More

    ಹೆಜಮಾಡಿ ಬಂದರಿನಿಂದ ಮೀನುಗಾರರಿಗೆ ಅನುಕೂಲ, ಶಾಸಕ ಲಾಲಾಜಿ ಆರ್.ಮೆಂಡನ್ ಮಾಹಿತಿ

    ಪಡುಬಿದ್ರಿ: ಹೆಜಮಾಡಿ ಬಂದರು ಯೋಜನೆ ಜಾರಿಯಿಂದ ಕಾಪುವಿನಿಂದ ಸುರತ್ಕಲ್‌ವರೆಗಿನ ಮೀನುಗಾರರಿಗೆ ಅನುಕೂಲವಾಗಲಿದೆ. ಯೋಜನೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜ.19ರಂದು ಶಿಲಾನ್ಯಾಸ ನಡೆಸಲಿದ್ದು, ಈ ಭಾಗದಿಂದ ಸುಮಾರು 2ರಿಂದ 3ಸಾವಿರ ಮೀನುಗಾರರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ಶಾಸಕ ಲಾಲಾಜಿ ಆರ್.ಮೆಂಡನ್ ಹೇಳಿದರು.

    ಮೂಲ್ಕಿ ವಲಯ ಪರ್ಸೀನ್ ಮತ್ತು ಟ್ರಾಲ್‌ಬೋಟ್ ಮೀನುಗಾರರ ಸಂಘ ಹಾಗೂ ಹೆಜಮಾಡಿ ಬಂದರು ಅಭಿವೃದ್ಧಿ ಸಮಿತಿ ಹೆಜಮಾಡಿಯ ಗುಂಡಿ ಮೊಗವೀರ ಸಭಾಗೃಹದಲ್ಲಿ ಭಾನುವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
    ತರಾತುರಿಯಲ್ಲಿ ಕಾರ್ಯಕ್ರಮ ನಿಗದಿಯಾದರೂ ಮುಖ್ಯಂಮತ್ರಿ ಆಗಮನಕ್ಕೆ ಸಕಲ ರೀತಿಯಲ್ಲಿ ಸಜ್ಜಾಗಿದೆ. ಬಂದರು ಯೋಜನೆ ಜಾರಿಗಾಗಿ ಹಲವಾರು ವರ್ಷಗಳಿಂದ ಹೋರಾಟ ನಡೆಸಲಾಗಿತ್ತು. ಮುಖಂಡರಾದ ಜಿ.ಶಂಕರ್ ಸತತ ಪರಿಶ್ರಮದ ಫಲವಾಗಿ ಯೋಜನೆ ಜಾರಿ ಹಂತದಲ್ಲಿದೆ. ಯೋಜನೆ ಜಾರಿಗೆ ಶ್ರಮಿಸಿದ ಎಲ್ಲರಿಗೂ ಕೃತಜ್ಞತೆಗಳು ಎಂದರು.

    ಸಮಿತಿ ಪ್ರಧಾನ ಕಾರ್ಯದರ್ಶಿ ವಿಜಯ ಎಸ್.ಬಂಗೇರ ಮಾತನಾಡಿ, ಹಲವಾರು ವರ್ಷಗಳ ಹೋರಾಟಕ್ಕೆ ಪ್ರತಿಫಲ ದೊರಕಿದಂತಾಗಿದೆ. ಹೆಜಮಾಡಿ ಗ್ರಾಮ ದೇವಳ ಜೀರ್ಣೋದ್ಧಾರಗೊಳ್ಳುತ್ತಿರುವ ಹಂತದಲ್ಲಿ ಹೆಜಮಾಡಿ ಬಂದರು ಯೋಜನೆ ಜಾರಿಗೊಳ್ಳುತ್ತಿರುವುದು ಸಂತಸ ತಂದಿದೆ ಎಂದರು. ಸಮಿತಿ ಅಧ್ಯಕ್ಷ ಸದಾಶಿವ ಕೆ.ಕೋಟ್ಯಾನ್, ಗೌರವ ಸಲಹೆಗಾರರಾದ ನಾರಾಯಣ ಕೆ.ಮೆಂಡನ್ ಮತ್ತು ವಿನೋದ್ ಕೆ.ಕೋಟ್ಯಾನ್, ಸದಸ್ಯರಾದ ಸುಧಾಕರ ಕರ್ಕೇರ ಮತ್ತು ಏಕನಾಥ ಕರ್ಕೇರ, ಬಿಜೆಪಿ ಮುಖಂಡ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು ಉಪಸ್ಥಿತರಿದ್ದರು.

    ಬಂದರು ಪ್ರದೇಶಕ್ಕೆ ಭೇಟಿ: ಮುಖ್ಯಮಂತ್ರಿ ಆಗಮನದ ಹಿನ್ನೆಲೆಯಲ್ಲಿ ಬಂದರು ಪ್ರದೇಶಕ್ಕೆ ಭಾನುವಾರ ಮೀನುಗಾರಿಕೆ ಮತ್ತು ಬಂದರು ಸಚಿವ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾಧಿಕಾರಿ ಜಿ.ಜಗದೀಶ್, ಪೋಲಿಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಶಾಸಕ ಲಾಲಾಜಿ ಆರ್.ಮೆಂಡನ್, ವಿವಿಧ ಇಲಾಖಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts