More

    ಜಿಲ್ಲೆಯಾದ್ಯಂತ ಮುಂದುವರಿದ ಮಳೆ

    ಚಾಮರಾಜನಗರ: ತಮಿಳುನಾಡಿನ ಭಾಗದಲ್ಲಿ ಉಂಟಾಗಿರುವ ಕಡಿಮೆ ಒತ್ತಡಪ್ರದೇಶದ ಪರಿಣಾಮವಾಗಿ ಚಾಮರಾಜನಗರ ಜಿಲ್ಲೆಯಾದ್ಯಂತ ಭರ್ಜರಿ ಮಳೆಯಾಯಿತು.

    ಜಿಲ್ಲೆಯ ಚಾಮರಾಜನಗರ, ಗುಂಡ್ಲುಪೇಟೆ, ಯಳಂದೂರು, ಕೊಳ್ಳೇಗಾಲ ಹಾಗೂ ಹನೂರು ತಾಲೂಕಿನ ವಿವಿಧ ಭಾಗದಲ್ಲಿ ಮಂಗಳವಾರವೂ ಮಳೆ ಮುಂದುವರಿದಿದ್ದು, ಕಳೆದ ವಾರದಿಂದ ನಿರಂರತರವಾಗಿ ಮಳೆ ಸುರಿಯುತ್ತಲೇ ಇದೆ. ಇದರಿಂದಾಗಿ ಪ್ರಮುಖ ರಸ್ತೆಗಳು, ಹಲವು ಕೆರೆ-ಕಟ್ಟೆಗಳು ಮಳೆ ನೀರಿನಿಂದ ತುಂಬಿಹರಿಯಿತು. ಕೆಲವು ತಾಸು ಜೋರಾಗಿ ಸುರಿಯುತ್ತಿದ್ದ ಮಳೆ ಬಳಿಕ ಜಿಟಿಜಿಟಿ ಹಿಡಿದುಕೊಳ್ಳುತ್ತಿತ್ತು. ದಿನವೀಡೀ ಮೋಡಕವಿದ ವಾತಾವರಣ ಹಾಗೂ ನಿರಂತರವಾಗಿ ಬರುತ್ತಲೇ ಇದ್ದ ಮಳೆಯಿಂದಾಗಿ ಸಾರ್ವಜನಿಕರು ಹಾಗೂ ವಾಹನ ಸವಾರರು ಪರದಾಡುವಂತಾಯಿತು.

    ನಗರದಲ್ಲಿ ಬೆಳಿಗ್ಗೆಯಿಂದಲೂ ಮೋಡಕವಿದ ವಾತಾವರಣ ಇತ್ತು. ಮಧ್ಯಾಹ್ನದ ಬಳಿಕ ಜೋರು ಮಳೆ ಪ್ರಾರಂಭವಾಯಿತು. ಪ್ರಮುಖ ರಸ್ತೆಗಳಾದ ದೊಡ್ಡಂಗಡಿ, ಚಿಕ್ಕಂಗಡಿ ಬೀದಿ, ಸಂತೇಮರಹಳ್ಳಿ ವೃತ್ತ, ಡಿವಿಯೇಷನ್ ರಸ್ತೆ, ಗುಂಡ್ಲುಪೇಟೆ ವೃತ್ತ, ಬಿ.ರಾಚಯ್ಯ ಜೋಡಿರಸ್ತೆ ಹಾಗೂ ಇನ್ನಿತರೆ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಮಳೆನೀರು ಹರಿಯುತ್ತಿತ್ತು. ಕೆಲವು ಕಡೆಗಳಲ್ಲಿ ಚರಂಡಿಯ ನೀರು ರಸ್ತೆಗಳಿಗೆ ನುಗ್ಗಿ ಆವಾಂತರ ಸೃಷ್ಟಿ ಮಾಡಿತು. ಶ್ರೀಚಾಮರಾಜೇಶ್ವರ ದೇವಸ್ಥಾನದ ಹಿಂಭಾಗದ ಚರಂಡಿ ನೀರು ರಸ್ತೆಗೆ ಹರಿದು ಬೀದಿಬದಿ ವ್ಯಾಪಾರಿಗಳಿಗೆ ತೊಂದರೆ ಉಂಟಾಯಿತು. ಸಂತೇಮರಹಳ್ಳಿ ಸಮೀಪದಲ್ಲಿರುವ ಶ್ರೀಆಂಜನೇಯಸ್ವಾಮಿ ದೇವಸ್ಥಾನದ ಹಿಂಭಾಗದ ರಸ್ತೆ ಹಾಗೂ ಖಾಲಿಜಾಗದಲ್ಲಿ ಮತ್ತು ಶ್ರೀಭ್ರಮರಾಂಭ ಚಿತ್ರಮಂದಿರದ ಮುಂಭಾಗ ಮಳೆನೀರು ನಿಂತು ಕೆರೆಯಂತಾಗಿತ್ತು. ಹಲವು ರಸ್ತೆಗಳಲ್ಲಿ ಮಳೆ ನೀರು ನಿಂತು ಗುಂಡಿಗಳು ನಿರ್ಮಾಣವಾಗಿ ವಾಹನ ಸವಾರರರು ಪರದಾಡುವಂತಾಯಿತು. ಗ್ರಾಮೀಣ ಪ್ರದೇಶದಲ್ಲೂ ನಿರಂತರವಾಗಿ ಮಳೆಯಾಗಿದ್ದು, ಕೆಲವೆಡೆ ಕೆರೆ-ಕಟ್ಟೆಗಳು ತುಂಬಿ ಹರಿದವು. ಹಲವು ಕಡೆಗಳಲ್ಲಿ ಮಳೆ ನೀರಿನಿಂದ ಜಮೀನುಗಳು ಜಲಾವೃತವಾಗಿದ್ದವು.

    ಜಿಟಿಜಿಟಿ ಮಳೆ ಕಿರಿಕಿರಿ:
    ಕಳೆದ ಎರಡು ದಿನಗಳಿಂದ ಭರ್ಜರಿ ಮಳೆಯ ಜತೆಗೆ ಜಿಟಿಜಿಟಿ ಮಳೆಯಾಗುತ್ತಿದ್ದು, ಸಾರ್ವಜನಿಕರು, ಬೀದಿಬದಿ ವ್ಯಾಪಾರಿಗಳು ಕಿರಿಕಿರಿ ಅನುಭವಿಸಿದರು. ನಗರದಲ್ಲಿ ಮಧ್ಯಾಹ್ನದ ಬಳಿಕ ನಿರಂತರವಾಗಿ ಬಿಟ್ಟು ಬಿಟ್ಟು ಬರುತ್ತಿದ್ದ ಮಳೆಗೆ ಸಾರ್ವಜನಿಕರು, ವಿದ್ಯಾರ್ಥಿಗಳು ತೊಂದರೆ ಅನುಭವಿಸಿದರು. ವಿವಿಧ ಅಂಗಡಿ ಮುಂಗಟ್ಟುಗಳು ಹಾಗೂ ಬಸ್‌ನಿಲ್ದಾಣಗಳಲ್ಲಿ ಹೆಚ್ಚಿನ ಜನರು ಮಳೆಯಿಂದ ರಕ್ಷಣೆ ಪಡೆಯುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿತ್ತು. ಹೆಚ್ಚಿನ ಜನರು ಛತ್ರಿಗಳ ಮೊರೆ ಹೋದರೆ, ಸಾಕಷ್ಟುಜನರು ಜಿಟಿಮಳೆಯಲ್ಲಿ ನೆನೆದುಕೊಂಡು ಸಾಗುತ್ತಿದ್ದರು. ಬೀದಿಬದಿಯ ವ್ಯಾಪಾರಿಗಳು ಪ್ಲಾಸ್ಟಿಕ್ ರಕ್ಷಣೆ ಪಡೆದುಕೊಂಡಿದ್ದರು. ಆದರೆ ಜೋರು ಮಳೆಯಾದಾಗ ಕೆಲವರು ತೊಂದರೆ ಅನುಭವಿಸಿದರು. ಇದರಿಂದ ನಿತ್ಯದ ವ್ಯಾಪಾರ ವಹಿವಾಟಿಗೂ ಸಮಸ್ಯೆಯಾಯಿತು. ನಿರಂತರ ಮಳೆಯಿಂದಾಗಿ ಪ್ರಮುಖ ರಸ್ತೆಗಳಲ್ಲಿ ಜನರ ಓಡಾಟ ಕಡಿಮೆಯಾಗಿತ್ತು.

    ರಾಷ್ಟ್ರೀಯ ಹೆದ್ದಾರಿಯಲ್ಲಿ ಮಳೆನೀರು:
    ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹಲವೆಡೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ಹರಿದು ಕೆಲವು ಸಮಯ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ನಗರದ ಸತ್ತಿ ರಸ್ತೆ, ಬೇವಿನತಾಳಪುರದ ಸಮೀಪದ ರಸ್ತೆಯಲ್ಲಿ ಮಳೆ ನೀರು ಹೆಚ್ಚಾಗಿ ಹರಿಯಿತು. ಈ ರಸ್ತೆಯ ಸಮೀಪದಲ್ಲೇ ಕಾಲುವೆ ಇದ್ದು, ಮಳೆ ನೀರಿನಿಂದ ಕಾಲುವೆ ತುಂಬಿ ರಸ್ತೆಗೆ ನೀರು ಹರಿಯಿತು. ಸಂತೇಮರಹಳ್ಳಿ ರಸ್ತೆಯಲ್ಲಿ ಚರಂಡಿ ನೀರು ರಾಷ್ಟ್ರೀಯ ಹೆದ್ದಾರಿಯಲ್ಲಿ ಹರಿದು ವಾಹನ ಸಂಚಾರಕ್ಕೆ ತೊಂದರೆತಯಾಯಿತು. ಹರದನಹಳ್ಳಿ, ವೆಂಕಟಯ್ಯನಛತ್ರ ಮತ್ತು ಅಮಚವಾಡಿ ರಸ್ತೆ ಮಾರ್ಗದಲ್ಲಿ ಇರುವ ಹೆಬ್ಬಾಳ ಸಂಪೂರ್ಣ ಮುಳುಗಡೆಯಾಗಿ ನೀರು ಹರಿಯಿತು. ಕೆಲವು ಕಡೆಗಳಲ್ಲಿ ಸಣ್ಣ-ಪುಟ್ಟ ಕಾಲುವೆಗಳು, ಕೆರೆ-ಕಟ್ಟೆಗಳು ತುಂಬಿ ಹರಿಯಿತು. ಸಿದ್ದಯ್ಯನಪುರ ಸಮೀಪದ ಹಲವು ಕಾಲುವೆಗಳು ಮಳೆಯಿಂದಾಗಿ ತುಂಬಿಹರಿಯುತ್ತಿತ್ತು. ಕುಂಭೇಶ್ವರ ದೇವಾಲಯದ ಸಮೀಪ ಹಾದುಹೋಗುವ ಸುವರ್ಣಾವತಿ ನದಿಯಲ್ಲಿ ಅರ್ಧದಷ್ಟು ನೀರು ಹರಿಯುತ್ತಿತ್ತು. ಬಹುತೇಕ ರೈತರ ತೋಟ ಹಾಗೂ ಜಮೀನುಗಳಲ್ಲಿ ಮಳೆನೀರು ನಿಂತಿರುವುದು ಕಂಡುಬಂದಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts