More

    ಚಿತ್ರ ವಿಮರ್ಶೆ: ಇಕ್ಕಟ್‌ನಲ್ಲಿದೆ ಹಾಸ್ಯದ ಗುಳಿಗೆ…

    ಚಿತ್ರ: ಇಕ್ಕಟ್
    ನಿರ್ದೇಶನ: ಇಶಾಂ ಮತ್ತು ಹಸೀನ್ ಖಾನ್
    ನಿರ್ಮಾಣ: ರಾಕೆಟ್ ಸೈನ್ಸ್ ಎಂಟರ್‌ಟೈನ್‌ಮೆಂಟ್
    ಪಾತ್ರವರ್ಗ: ನಾಗಭೂಷಣ್, ಭೂಮಿ ಶೆಟ್ಟಿ, ಸುಂದರ್, ಆರ್.ಜೆ. ವಿಕ್ಕಿ, ಆನಂದ್ ನೀನಾಸಂ

    • ಮಂಜು ಕೊಟಗುಣಸಿ ಬೆಂಗಳೂರು

    ತಿಳಿ ಹಾಸ್ಯ, ಪಾತ್ರ ಪೋಷಣೆಯಲ್ಲಿನ ನೈಜತೆ, ಜತೆಗೊಂದಿಷ್ಟು ಮನರಂಜನೆ… ‘ಇಕ್ಕಟ್’ ಚಿತ್ರದಲ್ಲಿ ಕಾಣಿಸುವ ಪ್ರಮುಖ ಮೂರು ಅಂಶಗಳಿವು. ನಗಲೇಬೇಕು ಎನ್ನುವ ಉದ್ದೇಶಕ್ಕೆ ‘ಇಕ್ಕಟ್’ನಲ್ಲಿ ಸಿಕ್ಕಿದ್ದೆಲ್ಲವನ್ನು ತುಂಬಿಸಿಲ್ಲ. ಅದರ ಬದಲಿಗೆ ಕರೊನಾ ಹೊತ್ತಲ್ಲಿ ಸಹಜವಾಗಿ ಘಟಿಸುವ ವಿಚಾರಗಳನ್ನೇ ನಿರ್ದೇಶಕರು ಹೇಳಿದ್ದಾರೆ. ಪ್ರಸ್ತುತ ಕಾಲಕ್ಕೆ ಹೊಂದುವ ಹಾಸ್ಯದ ಗುಳಿಗೆಯನ್ನೇ ‘ಇಕ್ಕಟ್’ನಲ್ಲಿ ಅಡಗಿಸಿಟ್ಟಿದ್ದಾರೆ.

    ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ಮಧ್ಯಮ ವರ್ಗದ ವಾಸುದೇವ್ (ನಾಗಭೂಷಣ್) ತುಂಬ ಲೆಕ್ಕಾಚಾರದ ಮನುಷ್ಯ. ಇದ್ದುದ್ದರಲ್ಲಿಯೇ ಚೂರು ಉಳಿಸೋ ಮನೋಭಾವ. ಪತ್ನಿ ಜಾನ್ವಿ (ಭೂಮಿ) ಮಾಡರ್ನ್ ಅಷ್ಟೇ ಅಲ್ಲ, ಉದಾರಿ ಕೂಡಾ. ಟಿಕ್‌ಟಾಕ್ ವಿಡಿಯೋ ಮಾಡುತ್ತ ಸೋಷಿಯಲ್ ಮೀಡಿಯಾದಲ್ಲಿ ತಮ್ಮದೇ ಆದ ಹವಾ ಸೃಷ್ಟಿಸಿಕೊಂಡಿರುವಾಕೆ. ಆದರೆ, ಇಬ್ಬರದ್ದು ನಿತ್ಯ ಸೀರಿಯಸ್ ಅಲ್ಲದ ಜಗಳ. ಮಾತುಮಾತಿಗೆ ಡಿವೋರ್ಸ್ ಎಂಬ ಪದ ಇಣುಕುತ್ತಿರುತ್ತದೆ. ಇನ್ನೇನು ಡಿವೋರ್ಸ್ ಕೊಡುವುದಕ್ಕೆ ಇಬ್ಬರೂ ಮುಂದಾಗಬೇಕು ಎನ್ನುವಷ್ಟರಲ್ಲಿ 21 ದಿನಗಳ ಕರೊನಾ ಲಾಕ್‌ಡೌನ್ ಘೋಷಣೆ ಆಗುತ್ತದೆ. ಇಬ್ಬರಿದ್ದ ಮನೆಗೆ ಇನ್ನಿಬ್ಬರು ಬೇಡದ ಅತಿಥಿಗಳ ಪ್ರವೇಶವೂ ಆಗುತ್ತದೆ. ಮುಂದೆ? ಆ ಕೆಲ ದಿನಗಳ ಅವಧಿಯಲ್ಲಿ ನಡೆಯುವ ಹಾಸ್ಯ ಪ್ರಸಂಗಗಳೇ ಸಿನಿಮಾದ ಹೈಲೈಟ್.

    ಕರೊನಾ ಲಾಕ್‌ಡೌನ್ ಘೋಷಣೆ ಸಂದರ್ಭವನ್ನೇ ನಿರ್ದೇಶಕರಾದ ಇಶಮ್ ಮತ್ತು ಹಸೀನ್ ಖಾನ್ ಸಿನಿಮಾ ಮಾಡಿದ್ದಾರೆ. ಕರೊನಾ ಸಂದರ್ಭದಲ್ಲಿ ನಡೆದ ಸಹಜ ಹಾಸ್ಯದ ಸನ್ನಿವೇಶಗಳನ್ನೇ ಸಿನಿಮಾ ರೂಪದಲ್ಲಿ ಪ್ರೇಕ್ಷಕರ ಮುಂದಿಟ್ಟಿದ್ದಾರೆ. ಇಲ್ಲಿ ಹುಸಿ ಭೂತದ ಚೇಷ್ಟೇ, ಪತಿ ಮತ್ತು ಪತ್ನಿ ಮುನಿಸು, ದೂರದ ಸಂಬಂಧಿಯ ಕಾಟ, ನೆರೆಮನೆಯವನ ಕಾಮಿಡಿ ಟೈಮಿಂಗ್ … ನೋಡುಗನಿಗೆ ಸಿನಿಮಾ ಮಜ ಕೊಡುತ್ತಲೇ ಹೋಗುತ್ತದೆ.

    ‘ಇಕ್ಕಟ್’ನ ಕೇಂದ್ರ ಸ್ಥಾನ ಅಂದರೆ ಅದು ಬರವಣಿಗೆ. ನಿರ್ದೇಶರಷ್ಟೇ ಪ್ರಮುಖ ಪಾತ್ರವನ್ನು ಸಂಭಾಷಣೆಕಾರ ರಾಮಕೃಷ್ಣ ರಣಗಟ್ಟಿ, ಸೂಕ್ಷ್ಮ ಡೈಲಾಗ್‌ಗಳ ಮೂಲಕ ಎದುರಾಗುತ್ತಾರೆ. ಅವರ ಕಾಮಿಡಿಯ ಎಳೆ ಚಿತ್ರವನ್ನು ಮತ್ತೊಂದು ಮಗ್ಗುಲಿಗೆ ಹೊರಳಿಸುತ್ತದೆ. ತಿಳಿ ಹಾಸ್ಯ, ನವಿರು ನಿರೂಪಣೆ ಸಿನಿಮಾದ ಪ್ಲಸ್ ಪಾಯಿಂಟ್.

    ಇಡೀ ಸಿನಿಮಾದಲ್ಲಿ ನಾಲ್ಕೇ ಪಾತ್ರಗಳು ಪ್ರಧಾನ. ನಾಗಭೂಷಣ್ ತಮ್ಮ ವಿಶಿಷ್ಟ ನಟನೆಯ ಮೂಲಕವೇ ನೆನಪಿನಲ್ಲಿ ಉಳಿಯುತ್ತಾರೆ. ಭೂಮಿ ಶೆಟ್ಟಿ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಕರೊನಾ ಸೋಂಕಿತನಂತೆ ವರ್ತಿಸಿ ಭಯ ಹುಟ್ಟಿಸುವ ಕಥಾನಾಯಕನ ದೂರದ ಸಂಬಂಧಿ ಸುಂದರ್ ಅವರದ್ದು ನೈಜ ಅಭಿನಯ. ಆರ್‌ಜೆ ವಿಕ್ಕಿ ಮತ್ತು ಆನಂದ್ ನೀನಾಸಂ ತೆರೆಮೇಲೆ ಕಾಣಿಸಿದಷ್ಟು ಹೊತ್ತು ನಗುವಿನ ರಸಾಯನ ಉಣಬಡಿಸುತ್ತಾರೆ. ಇಡೀ ಸಿನಿಮಾ ಸಂಪೂರ್ಣ ಮನೆಯಲ್ಲಿಯೇ ಚಿತ್ರೀಕರಣವಾಗಿರುವುದರಿಂದ ಛಾಯಾಗ್ರಾಹಕರ ಶ್ರಮವೂ ಸವಾಲಿನದ್ದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts