More

    ಮುಂಬೈ ವಿರುದ್ಧ ಪಂಜಾಬ್ ತಂಡದ ಸೋಲಿಗೆ ಕಾರಣವಾದ ಆ ಒಂದು ತಪ್ಪು ಯಾವುದು ಗೊತ್ತೇ?

    ಅಬುಧಾಬಿ: ಎರಡು ಪಂದ್ಯಗಳಲ್ಲಿ ನಿಕಟ ಹೋರಾಟ ತೋರಿ ಸೋಲು ಕಂಡಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಗುರುವಾರ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ 48 ರನ್‌ಗಳ ದೊಡ್ಡ ಅಂತರದಿಂದ ಸೋಲು ಕಂಡಿತು. ಇದಕ್ಕೆ ಕಿಂಗ್ಸ್ ಇಲೆವೆನ್ ನಾಯಕ ಕೆಎಲ್ ರಾಹುಲ್, ತಾವು ಮಾಡಿದ ತಪ್ಪೊಂದು ಸೋಲಿಗೆ ಕಾರಣವಾಯಿತು ಎಂದಿದ್ದಾರೆ. ಅದುವೇ ಹೆಚ್ಚುವರಿ ಬೌಲರ್ ಕೊರತೆ.

    ಮುಂಬೈಗೆ ಸ್ಲಾಗ್ ಓವರ್‌ಗಳಲ್ಲಿ ಭಾರಿ ರನ್ ಬಿಟ್ಟಕೊಟ್ಟ ಪಂಜಾಬ್ ತಂಡ 192 ರನ್‌ಗಳ ಕಠಿಣ ಸವಾಲು ಪಡೆದಿತ್ತು. ಪ್ರತಿಯಾಗಿ ಕನ್ನಡಿಗರಾದ ಮಯಾಂಕ್ ಅಗರ್ವಾಲ್ (25) ಮತ್ತು ಕೆಎಲ್ ರಾಹುಲ್ (17) ಎಚ್ಚರಿಕೆಯ ಆರಂಭ ಒದಗಿಸಿದರು. ಆದರೆ ಬುಮ್ರಾ ಈ ಜೋಡಿಯನ್ನು ಬೇರ್ಪಡಿಸಿದ ಬಳಿಕ ಪಂಜಾಬ್ ಲಯಕ್ಕೆ ಮರಳಲಿಲ್ಲ. 3ನೇ ಕ್ರಮಾಂಕದಲ್ಲಿ ಆಡಿದ ಮತ್ತೋರ್ವ ಕನ್ನಡಿಗ ಕರುಣ್ ನಾಯರ್ ಖಾತೆ ತೆರೆಯದೆ ನಿರಾಸೆ ಮೂಡಿಸಿದರು. ನಿಕೋಲಸ್ ಪೂರನ್ (44) ಮಾತ್ರ ಕೆಲಕಾಲ ಪ್ರತಿರೋಧ ಒಡ್ಡಿದರು. ಆಲ್ರೌಂಡರ್‌ಗಳಾದ ಮ್ಯಾಕ್ಸ್‌ವೆಲ್ (11) ಮತ್ತು ಜೇಮ್ಸ್ ನೀಶಾಮ್‌ರಿಂದ (7) ನಿರೀಕ್ಷಿತ ಆಟ ಬರಲಿಲ್ಲ. ಕೊನೆಯಲ್ಲಿ ಕನ್ನಡಿಗ ಕೆ. ಗೌತಮ್ (22*) ಸೋಲಿನ ಅಂತರ ತಗ್ಗಿಸಿದರು. ಬುಮ್ರಾ (18ಕ್ಕೆ 2) ಜತೆಗೆ ಜೇಮ್ಸ್ ಪ್ಯಾಟಿನ್‌ಸನ್ (28ಕ್ಕೆ 2) ಮತ್ತು ಸ್ಪಿನ್ನರ್ ರಾಹುಲ್ ಚಹರ್ (26ಕ್ಕೆ 2) ಬಿಗಿ ದಾಳಿ ಸಂಘಟಿಸಿದರು.

    ‘ಆಡಿದ 4 ಪಂದ್ಯಗಳಲ್ಲಿ ನಾವು ಮೂರಾದರೂ ಗೆಲುವು ಕಂಡಿರಬೇಕಾಗಿತ್ತು. ಈ ಪಂದ್ಯದಲ್ಲಿ ನಾವು ಕೆಲ ತಪ್ಪುಗಳನ್ನು ಮಾಡಿದೆವು. ಪಿಚ್ ಹೊಸ ಚೆಂಡಿನಲ್ಲಿ ಉತ್ತಮವೆನಿಸಿದರೂ, ಬಳಿಕ ನಿಧಾನವಾಗುತ್ತ ಸಾಗಿತು. ನಮಗೆ ಇನ್ನೊಂದು ಬೌಲಿಂಗ್ ಆಯ್ಕೆ ಇರುತ್ತಿದ್ದರೆ ಉತ್ತಮವಿತ್ತು. ಬ್ಯಾಟಿಂಗ್-ಬೌಲಿಂಗ್ ಎರಡೂ ಮಾಡಬಲ್ಲ ಆಲ್ರೌಂಡರ್ ಬೇಕಾಗಿದೆ. ಕೋಚ್ (ಅನಿಲ್ ಕುಂಬ್ಳೆ) ಜತೆ ಚರ್ಚಿಸಿ ಹೆಚ್ಚುವರಿ ಬೌಲರ್ ಬಗ್ಗೆ ನಿರ್ಧರಿಸುವೆ. ಮುಂದಿನ ಪಂದ್ಯದಲ್ಲಿ ಪುಟಿದೇಳುವೆವು’ ಎಂದು ಕೆಎಲ್ ರಾಹುಲ್ ಸೋಲಿನ ಬಳಿಕ ಹೇಳಿದರು.

    ಇದನ್ನೂ ಓದಿ: VIDEO | ಬೌಂಡರಿ ಲೈನ್ ಬಳಿ ಅದ್ಭುತ ಕ್ಯಾಚ್ ಹಿಡಿದ ಮ್ಯಾಕ್ಸ್‌ವೆಲ್-ನೀಶಾಮ್

    ಗರಿಷ್ಠ ರನ್ ಸ್ಕೋರರ್‌ಗೆ ನೀಡಲಾಗುವ ಆರೆಂಜ್ ಕ್ಯಾಪ್ ಅನ್ನು ಸಹ-ಆಟಗಾರ ಮಯಾಂಕ್ ಅಗರ್ವಾಲ್‌ಗೆ ಬಿಟ್ಟುಕೊಟ್ಟ ಬಗ್ಗೆ ಬೇಸರವಿಲ್ಲ ಎಂದ ರಾಹುಲ್, ‘ನಮ್ಮ ತಂಡದಲ್ಲೇ ಆರೆಂಜ್ ಕ್ಯಾಪ್ ಇರುವವರೆಗೆ ನಾನು ಖುಷಿಯಾಗಿಯೇ ಇರುತ್ತೇನೆ. ಅವರು ಕಠಿಣ ಪರಿಶ್ರಮ ಪಟ್ಟಿದ್ದು, ಆರೆಂಜ್ ಕ್ಯಾಪ್‌ಗೆ ಅರ್ಹರಾಗಿದ್ದಾರೆ. ಅವರಿಂದ ಶೀಘ್ರವೇ ಅದನ್ನು ಕಸಿದುಕೊಳ್ಳುವ ಭರವಸೆಯೂ ನನಗಿದೆ’ ಎಂದು ಹೇಳಿದರು.

    ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ 25ನೇ ಪಂದ್ಯದಲ್ಲಿ ಮುಂಬೈ 14ನೇ ಗೆಲುವು ದಾಖಲಿಸಿತು. ರನ್ ಅಂತರದಲ್ಲಿ ಪಂಜಾಬ್ ವಿರುದ್ಧ ಮುಂಬೈಗೆ ಇದು ಅತಿದೊಡ್ಡ ಗೆಲುವಾಗಿದೆ. ಕೆಎಲ್ ರಾಹುಲ್ (503) ಮುಂಬೈ ಇಂಡಿಯನ್ಸ್ ವಿರುದ್ಧ 500ಕ್ಕಿಂತ ಹೆಚ್ಚು ರನ್ ಬಾರಿಸಿದ 11ನೇ ಬ್ಯಾಟ್ಸ್‌ಮನ್ ಎನಿಸಿದರು.

    ‘ನಮ್ಮ ಆರಂಭ ಉತ್ತಮವಾಗಿರಲಿಲ್ಲ. ಆದರೆ ಡೆತ್ ಓವರ್‌ಗಳಲ್ಲಿ ಪಂಜಾಬ್ ತಂಡದ ಬೌಲಿಂಗ್ ವಿಭಾಗದ ದೌರ್ಬಲ್ಯಗಳ ಲಾಭವೆತ್ತಲು ಯಶಸ್ವಿಯಾದೆವು. ಪೊಲ್ಲಾರ್ಡ್ ಮತ್ತು ಹಾರ್ದಿಕ್ ಪಾಂಡ್ಯ ಫಾರ್ಮ್ ಕಂಡುಕೊಂಡಿರುವುದನ್ನು ನೋಡಿ ಖುಷಿಯಾಯಿತು. ಬೌಲಿಂಗ್ ವಿಭಾಗದಲ್ಲೂ ಎಲ್ಲವೂ ಯೋಜನೆಯಂತೆಯೇ ನಡೆಯಿತು’ ಎಂದು ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts