More

    ಕೆರೆಗೆ ಕಾರ್ಖಾನೆಗಳ ತ್ಯಾಜ್ಯ ಹರಿಯದಿರಲಿ, ಜನಸಂಪರ್ಕ ಸಭೆಯಲ್ಲಿ ದರೋಜಿ ಗ್ರಾಮಸ್ಥರ ಮನವಿ

    ಸಂಡೂರು: ತಾಲೂಕಿನ ದರೋಜಿ ಸರ್ಕಾರಿ ಹಿಪ್ರಾ ಶಾಲೆ ಆವರಣದಲ್ಲಿ ಶಾಸಕ ಇ.ತುಕಾರಾಮ್ ನೇತೃತ್ವದಲ್ಲಿ ತಾಲೂಕು ಆಡಳಿತ ಶನಿವಾರ ಏರ್ಪಡಿಸಿದ್ದ ಜನಸಂಪರ್ಕ ಸಭೆಯಲ್ಲಿ ಗ್ರಾಮಸ್ಥರಿಂದ ಹಲವು ಸಮಸ್ಯೆಗಳು ಕೇಳಿಬಂದವು.

    ಪಿಎಲ್‌ಡಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಮಾರೆಪ್ಪ, ಮಾಜಿ ಮಂಡಲ ಪ್ರಧಾನ ನರಸಿಂಹಮೂರ್ತಿ, ದಾನಪ್ಪ ಮತ್ತಿತರರು ಮಾತನಾಡಿ, ದರೋಜಿ ಕೆರೆ ಹೂಳೆತ್ತಬೇಕು. ದರೋಜಿ-ತೋರಣಗಲ್ ರಸ್ತೆ ನಿರ್ಮಿಸಬೇಕು ಎಂದು ಒತ್ತಾಯಿಸಿದರು. ಜಿಪಂ ಸದಸ್ಯ ವಿ.ಜನಾರ್ದನ ಮಾತನಾಡಿ, ದರೋಜಿ ಭಾಗದಲ್ಲಿ ಮಾತ್ರ ಭತ್ತ ಬೆಳೆಯುವುದರಿಂದ ಭತ್ತ ಖರೀದಿ ಕೇಂದ್ರ ಹಾಗೂ ರೈತ ಸಂಪರ್ಕ ಕೇಂದ್ರ ತೆರೆಯಬೇಕು ಎಂದು ಆಗ್ರಹಿಸಿದರು. ಇದಕ್ಕೆ ಸಭೆಯಲ್ಲಿದ್ದ ಸ್ಥಳೀಯರು ದನಿಗೂಡಿಸಿದರು. ಸಣ್ಣ ನೀರಾವರಿ ಇಲಾಖೆ ಇಇ ನಾಗಭೂಷಣ ಪ್ರತಿಕ್ರಿಯಿಸಿ, ದರೋಜಿ ಕೆರೆ ಮತ್ತು ಕಾಲುವೆಗಳ ದುರಸ್ತಿಗೆ ಕ್ರಿಯಾ ಯೋಜನೆ ಸಲ್ಲಿಸಿದ್ದು, ಅನುಮೋದನೆ ದೊರೆತ ತಕ್ಷಣ ಕಾಮಗಾರಿ ಆರಂಭಿಸಲಾಗುವುದು. ಶೀಘ್ರವೇ ಸೆಕ್ಷನ್ ಅಧಿಕಾರಿಗಳನ್ನು ನೇಮಿಸಲಾಗುವುದು ಎಂದು ತಿಳಿಸಿದರು.

    ಶಾಸಕ ಇ.ತುಕಾರಾಮ್ ಮಾತನಾಡಿ, ದರೋಜಿ ಸೇರಿ 4 ಗ್ರಾಮಗಳಿಗೆ 26 ಕೋಟಿ ರೂ.ಗಳ ಶಾಶ್ವತ ಕುಡಿವ ನೀರಿನ ಯೋಜನೆಗೆ ಸರ್ಕಾರ ಒಪ್ಪಿದೆ. 8 ತಿಂಗಳೊಳಗೆ ದರೋಜಿ-ತೋರಣಗಲ್ ರಸ್ತೆ ನಿರ್ಮಿಸುವ ಜತೆಗೆ ಗ್ರಾಮದಲ್ಲಿ 10 ಹಾಸಿಗೆಗಳ ಆಸ್ಪತ್ರೆ ಸ್ಥಾಪಿಸಲಾಗುವುದು ಎಂದು ಭರವಸೆ ನೀಡಿದರು. ಅಲ್ಲದೆ ವೃದ್ಧಾಪ್ಯ ಮತ್ತು ವಿಧವಾ ಸೇರಿ ಇತರ ಮಾಸಾಶವನ್ನು ತ್ವರಿತವಾಗಿ ವಿತರಿಸು ವಂತೆ ತಹಸೀಲ್ದಾರ್ ಎಚ್.ಜೆ.ರಶ್ಮಿ, ಪ್ರಭಾರ ಆರ್‌ಐ ಕೆ.ಮಂಜುನಾಥಗೆ ಸೂಚಿಸಿದರು.

    ತಹಸೀಲ್ದಾರ್ ಎಚ್.ಜೆ.ರಶ್ಮಿ, ಇಒ, ಪ್ರೊಬೇಷನರಿ ಐಎಎಸ್ ಅಧಿಕಾರಿ ಈಶ್ವರ ಕುಮಾರ್ ಕಾಂದೂ, ಜಿಪಂ ಸದಸ್ಯೆ ಸೌಭಾಗ್ಯ ತಿರುಮಲ ಮಾತನಾಡಿದರು. ಸಭೆಯಲ್ಲಿ ನೀರಾವರಿಗೆ ಸಂಬಂಧಿಸಿ 6, ಸಾರಿಗೆ 4, ಕೃಷಿ 2, ಕಂದಾಯ 2, ಶಿಕ್ಷಣ 2, ಆರೋಗ್ಯ 3 ಸೇರಿ 23 ಅರ್ಜಿಗಳು ಸಲ್ಲಿಕೆಯಾದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts