More

    ರಂಗಭೂಮಿ ಮೂಲಕ ಸಮುದಾಯ ಕಟ್ಟುವ ಕ್ರಮ ಕಲಿಸಿದ ರಂಗಕರ್ಮಿ ಕೆ.ವಿ.ಸುಬ್ಬಣ್ಣ

    ಸಾಗರ: ಕೆ.ವಿ.ಸುಬ್ಬಣ್ಣ ನಾವಿರುವ ಹಳ್ಳಿಯಲ್ಲೇ ವಿಶ್ವವನ್ನು ಕಾಣುವ, ಪರಿಭಾವಿಸುವ ಮೂಲಕ ಜಗತ್ತನ್ನು ಒಳಗೊಳ್ಳುವ ಬಗೆಯನ್ನು ಕಲಿಸಿದರು. ಊರನ್ನು ಪ್ರೀತಿಸುವ, ಊರಿನ ಎಲ್ಲರನ್ನೂ, ಎಲ್ಲವನ್ನೂ ನನ್ನದೆಂದು ತಿಳಿದು ಬಳಸುವ, ಬೆಳೆಸುವ ದಾರಿ ತೋರಿದರು. ನಮಗೆಲ್ಲ ಆದರ್ಶಪ್ರಾಯರು ಎಂದು ರಂಗಕರ್ಮಿ ಪ್ರಸಾದ್ ರಕ್ಷಿದಿ ತಿಳಿಸಿದರು.

    ಹೆಗ್ಗೋಡಿನಲ್ಲಿ ಶನಿವಾರ ಸಂಜೆ ಸಂಸ್ಕೃತಿ ಸಮಾಜ ಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಏರ್ಪಡಿಸಿದ್ದ ಕೆ.ವಿ.ಸುಬ್ಬಣ್ಣ ಸ್ಮರಣಾರ್ಥ ವಿಶೇಷ ಉಪನ್ಯಾಸ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸುಬ್ಬಣ್ಣ ರಂಗಭೂಮಿಯನ್ನೇ ಮಾಧ್ಯಮವಾಗಿಸಿಕೊಂಡರು. ರಂಗಭೂಮಿಯ ಮೂಲಕ ಸಮುದಾಯ ಕಟ್ಟುವ ಕ್ರಮವನ್ನು ಕಲಿಸಿ ಕೊಟ್ಟರು. ಸುಬ್ಬಣ್ಣ ಕೇವಲ ನಾಟಕ ಆಡುವುದನ್ನು ಕಲಿಸಲಿಲ್ಲ, ಬದಲಾಗಿ ಸಮಾಜದಲ್ಲಿ ದಮನಿತರ, ಬಡವರ, ಕೃಷಿಕರ, ಪರಿಸರ ಪರವಾದ ಬದುಕಿನ ಹೋರಾಟದ ಹಾದಿಯನ್ನು ಹಾಕಿಕೊಟ್ಟರು. ಈ ಹಿನ್ನೆಲೆಯಲ್ಲಿ ಸುಬ್ಬಣ್ಣ ನಾಡಿನ ಹಳ್ಳಿಗಳ ಮೂಲೆ ಮೂಲೆಗಳನ್ನು ತಲುಪಿದರು. ಸಾಂಸ್ಕೃತಿಕ ಕ್ರಿಯಾಶೀಲತೆಯ ಮೂಲಕ ನಾಡಿನ ಸಾಕ್ಷಿಪ್ರಜ್ಞೆ ಆಗಿದ್ದರು ಎಂದರು.
    ಸುಬ್ಬಣ್ಣ ಮತ್ತು ನಾವು ಎಂಬ ವಿಷಯದ ಮೇಲೆ ವಿಶೇಷ ಉಪನ್ಯಾಸ ನೀಡಿದ ಲೇಖಕ, ದೆಹಲಿ ಜವಾಹರ್ ಲಾಲ್ ನೆಹರು ವಿವಿ ನಿವೃತ್ತ ಪ್ರಾಧ್ಯಾಪಕ ಡಿ.ಪುರುಷೋತ್ತಮ ಬಿಳಿಮಲೆ, ಸುಬ್ಬಣ್ಣ ಅವರಂತಹವರು ಇದ್ದ ಕಾಲದಲ್ಲಿ ನಾವಿದ್ದೇವೆ ಎಂಬುದೇ ನಮಗೊಂದು ಹೆಮ್ಮೆ ಮತ್ತು ಭಾಗ್ಯ. ಆದರೆ ಅವರ ನಂತರದ ಕಾಲ ನಮಗೀಗ ಸಮಾಧಾನಕರ ಎನಿಸುತ್ತಿಲ್ಲ. ಏಕೆಂದರೆ ಎಲ್ಲದರ ಮೌಲ್ಯ ಕಳೆದುಕೊಳ್ಳುತ್ತಿರುವ ಸಮಯದಲ್ಲಿ ನಾವಿದ್ದೇವೆ ಎಂದು ತಿಳಿಸಿದರು.
    ಸುಬ್ಬಣ ಅವರ ಕಾಲಕ್ಕೆ ಸಾಹಿತ್ಯದಲ್ಲಿ ಅಡಿಗರ ನವ್ಯ ಪ್ರಖರವಾಗಿತ್ತು. ಸರಿ ಸುಮಾರು ಅದೇ ಕಾಲಕ್ಕೆ ಸಿದ್ದಲಿಂಗಯ್ಯ ಅವರ ಬಂಡಾಯ ಕಾವ್ಯವೂ ಸಾಹಿತ್ಯ ಕ್ಷೇತ್ರದಲ್ಲಿ ಹೊಸ ದಾರಿಯನ್ನು ನಿರ್ಮಿಸುತ್ತಿತ್ತು. ಆದರೆ ಸುಬ್ಬಣ್ಣ ಈ ಎರಡೂ ಪ್ರಕಾರದ ಪ್ರಭಾವಕ್ಕೆ ಒಳಗಾಗದೆ ಬೇರೆಯದೇ ಆದ ಯೋಚನಾ ಕ್ರಮದತ್ತ ನಮ್ಮ ಗಮನ ಸೆಳೆದರು ಎಂದು ಹೇಳಿದರು.
    ಹಿರಿಯ ಅರ್ಥಧಾರಿ ಪ್ರೊ. ಎಂ.ಎಲ್.ಸಾಮಗ, ಉಮಾಮಹೇಶ್ವರ ಹೆಗಡೆ, ಮಂಜುನಾಥ ಗೊರಮನೆ, ರಾಜಾರಾಂ ಮುಂತಾದ ಕಲಾವಿದರಿಂದ ಯಕ್ಷಗಾನ ತಾಳಮದ್ದಳೆ ಪ್ರದರ್ಶನ ನಡೆಯಿತು. ಎಚ್.ಎಸ್.ಗೋಪಾಲಕೃಷ್ಣ, ಪ್ರಭಾಕರ ಸಾಂಶಿ, ಲೀಲಾವತಿ, ರಮೇಶ್, ಚನ್ನಬಸಪ್ಪಗೌಡ, ತಿರುಮಲ ಶರ್ಮಾ, ಸತೀಶ್ ಗೊರಮನೆ ಇತರರಿದ್ದರು.

    ಅಂದೇ ಹೇಳಿದ್ದರು!
    ಸಾಹಿತ್ಯಕ್ಕೆ ಸಾಧನವಾದ ಭಾಷೆಯ ಕುರಿತು ಬಹಳ ಗಂಭೀರವಾಗಿ ಮಾತಾಡಬೇಕಾದ ಅಗತ್ಯದ ಬಗ್ಗೆ ಅಂದೇ ಖಚಿತವಾಗಿ ಕನ್ನಡದ ಮುಗ್ಧ ಭಜನೆ ಎಂಬ ಲೇಖನದ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಕನ್ನಡದ ಬಗ್ಗೆ ಸುಬ್ಬಣ್ಣ ಅಂದು ಹೇಳಿದ ಮಾತು ಈಗ ಸತ್ಯವಾಗುತ್ತಿದೆ. ಕರ್ನಾಟಕದಲ್ಲಿ ಕನ್ನಡದ ಅವಗಣನೆ ಹೆಚ್ಚಾಗುತ್ತಿದೆ ಎಂದು ಪುರುಷೋತ್ತಮ ಬಿಳಿಮಲೆ ಕಳವಳ ವ್ಯಕ್ತಪಡಿಸಿದರು. ಸರ್ಕಾರದ ಅಂಕಿ-ಅಂಶಗಳ ಪ್ರಕಾರ ಭಾರತದ ಭಾಷಾ ಬೆಳವಣಿಗೆ ದರದಲ್ಲಿ ಹಿಂದಿ 66ರಷ್ಟಿದಿದ್ದರೆ, ಕನ್ನಡದ್ದು ಶೇ.3. ಕನ್ನಡದಂಥ ಮುಖ್ಯಭಾಷೆಗೇ ಈ ಗತಿಯಾದರೆ ಇನ್ನು ಕರ್ನಾಟಕದ ಒಳಗಿರುವ ಸಮುದಾಯದ ಭಾಷೆಗಳ ಪರಿಸ್ಥಿತಿ ಹೇಗಿರಬಹುದು. ಕೊರವ ಭಾಷೆಯಂತೂ ಸಂಪೂರ್ಣ ಕಣ್ಮರೆಯಾಗುವ ಹಂತದಲ್ಲಿದೆ. ಇಷ್ಟಾದರೂ ನಮ್ಮ ಸರ್ಕಾರಗಳು ಒಂದು ಸಮಗ್ರ ಭಾಷಾ ನೀತಿ ರೂಪಿಸಲು ಯತ್ನಿಸದಿರುವುದು ದುರಂತ. ಇದು ಭಾಷೆಯ ವಿಚಾರ ಮಾತ್ರವಲ್ಲ, ಬಹುತೇಕ ಎಲ್ಲ ರಂಗಗಳಲ್ಲೂ ಇಂಥದ್ದೇ ಸ್ಥಿತಿ ಇದೆ. ಎಲ್ಲವನ್ನೂ ರಾಜಕಾರಣ ಆವರಿಸಿಕೊಂಡ ಪರಿಣಾಮ ಇದು. ಇದರಿಂದ ಬಿಡುಗಡೆ ಪಡೆಯಲು ನಮಗೆ ಸುಬ್ಬಣ್ಣ ಅವರ ಸಮುದಾಯದ ಜತೆ ಸೇರಿ ಬದುಕನ್ನು ಕಟ್ಟುವ ವ್ಯವಸ್ಥೆಯೊಂದಿಗೆ ಹೋರಾಟವನ್ನು ರೂಪಿಸುವ ಕ್ರಮ ಮಾದರಿಯಾದುದು ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts