More

    ವಡ್ಡಗೆರೆ ಕೆರೆಗೆ ಹರಿಯುತ್ತಿದೆ ಜೀವಜಲ

    ಗುಂಡ್ಲುಪೇಟೆ: ತಾಲೂಕಿನ ರೈತರ ಒತ್ತಾಯಕ್ಕೆ ಮಣಿದ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ವಡ್ಡಗೆರೆ ಕೆರೆಗೆ ಮಂಗಳವಾರ ನೀರು ಹರಿಸುತ್ತಿದ್ದು, ರೈತರು ನಿಟ್ಟುಸಿರು ಬಿಡುತ್ತಿದ್ದಾರೆ.

    ಹುತ್ತೂರು ಕೆರೆಯ ಮುಂದುವರೆದ ಯೋಜನೆಯಡಿ ವಡ್ಡಗೆರೆ ಕೆರೆಯ ಮೂಲಕ ನೆರೆಯ ಕರಕಲಮಾದಹಳ್ಳಿ, ಯರಿಯೂರು, ದಾರಿಬೇಗೂರು, ಕೊಡಸೋಗೆ, ಬೊಮ್ಮಲಾಪುರ, ಶಿವಪುರದ ಕಲ್ಲುಕಟ್ಟೆ ಜಲಾಶಯ, ಪಟ್ಟಣದ ವಿಜಯಪುರ ಅಮಾನಿಕೆರೆ, ಚಿಕ್ಕಕೆರೆ ಹಾಗೂ ನಲ್ಲೂರು ಅಮಾನಿ ಜಲಾಶಯಗಳಿಗೆ ನೀರು ಹರಿಸಲಾಗುತ್ತದೆ. ಕೆಲ ವರ್ಷ ವಡ್ಡಗೆರೆ ಕೆರೆ ಮೂಲಕ ನೀರು ಹರಿಸಿದ್ದರಿಂದ ಈ ಭಾಗದ ಎಲ್ಲ ಕೆರೆಗಳೂ ಕೋಡಿ ಬಿದ್ದು, ಹಳ್ಳಕೊಳ್ಳಗಳು ತುಂಬಿಹರಿದು ಗುಂಡ್ಲು ನದಿಪಾತ್ರದಲ್ಲಿ ನೀರು ಹರಿಯಿತು. ಇದರಿಂದ ಈ ಮಾರ್ಗದಲ್ಲಿ ಅಂತರ್ಜಲ ಮಟ್ಟದಲ್ಲಿ ಏರಿಕೆಯಾಗಿ ಬತ್ತಿಹೋಗಿದ್ದ ಕೊಳವೆ ಬಾವಿಗಳಲ್ಲಿ ನೀರು ಉಕ್ಕಿಬರುವಂತಾಗಿತ್ತು.

    ಆದರೆ ಕಳೆದ ವರ್ಷ ಮಳೆಯ ಕೊರತೆ ಹಾಗೂ ಈ ಬಾರಿಯ ಭೀಕರ ಬರಗಾಲ ಎದುರಾಗಿದ್ದರೂ ಜಿಲ್ಲಾಡಳಿತ ತಾಲೂಕಿನ ಕೆರೆಗಳಿಗೆ ನೀರು ತುಂಬಿಸದಿದ್ದು ರೈತರ ಆಕ್ರೋಶಕ್ಕೆ ಕಾರಣವಾಗಿತ್ತು. ದಿನೇದಿನೆ ಹೆಚ್ಚುತ್ತಿದ್ದ ಬಿಸಿಲಿನ ತಾಪಕ್ಕೆ ಅಂತರ್ಜಲ ಮಟ್ಟ ಕುಸಿತದಿಂದ ಕೊಳವೆ ಬಾವಿಗಳಲ್ಲಿ ನೀರು ಕಡಿಮೆಯಾಗಿ ಬೆಳೆಗಳನ್ನು ಉಳಿಸಿಕೊಳ್ಳುವುದೇ ಸವಲಾಗಿತ್ತು. ಇದರಿಂದ ಕೆರೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಿ ಬೀದಿಗಿಳಿದ ರೈತರು ಪಾದಯಾತ್ರೆ, ಬೈಕ್ ರ‌್ಯಾಲಿ, ಎತ್ತಿನ ಗಾಡಿಗಳ ಮೆರವಣಿಗೆ ಮೂಲಕ ತಾಲೂಕು ಕಚೇರಿಗೆ ಮುತ್ತಿಗೆಹಾಕಿ ಪ್ರತಿಭಟನೆ ನಡೆಸಿದ್ದರು. ಕೆಲ ಗ್ರಾಮಗಳಲ್ಲಿ ಚುನಾವಣಾ ಬಹಿಷ್ಕಾರಕ್ಕೂ ಮುಂದಾಗಿದ್ದರು.

    ಈ ಸಂದರ್ಭದಲ್ಲಿ ಲೋಕಸಭಾ ಚುನಾವಣೆಯ ಮತದಾನ ಮುಗಿದ ಕೂಡಲೇ ನೀರು ಹರಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿ ಮತದಾನ ಬಹಿಷ್ಕಾರ ನಿರ್ಧಾರ ಕೈಬಿಡುವಂತೆ ಮಾಡಿದ್ದರು. ಅದರಂತೆ ಮೇ 2ರಂದು ಹುತ್ತೂರು ಪಂಪ್ ಹೌಸ್ ಮೂಲಕ ವಡ್ಡಗೆರೆ ಕೆರೆಗೆ ನೀರು ಹರಿಸಿದರೂ ಕೆಲವೇ ಗಂಟೆಗಳಲ್ಲಿ ಬಂದ್ ಮಾಡಿದ್ದರು.
    ಸದ್ಯ ಕಳೆದ ಒಂದು ವಾರದಿಂದ ತಾಲೂಕಿನಾದ್ಯಂತ ಎಲ್ಲ ಭಾಗಗಳಲ್ಲೂ ಉತ್ತಮ ಮಳೆಯೂ ಬೀಳುತ್ತಿದೆ. ಜತೆಗೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಮಂಗಳವಾರದಿಂದ ಮತ್ತೆ ವಡ್ಡಗೆರೆ ಕೆರೆಗೆ ನೀರು ಹರಿಸುತ್ತಿದ್ದಾರೆ. ಇದು ಈ ಭಾಗದ ರೈತರ ಸಂತಸಕ್ಕೆ ಕಾರಣವಾಗಿದೆ.

    ತಾಲೂಕನ್ನು ಭೀಕರ ಬರಗಾಲ ಆವರಿಸಿದ್ದರೂ ಕೆರೆಗಳಿಗೆ ನೀರು ತುಂಬಿಸುವ ವಿಷಯದಲ್ಲಿ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ನಿರ್ಲಕ್ಷ್ಯ ತೋರಿಸಿದ್ದರಿಂದ ರೈತರು ಪರಿತಪಿಸುವಂತಾಗಿದೆ. ಸದ್ಯ ಮಳೆಯೂ ಆರಂಭವಾಗಿದ್ದು, ಕಾವೇರಿ ನೀರಾವರಿ ನಿಗಮವು ನದಿಮೂಲದ ನೀರನ್ನು ಎಲ್ಲ ಕೆರೆಗಳಿಗೂ ತುಂಬಿಸಲು ಕ್ರಮಕೈಗೊಳ್ಳಬೇಕು. ತಪ್ಪಿದಲ್ಲಿ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ.
    ಸಂಪತ್ತು
    ರೈತ ಮುಖಂಡರು. ಕುಂದಕೆರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts