More

    ಎಲ್ಲ ಪಕ್ಷಗಳಲ್ಲಿದೆ ಅಪ್ಪ-ಮಕ್ಕಳ ರಾಜಕಾರಣ: ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿಕೆ

    ಕುಷ್ಟಗಿ: ಪ್ರಧಾನಮಂತ್ರಿ ನರೇಂದ್ರ ಮೋದಿಗೂ ಕರ್ನಾಟಕಕ್ಕೂ ಸಂಬಂಧವಿಲ್ಲ. ಬಸವಣ್ಣ, ಕುವೆಂಪು, ಸಂಗೊಳ್ಳಿ ರಾಯಣ್ಣ, ಕನಕದಾಸ, ಸೂಫಿ ಸಂತರ ನಾಡಿನಲ್ಲಿ ಕನ್ನಡಿಗರೇ ಸಾರ್ವಭೌಮರು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿದರು.

    ಮಾಜಿ ಶಾಸಕ ಹಸನಸಾಬ್ ದೋಟಿಹಾಳ ಪುತ್ರನ ಮದುವೆ ಕಾರ್ಯಕ್ರಮಕ್ಕಾಗಿ ಪಟ್ಟಣಕ್ಕೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಮೋದಿ ವರ್ಚಸ್ಸಿನ ಮೇಲೆ ಸಂಸದರು ಆಯ್ಕೆಯಾಗಿರಬಹುದು. ಆದರೆ, ಅವರ ಪ್ರಭಾವ ವಿಧಾನಸಭೆ ಚುನಾವಣೆ ಮೇಲೆ ಬೀರುವುದಿಲ್ಲ. ಎರಡೂ ಪಕ್ಷಗಳ ದುರಾಡಳಿತ ಕಂಡಿರುವ ರಾಜ್ಯದ ಜನತೆ ಈ ಬಾರಿ ಜೆಡಿಎಸ್‌ಗೆ ಬಹುಮತ ನೀಡಲಿದ್ದಾರೆ. ಲಿಂಗಾಯತರು ಯಡಿಯೂರಪ್ಪರನ್ನು, ಕುರುಬರು ಸಿದ್ದರಾಮಯ್ಯರನ್ನು ಒಪ್ಪಿದಂತೆ ರಾಜ್ಯದಲ್ಲಿರುವ 1.30 ಕೋಟಿ ಮುಸ್ಲಿಮರು ಸಿ.ಎಂ.ಇಬ್ರಾಹಿಂರನ್ನು ಒಪ್ಪಬಾರದೇಕೆ ? 1994ರಲ್ಲಿ ಪಕ್ಷಕ್ಕೆ ಕಾಲಿಟ್ಟಾಗ ಜನತಾ ದಳದ ಸರ್ಕಾರಕ್ಕೆ ಕಾಲ ಕೂಡಿ ಬಂದಿತ್ತು. ಈಗಲೂ ಅದೇ ಆಗಲಿದೆ ಎಂದರು.

    ಕುಟುಂಬ ರಾಜಕಾರಣದ ಬಗ್ಗೆ ಮಾತನಾಡಿದ ಇಬ್ರಾಹಿಂ, ಕಾಂಗ್ರೆಸ್‌ನಲ್ಲಿ ನೆಹರುರಿಂದ ರಾಹುಲ್ ಗಾಂಧಿವರೆಗೆ, ಬಿಜೆಪಿಯಲ್ಲಿ ಬಿ.ಎಸ್.ಯಡಿಯೂರಪ್ಪ ಹಾಗೂ ಪುತ್ರ.. ಹೀಗೆ ಎಲ್ಲ ಪಕ್ಷದಲ್ಲಿಯೂ ಅಪ್ಪ-ಮಕ್ಕಳ ರಾಜಕಾರಣ ನಡೆಯುತ್ತಿದೆ. ಮುಲಾಯಂಸಿಂಗ್ ಯಾದವ್‌ಗೂ ಮಕ್ಕಳಿದ್ದಾರೆ. ಲಾಲೂಪ್ರಸಾದ್ ಯಾದವ್‌ಗೂ ಇದ್ದಾರೆ ಎಂದರು.

    ಸಂಸದ ಸಂಗಣ್ಣ ಕರಡಿ ಜನತಾ ದಳದ ಹಳೆಯ ಗಿರಾಕಿ. ಅವರು ಪಕ್ಷಕ್ಕೆ ಬರುತ್ತಾರೆಂದರೆ ಶುದ್ಧ ಮನಸ್ಸಿನಿಂದ ಸ್ವಾಗತಿಸುತ್ತೇನೆ. ಸಿದ್ದರಾಮಯ್ಯಗೆ ಕ್ಷೇತ್ರ ಬಿಟ್ಟುಕೊಡುವುದಾಗಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಪುರ ಬಾಯಿಮಾತಿನಿಂದ ಹೇಳುತ್ತಿದ್ದಾರೆ. ಬಯ್ಯಪುರ ಕಾಂಗ್ರೆಸ್‌ನಲ್ಲಿದ್ದುಕೊಂಡು ಸ್ಪರ್ಧಿಸಿದರೆ ಸೋಲುವುದು ಖಚಿತ. ಕೊಪ್ಪಳದಲ್ಲಿ ಕಾಂಗ್ರೆಸ್, ಗಂಗಾವತಿಯಲ್ಲಿ ಬಿಜೆಪಿ ಅಭ್ಯರ್ಥಿ ಸೋಲುವುದು ನಿಶ್ಚಿತ ಎಂದು ಭವಿಷ್ಯ ನುಡಿದರು.

    ಕಾಂಗ್ರೆಸ್‌ಗೆ 130 ವರ್ಷ ವಯಸ್ಸಾಗಿದೆ. ಹರೆಯದ ಹುಡುಗರಿಗೆ ವಧು ಹುಡುಕಬಹುದು. 60 ವಯಸ್ಸಾದವರಿಗೆ ಹೇಗೆ ಹುಡುಕಬೇಕು. ಬಾದಾಮಿಯಲ್ಲಿ ಮೇಕಪ್ ಮಾಡುವವರು ಇದ್ದ ಕಾರಣಕ್ಕೆ ಮದುವೆ(ಗೆಲುವು)ಯಾಯಿತು. ಈಗ ಯಾರಿದ್ದಾರೆ? 75ನೇ ವಯಸ್ಸಿಗೆ ಕಾಲಿಟ್ಟಿರುವ ಅವರು ನೂರು ಕಾಲ ಸುಖವಾಗಿ ಬಾಳಲಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯರನ್ನು ಲೇವಡಿ ಮಾಡಿದರು. ಪಕ್ಷದ ರಾಜ್ಯ ಕಾರ್ಯದರ್ಶಿ ಸಿ.ಎಂ.ಹಿರೇಮಠ, ಅಲ್ಪ ಸಂಖ್ಯಾತ ಘಟಕದ ರಾಜ್ಯ ಅಧ್ಯಕ್ಷ ಶಂಶುಲ್ ಹಕ್ ಇದ್ದರು.

    ಜಂಗಮರ ಬೇಡಿಕೆ ಈಡೇರಿಸಲಿ
    ಬೇಡ ಜಂಗಮರು ನಡೆಸುತ್ತಿರುವ ಹೋರಾಟ ನ್ಯಾಯಸಮ್ಮತವಾಗಿದೆ. 800 ವರ್ಷಗಳಿಂದ ಬೇಡಿ ತಿಂದು ಜೀವನ ನಡೆಸಿದ ಜಂಗಮರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಬೇಕು. ಸರ್ಕಾರಕ್ಕೆ ಜಂಗಮರ ಸ್ಥಿತಿಗತಿಯ ಅರಿವಿಲ್ಲ. ಹುಸಿ ಭರವಸೆ ನೀಡಿ ಕಾಲಹರಣ ಮಾಡುವ ಬದಲು ಸಮಿತಿ ರಚಿಸಿ ಜಂಗಮರ ಸ್ಥಿತಿಗತಿಯ ಸಮೀಕ್ಷೆ ನಡೆಸಿ ಬೇಡಿಕೆ ಈಡೇರಿಸಬೇಕಿದೆ. ಮೀಸಲಾತಿಗಾಗಿ ಹೋರಾಟ ಮಾಡುತ್ತಿರುವ ವಿವಿಧ ಸಮುದಾಯಗಳ ಬೇಡಿಕೆಗೂ ಸರ್ಕಾರ ಸ್ಪಂದಿಸಬೇಕಿದೆ ಎಂದು ಸಿ.ಎಂ.ಇಬ್ರಾಹಿಂ ಒತ್ತಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts