More

    ಬೈಡನ್ ಪತ್ನಿ ಜಿಲ್‌ಗೆ ಕುಂದಾಪುರ ಮೂಲದ ಮಾಲಾ ನೀತಿ ನಿರ್ದೇಶಕಿ

    ಉಡುಪಿ: ಅಮೆರಿಕ ನಿಯೋಜಿತ ಅಧ್ಯಕ್ಷ ಜೋ ಬೈಡನ್ ಅವರ ಪತ್ನಿ ಜಿಲ್ ಬೈಡನ್ ಅವರಿಗೆ ನೀತಿ ನಿರ್ದೇಶಕಿಯಾಗಿ ಭಾರತೀಯ ಮೂಲದ ಮಾಲಾ ಅಡಿಗ ನೇಮಕಗೊಂಡಿದ್ದಾರೆ. ಮಾಲಾ ಅಡಿಗ (47) ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಕಕ್ಕುಂಜೆ ಅಡಿಗ ಕುಟುಂಬದವರಾಗಿದ್ದಾರೆ.

    ಈ ಹಿಂದೆ ಬೈಡನ್ ಅವರ ಫೌಂಡೇಶನ್‌ನಲ್ಲಿ ಮಿಲಿಟರಿ ಕುಟುಂಬಗಳು, ಉನ್ನತ ಶಿಕ್ಷಣದ ನಿರ್ದೇಶಕರಾಗಿ, ಜಿಲ್ ಬೈಡನ್ ಅವರಿಗೆ ಕಾನೂನು ಮತ್ತು ರಾಜಕೀಯ ಸಲಹೆಗಾರರಾಗಿಯೂ ಕಾರ್ಯ ನಿರ್ವಹಿಸಿದ್ದರು. ಅಮೆರಿಕ ರಾಷ್ಟ್ರೀಯ ಶಿಕ್ಷಣ ಯೋಜನೆಯ ಅಡಿಯಲ್ಲಿ ಶಿಕ್ಷಣ ಮತ್ತು ಸಾಂಸ್ಕೃತಿಕ ವ್ಯವಹಾರ ಇಲಾಖೆಯ ಉಪ ಕಾರ್ಯದರ್ಶಿಯಾಗಿದ್ದರು. ಜನವರಿ ತಿಂಗಳಲ್ಲಿ ಅಮೆರಿಕದ ಪ್ರಥಮ ಮಹಿಳೆ ಜಿಲ್ ಬೈಡನ್ ಅವರಿಗೆ ನೀತಿ ನಿರ್ದೇಶಕಿಯಾಗಿ ನಿಯುಕ್ತಿಗೊಳ್ಳಲಿದ್ದಾರೆ.

    ಅಮೆರಿಕದಲ್ಲೆ ಹುಟ್ಟಿ, ಬೆಳೆದ ಮಾಲಾ, ಇಲಿನಾಯ್ಸನಲ್ಲಿ ನೆಲೆಸಿದ್ದು, ಮಿನ್ನೆಸೋಟ ವಿವಿಗೆ ಸೇರಿದ ಗ್ರಿನ್ನೆಲ್ ಕಾಲೇಜಿನಲ್ಲಿ ಪದವಿ ಪಡೆದಿದ್ದರು. ಬಳಿಕ ಚಿಕಾಗೋ ಕಾನೂನು ಕಾಲೇಜಿನಿಂದ ಕಾನೂನು ಶಾಸ್ತ್ರದಲ್ಲಿ ಪದವಿ ಪಡೆದು ವಕೀಲಿಕೆ ನಡೆಸುತ್ತಿದ್ದರು. ಅವರ ತಂದೆ ಕಕ್ಕುಂಜೆ ರಮೇಶ್ ಅಡಿಗ (84) ವೈದ್ಯರು. ಕಳೆದ ಆರು ದಶಕಗಳಿಂದ ಅಮೆರಿಕದಲ್ಲಿ ವಾಸವಾಗಿರುವ ರಮೇಶ್ ಅಡಿಗ, ಅಮೆರಿಕನ್ ಪ್ರಭುತ್ವ ಪಡೆದುಕೊಂಡಿದ್ದಾರೆ. ಮಾಲಾ ಅಡಿಗರ ಪತಿ ಚಾರ್ಲ್ಸ್ ಬೀರೋ ಸಹ ವಕೀಲರಾಗಿದ್ದು, ದಂಪತಿಗೆ 15 ವರ್ಷದ ಆಶಾ ಎಂಬ ಪುತ್ರಿ ಇದ್ದಾರೆ. ಏಳು ವರ್ಷಗಳ ಹಿಂದೆ ಮಾಲಾ ಮತ್ತವರ ಪತಿ, ತಂದೆ ಸೇರಿ ಇಡೀ ಕುಟುಂಬದೊಂದಿಗೆ ಊರಿಗೆ ಬಂದಿದ್ದು, ಕುಂದಾಪುರದಲ್ಲಿ ವಾಸ್ತವ್ಯ ಹೂಡಿದ್ದರು. ಕಕ್ಕುಂಜೆಗೆ ತೆರಳಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು ಎಂದು ಕುಟುಂಬ ಮೂಲಗಳಿಂದ ತಿಳಿದು ಬಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts