More

  ಮಕ್ಕಳಿಗೆ ದಾಸರ ಪದಗಳ ಕಲಿಸಿ ಎಂದು ಅಮೃತೋಪದೇಶ ನೀಡಿದ ಕುಕ್ಕೆ ಸುಬ್ರಹ್ಮಣ್ಯ ಶ್ರೀಗಳು

  ಕುಷ್ಟಗಿ: ದಾಸ ಸಾಹಿತ್ಯಕ್ಕೆ ಆಚಾರ್ಯ ಮಧ್ವರ ಕೊಡುಗೆ ಅಪಾರವಾಗಿದೆ ಎಂದು ಕುಕ್ಕೆಸುಬ್ರಹ್ಮಣ್ಯ ಮಠಾಧೀಶ ಶ್ರೀ ವಿದ್ಯಾಪ್ರಸನ್ನ ತೀರ್ಥರು ಹೇಳಿದರು.

  ಪಟ್ಟಣದ ಅಡವಿರಾಯ ದೇವಸ್ಥಾನ ಆವರಣದಲ್ಲಿ ನಡೆಯುತ್ತಿರುವ ಶ್ರೀ ಮಧ್ವಪುರಂದರೋತ್ಸವದ ಮೂರನೇ ದಿನದ ಕಾರ್ಯಕ್ರಮದಲ್ಲಿ ಅಮೃತೋಪದೇಶ ನೀಡಿದರು. ಪುರಂದರ ದಾಸರು, ಕನಕದಾಸರು ಹೀಗೆ ವಿವಿಧ ದಾಸರುಗಳು ಶ್ರೀ ಮಧ್ವರ ಸಿದ್ಧಾಂತ ಆಶ್ರಯಿಸಿಯೇ ಸಾಹಿತ್ಯ ರಚಿಸಿದ್ದಾರೆ. ಪುರಂದರ ದಾಸರ ಹಾಡುಗಳೆಂದರೆ ಎಲ್ಲ ವರ್ಗದವರಿಗೂ ಪ್ರೀತಿ. ದಾಸರ ಪದಗಳನ್ನು ಮಕ್ಕಳಿಗೆ ಕಲಿಸಬೇಕಿದೆ. ಭವಿಷ್ಯದಲ್ಲಿ ವೇದನೆ, ಭವರೋಗಗಳಿಗೆ ದಿವ್ಯ ಔಷಧವಾಗಿ ಕೆಲಸ ಮಾಡುತ್ತವೆ ಎಂದರು.

  ಬಳಗಾರು ಶ್ರೀಮದಾರ್ಯ ಅಕ್ಷೋಭ್ಯತೀರ್ಥ ಸಂಸ್ಥಾನದ ಮಠಾಧೀಶ ಶ್ರೀ ರಘುಭೂಷಣತೀರ್ಥರು ಅಮೃತೋಪದೇಶ ನೀಡಿ, ಭವಿಷ್ಯದ ಚಿಂತೆ ಮಾಡುವುದರ ಜತೆಗೆ ಭೂತ ಕಾಲದ ಸಿಂಹಾವಲೋಕನ ಮಾಡಿಕೊಳ್ಳಬೇಕು. ಅದರಿಂದ ಜೀವನದ ಹಲವು ಪಾಠ ಕಲಿಯಬಹುದು. ಸುಮಾರು 400ವರ್ಷಗಳ ಹಿಂದೆ ವ್ಯಾಸರಾಜರು, ಶ್ರೀಪಾದರಾಜರು, ಪುರಂದರ ದಾಸರು ಆಚಾರ್ಯರ ಮಾರ್ಗದಲ್ಲಿ ನಡೆದು ತತ್ವಶಾಸ್ತ್ರದಲ್ಲಿ ಹಲವು ಗ್ರಂಥ ರಚಿಸಿದ್ದಾರೆ. ಎಲ್ಲರ ಜೀವನದಲ್ಲಿಯೂ ತಿರುವು ಇದ್ದೇ ಇರುತ್ತದೆ. ಅದರಿಂದ ಜೀವನದ ಪಥವೇ ಬದಲಾಗುತ್ತದೆ ಎಂದರು. ಕಲ್ಹಾಪುರದ ಪವಮಾನಾಚಾರ್ಯ ಇತರರು ಉಪನ್ಯಾಸ ನೀಡಿದರು. ಉಡುಪಿಯ ಬನ್ನಂಜೆ ಶ್ರೀ ರಾಘವೇಂದ್ರತೀರ್ಥರು ಸಾನ್ನಿಧ್ಯ ವಹಿಸಿದ್ದರು.

  ಸಿಎಎ ಬೆಂಬಲಿಸದವರು ದೇಶದ್ರೋಹಿಗಳು
  ಹಿಂದುಗಳಾಗಿ ಪ್ರತಿಯೊಬ್ಬರೂ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ)ಯನ್ನು ಬೆಂಬಲಿಸಲೇಬೇಕು. ಅದನ್ನು ವಿರೋಧಿಸಿದರೆ ಹಿಂದು ಧರ್ಮಕ್ಕೆ ಮಾಡುವ ದ್ರೋಹವಾಗುತ್ತದೆ. ಮೊದಲ ಹಿಂದುಗಳಾಗಿ ಧರ್ಮವನ್ನು ಉಳಿಸುವ ಪ್ರಯತ್ನ ಮಾಡಬೇಕಿದೆ. ಧಾರ್ಮಿಕ ಸ್ವಾತಂತ್ರ್ಯ ಕೊಟ್ಟ ಶ್ರೇಷ್ಠ ಧರ್ಮ ಉಳಿಯಬೇಕಾದರೆ ಜ್ಯಾತ್ಯಾತೀತವಾಗಿ ಕಾಯ್ದೆಯನ್ನು ಬೆಂಬಲಿಸಬೇಕಿದೆ. ಹಿಂದುತ್ವ ಉಳಿಸಿಕೊಳ್ಳದಿದ್ದಲ್ಲಿ ನಾಳೆಯ ದಿವಸ ಇಂತಹ ಧಾರ್ಮಿಕ ಕಾರ್ಯಕ್ರಮಗಳನ್ನು ಎಲ್ಲಿ ಮಾಡುತ್ತೀರಿ? ನಿಮ್ಮ ಮಕ್ಕಳು, ಮೊಮ್ಮಕ್ಕಳು ಹಿಂದುಗಳಾಗಿ ಉಳಿದು ತಮ್ಮ ತಮ್ಮ ಸಾಧನೆ ಮಾಡಬೇಕಾದರೆ ಹಿಂದುತ್ವ ಉಳಿಯಲೇಬೇಕು. ಈಗಿನಿಂದಲೇ ಕಾಯ್ದೆ ಬೆಂಬಲಿಸಿ ಬೇರೆಯವರನ್ನೂ ಜ್ಯಾತ್ಯಾತೀತವಾಗಿ ಬೆಂಬಲಿಸುವಂತೆ ಪ್ರೇರೇಪಿಸಿ ಎಂದು ಕರೆ ನೀಡಿದರು.

  ಉತ್ಸವಕ್ಕೆ ಇಂದು ತೆರೆ
  ಕಳೆದ ಮೂರು ದಿನಗಳಿಂದ ನಡೆದ ಶ್ರೀ ಮಧ್ವಪುರಂದರೋತ್ಸವಕ್ಕೆ ಜ.26ರಂದು ತೆರೆ ಬೀಳಲಿದೆ. ವ್ಯಾಸರಾಜ ಮಠಾಧೀಶರಾದ ಶ್ರೀ ವಿದ್ಯಾಶ್ರೀಶತೀರ್ಥರ ಸಾನ್ನಿಧ್ಯದಲ್ಲಿ ವಿವಿಧ ಕಾರ್ಯಕ್ರಮ ನಡೆಯಲಿದ್ದು, ಸಂಜೆ ಮಂಗಳಸಮರ್ಪಣಾ ಸಭೆಯೊಂದಿಗೆ ಉತ್ಸವ ಸಂಪನ್ನಗೊಳ್ಳಲಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಸಿನಿಮಾ

  Latest Posts