More

    ಬ್ಯಾಲದಕೆರೆ ಶಾಲೆ ಆವರಣದ ಮರಗಳ ಹರಾಜಿನಲ್ಲಿ ಅಕ್ರಮ? ; ಬಿಇಒ ಕೊಟ್ಟ ಆದೇಶಕ್ಕೂ ಬೆಲೆಯಿಲ್ಲ ; ಮಕ್ಕಳ ಕೈಯಲ್ಲಿ ಹರಾಜು ಪ್ರಕಟಣೆ ಹಂಚಿಕೆ

    ಕುಣಿಗಲ್: ಎಡಿಯೂರು ಹೋಬಳಿ ಬ್ಯಾಲದಕೆರೆ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲೆ ಮುಖ್ಯಶಿಕ್ಷಕ ರಾಮಯ್ಯ ಹಾಗೂ ಎಸ್‌ಡಿಎಂಸಿ ಸದಸ್ಯ ಉಮಾಶಂಕರ್ ಅಧಿಕಾರ ದುರ್ಬಳಕೆ ಮಾಡಿಕೊಂಡು ಶಾಲೆ ಆವರಣದಲ್ಲಿದ್ದ 14 ಸಿಲ್ವರ್ ಹಾಗೂ 2 ತೇಗದ ಮರಗಳನ್ನು ಹರಾಜಿನಲ್ಲಿ ಮಾರಾಟ ಮಾಡಲು ಮುಂದಾಗಿದ್ದಾರೆ ಎಂದು ಪರಿಸರವಾದಿ, ಮಾನವ ಹಕ್ಕು ಹೋರಾಟಗಾರ ಕೆ.ಜಿ.ಲಕ್ಷ್ಮಣ್ ಹಾಗೂ ಗ್ರಾಮಸ್ಥರು ದೂರಿದ್ದಾರೆ.

    ಎಸ್‌ಡಿಎಂಸಿ ಸದಸ್ಯ ಉಮಾಶಂಕರ್ ಅವರ ತಂದೆ ಬಿ.ಎಂ.ಬೋರಯ್ಯ ಅಕ್ರಮವಾಗಿ ರಸ್ತೆ ಜಾಗದಲ್ಲಿ ಮನೆ ಕಟ್ಟಿದ್ದಾರೆ, ಮನೆ ಉಳಿಸಿಕೊಳ್ಳಲು ಮರಗಳನ್ನು ಹರಾಜು ಮಾಡಿ ಕಡಿಯಲು ಉಮಾಶಂಕರ್ ಅಧಿಕಾರ ದುರ್ಬಳಕೆ ಮಾಡಿಕೊಂಡು ಎಸ್‌ಡಿಎಂಸಿ ಸಭೆಯಲ್ಲಿ ನಡವಳಿಕೆ ಮಾಡಿ ಮರಗಳನ್ನು ಫೆ.16ರಂದು ಹರಾಜು ಮಾಡುವ ನೋಟಿಸ್ ಹೊರಡಿಸಿದ್ದಾರೆ. ಅವರ ತಾಳಕ್ಕೆ ತಕ್ಕಂತೆ ಮುಖ್ಯಶಿಕ್ಷಕ ರಾಮಯ್ಯ ಪರೋಕ್ಷವಾಗಿ ಬೆಂಬಲಿಸಿದ್ದಾರೆ ಎಂದು ಆಪಾದಿಸಿದ್ದಾರೆ.

    ಕ್ಷೇತ್ರಶಿಕ್ಷಣಾಧಿಕಾರಿ ತಿಮ್ಮರಾಜು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಮರಗಳನ್ನು ಹರಾಜು ಹಾಕದಂತೆ ಮುಖ್ಯಶಿಕ್ಷಕ ರಾಮಯ್ಯಗೆ ಸ್ಪಷ್ಟವಾಗಿ ತಿಳಿಸಿದ್ದರು. ಆದರೆ ಬಿಇಒ ಹೊದ ಬಳಿಕ ಮತ್ತೆ ಮಾ.2ರಂದು ಮರಗಳ ಹರಾಜು ಪ್ರಕಟಣೆಯನ್ನು ಮಕ್ಕಳ ಕೈಯಲ್ಲಿ ಹಂಚಿಸಿದ್ದಾರೆ, ಈ ಬಗ್ಗೆ ಮತ್ತೆ ಗ್ರಾಮದ ಜನರು ಸಭೆ ಸೇರಿ ಮರಗಳ ಹರಾಜು ಮಾಡಬಾರದೆಂದು ತೀರ್ಮಾನಿಸಲಾಗಿತ್ತು. ಆದರೆ ಇದನ್ನು ತಿರಸ್ಕರಿಸಿದ ಬಿ.ಎಂ.ಬೋರಯ್ಯ, ಗಂಗಣ್ಣ, ಸತೀಶ್ ಸೇರಿಕೊಂಡು ಮರಗಳ ಹರಾಜು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ,

    ಕಡಿಮೆ ಬೆಲೆಗೆ ಹರಾಜು: ಹಳೇ ಶಾಲೆಯ ತೀರು, ಬಾಗಿಲು, ಕಿಟಕಿ ಹಾಗೂ ಹಂಚನ್ನು ಸತೀಶ ಎಂಬುವರು ಕೇವಲ ಐದು ಸಾವಿರ ರೂಪಾಯಿಗೆ ಹರಾಜು ಕೂಗಿಕೊಂಡಿದ್ದಾರೆ. ಶಾಲೆ ಬಳಿ ಹಾಕಿದ್ದ 55 ಚಪ್ಪಡಿ ಕಲ್ಲುಗಳು ಗಂಗಣ್ಣ ಎಂಬುವವರಿಗೆ ಕೇವಲ 5500 ರೂಪಾಯಿಗೆ ಹರಾಜಾಗಿವೆ, ಇದರ ಹಣ ಯಾರ ಬಳಿ ಇದೆ ಎಂಬುದು ತಿಳಿದಿಲ್ಲ, ಹರಾಜಿನ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ತಿಮ್ಮರಾಜು ತಿಳಿಸಿದ್ದಾರೆ.
    ಕಾನೂನು ಉಲ್ಲಂಘಿಸಿ ಮರ ಹಾಗೂ ಶಾಲೆಯ ಸಾಮಗ್ರಿಗಳನ್ನು ಕಡಿಮೆ ಬೆಲೆಗೆ ಹರಾಜು ಮಾಡಿ ಅಧಿಕಾರ ದುರ್ಬಳಕೆ ಮಾಡಿಕೊಂಡಿರುವ ಮುಖ್ಯಶಿಕ್ಷಕ ಹಾಗೂ ಎಸ್‌ಡಿಎಂಡಿ ಸದಸ್ಯ ಉಮಾಶಂಕರ್ ಮೇಲೆ ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts