More

    ಕೆವೈಸಿ ತಂಡ ಚಾಂಪಿಯನ್

    ಗೋಣಿಕೊಪ್ಪ: ಯರವ ಸಮಾಜದ 12ನೇ ವರ್ಷದ ಐದು ದಿನಗಳ ತಿರುಮುಂಡೆಲಾತ್ತಿಲಾ ಕ್ರಿಕೆಟ್ ಕಪ್ ಟೂರ್ನಿಗೆ ವರ್ಣರಂಜಿತ ತೆರೆ ಬಿದ್ದಿತು.

    ತಿತಿಮತಿ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಮಂಗಳವಾರ ಆಯೋಜಿಸಿದ್ದ ಅಂತಿಮ ಪಂದ್ಯದಲ್ಲಿ ಕುಟ್ಟ ಭಾಗದ ಕೆವೈಸಿ ತಂಡವು ನಾಣಚ್ಚಿ ಭಾಗದ ರೈಸಿಂಗ್ ಸ್ಟಾರ್ ತಂಡವನ್ನು ಮಣಿಸುವ ಮೂಲಕ ಈ ಬಾರಿಯ ತಿರುಮುಂಡೆಲಾತ್ತಿಲಾ ಕ್ರಿಕೆಟ್ ಕಪ್‌ನ್ನು ಮುಡಿಗೇರಿಸಿಕೊಂಡಿತ್ತು. ರೈಸಿಂಗ್ ಸ್ಟಾರ್ ತಂಡವು ರನ್ನರ್ ಅಪ್‌ಗೆ ತೃಪ್ತಿ ಪಟ್ಟುಕೊಂಡಿತು.

    ಮೊದಲು ಬ್ಯಾಟಿಂಗ್ ಮಾಡಿದ ರೈಸಿಂಗ್ ಸ್ಟಾರ್ ತಂಡ ನಿಗದಿತ ಓವರ್‌ನಲ್ಲಿ ಕೇವಲ 30 ರನ್ ಗಳಿಸಿತು. ಎದುರಾಳಿ ಕೆವೈಸಿ ತಂಡ ಇನ್ನು ಕೆಲವು ಓವರ್‌ಗಳು ಬಾಕಿ ಇರುವಂತೆಯೇ ನಿಗದಿತ ಗುರಿಯನ್ನು ಮುಟ್ಟಿ ಚಾಂಪಿಯನ್ನಾಗಿ ಹೊರಹೊಮ್ಮಿತು. ವಿಜೇತ ತಂಡಕ್ಕೆ 30 ಸಾವಿರ ರೂ., ರನ್ನರ್ ಅಪ್ ತಂಡಕ್ಕೆ 15 ಸಾವಿರ ರೂ. ನಗದು ಬಹುಮಾನದೊಂದಿಗೆ ಆಕರ್ಷಕ ಟ್ರೋಫಿ ನೀಡಲಾಯಿತು.

    ಮಹಿಳೆಯರಿಗೆ ಹಗ್ಗಜಗ್ಗಾಟ: ಕ್ರೀಡೋತ್ಸವದ ಅಂಗವಾಗಿ ಮಹಿಳೆಯರಿಗೆ ಹಗ್ಗಜಗ್ಗಾಟ ಪಂದ್ಯ ನಡೆಯಿತು. ಚೆನ್ನಂಗಿಯ ಈಶ್ವರಿ ತಂಡವು ದೇವರಪುರದ ಕವಿತ ತಂಡವನ್ನು ಸೋಲಿಸುವ ಮೂಲಕ ಈ ಬಾರಿಯ ಮಹಿಳೆಯರ ಹಗ್ಗಜಗ್ಗಾಟ ಪ್ರಶಸ್ತಿಯನ್ನು ಪಡೆಯಿತು. ಸಮುದಾಯದವರಿಗೆ ವಿವಿಧ ಕ್ರೀಡೆಗಳು ನಡೆದವು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಇದೇ ವೇಳೆ ಸನ್ಮಾನಿಸಲಾಯಿತು.

    ಸಮಾರೋಪ: ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಚೀಫ್ ಎಲೆಕ್ಟ್ರಿಕಲ್ ಇನ್‌ಸ್ಪೆಕ್ಟರ್ ತೀತಿರ ಎನ್.ಅಪ್ಪಚ್ಚು, ಯರವ ಸಮುದಾಯವು ಕೊಡಗಿನಲ್ಲಿ ತನ್ನದೆ ಆದ ಕಲೆ, ಸಂಸ್ಕೃತಿಯನ್ನು ಹೊಂದಿದೆ. ಇತರ ಸಮುದಾಯಗಳೊಂದಿಗೆ ಉತ್ತಮವಾಗಿ ಒಡನಾಟ ಹೊಂದಿದವರಾಗಿದ್ದಾರೆ. ಆರ್ಥಿಕವಾಗಿ ಮುಂದೆ ಬರಬೇಕಾಗಿದೆ ಎಂದರು.

    ಮುಂದಿನ ವರ್ಷ ನಡೆಯುವ 13ನೇ ವರ್ಷದ ಯರವ ಕ್ರೀಡೋತ್ಸವವು ಯರವ ಮನೆತನದ ಉಲಕುಚ್ಚು ಕುಟುಂಬದ ಹೆಸರಿನಲ್ಲಿ ನಡೆಯಲಿದೆ ಎಂದು ಯರವ ಸಮಾಜದ ಅಧ್ಯಕ್ಷ ಪಿ.ಕೆ.ಸಿದ್ದಪ್ಪ ಘೋಷಣೆ ಮಾಡಿದರು.

    ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ನಿವೃತ್ತ ಮುಖ್ಯಶಿಕ್ಷಕ ಚೆರಿಯಪಂಡ ರುಕ್ಮಿಣಿ ನಾಣಯ್ಯ, ತಿತಿಮತಿ ಗಿರಿಜನ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಮಣಿ ಕುಂಞ, ಗ್ರಾಮ ಪಂಚಾಯಿತಿ ಸದಸ್ಯರಾದ ಚುಬ್ರು ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts