More

    ಯುವಜನತೆ ಆಗಬೇಕಿದೆ ದೇಶದ ಆಸ್ತಿ: ಜಿಲ್ಲಾಧಿಕಾರಿ ಸೆಲ್ವಮಣಿ

    ಶಿವಮೊಗ್ಗ: ಯುವಜನತೆ ದುಶ್ಚಟಗಳಿಂದ ದೂರ ಉಳಿದು ದೇಶಕ್ಕೆ ಆಸ್ತಿ ಆಗಬೇಕಿದೆ. ಅದು ಸಾಧ್ಯವಾಗಬೇಕಾದರೆ ಪ್ರತಿಯೊಬ್ಬರೂ ಸ್ವಾಮಿ ವಿವೇಕಾನಂದರ ಚಿಂತನೆಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುನ್ನೆಡೆಯಬೇಕಿದೆ ಎಂದು ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಹೇಳಿದರು.
    ಕುವೆಂಪು ರಂಗಮಂದಿರದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರೂ ಯುವ ಕೇಂದ್ರ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆ ಅಂಗವಾಗಿ ರಾಷ್ಟ್ರೀಯ ಯುವ ದಿನ ಹಾಗೂ ಯುವ ಸಪ್ತಾಹ ಉದ್ಘಾಟಿಸಿ ಅವರು ಮಾತನಾಡಿದರು.
    ಒಳ್ಳೆಯ ಸಮುದಾಯದ ಸೃಷ್ಟಿಗೆ ಯುವಜನತೆ ಕೈಜೋಡಿಸಬೇಕು. ಶಾಲಾ-ಕಾಲೇಜು ಹಂತದಲ್ಲೇ ತಪ್ಪು ದಾರಿ ಹಿಡಿಯದೇ ಸಮಾಜಕ್ಕೆ ದಾರಿದೀಪವಾಗಬೇಕು. ಬಾಲ್ಯದಿಂದಲೇ ಸ್ವಾಮಿ ವಿವೇಕಾನಂದರ ಚಿಂತನೆಗಳನ್ನು ಅಳವಡಿಸಿಕೊಂಡು ಅವರ ಮಾರ್ಗದರ್ಶನದಲ್ಲಿ ನಡೆದರೆ ಬದುಕು ಉನ್ನತಿಯತ್ತ ಸಾಗಲಿದೆ ಎಂದು ಹೇಳಿದರು.
    ಅತಿ ಹೆಚ್ಚು ಯುವಜನತೆಯನ್ನು ಹೊಂದಿದ ಯುವಕರ ದೇಶ ನಮ್ಮದು ಹಾಗೂ ಜನಸಂಖ್ಯೆಯಲ್ಲಿ ಎರಡನೇ ದೊಡ್ಡ ರಾಷ್ಟ್ರ. ಇಂತಹ ಯುವ ರಾಷ್ಟ್ರದಲ್ಲಿ ಯುವಜನತೆಯ ಜವಾಬ್ದಾರಿ ಹೆಚ್ಚಿದೆ. ಸಾಕ್ಷರತೆ ಹೆಚ್ಚುತ್ತಿದ್ದು ಮತ್ತಷ್ಟು ಹೆಚ್ಚಬೇಕು ಮತ್ತು ಶಿಕ್ಷಣದೊಂದಿಗೆ ಕೌಶಲವನ್ನೂ ಅಭಿವೃದ್ಧಿಪಡಿಸಬೇಕು. ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನೇಕ ಯೋಜನೆಗಳನ್ನು ರೂಪಿಸಿ, ಕೌಶಲ್ಯ ಅಭಿವೃದ್ಧಿಪಡಿಸುತ್ತಿದ್ದು, ಇದರ ಸದುಪಯೋಗವನ್ನು ಪಡೆಯಬೇಕು ಎಂದು ಸಲಹೆ ನೀಡಿದರು.
    ಕಲ್ಲಗಂಗೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀ ವಿನಯಾನಂದ ಸರಸ್ವತಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಾನಗರ ಪಾಲಿಕೆ ಆಡಳಿತ ಪಕ್ಷದ ನಾಯಕ ಎಸ್.ಎನ್.ಚನ್ನಬಸಪ್ಪ, ಜಿಪಂ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಉಮೇಶ್, ಎನ್‌ಇಎಸ್‌ನ ನಿರ್ದೇಶಕ ಅಶ್ವತ್ಥನಾರಾಯಣ್ ಶೆಟ್ಟಿ, ಕುವೆಂಪು ವಿವಿ ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ. ನಾಗರಾಜ ಪರಿಸರ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts