More

    58 ವರ್ಷಗಳ ಬಳಿಕ ವಾಪಸ್‌ ಸಿಕ್ತು ಅಜ್ಜ ಮಾರಿದ್ದ ಜಮೀನು!!

    ಕಾರವಾರ: ಪ.ಜಾತಿ ಮತ್ತು ಪಂಗಡದವರಿಗೆ ಪಿಟಿಸಿಎಲ್ ಕಾಯಿದೆಯಡಿ ಮಂಜೂರು ಮಾಡಿದ್ದ ಜಮೀನು ಕಾನೂನು ಉಲ್ಲಂಘಿಸಿ  ಖರೀದಿ ಮಾಡಿದವರಿಂದ ಮೂಲ ಮಂಜೂರುದಾರರ ವಾರಸುದಾರರಿಗೆ ಮರುಸ್ಥಾಪಿಸಿ ಉತ್ತರ ಕನ್ನಡ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಆದೇಶ ಹೊರಡಿಸಿದ್ದಾರೆ.

    ಪೂರ್ವಜರ ತಪ್ಪಿನಿಂದ  ಭೂಮಿ ಕಳೆದುಕೊಂಡು ಪರಿತಪಿಸುತ್ತಿದ್ದ ಜಿಲ್ಲೆಯ ಪಜಾತಿಯ 3  ಕುಟುಂಬಗಳಿಗೆ ಒಟ್ಟು  20.44 ಎಕ್ರೆ ಜಮೀನನ್ನು ಕಬ್ಜಾ ಕೊಡಿಸುವ ಕಾರ್ಯ ಮಾಡಿ, ಐತಿಹಾಸಿಕ ಕಾರ್ಯ ಮಾಡಿದ್ದಾರೆ.
    ಶಿರಸಿ ತಾಲೂಕು ಬನವಾಸಿ ಹೋಬಳಿಯ ಕುಪ್ಪಗಡ್ಡೆ ಗ್ರಾಮದ  ಬಸವರಾಜ ನಾಗಪ್ಪ ಭೋವಿ ವಡ್ಡರ ಪೂರ್ವಜರು  ಗ್ರಾಮದ ಸರ್ವೇ ನಂ 94 ರಲ್ಲಿ ಮಾರಾಟ ಮಾಡಿದ್ದ 7 ಎಕರೆ 11 ಗುಂಟೆ ಜಮೀನನ್ನು , ಮೂಲ ವಾರಸುದಾರರಿಗೆ ಮರು ಸ್ಥಾಪಿಸಲು  ಖುದ್ದು ಸ್ಥಳಕ್ಕೆ ಆಗಮಿಸಿದ್ದ ಜಿಲ್ಲಾಧಿಕಾರಿಗಳು, ಪೊಲೀಸ್ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಸ್ಥಳದಲ್ಲೇ ಜಮೀನಿನ ಅಳತೆ ಮಾಡಿಸಿ , ಕಬ್ಜಾ ಆದೇಶ ಪತ್ರವನ್ನು ವಿತರಿಸಿದರು.

    1966 ರಲ್ಲಿ ಈ ಜಮೀನನ್ನು  ಪೂರ್ವಜರು ಮಾರಾಟ ಮಾಡಿದ್ದು ಅದನ್ನು ಇದುವರೆಗೆ 3 ಜನ ಖರೀದಿ ಮಾಡಿದ್ದು, ಈ ಜಮೀನಿನ ಕುರಿತಂತೆ  ಜಿಲ್ಲಾಧಿಕಾರಿ ಅವರ ನ್ಯಾಯಾಲಯ ದ ಆದೇಶದಂತೆ ಮೂಲ ಮಂಜೂರಿಯ ವಾರಿಸುದಾರರ ಹೆಸರಿಗೆ  ಮರುಸ್ಥಾಪಿಸಿ ಆದೇಶಿಸಿದರು.
    ಕಾನೂನು ಪ್ರಕಾರ ಈ ಜಮೀನು ನಿಮಗೆ ಸೇರಬೇಕಾದದ್ದು, ಸರ್ಕಾರ ನಿಮ್ಮ ಅಭಿವೃದ್ಧಿ ಗೆ  ನೀಡಿರುವ ಜಮೀನನ್ನು ಯಾವುದೇ ಕಾರಣಕ್ಕೂ ಮಾರಾಟ ಮಾಡದಂತೆ ಸೂಚಿಸಿದ ಜಿಲ್ಲಾಧಿಕಾರಿಗಳು,ಇದರಲ್ಲಿ ಕೃಷಿ ಚಟುವಟಿಕೆ ಕೈಗೊಂಡು ಅಭಿವೃದ್ಧಿ ಹೊಂದುವಂತೆ ತಿಳಿಸಿದರು.


    ಜಮೀನಿನ ಕಬ್ಜಾ ಪಡೆದ ಬಸವರಾಜ ನಾಗಪ್ಪ ಭೋವಿ ವಡ್ಡರ್ ಮತ್ತು ಅನುಸೂಯಾ ದಂಪತಿ, ಇದುವರೆಗೆ ಕೂಲಿ ಕೆಲಸ ಮಾಡುತ್ತಿದ್ದ  ನಮಗೆ ಜಮೀನು ದೊರೆತಿರುವುದು ಅತೀವ ಸಂತಸ ತಂದಿದೆ. ಜಮೀನಿನಲ್ಲಿ ತೋಟ ನಿರ್ಮಾಣ ಮಾಡಿ ಇಬ್ಬರು ಮಕ್ಕಳ ಭವಿಷ್ಯ ರೂಪಿಸುವುದಾಗಿ ತಿಳಿಸಿದರು.
    ಮುಂಡಗೋಡು ತಾಲೂಕಿನ ನಂದಿಕಟ್ಟಾ ಗ್ರಾಮದ ಸ.ನಂ.219 ಬ ರಲ್ಲಿ 3 ಎಕರೆ 17 ಗುಂಟೆ ಜಮೀನನ್ನು ಫಕೀರಪ್ಪ ಕೇರಪ್ಪ ಮಾದರ್  ಅವರಿಗೆ ಹಾಗೂ ಹುನಗುಂದ ದಲ್ಲಿ 10 ಎಕರೆ 16 ಗುಂಟೆ  ಶಿವಪ್ಪ ರೂಪಲಮಪ್ಪ ಲಮಾಣಿ ಅವರಿಗೆ  ಕಬ್ಜಾ ಆದೇಶವನ್ನು ಜಿಲ್ಲಾಧಿಕಾರಿ ವಿತರಿಸಿದರು.
     ಜಿಲ್ಲಾಧಿಕಾರಿಯೊಬ್ಬರು ಪ.ಜಾತಿ,ಪಂಗಡದವರಿಗೆ ಜಮೀನು ಕಬ್ಜಾ ಕೊಡಿಸಲು ಖುದ್ದು ಆಗಮಿಸಿದ್ದು ಇದೇ ಮೊದಲ ಬಾರಿಯಾಗಿದ್ದು, ಜಮೀನು ಪಡೆದವರಿಗೆ  ಜಮೀನಿನ ಮಹತ್ವ ಮತ್ತು  ಕಾನೂನಿನ ಅರಿವು ಮೂಡಿಸಿದರು. ಶಿರಸಿ ತಹಸೀಲ್ದಾರ್ ಶ್ರೀಧರ ಮುಂದಲಮನಿ,ಮುಂಡಗೋಡ ತಹಸೀಲ್ದಾರ್ ಶಂಕರ ಗೌಡಿ ಇತರರು ಇದ್ದರು.
    ಏನಿದು ಪಿಟಿಸಿಎಲ್ ಕಾಯ್ದೆ
    ಪರಿಶಿಷ್ಟ ಜಾತಿ, ಪಂಗಡಗಳ ಭೂಮಿಗಳ ವರ್ಗಾವಣೆ ನಿಷೇಧ ಕಾಯ್ದೆ (ಪಿಟಿಸಿಎಲ್)-1978 ರಲ್ಲಿ ಜಾರಿಗೆ ಬಂತು. ಈ ಸಮುದಾಯಕ್ಕೆ ಸರ್ಕಾರದಿಂದ ಮಂಜೂರಾದ ಜಮೀನನ್ನು ಯಾವುದೇ ಕಾರಣಕ್ಕೂ ಬೇರೆಯವರಿಗೆ ಪರಬಾರೆ ಮಾಡಲು ಬರುವುದಿಲ್ಲ. ಹಾಗೊಮ್ಮೆ ಅಕ್ರಮ ಪರಬಾರೆಯಾಗಿದ್ದಲ್ಲಿ. ಜಮೀನನ್ನು ಮೂಲ ಮಂಜೂರುದಾರನಿಗೆ ಅಥವಾ ಆತನ ವಾರಸುದಾರರಿಗೆ  ಮರಳಿಸುವ ಅಧಿಕಾರ ಜಿಲ್ಲಾಧಿಕಾರಿಗಿದೆ. ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ, ಪಂಗಡದವರಿಗೆ ಪಿಟಿಸಿಎಲ್ ಕಾಯ್ದೆಯಡಿ ಮಂಜೂರಾದ ಜಮೀನುಗಳ ದಾಖಲೆಗಳ ಮೇಲೆ ನಮೂದಿಸುವ ಕಾರ್ಯವೂ ಜಿಲ್ಲೆಯಲ್ಲಿ ನಡೆದಿತ್ತು.

    ಇದನ್ನೂ ಓದಿ: ಜಿಲ್ಲೆಯಲ್ಲಿ ಮತ್ತೆ ಮಂಗನ ಕಾಯಿಲೆ ಆತಂಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts