More

    ಕುಸಿದ ರೇಷ್ಮೆ ಉತ್ಪಾದನೆ, ಹೆಚ್ಚಿದ ಬೇಡಿಕೆ, ಬೆಳೆಗಾರರಿಗೆ ಸಂಭ್ರಮ

    ರಾಮನಗರ: ಬೆಲೆ ಕುಸಿತದ ನೋವಿನಲ್ಲಿಯೇ ಮಾರುಕಟ್ಟೆಯಿಂದ ಮನೆ ಕಡೆಗೆ ಹೆಜ್ಜೆ ಹಾಕುತ್ತಿದ್ದ ರೇಷ್ಮೆ ಬೆಳೆಗಾರರಿಗೆ ಈಗ ಸಂಭ್ರಮದ ದಿನಗಳು. ಒಂದೆಡೆ ಕುಸಿದ ಉತ್ಪಾದನೆ ಮತ್ತು ಹೆಚ್ಚಿದ ಬೇಡಿಕೆ ಪರಿಣಾಮ ಧಾರಣೆಯಲ್ಲಿ ಭಾರೀ ಏರಿಕೆಯಾಗಿದೆ.

    ರಾಮನಗರ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಸಾಮಾನ್ಯವಾಗಿ ಪ್ರತಿದಿನ ಸರಾಸರಿ 40-45 ಟನ್ ಗೂಡು ಆವಕ ಆಗುತ್ತದೆ. ಆದರೆ, 4 ತಿಂಗಳಿಂದಲೂ ಆವಕದ ಪ್ರಮಾಣ ಸಂಪೂರ್ಣ ಕುಸಿದಿದೆ. ಪ್ರಸ್ತುತ ಪ್ರತಿದಿನ 20-25 ಟನ್ ಹೆಚ್ಚೆಂದರೆ 30 ಟನ್ ಗೂಡು ಬರುತ್ತಿದೆ. ಇದರಿಂದಾಗಿ ಧಾರಣೆಯಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದೆ. ವಾರದಿಂದೀಚೆಗೆ ಮಿಶ್ರ ತಳಿ ಗೂಡಿನ ಸರಾಸರಿ ಆವಕ 10 ಟನ್ ಇದ್ದರೆ, ದ್ವಿತಳಿ ಗೂಡಿನ ಆವಕ 18-20 ಟನ್ ಇದೆ.

    ರೋಗ ಕಾರಣ: ಗೂಡು ಉತ್ಪಾದನೆ ಕುಂಠಿತವಾಗಿರುವ ಹಿಂದೆ ವಾತಾವರಣದಲ್ಲಾದ ಬದಲಾವಣೆ, ಮಳೆಯ ಕಣ್ಣಾಮುಚ್ಚಾಲೆ ಮತ್ತು ರೋಗಗಳು ಕಾರಣ ಎನ್ನುವುದು ರೇಷ್ಮೆ ಇಲಾಖೆ ಅಧಿಕಾರಿಗಳ ಮಾತು. ಮಳೆಗಾಲದಲ್ಲಿ ಒಮ್ಮೆ ಸಂಪೂರ್ಣವಾಗಿ ಕೈಕೊಟ್ಟಿದ್ದ ಮಳೆರಾಯ ನಂತರ ಹೆಚ್ಚಿನ ಪ್ರಮಾಣದಲ್ಲಿ ಸುರಿದು ಹದ ತಪ್ಪುವಂತೆ ಮಾಡಿದ್ದ. ಇದಾದ ನಂತರ ತೋಟಗಳಿಗೆ ನುಸಿ ಪೀಡೆ ಒಂದೆಡೆಯಾದರೆ, ಎಲೆ ತಿನ್ನುವ ಹುಳುಗಳ ಬಾಧೆ ಉತ್ಪಾದನೆ ಕಡಿಮೆ ಆಗಲು ಕಾರಣವಾಗಿದೆ.

    ಹೆಚ್ಚಿದ ಬೆಲೆ: ಉತ್ಪಾದನಾ ವೆಚ್ಚದ ಅರ್ಧ ಭಾಗವೂ ಹಣ ದೊರೆಯದೆ ಗೂಡನ್ನು ಬೀದಿಗೆ ಬಿಸಾಡುತ್ತಿದ್ದ ರೈತರ ಮೊಗದಲ್ಲೀಗ ಸಂತಸ ಮನೆ ಮಾಡಿದೆ. ಕಳೆದ ವಾರದ ಧಾರಣೆ ಗಮನಿಸಿದಾಗ ಪ್ರತಿದಿನ ಮಿಶ್ರ ಮತ್ತು ದ್ವಿತಳಿ ಗೂಡಿನ ಬೆಲೆಯಲ್ಲಿ ಹಂತ ಹಂತವಾಗಿ ಹೆಚ್ಚಳ ಕಾಣುತ್ತಲೇ ಇದೆ. ವರ್ಷದಿಂದಲೂ 300-400 ರೂ.ಆಸುಪಾಸಿನಲ್ಲಿಯೇ ಗೂಡು ಮಾರಾಟ ಮಾಡುತ್ತಿದ್ದ ರೈತರು ಈಗ ಪ್ರತಿ ಕೆ.ಜಿ.ಗೂಡಿಗೆ 480-700 ರೂ.ವರೆಗೂ ಪಡೆಯುತ್ತಿದ್ದಾರೆ.

    ನೂಲಿನ ಬೆಲೆಯೂ ಹೆಚ್ಚಳ: ರೇಷ್ಮೆ ಆವಕ ಕಡಿಮೆ ಆಗಿರುವ ಪರಿಣಾಮ ನೂಲಿಗೂ ಬೆಲೆ ಹೆಚ್ಚಳವಾಗುತ್ತಿದ್ದು, ರೀಲರ್‌ಗಳೂ ಖುಷಿಪಡುವಂತೆ ಆಗಿದೆ. ರಾಮನಗರದಲ್ಲಿ ಪ್ರತಿದಿನ ಸರಾಸರಿ 800-1000 ಕೆ.ಜಿ.ರೇಷ್ಮೆ ನೂಲು ಮಾರಾಟವಾಗುತ್ತಿತ್ತು. ಇದೀಗ ನೂಲು ಉತ್ಪಾದನೆಯೂ ಕುಂಠಿತವಾಗಿದ್ದು, ಪ್ರತಿ ಕೆ.ಜಿ. ರೇಷ್ಮೆ ನೂಲಿಗೆ 500-600 ರೂ. ಹೆಚ್ಚಳವಾಗಿದೆ. ಇದು ರೈತರಂತೆ ರೀಲರ್‌ಗಳು ಖುಷಿ ಪಡುವಂತೆ ಆಗಿದೆ.

    ಕರೊನಾ ಎಫೆಕ್ಟ್?: ರೇಷ್ಮೆ ಧಾರಣೆ ಜಿಗಿತದ ಹಿಂದೆ ಚೀನಾದಲ್ಲಿ ವ್ಯಾಪಿಸಿರುವ ಕರೊನಾ ವೈರಸ್ ಕಾರಣ ಎನ್ನುವ ಮಾತುಗಳು ಮಾರುಕಟ್ಟೆ ವಲಯದಲ್ಲಿ ಕೇಳಿ ಬಂದಿದೆ. ರೇಷ್ಮೆ ನೂಲನ್ನು ಹೆಚ್ಚಿನ ಪ್ರಮಾಣದಲ್ಲಿ ಭಾರತಕ್ಕೆ ರಫ್ತು ಮಾಡುತ್ತಿದ್ದ ಚೀನಾದಲ್ಲಿ ಈಗ ರೇಷ್ಮೆ ಉತ್ಪಾದನೆ ಕುಸಿದ ಪರಿಣಾಮ, ರಫ್ತು ಕುಸಿದಿದೆ. ಇದರಿಂದಾಗಿ ದೇಶೀಯವಾಗಿ ಉತ್ಪಾದನೆ ಆಗುವ ಗೂಡಿನ ಬೇಡಿಕೆ ಹೆಚ್ಚಿ ಸ್ವಾಭಾವಿಕವಾಗಿ ಬೆಲೆ ಹೆಚ್ಚಳವಾಗುವಂತೆ ಮಾಡಿದೆ ಎನ್ನುವ ಮಾತುಗಳೂ ಇವೆ. ಆದರೆ, ಅಧಿಕಾರಿಗಳು ಇದನ್ನು ಅಲ್ಲಗಳೆದಿದ್ದು, ನಮ್ಮಲ್ಲಿನ ಉತ್ಪಾದನೆ ಕುಸಿತ ರೇಷ್ಮೆ ಧಾರಣೆ ಹೆಚ್ಚಲು ಕಾರಣ ಎನ್ನುತ್ತಾರೆ.

    ಕರೊನಾ ವೈರಸ್‌ನಿಂದ ಬೆಲೆ ಹೆಚ್ಚಳವಾಗಿದೆ ಎನ್ನುವುದು ಒಂದು ಭಾಗವಾದರೆ, ನಮ್ಮಲ್ಲಿಯೇ ಉತ್ಪಾದನೆ ಕುಸಿದಿರುವುದು ಬೆಲೆ ಹೆಚ್ಚಳಕ್ಕೆ ಪ್ರಮುಖ ಕಾರಣ.
    – ಕೆ.ರವಿ ರೇಷ್ಮೆ ಬೆಳೆಗಾರ, ರಾಮನಗರ

    ಮಾರುಕಟ್ಟೆಗೆ ಬರುತ್ತಿದ್ದ ಗೂಡಿನ ಪ್ರಮಾಣದಲ್ಲಿ ಶೇ.50 ಇಳಿಕೆಯಾಗಿದೆ. ಇದು ಸ್ವಾಭಾವಿಕವಾಗಿ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ.
    – ಮುನ್ಸಿಬಸಯ್ಯ ಉಪನಿರ್ದೇಶಕರು, ರೇಷ್ಮೆ ಮಾರುಕಟ್ಟೆ, ರಾಮನಗರ

    ಪ್ರತಿ ಕೆ.ಜಿ. ನೂಲಿಗೆ 500-600 ರೂ. ಹೆಚ್ಚಳವಾಗಿದೆ. ಚೀನಾದಲ್ಲಿ ಉಂಟಾಗಿರುವ ರೋಗದಿಂದ ಅಲ್ಲಿಂದ ಬರುವ ನೂಲಿನ ಪ್ರಮಾಣ ಇಳಿಕೆಯಾಗಿದೆ. ಇದರಿಂದಾಗಿ ಬೆಲೆ ಹೆಚ್ಚಳವಾಗಿರಬಹುದು.
    -ಸಯದ್ ಜಿಯಾವುಲ್ಲಾ ರೀಲರ್, ರಾಮನಗರ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts