More

    ಸಂಚಾರಕ್ಕೆ ಪ್ರಯಾಣಿಕರ ಕೊರತೆ

    ಹುಬ್ಬಳ್ಳಿ: ಲಾಕ್​ಡೌನ್ ಪರಿಣಾಮವಾಗಿ 50ಕ್ಕೂ ಹೆಚ್ಚು ದಿನಗಳಿಂದ ಸ್ಥಗಿತಗೊಂಡಿದ್ದ ಸಾರಿಗೆ ಬಸ್ ಸಂಚಾರ ಸೋಮವಾರ ಪುನರಾರಂಭಗೊಂಡಿದೆ. ಆದರೆ, ಹುಬ್ಬಳ್ಳಿಯಲ್ಲಿ ಮೊದಲ ದಿನ ಪ್ರಯಾಣಿಕರ ತೀವ್ರ ಕೊರತೆ ಕಂಡು ಬಂದಿತು.
    ಬಸ್​ನಲ್ಲಿ ಶೇ. 50ರಷ್ಟು ಆಸನ ಭರ್ತಿಗೆ ರಾಜ್ಯ ಸರ್ಕಾರ ಅವಕಾಶ ನೀಡಿದೆ. ಆದರೆ, ಪ್ರಯಾಣಿಕರ ಕೊರತೆ ಹಿನ್ನೆಲೆಯಲ್ಲಿ ಕೆಲವೊಂದು ಮಾರ್ಗಗಳಲ್ಲಿ 10-12 ಆಸನಗಳು ಭರ್ತಿಯಾಗುತ್ತಿದ್ದಂತೆ ಬಸ್ ಓಡಿಸಲಾಗಿದೆ. ಹುಬ್ಬಳ್ಳಿಯ ಗೋಕುಲ ರಸ್ತೆ ಬಸ್ ನಿಲ್ದಾಣ ಹಾಗೂ ಹೊಸೂರು ಪ್ರಾದೇಶಿಕ ಬಸ್ ನಿಲ್ದಾಣಗಳಲ್ಲಿ ದಿನವೀಡಿ ಪ್ರಯಾಣಿಕರಿಗಿಂತ ಸಾರಿಗೆ ಸಂಸ್ಥೆಯ ಸಿಬ್ಬಂದಿಯೇ ಹೆಚ್ಚಿದ್ದರು.
    ಹುಬ್ಬಳ್ಳಿಯಿಂದ ಬೆಂಗಳೂರು, ಬೆಳಗಾವಿ, ಗದಗ, ಶಿರಸಿಗೆ ತೆರಳಲು ಬೇಡಿಕೆ ಹೆಚ್ಚಿದ್ದವು. ಪ್ರಯಾಣಿಕರ ಬೇಡಿಕೆ ಹಾಗೂ ಆದ್ಯತೆಗೆ ಅನುಗುಣವಾಗಿ ಬಸ್​ಗಳನ್ನು ಓಡಿಸಲಾಯಿತು. ಬೇರೆ ಬೇರೆ ಸ್ಥಳಗಳಿಗೆ ತೆರಳಲು ಆಗೊಮ್ಮೆ-ಈಗೊಮ್ಮೆ ಪ್ರಯಾಣಿಕರು ಬಸ್ ನಿಲ್ದಾಣಕ್ಕೆ ಬರುತ್ತಿದ್ದರು. ಅವರಲ್ಲಿ ಒಂದೇ ಮಾರ್ಗದಲ್ಲಿ ತೆರಳುವ ಕನಿಷ್ಠ 10-12 ಪ್ರಯಾಣಿಕರನ್ನು ಒಟ್ಟುಗೂಡಿಸಲು ಅರ್ಧ ತಾಸು-ಒಂದು ಗಂಟೆ ಬೇಕಾಗುತ್ತಿದ್ದವು. ಮೊದಲು ಬಂದವರು ಬಸ್​ನಲ್ಲಿ ಕುಳಿತು ಬಸ್ ಹೊರಡುವುದನ್ನೇ ಕಾಯುವ ಪರಿಸ್ಥಿತಿ ನಿರ್ವಣವಾಗಿತ್ತು.
    ಹುಬ್ಬಳ್ಳಿ ಗೋಕುಲ ರಸ್ತೆ ಬಸ್ ನಿಲ್ದಾಣದಿಂದ ಬೆಳಗ್ಗೆ 8 ಗಂಟೆಗೆ ಮೊದಲ ಬಸ್ ಬೆಂಗಳೂರಿಗೆ ಪ್ರಯಾಣ ಬೆಳೆಸಿತು. ಬಸ್​ನಲ್ಲಿ 13 ಜನ ಪ್ರಯಾಣಿಕರಿದ್ದರು. ಹೊಸೂರು ಬಸ್ ನಿಲ್ದಾಣದಿಂದ ಬೆಳಗ್ಗೆ 7.45ಕ್ಕೆ ಮೊದಲ ಬಸ್ ಬಾಗಲಕೋಟೆಗೆ ತೆರಳಿತು. 18 ಜನ ಪ್ರಯಾಣಿಕರಿದ್ದರು. ಮಾರ್ಗ ಮಧ್ಯದಲ್ಲಿ ಬರುವ ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಅವಕಾಶ ಇರುವುದರಿಂದ ಕನಿಷ್ಠ 10 ಪ್ರಯಾಣಿಕರಿದ್ದರೂ ಬಸ್​ಗಳನ್ನು ಓಡಿಸಲಾಗಿದೆ. ಮಾಸ್ಕ್ ಹಾಕಿಕೊಂಡವರಿಗೆ ಮಾತ್ರ ಬಸ್ ಹತ್ತಲೂ ಅವಕಾಶ ನೀಡಲಾಗಿತ್ತು. ಪರಸ್ಪರ ಅಂತರ ಕಾಯ್ದುಕೊಳ್ಳುವ ಉದ್ದೇಶದಿಂದ ಬಸ್​ನಲ್ಲಿ ಮೂರು ಆಸನಗಳಲ್ಲಿ ಇಬ್ಬರಿಗೆ ಹಾಗೂ ಎರಡು ಆಸನಗಳಲ್ಲಿ ಒಬ್ಬರಿಗೆ ಮಾತ್ರ ಕುಳಿತುಕೊಳ್ಳಲು ಅವಕಾಶ ನೀಡಲಾಗಿದೆ.
    ಮುಕ್ತ ಪ್ರವೇಶ: ಹುಬ್ಬಳ್ಳಿಯ ಬಸ್ ನಿಲ್ದಾಣಗಳ ಪ್ರವೇಶ ದ್ವಾರದಲ್ಲಿ ಪ್ರಯಾಣಿಕರ ದೇಹದ ಉಷ್ಣಾಂಶ ಅಳೆಯುವ ಥರ್ಮಲ್ ಸ್ಕ್ಯಾನಿಂಗ್ ಹಾಗೂ ಕೈಗೆ ಸ್ಯಾನಿಟೈಸರ್ ಹಾಕುವ ವ್ಯವಸ್ಥೆ ಇರಲಿಲ್ಲ. ಪ್ರಯಾಣಿಕರು ಬಸ್ ನಿಲ್ದಾಣಕ್ಕೆ ಎಲ್ಲಿಂದ ಬೇಕಾದರೂ ಮುಕ್ತವಾಗಿ ಪ್ರವೇಶ ಮಾಡಬಹುದಾಗಿದೆ. 2020ರ ಮೇ ತಿಂಗಳಲ್ಲಿ ಕೋವಿಡ್ ಮೊದಲ ಅಲೆ ನಿಯಂತ್ರಣಕ್ಕೆ ಬಂದು ಬಸ್ ಸಂಚಾರ ಪುನರಾರಂಭಗೊಂಡಾಗ ಬಸ್ ನಿಲ್ದಾಣಕ್ಕೆ ಪ್ರವೇಶಿಸಲು ಹಾಗೂ ಹೊರ ಹೋಗಲು ನಿರ್ದಿಷ್ಟ ಮಾರ್ಗಗಳಿದ್ದವು. ಪ್ರಯಾಣಿಕರ ಥರ್ಮಲ್ ಸ್ಕ್ಯಾನಿಂಗ್ ನಡೆಸಿ ಸ್ಯಾನಿಟೈಸರ್​ನ್ನು ಕೈಗೆ ಹಾಕಲಾಗುತ್ತಿದ್ದವು. ಈ ಬಾರಿ ಅದ್ಯಾವುದು ಇಲ್ಲ. ಪೊಲೀಸ್ ಬಂದೋಬಸ್ತ್ ಸಹ ಇರಲಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts