More

    ಕುಂದಾಪುರದಲ್ಲೂ ಪಾಕ್ ಪರ ಘೋಷಣೆ

    ಕುಂದಾಪುರ: ಇಲ್ಲಿನ ಮಿನಿ ವಿಧಾನಸೌಧದ ತಾಲೂಕು ಕಚೇರಿಯಲ್ಲಿ ‘ಪಾಕಿಸ್ತಾನ ಜಿಂದಾಬಾದ್, ಜಿಹಾದಿ ಜಿಂದಾಬಾದ್’ ಎಂದು ಕೋಡಿ ನಿವಾಸಿ ರಾಘವೇಂದ್ರ ಗಾಣಿಗ (42) ಎಂಬಾತ ಘೋಷಣೆ ಕೂಗಿದ್ದು, ದೇಶದ್ರೋಹ ಪ್ರಕರಣ ದಾಖಲಿಸಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬೆಳಗ್ಗೆ ಕುಂದಾಪುರ ತಾಲೂಕು ಕಚೇರಿಗೆ ಆಗಮಿಸಿದ ಈತ ಏಕಾಏಕಿ ಕೈ ಮೇಲೆತ್ತಿ ಪಾಕ್ ಪರ ಘೋಷಣೆ ಕೂಗಿ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸಿದ್ದು, ತಕ್ಷಣ ಪೊಲೀಸರಿಗೆ ತಹಸೀಲ್ದಾರ್ ದೂರು ನೀಡಿದ ಹಿನ್ನೆಲೆಯಲ್ಲಿ ಆಗಮಿಸಿದ ಕುಂದಾಪುರ ಪಿಎಸ್‌ಐ ಹರೀಶ್ ಆರ್. ಹಾಗೂ ಸಿಬ್ಬಂದಿ ಆರೋಪಿಯನ್ನು ವಶಕ್ಕೆ ಪಡೆದರು. ಬಳಿಕ ಠಾಣೆಯಲ್ಲೂ ಆರೋಪಿ ಪಾಕ್ ಪರ ಘೋಷಣೆ ಕೂಗುತ್ತಾ ಕೈಗಳನ್ನು ಎತ್ತಿ ವಿಚಿತ್ರವಾಗಿ ವರ್ತಿಸುತ್ತಿದ್ದ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಕುಂದಾಪುರ ಎಎಸ್ಪಿ ಹರಿರಾಂ ಶಂಕರ್, ಸಿಪಿಐ ಗೋಪಿಕೃಷ್ಣ ವಿಚಾರಣೆ ನಡೆಸಿದ್ದಾರೆ. ಆರೋಪಿಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದೆ. ಸಂಪೂರ್ಣ ತನಿಖೆ ಬಳಿಕವಷ್ಟೇ ವಾಸ್ತವ ವಿಚಾರಗಳ ಮಾಹಿತಿ ಸಿಗಬೇಕಿದೆ ಎಂದು ಎಎಸ್ಪಿ ಹರಿರಾಂ ಶಂಕರ್ ತಿಳಿಸಿದ್ದಾರೆ. ಆರೋಪಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.

    ಆಸ್ಪತ್ರೆಗೆಂದು ಹೋದಾಗ ತಪ್ಪಿಸಿಕೊಂಡಿದ್ದ: ಎಂಟು ವರ್ಷದಿಂದ ರಾಘವೇಂದ್ರ ಮಾನಸಿಕ ಅಸ್ವಸ್ಥನಾಗಿದ್ದು, ಉಡುಪಿ ಹಾಗೂ ಕುಂದಾಪುರದಲ್ಲಿ ಚಿಕಿತ್ಸೆ ನೀಡುತ್ತಿದ್ದೇವೆ. ಸೋಮವಾರ ಕುಂದಾಪುರ ಆಸ್ಪತ್ರೆಗೆ ಕರೆತಂದಿದ್ದಾಗ ಮೂತ್ರ ಮಾಡಿ ಬರುವುದಾಗಿ ಹೇಳಿ ತಪ್ಪಿಸಿಕೊಂಡು ತಾಲೂಕು ಕಚೇರಿಗೆ ಹೋಗಿ ಘೋಷಣೆ ಕೂಗಿದ್ದಾನೆ ಎಂದು ತಂದೆ-ತಾಯಿ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ನಾನು ಬೇರೆಯವರ ಆಮ್ನಿ ಕಾರಿನ ಚಾಲಕನಾಗಿದ್ದು, ಕುಟುಂಬ ನನ್ನ ದುಡಿಮೆಯಿಂದಲೇ ಜೀವನ ಸಾಗಬೇಕು. ಪುತ್ರನ ಚಿಕಿತ್ಸೆಗೆ ಪ್ರತಿ ತಿಂಗಳು ಎರಡೂವರೆ ಸಾವಿರ ರೂಪಾಯಿ ಖರ್ಚಾಗುತ್ತದೆ. ಕೆಲವು ಸಮಯದಿಂದ ಸ್ಥಳೀಯರು ಮತ್ತು ಸಂಬಂಧಿಕರು ಹಣ ಹೊಂದಿಸಿ ಚಿಕಿತ್ಸೆ ವೆಚ್ಚ ಭರಿಸುತ್ತಿದ್ದರು ಎಂದು ಶ್ಯಾಮ ಗಾಣಿಗ ತಿಳಿಸಿದ್ದಾರೆ.

    ಹಿಂದಿ ಶಿಕ್ಷಕನಾಗಿದ್ದ: ಮಕ್ಕಳಿಲ್ಲದ ಕೋಡಿ ನಿವಾಸಿ ಶ್ಯಾಮ ಗಾಣಿಗ ದಂಪತಿ ರಾಘವೇಂದ್ರನನ್ನು ದತ್ತು ಪಡೆದು ಸಾಕಿದ್ದರು. ಶಿವಮೊಗ್ಗದಲ್ಲಿ ಹಿಂದಿ ಬಿ.ಎಡ್ ಮಾಡಿದ ಆತ ಕುಂದಾಪುರದ ಖಾಸಗಿ ಶಾಲೆಯಲ್ಲಿ ಹಿಂದಿ ಶಿಕ್ಷಕನಾಗಿ ಬಳಿಕ ಕೆಲಸ ಬಿಟ್ಟಿದ್ದ. 8 ವರ್ಷಗಳಿಂದ ಮನೆಯಲ್ಲೇ ಇದ್ದಾನೆ. 15 ವರ್ಷ ಹಿಂದೆ ಮದುವೆಯಾಗಿದ್ದು, ಪತ್ನಿ ಹಾಗೂ ಪುತ್ರಿಯನ್ನು ಬಿಟ್ಟು ತಂದೆ-ತಾಯಿ ಜೊತೆ ವಾಸವಿದ್ದಾನೆ.

    ಟಿವಿ ಮಾಧ್ಯಮ ಪ್ರಭಾವ: ಇತ್ತೀಚೆಗೆ ಪಾಕ್ ಪರ ಘೋಷಣೆ ಕೂಗಿದ್ದ ಅಮೂಲ್ಯಾ ಮತ್ತು ಆರ್ದ್ರಾ ಪ್ರಕರಣವನ್ನು ಟಿವಿ ಮಾಧ್ಯಮಗಳು ನಿರಂತರವಾಗಿ ಪ್ರಸಾರ ಮಾಡಿದಾಗ ರಾಘವೇಂದ್ರ ನಿರಂತರವಾಗಿ ನೋಡುತ್ತಿದ್ದ. ನಿರೂಪಕರಾದಿಯಾಗಿ ಪಾಕಿಸ್ತಾನ ಪರ ಘೋಷಣೆಯನ್ನು ಪುನರುಚ್ಛರಿಸುತ್ತಿದ್ದುದನ್ನು ನೋಡುತ್ತಿದ್ದ. ಮೊದಲೇ ಖಿನ್ನನಾಗಿದ್ದು, ನಂತರ ಟಿವಿಗಳಿಂದ ಪ್ರಭಾವಿತನಾಗಿ ಹೀಗೆ ಮಾಡಿರಬಹುದು ಎಂದು ಮನೆಯವರು ಹೇಳುತ್ತಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts