More

    ಆರೋಗ್ಯಾಧಿಕಾರಿ ವಿರುದ್ಧ ಕ್ರಮ:ಕುಂದಾಪುರ ತಾಪಂ ಸಾಮಾನ್ಯ ಸಭೆ ನಿರ್ಣಯ

    ಕುಂದಾಪುರ: ತಾಲೂಕು ಆಸ್ಪತ್ರೆ ಕುರಿತು ಈ ಹಿಂದೆ ಕೇಳಲಾದ ಪ್ರಶ್ನೆಗೆ ಉತ್ತರಿಸಬೇಕಾದ ಜಿಲ್ಲಾ ಆರೋಗ್ಯಾಧಿಕಾರಿ ಸಭೆಗೆ ಗೈರುಹಾಜರಾಗಿದ್ದು ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿ, ಜಿಪಂ ಸಿಎಸ್, ಆರೋಗ್ಯ ಸಚಿವರು ಮತ್ತು ಸರ್ಕಾರಕ್ಕೆ ಶಿಫಾರಸು ಮಾಡಲು ಕುಂದಾಪುರ ತಾಪಂ ಸಾಮಾನ್ಯ ಸಭೆ ಬುಧವಾರ ನಿರ್ಣಯ ಕೈಗೊಂಡಿತು.

    ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಅಧ್ಯಕ್ಷೆ ಇಂದಿರಾ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ತಾಪಂ ಸಾಮಾನ್ಯ ಸಭೆಯಲ್ಲಿ ಕರಣ್ ಪೂಜಾರಿ ಮಾತನಾಡಿ, ಒಂದು ವರ್ಷದಿಂದ ಸಾಮಾನ್ಯ ಸಭೆಯಲ್ಲಿ ತಾಲೂಕು ಆಸ್ಪತ್ರೆ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸುವಂತೆ ಜಿಲ್ಲಾ ಆರೋಗ್ಯಾಧಿಕಾರಿಗೆ ಸೂಚಿಸಿದ್ದರೂ, ಅವರು ಸಭೆಗೆ ಬಂದಿಲ್ಲ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮೇಲಧಿಕಾರಿಗಳಿಗೆ ಶಿಫಾರಸು ಮಾಡುವ ನಿರ್ಣಯ ಕೈಗೊಳ್ಳುವಂತೆ ಒತ್ತಾಯಿಸಿದರು. ಜ್ಯೋತಿ ಪುತ್ರನ್ ಹಾಗೂ ವಾಸುದೇವ ಪೈ ಪೂರಕವಾಗಿ ಮಾತನಾಡಿದರು. ಪ್ರತಿಕ್ರಿಯಿಸಿದ ಅಧ್ಯಕ್ಷೆ ಇಂದಿರಾ ಶೆಟ್ಟಿ ಡಿಎಚ್‌ಒ ವಿರುದ್ಧ ನಿರ್ಣಯ ಮಾಡಿ ಸರ್ಕಾರ ಹಾಗೂ ಸಂಬಂಧಪಟ್ಟವರಿಗೆ ಕಳುಹಿಸಲಾಗುವುದು ಎಂದು ಭರವಸೆ ನೀಡಿದರು.

    ಪರಿಶೀಲಿಸಿ ದಾಖಲೆ ಹಸ್ತಾಂತರ: ತಲ್ಲೂರು ಗ್ರಾಮದಲ್ಲಿ ಹೌಸ್ ಸೈಟ್ ವಿತರಣೆ ಮಾಡಿದ್ದು, ಹಿಂದೆ ಇದ್ದವರು ಸೈಟ್ ಬಿಟ್ಟಿದ್ದು, ಬೇರೊಬ್ಬರು ಅದರಲ್ಲಿ ವಾಸ ಮಾಡುತ್ತಿದ್ದಾರೆ. ಹಲವು ವರ್ಷದಿಂದ ಸೈಟ್‌ನಲ್ಲಿ ವಾಸ ಮಾಡುವವರಿಗೆ ಜಾಗದ ಹಕ್ಕುಪತ್ರ ನೀಡುವಂತೆ ಕರಣ್ ಪೂಜಾರಿ ಒತ್ತಾಯಿಸಿದರು. ನಿಯಮಗಳ ಪ್ರಕಾರ ಸೈಟ್ ನೀಡಿದ್ದು, ಅರಣ್ಯ ಇಲಾಖೆಯಿಂದ ಸ್ಪಷ್ಟನೆ ಕೇಳಲಾಗಿದೆ. ಎಲ್ಲ ಸಾಧ್ಯತೆಗಳನ್ನು ಪರಿಶೀಲಿಸಿ ಸೈಟ್ ದಾಖಲೆ ನೀಡಲಾಗುವುದು ಎಂದು ಅಧ್ಯಕ್ಷೆ ತಿಳಿಸಿದರು.
    ಉಪಾಧ್ಯಕ್ಷ ರಾಮ್‌ಕಿಶನ್ ಹೆಗ್ಡೆ, ಸ್ಥಾಯಿ ಸಮಿತಿ ಅಧ್ಯಕ್ಷೆ ರೂಪಾ ಬಿ.ಪೈ, ಇಒ ಕೇಶವ ಶೆಟ್ಟಿಗಾರ್ ಪಾಲ್ಗೊಂಡಿದ್ದರು. ಇತ್ತೀಚೆಗೆ ನಿಧನರಾದ ತಾಪಂ ಮಾಜಿ ಅಧ್ಯಕ್ಷ ಕಾಪು ದಿನಕರ ಶೆಟ್ಟಿ ಹಾಗೂ ಮಾಜಿ ಸದಸ್ಯ ಹದ್ದೂರು ರಾಜೀವ ಶೆಟ್ಟಿ ಅವರಿಗೆ ಸಭೆ ಆರಂಭಕ್ಕೂ ಮುನ್ನ ಶ್ರದ್ಧಾಂಜಲಿ ಸಲ್ಲಿಸಲಾಯಿತು.

    ಧರಣಿ ಎಚ್ಚರಿಕೆ: ಗಂಗೊಳ್ಳಿ ಮಡಿವಾಳ ಕೆರೆ ಹಾಗೂ ಚೋಳಕೆರೆ ಒತ್ತುವರಿ ಇನ್ನೂ ತೆರವು ಮಾಡಿಲ್ಲ. ಕೆರೆ ಒತ್ತುವರಿ ಮಾಡಿ ರಸ್ತೆ ನಿರ್ಮಾಣ ಮಾಡಲಾಗಿದೆ. ಅದನ್ನು ಯಾವಾಗ ತೆರವು ಮಾಡುತ್ತೀರಿ ಎಂದು ತಹಸೀಲ್ದಾರ್ ಅವರನ್ನು ಸುರೇಂದ್ರ ಖಾರ್ವಿ ಪ್ರಶ್ನಿಸಿದರು. ಉತ್ತರಿಸಿದ ತಹಸೀಲ್ದಾರ್ ಆನಂದಪ್ಪ ಎಚ್.ನಾಯ್ಕ, ಒಂದು ಕೆರೆ ಮಾತ್ರ ಒತ್ತುವರಿಯಾಗಿದ್ದು, ಅದನ್ನು ತೆರವು ಮಾಡಲು ನೋಟಿಸ್ ನೀಡಲಾಗಿದೆ. ಒತ್ತುವರಿ ತೆರವು ಮಾಡಲು ಸಂಬಂಧಿತರು ಒಪ್ಪಿದ್ದಾರೆ. ಮತ್ತೊಂದು ಕೆರೆ ಒತ್ತುವರಿ ಆಗಿಲ್ಲ ಎಂದರು. ಇದನ್ನೊಪ್ಪದ ಸುರೇಂದ್ರ ಖಾರ್ವಿ ಎರಡೂ ಕೆರೆ ಒತ್ತುವರಿಯಾಗಿದೆ. ಅವೆರಡನ್ನೂ ತೆರವು ಮಾಡದಿದ್ದರೆ ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.

    ಗಡುವು ಗೊಂದಲ: ಗ್ರಾಪಂ ಚುನಾವಣೆಗೆ ಸ್ಪರ್ಧಿಸಿ ಗೆದ್ದವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು 15 ದಿನದ ಗಡುವು ನೀಡಲಾಗಿದೆ. ಚುನಾವಣೆ ಆದ ನಂತರದ 15 ದಿನವೋ ಅಥವಾ ಫಲಿತಾಂಶ ಬಂದ ನಂತರದ 15 ದಿನವೋ ಎಂಬ ಸ್ಪಷ್ಟತೆಯಿಲ್ಲ. ತಾಪಂ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಸಭೆಯಲ್ಲಿ ಪಾಲ್ಗೊಳ್ಳಲು ಅವಕಾಶವಿಲ್ಲದಿದ್ದರೆ ಹೊರಹೋಗುತ್ತೇನೆ ಎಂದು ತಾಪಂ ಸದಸ್ಯ ಉಮೇಶ್ ಶೆಟ್ಟಿ ಕಲ್ಗದ್ದೆ ಸಭೆ ಗಮನಕ್ಕೆ ತಂದರು. ಪ್ರತಿಕ್ರಿಯಿಸಿದ ಅಧ್ಯಕ್ಷೆ ತಾಪಂ ಸ್ಥಾನಕ್ಕೆ ರಾಜೀನಾಮೆ ಕೊಡಲು ಇನ್ನೂ ಮೂರು ದಿನ ಅವಕಾಶ ಇರುವುದರಿಂದ ಸಭೆಯಲ್ಲಿ ಪಾಲ್ಗೊಳ್ಳಲು ಅವಕಾಶ ಮಾಡಿಕೊಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts