More

    ಸ್ವರ್ಗದಂತಿರುವ ಲಕ್ಷದ್ವೀಪಕ್ಕೆ ತಲುಪೋದು ಹೇಗೆ? ಯಾವೆಲ್ಲ ದಾಖಲೆಗಳು ಬೇಕು? ಇಲ್ಲಿದೆ ಪ್ರಮುಖ ಸಲಹೆಗಳು

    ಕವರಟ್ಟಿ: ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗಷ್ಟೇ ಲಕ್ಷದ್ವೀಪಕ್ಕೆ ಭೇಟಿ ನೀಡಿ, ಅಲ್ಲಿನ ಪ್ರಾಕೃತಿಕ ಸೌಂದರ್ಯದ ಫೋಟೋಗಳನ್ನು ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಮಾಡಿದರು. ದ್ವೀಪಗಳ ಅದ್ಭುತ ಸೌಂದರ್ಯ ಮತ್ತು ಅಲ್ಲಿನ ಜನರ ಆತ್ಮೀಯತೆಗೆ ನಾನಿನ್ನೂ ವಿಸ್ಮಯಗೊಂಡಿದ್ದೇನೆ ಎಂದರು. ಸ್ವರ್ಗದಂತಿರುವ ದ್ವೀಪದಲ್ಲಿ ಪ್ರಧಾನಿ ಮೋದಿ ಸುತ್ತಾಡಿದ ಬಳಿಕ ಭಾರತೀಯ ಕಣ್ಣು ಇದೀಗ ಲಕ್ಷದ್ವೀಪದ ಮೇಲಿದೆ. ಈ ಕಾರಣಕ್ಕೆ ಲಕ್ಷದ್ವೀಪ ಕೆಲ ದಿನಗಳಿಂದ ಟ್ರೆಂಡ್​ನಲ್ಲಿದೆ. ಲಕ್ಷದ್ವೀಪದ ಸೌಂದರ್ಯವನ್ನು ಖುದ್ದಾಗಿ ಕಣ್ತುಂಬಿಕೊಳ್ಳಬೇಕೆಂದು ನೀವೇನಾದರೂ ಭಾವಿಸಿದ್ದರೆ ಇಲ್ಲಿದೆ ನೋಡಿ ಮಹತ್ವದ ಮಾಹಿತಿ.

    ಕೇರಳದ ಕೊಚ್ಚಿಯಿಂದ ಲಕ್ಷದ್ವೀಪಕ್ಕೆ ವಿಮಾನ ಮತ್ತು ಹಡುಗು ಪ್ರಯಾಣದ ಸೇವೆ ಇದೆ. ವಿಮಾನ ಲ್ಯಾಂಡ್​ ಆಗಲು ಏರ್​ಸ್ಟ್ರಿಪ್​ ಹೊಂದಿರುವ ಏಕೈಕ ದ್ವೀಪ ಅಗತ್ತಿಗೆ ತಲುಪಿದ ಬಳಿಕ ಅಲ್ಲಿಂದ ಬೋಟ್​ ಮೂಲಕ ಲಕ್ಷದ್ವೀಪ ರಾಜಧಾನಿ ಕವರಟ್ಟಿ ಮತ್ತು ಕಡಮಟ್​ಗೆ ಕರೆದೊಯ್ಯಲಾಗುತ್ತದೆ. ಇನ್ನು ಕೊಚ್ಚಿ ಮತ್ತು ಲಕ್ಷದ್ವೀಪದ ನಡುವೆ ಅನೇಕ ಪ್ಯಾಸೆಂಜರ್​ ಹಡಗುಗಳು ಕೂಡ ಸಂಚರಿಸುತ್ತವೆ. 14 ರಿಂದ 18 ಗಂಟೆಗಳ ಪ್ರಯಾಣಿಸಬೇಕಾಗುತ್ತದೆ. ದೆಹಲಿಯಿಂದ ಲಕ್ಷದ್ವೀಪ 2,125 ಕಿ.ಮೀ ದೂರವಿದೆ. ಕೇರಳದ ಕೊಚ್ಚಿಯಿಂದ ಕೇವಲ 496 ಕಿ.ಮೀ ದೂರವಿದೆ.

    ಸ್ವರ್ಗದಂತಿರುವ ಲಕ್ಷದ್ವೀಪಕ್ಕೆ ತಲುಪೋದು ಹೇಗೆ? ಯಾವೆಲ್ಲ ದಾಖಲೆಗಳು ಬೇಕು? ಇಲ್ಲಿದೆ ಪ್ರಮುಖ ಸಲಹೆಗಳು

    ಲಕ್ಷದ್ವೀಪದಲ್ಲಿ ಪ್ರಖ್ಯಾತ ಸ್ಥಳಗಳೆಂದರೆ ಬಂಗಾರಮ್​, ಅಗತ್ತಿ, ಕಡಮಟ್​, ಮಿನಿಕಾಯ್​, ಕಲ್ಪೇನಿ ಮತ್ತು ಕವರಟ್ಟಿ.

    ಇತರ ದೇಶೀಯ ಪ್ರವಾಸಿ ಸ್ಥಳಗಳಿಗಿಂತ ಲಕ್ಷದ್ವೀಪ ತುಸು ಭಿನ್ನವಾಗಿದೆ. ಅದೇನೆಂದರೆ ಲಕ್ಷದ್ವೀಪಕ್ಕೆ ಹೋಗುವುದು ಸುಲಭವಲ್ಲ. ನೀವು ಈ ಸ್ವರ್ಗೀಯ ದ್ವೀಪಕ್ಕೆ ಭೇಟಿ ನೀಡಲು ಬಯಸಿದರೆ ನೀವು ಕೆಲವು ದಾಖಲೆಗಳನ್ನು ರೆಡಿ ಮಾಡಿಕೊಳ್ಳಬೇಕಾಗುತ್ತದೆ. ಹೌದು, ನೀವು ಭಾರತೀಯರಾಗಿದ್ದರೂ ಸಹ ದಾಖಲೆಗಳು ಅನ್ವಯಿಸುತ್ತದೆ.

    Lakshdweep

    ಭಾರತೀಯ ಪ್ರಜೆಗಳು ತಮ್ಮ ಸ್ಥಳೀಯ ಠಾಣೆಗಳಲ್ಲಿ ಕ್ಲಿಯರೆನ್ಸ್ ಪ್ರಮಾಣಪತ್ರವನ್ನು ಪಡೆದುಕೊಳ್ಳಬೇಕಾಗುತ್ತದೆ. ಇದರೊಂದಿಗೆ ಮೂರು ಪಾಸ್​ಪೋರ್ಟ್​ ಸೈಜ್​​ ಫೋಟೋಗಳೊಂದಿಗೆ ಗುರುತಿನ ದಾಖಲೆಗಳನ್ನು ನಮೂದಿಸಬೇಕಾಗುತ್ತದೆ. ಕ್ಲಿಯರೆನ್ಸ್ ಪ್ರಮಾಣಪತ್ರ ಪಡೆದುಕೊಂಡ ಬಳಿಕ ನೀವು ಪ್ರವೇಶ ಪರವಾನಗಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು ಅಥವಾ ಕೇರಳದ ಕೊಚ್ಚಿಯ ವಿಲಿಂಗ್‌ಡನ್ ದ್ವೀಪದಲ್ಲಿರುವ ಲಕ್ಷದ್ವೀಪ ಆಡಳಿತ ಕಚೇರಿಯಿಂದ ಅನುಮತಿ ಪತ್ರ ಪಡೆದುಕೊಳ್ಳಬೇಕು. ನಂತರ ಈ ಪರವಾನಗಿಯನ್ನು ಲಕ್ಷದ್ವೀಪದಲ್ಲಿರುವ ಸ್ಟೇಷನ್ ಹೌಸ್ ಆಫೀಸರ್‌ಗೆ ಸಲ್ಲಿಸಲಾಗುತ್ತದೆ. ಈ ವಿಚಾರದಲ್ಲಿ ನಿಮಗೆ ಅಧಿಕೃತ ಟ್ರಾವೆಲ್ ಏಜೆಂಟ್‌ಗಳು ಸಹಾಯ ಮಾಡಬಹುದು.

    ನೀವು ಸ್ನಾರ್ಕೆಲಿಂಗ್ ಅನುಭವ ಪಡೆಯಲು ಬಯಸಿದರೆ, ಲಕ್ಷ್ವದೀಪದ ಅಗತ್ತಿ ದ್ವೀಪವನ್ನು ಆರಿಸಿಕೊಳ್ಳಿ. ಇಲ್ಲಿ ವರ್ಣರಂಜಿತ ಬಂಡೆಗಳು ಮತ್ತು ನೀರೊಳಗೆ ವಿಶೇಷ ಜಲಚರಗಳಿಂದ ತುಂಬಿರುತ್ತದೆ. ನೀವು ನೀಡುವ ಪ್ರತಿ ಪೈಸೆಗೆ ಯೋಗ್ಯವಾದ ಅನುಭವ ನಿಮಗೆ ದೊರೆಯುತ್ತದೆ.

    ಸ್ನಾರ್ಕೆಲಿಂಗ್​ ಬದಲು ಸ್ಕೂಬಾ ಡೈವಿಂಗ್ ಮಾಡಲು ಬಯಸಿದರೆ ಕಲ್ಪೇನಿ ದ್ವೀಪವು ನಿಮಗೆ ಹಾಟ್ ಫೇವರಿಟ್ ಆಗಿದೆ. ಅಪಾರ ಸಂಖ್ಯೆಯ ವಿಲಕ್ಷಣ ಮೀನಿನ ಪ್ರಭೇದಗಳೊಂದಿಗೆ, ಇಲ್ಲಿ ಸ್ಕೂಬಾ ಡೈವಿಂಗ್ ಒಂದು ಅದ್ಭುತ ಅನುಭವವನ್ನು ನೀಡುತ್ತದೆ. ಉಳಿದಂತೆ ಲಕ್ಷದ್ವೀಪದ ಮಿನಿಕಾಯ್ ದ್ವೀಪದಲ್ಲಿ ಕ್ಯಾನೋಯಿಂಗ್‌ನಿಂದ ಹಿಡಿದು ಕಡಮತ್ ದ್ವೀಪದಲ್ಲಿ ಮೀನುಗಾರಿಕೆ ಮತ್ತು ಗಾಳಿಪಟ ಸರ್ಫಿಂಗ್‌ವರೆಗೆ, ಲಕ್ಷದ್ವೀಪದಲ್ಲಿ ನೀವು ಆನಂದಿಸಬಹುದಾದ ಇತರ ಚಟುವಟಿಕೆಗಳಿವೆ.

    PM modi

    ಲಕ್ಷದ್ವೀಪ ಫೈವ್​ಸ್ಟಾರ್​ ಹೋಟೆಲ್​ಗಳಲ್ಲಿ ಸಿಗುವ ಸೌಲಭ್ಯಗಳು ಈ ಕೆಳಕಂಡಂತಿವೆ
    * ಆರಾಮದಾಯಕ ಕೊಠಡಿಗಳು: ಗುಣಮಟ್ಟದ ಪೀಠೋಪಕರಣಗಳೊಂದಿಗೆ ಸುಸಜ್ಜಿತ ವಸತಿ ಸೌಲಭ್ಯವಿದೆ.
    * ಅಸಾಧಾರಣ ಸೇವೆ: ಅತಿಥಿ ತೃಪ್ತಿಗೆ ಬದ್ಧವಾಗಿರುವ ಸೌಹಾರ್ದ ಮತ್ತು ವೃತ್ತಿಪರ ಸಿಬ್ಬಂದಿ.
    * ಕನೆಕ್ಟಿವಿಟಿ: ವ್ಯಾಪಾರ ಮತ್ತು ವಿಶ್ರಾಂತ ಪ್ರಯಾಣಿಕರಿಗೆ ಹೆಚ್ಚಿನ ವೇಗದ ವೈ-ಫೈ ಸೌಲಭ್ಯ.
    * ವಿಭಿನ್ನ ಆಹಾರಗಳು: ಆನ್-ಸೈಟ್ ರೆಸ್ಟೋರೆಂಟ್‌ಗಳು ವೈವಿಧ್ಯಮಯ ಮತ್ತು ರುಚಿಕರವಾದ ತಿನಿಸುಗಳ ಆಯ್ಕೆಗಳನ್ನು ನೀಡುತ್ತವೆ.
    * ಮನರಂಜನೆ: ವಿಶ್ರಾಂತಿ ಮತ್ತು ಯೋಗಕ್ಷೇಮಕ್ಕಾಗಿ ಫಿಟ್‌ನೆಸ್ ಕೇಂದ್ರಗಳು, ಪೂಲ್‌ಗಳು ಮತ್ತು ಸ್ಪಾಗಳು.
    * ಸಭೆಯ ಸೌಲಭ್ಯಗಳು: ಸಮ್ಮೇಳನಗಳು ಮತ್ತು ಕಾರ್ಯಕ್ರಮಗಳಿಗಾಗಿ ಸುಸಜ್ಜಿತ ಸ್ಥಳಗಳು.
    * ಸುರಕ್ಷತಾ ಕ್ರಮಗಳು: ಅತಿಥಿ ರಕ್ಷಣೆಗಾಗಿ ಸಾಕಷ್ಟು ಭದ್ರತೆ ಮತ್ತು ಕಣ್ಗಾವಲು ವ್ಯವಸ್ಥೆ.
    * ಶುಚಿತ್ವ: ನಿಯಮಿತವಾಗಿ ಮನೆ ಸ್ವಚ್ಛವು ಅಚ್ಚುಕಟ್ಟಾದ ಮತ್ತು ಆರಾಮದಾಯಕ ವಾತಾವರಣವನ್ನು ನೀಡುತ್ತದೆ.

    ಇನ್ನು ಹೋಟೆಲ್​ಗಳು ಒಂದು ದಿನಕ್ಕೆ 4 ಸಾವಿರದಿಂದ 7 ಸಾವಿರದವರೆಗೂ ಚಾರ್ಜ್​ ಮಾಡುತ್ತವೆ. ಹೋಟೆಲ್​ಗಳು ನೀಡುವ ಸೌಲಭ್ಯದ ಮೇಲೆ ಬೆಲೆ ನಿಗದಿಯಾಗಿರುತ್ತದೆ. (ಏಜೆನ್ಸೀಸ್​)

    ಲಕ್ಷದ್ವೀಪದ ಪ್ರವಾಸದ ವಿಡಿಯೋ ಹಂಚಿಕೊಂಡ ಪ್ರಧಾನಿ: ಗಮನ ಸೆಳೆದ ನಮೋ ಸ್ನಾರ್ಕೆಲಿಂಗ್ ಸಾಹಸ

    ಲಕ್ಷದ್ವೀಪಕ್ಕೆ ಮೋದಿ ಭೇಟಿ; ‘ಮಾಲ್ಡೀವ್ಸ್​​​​​​ಗೆ ದೊಡ್ಡ ಹೊಡೆತ…’ ವಿಭಿನ್ನ ಕಾಮೆಂಟ್ ಮಾಡಿದ ಬಳಕೆದಾರರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts