More

    ಸತ್ಯ, ಕಾಯಕದ ಮೂಲಕ ಮಾದರಿಯಾದ ಶರಣ ಮಾಚಿದೇವ

    ಶಿವಮೊಗ್ಗ: ಅನುಭವ ಮಂಟಪದಲ್ಲಿ ಶರಣರ ವಸ್ತ್ರ ಮಡಿ ಮಾಡುವ, ಮಲಿನ ಮನಸುಗಳನ್ನು ಮಡಿ ಮಾಡುವ ಕಾಯಕದಲ್ಲಿ ನಿರತರಾಗಿದ್ದ ಮಾಚಿದೇವರು ತಮ್ಮ ಅನೇಕ ವಚನಗಳ ಮೂಲಕ, ಸತ್ಯನಿಷ್ಠೆಯ ಕಾಯಕದ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.

    ಜಿಲ್ಲಾಡಳಿತ ಗುರುವಾರ ಏರ್ಪಡಿಸಿದ್ದ ಮಡಿವಾಳ ಮಾಚಿದೇವ ಜಯಂತಿ ಉದ್ಘಾಟಿಸಿ ಮಾತನಾಡಿ, ಅರಿವಿದ್ದರೆ ಗುರು ಆಗಬಹುದು ಎಂಬುದಕ್ಕೆ ಜ್ವಲಂತ ನಿದರ್ಶನ ಮಡಿವಾಳ ಮಾಚಿದೇವರು ಎಂದು ತಿಳಿಸಿದರು.
    12ನೇ ಶತಮಾನದಲ್ಲಿ ಜಾತಿ ಪದ್ಧತಿ, ಅಸಮಾನತೆ ಪೆಡಂಭೂತದಂತಿತ್ತು. ದಾರ್ಶನಿಕರ, ಶರಣರ ಪ್ರಯತ್ನದ ಫಲವಾಗಿ ನಾವಿಂದು ಸಾಮರಸ್ಯ ಸಾಧಿಸುವಲ್ಲಿ ಯಶಸ್ವಿಯಾಗಿದ್ದೇವೆ. ಸನ್ನಡತೆ, ಉತ್ತಮ ವ್ಯಕ್ತಿತ್ವದಿಂದ ವ್ಯಕ್ತಿ ಮಾನ್ಯನಾಗುತ್ತಾನೆ. ಮಾಚಿದೇವರ ಸನ್ನಡತೆಯಿಂದ ಬಿಜ್ಜಳ ಮಹಾರಾಜರೇ ಮಾಚಿದೇವರ ಮನೆಗೆ ಬರುತ್ತಾರೆ. ಎಷ್ಟೇ ಕಷ್ಟವಾದರೂ ನುಡಿದಂತೆ ನಡೆದ ಶ್ರೇಷ್ಠ ಪರಂಪರೆ ಮಾಚಿದೇವರದ್ದು. ಅಕ್ಕಮಹಾದೇವಿ ಸಹ ಮಾಚಿದೇವರನ್ನು ತಂದೆ ಎನ್ನುತ್ತಿದ್ದರು. ಇದು ಶರಣ ಸಂಸ್ಕೃತಿಗೆ ನಿದರ್ಶನವಾಗಿದೆ ಎಂದರು.
    ಶಾಸಕಿ ಶಾರದಾ ಪೂರ‌್ಯಾನಾಯ್ಕಾ ಮಾತನಾಡಿ, ಮಡಿ ಬಟ್ಟೆಗಳನ್ನು ಗಂಟೆ ಬಾರಿಸುತ್ತಾ ತಲೆ ಮೇಲೆ ಹೊತ್ತು ತರುವ ಮೂಲಕ ಅತ್ಯಂತ ಶ್ರದ್ಧೆಯಿಂದ, ಬಟ್ಟೆ ಒಗೆಯುವುದನ್ನೇ ಶ್ರೇಷ್ಠ ಕಾಯಕವೆಂದು ಮಾಚಿದೇವರು ಮಾಡುತ್ತಿದ್ದರು ಎಂದು ತಿಳಿಸಿದರು.
    ಮಡಿವಾಳ ಸಮಾಜ ಸಂಘದ ಜಿಲ್ಲಾಧ್ಯಕ್ಷ ಎಚ್.ಎಸ್.ಸದಾಶಿವಪ್ಪ ಮಾತನಾಡಿ, ಶೂದ್ರರಿಗೆ ವಿದ್ಯೆ ಸಿಗುವುದು ಕಷ್ಟವಾಗಿದ್ದ ಕಾಲದಲ್ಲಿ ಕ್ರಾಂತಿಕಾರಿ ಗುಣದ ಗುರುಗಳಾದ ಮಲ್ಲಿಕಾರ್ಜುನಯ್ಯ ಅವರ ಬಳಿ ಮಾಚಿದೇವರು ವಿದ್ಯೆ ಪಡೆದು, ಮುಂದೆ ಕಲ್ಯಾಣದ ಅನುಭವ ಮಂಟಪದಲ್ಲಿ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಒದಗಿಸುವ ಕ್ರಾಂತಿಯಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದರು ಎಂದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಉಮೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts