾರಿ ವೆಚ್ಚವೂ ದೇಶದಲ್ಲಿ ಈ ಸಂಬಂಧವಿರುವ ಇನ್ನೊಂದು ದೊಡ್ಡ ಅಡ್ಡಿಯಾಗಿದೆ. ವೈದ್ಯರು ಹಾಗೂ ರೋಗಿಗಳ ನಡುವಿನ ಅನುಪಾತವೂ ಕಳವಳಕಾರಿಯಾದುದಾಗಿದೆ. ಭಾರತದಲ್ಲಿ ಒಂದು ಲಕ್ಷ ಜನಸಂಖ್ಯೆಗೆ ಕೇವಲ 0.3% ಮನೋರೋಗ ವೈದ್ಯರು (ಸೈಕಿಯಾಟ್ರಿಸ್ಟ್​) ಹಾಗೂ 0.07 ಮಾನಸಿಕ ತಜ್ಞರು (ಸೈಕಾಲಜಿಸ್ಟ್​) ಇದ್ದಾರೆ ಎನ್ನುವುದು ಅಧ್ಯಯನಗಳಿಂದ ತಿಳಿದು ಬಂದಿರುವ ವಿಚಾರ.

    1982ರಿಂದಲೂ ರಾಷ್ಟ್ರೀಯ ಮಾನಸಿಕ ಆರೋಗ್ಯ ಕಾರ್ಯಕ್ರಮ ದೇಶದಲ್ಲಿ ಅಸ್ತ್ತಿತ್ವದಲ್ಲಿದ್ದು 1996ರಲ್ಲಿ ಪರಿಷ್ಕರಿಸಲಾಗಿದೆ. ಆದರೂ ದೇಶದಲ್ಲಿನ ಮಾನಸಿಕ ಆರೋಗ್ಯ ಕ್ಷೇತ್ರದ ನೀತಿ ಮತ್ತು ಕಾರ್ಯಕ್ರಮ ಕ್ರಿಯಾತ್ಮಕ ಆಗಿರುವುದಕ್ಕಿಂತ ಹೆಚ್ಚಾಗಿ ಪ್ರತಿಕ್ರಿಯಾತ್ಮಕವಾಗಿದೆ ಎಂದು ಹೇಳಲೇಬೇಕಾಗಿದೆ.

    1912ರ ಇಂಡಿಯನ್​ ಲುನಸಿ ಆ್ಯಕ್ಟ್​ ಅನ್ನು 1987ರಲ್ಲಿ ಮಾನಸಿಕ ಆರೋಗ್ಯ ಕಾನೂನು ಎಂದು ಬದಲಾಯಿಸಲಾಗಿದೆ. ಈ ಕಾಯಿದೆಯು “ಮೂರ್ಖ ಅಥವಾ ಸ್ಥಿಮಿತವಿಲ್ಲದ ಮನೋಸ್ಥಿತಿಯ ವ್ಯಕ್ತಿ’ ಎಂಬುದಾಗಿ ವ್ಯಾಖ್ಯಾನಿಸುವ “ಹುಚ್ಚ’ ಪದವನ್ನು ಕೈಬಿಟ್ಟಿದೆ. “ಮಾನಸಿಕವಾಗಿ ಅಸ್ವಸ್ಥ ವ್ಯಕ್ತಿ’ ಪದಪುಂಜವನ್ನು ಪರಿಚಯಿಸಿದೆ. ಮೆಂಟಲ್​ ರಿಟಾರ್ಡೇಷನ್​ ಹೊರತುಪಡಿಸಿ ಇತರ ಮಾನಸಿಕ ಅಸ್ವಸ್ಥತೆ ಚಿಕಿತ್ಸೆ ಅಗತ್ಯವಾದ ವ್ಯಕ್ತಿಯನ್ನು “ಮಾನಸಿಕವಾಗಿ ಅನಾರೋಗ್ಯಪಿಡಿತ ವ್ಯಕ್ತಿ’ ಎಂಬ ವ್ಯಾಖ್ಯೆಯನ್ನು ಅದು ಪರಿಚಯಿಸಿದೆ. ಆದಾಗ್ಯೂ 1987ರ ಮಾನಸಿಕ ಆರೋಗ್ಯ ಕಾನೂನು ಮಾನಸಿಕ ಅಸ್ವಸ್ಥರ ಹಕ್ಕುಗಳನ್ನು ರಸಲು ಮತ್ತು ಅವರು ಸೂಕ್ತ ಆರೋಗ್ಯ ಸೇವೆ&ಆರೈಕೆ ಪಡೆಯುವುದನ್ನು ಖಾತರಿಪಡಿಸಲು ವಿಲವಾಗಿದೆ. ಈ ಹಿನ್ನೆಲೆಯಲ್ಲಿ, 1987ರ ಈ ಕಾನೂನಿನ ಬದಲಿಗೆ ಬೇರೊಂದು ಹೊಸ ಕಾನೂನನ್ನು ರೂಪಿಸಲು ಚಿಂತನೆ ನಡೆದಿದೆ.
    ವಿಶ್ವಸಂಸ್ಥೆ ನಿಯಮ ಸ್ಥೀರಿಕರಣ: ವಿಶ್ವಸಂಸ್ಥೆಯ ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ನಿಯಮಾವಳಿಯನ್ನು (ಯುಎನ್​ಸಿಆರ್​ಪಿಡಿ) ಭಾರತ ಸರ್ಕಾರ 2007ರಲ್ಲಿ ಸ್ಥೀರಿಕರಿಸಿದೆ. ಈ ನಿಯಮವನ್ನು ಅಂಗೀಕರಿಸಿದ ದೇಶಗಳು ಅದರ ಶಿಾರಸುಗಳನ್ನು ಪಾಲಿಸುವುದು ಅಗತ್ಯ ಎಂಬ ಸಲಹೆ ಅದರಲ್ಲಿದೆ. ಯುಎನ್​ಸಿಆರ್​ಪಿಡಿಯ 25ನೇ ವಿಧಿ ಆರೋಗ್ಯ ಸಂಬಂಧಿ ವಿಚಾರವನ್ನು ನಿರ್ವಹಿಸುತ್ತದೆ ಹಾಗೂ ಅದರ ಕಲಂ (ಇ) ಅಂಗವಿಕಲರ ವಿರುದ್ಧ ತಾರತಮ್ಯ ಎಸಗುವುದನ್ನು ನಿರ್ಬಂಧಿಸುತ್ತದೆ. ಆರೋಗ್ಯ ವಿಮೆ ಮತ್ತು ಜೀವ ವಿಮೆ ವಿಚಾರದಲ್ಲಿ ಈ ತಾರತಮ್ಯ ಇದ್ದಿದ್ದರಿಂದ ಈ ನಿಯಮ ಅಳವಡಿಸಲಾಗಿದೆ.

    ವಿಶ್ವಸಂಸ್ಥೆಯ ಗೊತ್ತುವಳಿಗೆ ಅನುಗುಣವಾಗಿ ರಾಷ್ಟ್ರೀಯ ಕಾನೂನುಗಳನ್ನು ರೂಪಿಸಲು ಹಾಗೂ ಅಳವಡಿಸಲು 2017ರ ಮಾನಸಿಕ ಆರೋಗ್ಯ ಕಾನೂನನ್ನು ರೂಪಿಸಲಾಗಿದೆ. ಮಾನಸಿಕವಾಗಿ ಅನಾರೋಗ್ಯಪಿಡಿತ ವ್ಯಕ್ತಿಗಳಿಗೆ ಆರೋಗ್ಯಸೇವೆ ಒದಗಿಸುವುದಕ್ಕೆ ಈ ಕಾನೂನು ಒತ್ತು ನೀಡಿದೆ; ಈ ವ್ಯಕ್ತಿಗಳ ಹಕ್ಕುಗಳನ್ನು ರಸುವುದು ಕೂಡ ಅದರ ಉದ್ದೇಶವಾಗಿದೆ.

    ಮಾನಸಿಕ ಚಿಕಿತ್ಸೆಗೂ ವಿಮೆ: ದೈಹಿಕ ಅನಾರೋಗ್ಯ ಪೀಡಿತರಿಗೆ ವಿಮೆ ಸೌಲಭ್ಯ ಒದಗಿಸುವ ರೀತಿಯಲ್ಲೇ ಮಾನಸಿಕ ಅನಾರೋಗ್ಯ ಪೀಡಿತರಿಗೆ ಕೂಡ ವೈದ್ಯಕಿಯ ವಿಮಾ ಸೌಲಭ್ಯ ಒದಗಿಸುವುದು ಕಡ್ಡಾಯ ಎಂದು ಈ ಕಾನೂನಿನ ಸೆಕ್ಷನ್​ 21 (4) ಹೇಳುತ್ತದೆ. ಇದು ಯುಎನ್​ಸಿಆರ್​ಪಿಡಿಗೆ ಅನುಗುಣವಾಗಿದೆ.

    ಯೋಚನೆ, ಮೂಡ್​, ಪರಿಕಲ್ಪನೆ, ಮನೋಧರ್ಮದಲ್ಲಿ ಗಣನೀಯ ಅಸ್ತವ್ಯಸ್ತತೆ ಅಥವಾ ತೀರ್ಮಾನ ಕೈಗೊಳ್ಳುವ ಸಾಮರ್ಥ್ಯ, ನಡವಳಿಕೆ, ವಾಸ್ತವವನ್ನು ಗುರುತಿಸುವಲ್ಲಿ ಅಥವಾ ಜೀವನದ ಕನಿಷ್ಠ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಸಾಧ್ಯವಾಗದ ರೀತಿಯಲ್ಲಿ ನೆನಪಿನ ಶಕ್ತಿ ಹ್ರಾಸವಾಗಿರುವುದು ಮೊದಲಾದವನ್ನು ಮಾನಸಿಕ ಅಸ್ವಸ್ಥತೆ ಎಂದು ಈ ಕಾನೂನು ವ್ಯಾಖ್ಯಾನಿಸಿದೆ. ಮದ್ಯಪಾನ ಮತ್ತು ಮಾದಕ ದ್ರವ್ಯಗಳ ಸೇವನೆಗೆ ಸಂಬಂಧಿಸಿದ ಮಾನಸಿಕ ಪರಿಸ್ಥಿತಿಗೆ ಕೂಡ ಈ ವ್ಯಾಖ್ಯಾನ ಅನ್ವಯವಾಗುತ್ತದೆ. ಆದರೆ ಬುದ್ಧಿಮಾಂದ್ಯತೆ (ಮೆಂಟಲ್​ ರಿಟಾರ್ಡೇಶನ್​) ಅನ್ನು ಇದು ಒಳಗೊಳ್ಳುವುದಿಲ್ಲ. ಒಬ್ಬ ವ್ಯಕ್ತಿಯ ಮನಸ್ಸು ಪೂರ್ಣಪ್ರಮಾಣದಲ್ಲಿ ಬೆಳವಣಿಗೆಯಾಗದ ಅಥವಾ ಬೆಳವಣಿಗೆಗೆ ತಡೆಯಾದ ಸ್ಥಿತಿಯನ್ನು ಬುದ್ಧಿಮಾಂದ್ಯತೆ ಎನ್ನುತ್ತಾರೆ. ರಾಷ್ಟ್ರೀಯವಾಗಿ ಅಥವಾ ಅಂತಾರಾಷ್ಟ್ರೀಯವಾಗಿ ಅಂಗೀಕರಿಸಲಾದ ವೈದ್ಯಕಿಯ ಮಾನದಂಡಗಳ ವ್ಯಾಖ್ಯಾನಕ್ಕೆ ಅನುಗುಣವಾಗಿ ಮಾನಸಿಕ ಅನಾರೋಗ್ಯವನ್ನು ನಿರ್ಧರಿಸಬೇಕು ಎಂಬುದಾಗಿ ಸೆಕ್ಷನ್​ 3 ಹೇಳುತ್ತದೆ.

    ನತೆಯ ಜೀವನ: “ನತೆ’ಯೇ ಜೀವಿಸುವ ಹಕ್ಕಿನ ನಿರಾಕರಿಸಲಾಗದ ಸಾರವಾಗಿದೆ ಎಂದು ಸುಪ್ರೀಂ ಕೋರ್ಟ್​ ಪದೇಪದೆ ಹೇಳಿದೆ. ಮಾನವ ನತೆಯ ಹಕ್ಕು ವಿವಿಧ ಬಗೆಗಳಲ್ಲಿ ಅಡಕವಾಗಿರುತ್ತದೆ ಎಂದು ಕಾಮನ್​ ಕಾಸ್​ ವರ್ಸಸ್​ ಭಾರತ ಸರ್ಕಾರ (2018) 5 ಎಸ್​ಸಿಸಿ 1 ಕೇಸ್​ನಲ್ಲಿ ಕೋರ್ಟ್​ ಸ್ಪಷ್ಟಪಡಿಸಿದೆ. ಅರ್ಥಮಾಡಿಕೊಳ್ಳುವ ಸಾಮರ್ಥ್ಯ, ವೈಚಾರಿಕ ಆಯ್ಕೆ, ಮಾನವ ಸ್ವಭಾವದಲ್ಲೇ ಅಂತರ್ಗತವಾಗಿರುವ ಸ್ವತಂತ್ರ ಬಯಕೆಯ ಸಾಮರ್ಥ್ಯ ಇವೇ ಮುಂತಾದವು ಮಾನವ ನತೆಯಲ್ಲಿ ಅಡಕಗೊಂಡಿರುತ್ತದೆ. ಮಾನಸಿಕವಾಗಿ ಅನಾರೋಗ್ಯಪಿಡಿತ ಪ್ರತಿ ವ್ಯಕ್ತಿಗೆ ನತೆಯಿಂದ ಬಾಳುವ ಹಕ್ಕಿದೆ ಎಂದು 2017ರ ಮಾನಸಿಕ ಆರೋಗ್ಯರಕ್ಷಣೆ ಕಾನೂನು ನಿದಿರ್ಷ್ಟವಾಗಿ ಹೇಳಿದೆ.

    ಮಾನಸಿಕ ಅಸ್ವಸ್ಥರು ಉತ್ತಮ ಜೀವನದ ಅವಕಾಶ ಪಡೆಯಲು ಅರ್ಹರು ಎಂದು ಸುಪ್ರೀಂ ಕೋರ್ಟ್​ ಸ್ಪಷ್ಟವಾಗಿ ಹೇಳಿದೆ. 2019ರ ಎಕ್ಸ್​ ವರ್ಸಸ್​ ಮಹಾರಾಷ್ಟ್ರ ರಾಜ್ಯ ಪ್ರಕರಣದಲ್ಲಿ, ಕೈದಿಗಳಿಗೆ ಮಾನಸಿಕ ಆರೈಕೆ ವಿಚಾರದಲ್ಲಿ ಸುಪ್ರೀಂ ಕೋರ್ಟ್​ ಇದನ್ನು ಸ್ಪಷ್ಟಪಡಿಸಿದೆ.

    ವೈದ್ಯಕಿಯ ವಿಮೆಯ ಪಾತ್ರ: ಮಾನಸಿಕ ಅಸ್ವಸ್ಥರ ಚಿಕಿತ್ಸೆಯಲ್ಲಿ ವೈದ್ಯಕಿಯ ವಿಮೆ ನಿರ್ಣಾಯಕ ಪಾತ್ರ ವಹಿಸುವುದರಿಂದ ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್​ಡಿಎಐ) 2018ರಲ್ಲಿ ಎಲ್ಲ ವಿಮಾ ಕಂಪನಿಗಳಿಗೆ ಆದೇಶ ಹೊರಡಿಸಿ, 2017ರ ಮಾನಸಿಕ ಆರೋಗ್ಯ ಆರೈಕೆ ಕಾನೂನನ್ನು ಪಾಲಿಸುವಂತೆ ಸೂಚಿಸಿದೆ. ವಿಮಾ ಪ್ರಾಧಿಕಾರದ ಈ ಆದೇಶ ಅನುಷ್ಠಾನ ಹಾಗೂ ಪಾಲನೆ ಕುರಿತು ತಿಳಿಯಲು ಮಾಹಿತಿ ಹಕ್ಕು ಕಾನೂನಿನ ಅನ್ವಯ ಅಜಿರ್ ಸಲ್ಲಿಸಲಾಗಿತ್ತು. 2020ರ ವರೆಗೆ ಯಾವುದೇ ವಿಮಾ ಕಂಪನಿ ಆದೇಶವನ್ನು ಪಾಲಿಸಿಲ್ಲ ಎಂದು ಅಜಿರ್ದಾರರಿಗೆ ಮಾಹಿತಿ ನೀಡಲಾಗಿದೆ.
    ಈ ಆದೇಶ ಅನುಷ್ಠಾನಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್​ ಮುಂದೆ ರಿಟ್​ ಅಜಿರ್ ಸಲ್ಲಿಸಲಾಗಿದ್ದು ಅದು ವಿಚಾರಣೆಗೆ ಬಾಕಿಯಿದೆ. 2017ರ ಕಾನೂನನ್ನು ಎಲ್ಲ ವಿಮಾ ಕಂಪನಿಗಳು ಜಾರಿಗೊಳಿಸಬೇಕೆಂದು ದೆಹಲಿ ಹೈಕೋರ್ಟ್​ ಕೂಡ ಇತ್ತೀಚೆಗೆ ನಿರ್ದೇಶಿಸಿದೆ.

    -ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಪ್ರಕಾರ, ಭಾರತದಲ್ಲಿ ಶೇಕಡ 90ಕ್ಕೂ ಹೆಚ್ಚು ಮಾನಸಿಕ ಅಸ್ವಸ್ಥತೆಯ ಪ್ರಕರಣಗಳಲ್ಲಿ ಚಿಕಿತ್ಸೆಯನ್ನೇ ಪಡೆದಿರುವುದಿಲ್ಲ. ಜಾಗೃತಿಯ ಕೊರತೆ ಮತ್ತು ಮಾನಸಿಕ ಅಸ್ವಸ್ಥತೆಯೊಂದಿಗೆ ತಳಕು ಹಾಕಿರುವ ಕಳಂಕವೇ ಇದಕ್ಕೆ ಕಾರಣ. ಆದ್ದರಿಂದ, 2017ರ ಮಾನಸಿಕ ಆರೋಗ್ಯ ಕಾನೂನು ಮತ್ತು ಐಆರ್​ಡಿಎಐನ ಆದೇಶ ಅನುಷ್ಠಾನಗೊಳಿಸುವುದರಿಂದ ಮಾನಸಿಕ ಆರೋಗ್ಯ ಚಿಕಿತ್ಸೆಯ ಸೌಲಭ್ಯಗಳ ಲಭ್ಯತೆ ಕೈಗೆಟುಕಲು ಹಾಗೂ ಮಾನಸಿಕ ಆರೋಗ್ಯ ಮೂಲಸೌಕರ್ಯ ವ್ಯವಸ್ಥೆಯ ಸುಧಾರಣೆಗೆ ಸಹಾಯವಾಗುತ್ತದೆ.

    ಪ್ರಸಕ್ತ ಕರೊನಾ ಮಹಾಮಾರಿಯ ಹಾವಳಿ ಮತ್ತು ನಗರ ಪ್ರದೇಶಗಳ ಯುವಜನತೆಯಲ್ಲಿ ಮಾನಸಿಕ ಸಂಬಂಧಿ ಸಮಸ್ಯೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಾನಸಿಕ ಅಸ್ವಸ್ಥತೆ ಹಾಗೂ ಸಂಬಂಧಿತ ಸಮಸ್ಯೆಗಳನ್ನು ವ್ಯಾಪಕವಾಗಿ ಕವರ್​ ಮಾಡುವ ಸೂಕ್ತ ಆವಿಷ್ಕಾರಕ ವಿಮಾ ಉತ್ಪನ್ನಗಳನ್ನು ಪರಿಚಯಿಸುವುದು ತೀರಾ ಅಗತ್ಯವಾಗಿದೆ.

    (ಲೇಖಕರು ಖ್ಯಾತ ಹಿರಿಯ ನ್ಯಾಯವಾದಿ, ಮಾಜಿ ಹೆಚ್ಚುವರಿ ಅಡ್ವೊಕೇಟ್​ ಜನರಲ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts