More

    ಬೆಲೆ ಕಟ್ಟಲಾಗದ ಕುವೆಂಪು ಸಾಹಿತ್ಯ; ಗ್ರೀನ್ ಆಸ್ಕರ್ ಪುರಸ್ಕೃತ ಸೇನಾನಿ ಬಣ್ಣನೆ

    ಶಿವಮೊಗ್ಗ: ರಾಷ್ಟ್ರಕವಿ ಕುವೆಂಪು ಅವರ ಕವನ ಮತ್ತು ಸಾಹಿತ್ಯಕ್ಕೆ ಎಷ್ಟೇ ದಶಕಗಳು ಗತಿಸಿದರೂ ಬೆಲೆ ಕಟ್ಟಲಾಗದು ಎಂದು ಪರಿಸರ ತಜ್ಞ, ಗ್ರೀನ್ ಆಸ್ಕರ್ ಪ್ರಶಸ್ತಿ ಪುರಸ್ಕೃತ ಸೇನಾನಿ ಹೇಳಿದರು.
    ಸಹ್ಯಾದ್ರಿ ಕಲಾ ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ಕುವೆಂಪು: ನಾಡು ನುಡಿಯ ರೂಪಕ ಕುರಿತು ಕುವೆಂಪು ವಿಶ್ವವಿದ್ಯಾಲಯ, ಸಹ್ಯಾದ್ರಿ ಕಲಾ ಕಾಲೇಜು, ಭಾಷಾಶಾಸ್ತ್ರ ಮತ್ತು ಪಿಜಿ ಇಂಗ್ಲಿಷ್ ವಿಭಾಗಗಳು ಹಾಗೂ ಶಿವಮೊಗ್ಗ ಕಡೆಕೊಪ್ಪಲು ಪ್ರತಿಷ್ಠಾನದಿಂದ ಆಯೋಜಿಸಿರುವ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
    ಮಲೆನಾಡಿನ ತಪ್ಪಲಿನಲ್ಲೇ ಬೆಳೆದ ಕಾರಣ ಕುವೆಂಪು ಅವರು ಪರಿಸರದ ಅರ್ಥಕೋಶದೊಳಗೆ ಗಾಢವಾಗಿ ಇಳಿದಿದ್ದರು. ಕುವೆಂಪು ಅವರಿಗೇ ತಿಳಿಯದಂತೆ ಚೌರಿಕರು ಸೇರಿದಂತೆ ಅವರ ಮನೆಗೆ ನಿತ್ಯ ಬರುತ್ತಿದ್ದ ಕೆಲಸಗಾರರು, ಪರಿಚಯಸ್ಥರಿಂದ ಅವರ ಬದುಕನ್ನು ಕಟ್ಟಿಕೊಡುವ ಪ್ರಯತ್ನ ಮಾಡಿದ್ದೇವು ಎಂದರು.
    ಕುವೆಂಪು ಅವರ ಬದುಕು ಪರಿಸರದೊಂದಿಗೆ ಬೆಸೆದುಕೊಂಡಿತ್ತು. ಮುಪ್ಪಿನ ಕಾಲದಲ್ಲೂ ಕೇವಲ ಶಬ್ಧ ಕೇಳಿಸಿಕೊಂಡೇ ಪಕ್ಷಿ (ಬಂದಳಿಕೆ ಪಕ್ಷಿ)ಯಾವುದೆಂದು ಗುರುತಿಸುವ ಶಕ್ತಿ ಅವರಲ್ಲಿತ್ತು. 30 ವರ್ಷಗಳ ಹಿಂದೆ ಅವರ ಅನುಮತಿ ಪಡೆದು ಅವರ ಫೋಟೋಗ್ರಫಿ ಮಾಡಿದ್ದೆವು. ಅವರೊಂದಿಗೆ ಕಳೆದ ಕೆಲ ದಿನಗಳು ಅವಿಸ್ಮರಣೀಯ ಕ್ಷಣಗಳಾಗಿ ನಮ್ಮ ಬದುಕಿನಲ್ಲಿ ಉಳಿದುಕೊಂಡಿವೆ ಎಂದು ಹೇಳಿದರು.
    ಪ್ರಸ್ತಾವಿಕವಾಗಿ ಮಾತನಾಡಿದ ಭಾಷಾಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಮೇಟಿ ಮಲ್ಲಿಕಾರ್ಜುನ, ಕುವೆಂಪು ಅವರ ನಾಡು, ನುಡಿ ಕೇವಲ ಪರಿಕಲ್ಪನೆಯಲ್ಲ, ಬದುಕಾಗಿದೆ. ಬಿಕ್ಕಟ್ಟನ್ನು ಎದುರಿಸುತ್ತಲೇ ಬಂದಿದ್ದು ಬಿಕ್ಕಟ್ಟಿನ ಪರಂಪರೆ ದೊಡ್ಡದಾಗಿದೆ. ಅದನ್ನು ಶಮನಗೊಳಿಸಲು ಸಾಹಿತ್ಯವೇ ಸನ್ಮಾರ್ಗ ಎಂದರು.
    ಕುವೆಂಪು ಅವರು ಕನ್ನಡ ನಾಡು-ನುಡಿಯನ್ನು ಪ್ರಭಾವಿಸಿದ್ದು, ಒಂದು ಶತಮಾನದ ಅವಧಿಯಲ್ಲಿ ಸಾಹಿತ್ಯ, ಚಿಂತನೆಗಳಿಂದ ಹಲವರು ಪ್ರಭಾವಿತರಾಗಿದ್ದಾರೆ. ಕುವೆಂಪು ಅವರ ಕಾವ್ಯ, ಕಾವ್ಯದ ಮೌಲ್ಯಗಳನ್ನು ತಿಳಿಯಲು ವಿಚಾರ ಸಂಕಿರಣದಲ್ಲಿ ಹಲವು ಗೋಷ್ಠಿಗಳನ್ನು ಆಯೋಜಿಸಲಾಗಿದೆ ಎಂದು ಹೇಳಿದರು.
    ಗ್ರೀನ್ ಆಸ್ಕರ್ ಪ್ರಶಸ್ತಿ ಪುರಸ್ಕೃತ ಕೃಪಾಕರ, ಪಿಜಿ ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಪ್ರೊ. ಟಿ.ಅವಿನಾಶ್, ಕಡೆಕೊಪ್ಪಲು ಪ್ರತಿಷ್ಠಾನದ ಲಕ್ಷ್ಮೀನಾರಾಯಣ ರಾವ್, ಉಪನ್ಯಾಸಕ ಜಿ.ಆರ್.ಲವ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts