More

    ಮರವಂತೆ ಬಂದರು ಪುನಶ್ಚೇತನ ಕಾಮಗಾರಿಗೆ ಮರುಜೀವ

    ರಾಘವೇಂದ್ರ ಪೈ ಗಂಗೊಳ್ಳಿ
    ಏಳು ವರ್ಷಗಳ ಹಿಂದೆ ಆರಂಭವಾಗಿ, ಮತ್ತೆ ಕುಂಟುತ್ತ ಸಾಗಿ, ಎರಡು ವರ್ಷಗಳ ಹಿಂದೆ ಅರ್ಧದಲ್ಲೇ ಸ್ಥಗಿತವಾದ ಮರವಂತೆಯ ಮೀನುಗಾರಿಕಾ ಹೊರಬಂದರಿನ ಪುನಶ್ಚೇತನಕ್ಕೆ ಗುರುವಾರ ಮಂಡನೆಯಾದ ರಾಜ್ಯ ಬಜೆಟ್‌ನಲ್ಲಿ 85 ಕೋಟಿ ರೂ. ಮೀಸಲಿರಿಸಿರುವುದು ಇಲ್ಲಿನ ಮೀನುಗಾರರಲ್ಲಿ ಹೊಸ ಭರವಸೆ ಮೂಡಿಸಿದೆ.

    ಎರಡು ವರ್ಷಗಳಿಂದ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಮೇಲೆ ಹೇರಿದ ಒತ್ತಡ ಈಗ ಫಲಿಸಿದೆ. ಆದರೆ ಸರಿಯಾಗಿ ನಡೆದಿದ್ದರೆ ನಾಲ್ಕು ವರ್ಷಗಳ ಹಿಂದೆಯೇ 54.7 ಕೋಟಿ ರೂಪಾಯಿಯಲ್ಲಿ ಮುಗಿಯುತ್ತಿದ್ದ ಯೋಜನೆಯ ಗಾತ್ರ ಹಿಂದೆ ವೆಚ್ಚವಾದ 45 ಕೋಟಿ ರೂ. ಜತೆಗೆ ಈಗಿನ 85 ಕೋಟಿ ರೂ. ಸೇರಿ ಬಹಳಷ್ಟು ಹಿಗ್ಗುವಂತಾಗಿದೆ.
    ಅಪೂರ್ಣ ಕಾಮಗಾರಿ: ಬಂದರು ಮತ್ತು ಮೀನುಗಾರಿಕೆ ಇಲಾಖೆಯ ಉಸ್ತುವಾರಿಯಲ್ಲಿ ತಮಿಳುನಾಡಿನ ಮೆ. ಎನ್‌ಎಸ್‌ಕೆ ಬಿಲ್ಡರ್ಸ್‌ 2013ರ ಮಾರ್ಚ್‌ನಲ್ಲಿ ಕಾಮಗಾರಿ ಆರಂಭಿಸಿತ್ತು. ಎರಡು ವರ್ಷಗಳಲ್ಲಿ ಉತ್ತರ ಮತ್ತು ದಕ್ಷಿಣದ ತಡೆಗೋಡೆ ಹೆಚ್ಚೂ ಕಡಿಮೆ ಪೂರ್ಣವಾಯಿತು. ಪಶ್ಚಿಮದ ಗೋಡೆ ಭಾಗಶಃ ನಿರ್ಮಾಣವಾಗಿದೆ. ಮಳೆಗಾಲದ ಒಂದು ಹಂತದಲ್ಲಿ ಎರಡೂ ಕಡೆಯ ತಡೆಗೋಡೆಗಳು ಅಲ್ಲಲ್ಲಿ ಕುಸಿದವು. ಮಳೆಗಾಲದ ಬಳಿಕ ಕಾಮಗಾರಿ ಮರು ಆರಂಭವಾಯಿತಾದರೂ ನೆಪಮಾತ್ರಕ್ಕೆ ಎಂಬಂತೆ ನಡೆಯಿತು. ಪರಿಣಾಮವಾಗಿ 2016ರಲ್ಲಿ ಮುಕ್ತಾಯವಾಗಬೇಕಿದ್ದ ಕಾಮಗಾರಿ 2018ರವರೆಗೂ ಸಾಗಿ ಸ್ಥಗಿತವಾಯಿತು. ಮೀನುಗಾರರು, ಇಲಾಖೆ ಮತ್ತು ಗುತ್ತಿಗೆದಾರರ ಮೇಲೆ ತಂದ ಒತ್ತಡ ಫಲ ನೀಡಲಿಲ್ಲ. ಅಷ್ಟರಲ್ಲಿ ಗುತ್ತಿಗೆದಾರ 45 ಕೋಟಿ ರೂ. ಬಿಲ್ ಪಡೆದಿದ್ದ. ಅಂತಿಮವಾಗಿ ಇಲಾಖೆ ಆ ಹಂತದಲ್ಲಿ ಗುತ್ತಿಗೆ ಮುಕ್ತಾಯಗೊಳಿಸಿತು.

    ಮರುಪ್ರಯತ್ನ ಸಫಲ: ಮರವಂತೆಯ ಮೀನುಗಾರರು ಅಂದು ಸಂಸದರಾಗಿದ್ದ ಬಿ.ವೈ. ರಾಘವೇಂದ್ರ ಅವರಿಗೆ ದುಂಬಾಲುಬಿದ್ದು ರಾಜ್ಯದ ಮೊದಲೆನಿಸಿದ ಕೇರಳ ಮಾದರಿಯ ಈ ಹೊರಬಂದರು ಭಾಗ್ಯ ಪಡೆದಿದ್ದರು. ಅದರಿಂದ ಊರಿನಲ್ಲೇ ಸುರಕ್ಷಿತ ಮೀನುಗಾರಿಕೆ ಸಾಧ್ಯವೆಂದು ಖುಷಿಪಟ್ಟಿದ್ದರು. ಆದರೆ ಕಾಮಗಾರಿ ನಡೆಯುತ್ತಿರುವ ವೇಗ ಮತ್ತು ವಿಧಾನ ಅವರಲ್ಲಿ ಆತಂಕ ಮತ್ತು ಭ್ರಮನಿರಸನ ಉಂಟುಮಾಡಿತ್ತು. ಅದು ಸ್ಥಗಿತಗೊಂಡಾಗ ಆಶಾಭಂಗವಾಗಿತ್ತು. ಆದರೆ ಛಲಬಿಡದೆ ನಡೆಸಿದ ಪ್ರಯತ್ನದ ಫಲವಾಗಿ ಈಗ ಎರಡನೆಯ ಹಂತದ ಕಾಮಗಾರಿಯ ರಾಜ್ಯ ಸರ್ಕಾರದ ಅನುದಾನ ಘೋಷಣೆಯಾಗಿದೆ. ಇದು ಇಲ್ಲಿಯ ಜನರಲ್ಲಿ ಹೊಸ ಭರವಸೆ ಮೂಡಿಸಿದೆ.

    ಬದಲಾದ ವಿನ್ಯಾಸ: ಬಂದರಿನ ಎರಡನೆಯ ಹಂತಕ್ಕೆ ಪುಣೆಯ ಕೇಂದ್ರೀಯ ಜಲ ಮತ್ತು ಶಕ್ತಿ ಸಂಶೋಧನಾ ಕೇಂದ್ರ, ಮೀನುಗಾರರ ಅಪೇಕ್ಷೆಯಂತೆ ಬದಲಿ ವಿನ್ಯಾಸ ಸಿದ್ಧಪಡಿಸಿದೆ. ಅದರಲ್ಲಿ ಮುಖ್ಯವಾಗಿ ಪಶ್ಚಿಮದ ತಡೆಗೋಡೆಯಲ್ಲಿ ದೋಣಿಗಳಿಗೆ ಇರಬೇಕಾದ ಪ್ರವೇಶಾವಕಾಶ ಗೋಡೆಯ ಉತ್ತರ ಅಂಚಿನ ಬದಲಿಗೆ ಮಧ್ಯದಲ್ಲಿ ಇರಲಿದೆ.
    ಪ್ರಸಕ್ತದ ರಾಜ್ಯ ಬಜೆಟ್‌ನಲ್ಲಿ 85 ಕೋಟಿ ರೂ. ತೆಗೆದಿರಿಸಿದ್ದು ಮೀನುಗಾರರಲ್ಲಿ ಹೊಸ ಭರವಸೆ ಮೂಡಿಸಿದೆ. ಆದರೆ ಈ ಹಿಂದಿನ ಘಟನೆಗಳು ಪುನರಾವರ್ತನೆಯಾಗದಿರಲಿ. ನಿರೀಕ್ಷಿತ ವೇಗದಲ್ಲಿ ವಿನ್ಯಾಸದಂತೆ ಕಾಮಗಾರಿ ನಿಗದಿತ ಅವಧಿಯಲ್ಲಿ ಪೂರ್ಣಗೊಂಡು ಮೀನುಗಾರರಿಗೆ ಇದರ ಪ್ರಯೋಜನ ದೊರೆಯುವಂತಾಗಬೇಕಿದೆ.

    ಮೂಲ ಯೋಜನೆ: ಅಂದಾಜು ವೆಚ್ಚ 54.7 ಕೋಟಿ ರೂ., ಅವಧಿ ಮೂರು ವರ್ಷ ಅವಧಿ
    ಉದ್ದೇಶ: ಪಾರಂಪರಿಕ ಫೈಬರ್‌ಗ್ಲಾಸ್ ಮೋಟರೀಕೃತ ದೋಣಿಗಳು ತಂಗಲು ಸುರಕ್ಷಿತ ಇಳಿದಾಣ ನಿರ್ಮಿಸುವ ಮೂಲಕ ಗಾಳಿ, ಮಳೆ, ಅಲೆ, ತೂಫಾನ್, ಅಬ್ಬರಗಳ ಪರಿಣಾಮವಾಗಿ ಸಂಭವಿಸುವ ದೋಣಿಗಳ ಪರಸ್ಪರ ಡಿಕ್ಕಿ, ಜೀವ, ಆಸ್ತಿ ಹಾನಿ ನಿವಾರಣೆಗೆ ಮೂರು ಕಡೆ ತಡೆಗೋಡೆಗಳಿಂದ ಆವೃತವಾದ ಅಲೆರಹಿತ ಅವಕಾಶ ಮತ್ತು ತಂಗುದಾಣ ನಿರ್ಮಾಣ.

    ವಿನ್ಯಾಸ: ತೀರದಲ್ಲಿ 780 ಮೀಟರ್ ಅಂತರದಲ್ಲಿ ಉತ್ತರದಲ್ಲಿ 215 ಮೀಟರ್, ದಕ್ಷಿಣದಲ್ಲಿ 190 ಮೀಟರ್ ಅಲೆತಡೆಗೋಡೆ, ಪಶ್ಚಿಮದಲ್ಲಿ ಅವೆರಡನ್ನು ಜೋಡಿಸಲು 645 ಮೀಟರ್ ಗೋಡೆ, ಪಶ್ಚಿಮದ ಗೋಡೆಯಲ್ಲಿ 150 ಮೀಟರ್ ಅಗಲದ ಪ್ರವೇಶ ದ್ವಾರ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts