More

    ಸಮುದ್ರ ರಕ್ಷಕರಿಗೆ ದೋಣಿಯೇ ಇಲ್ಲ!!

    ಕಾರವಾರ: ಸಮುದ್ರದಲ್ಲಿ ಅಪಾಯಕ್ಕೆ ಸಿಲುಕಿದ ಮೀನುಗಾರರ ರಕ್ಷಣೆ ಮಾಡಬೇಕಾದ, ಅಕ್ರಮ ಚಟುವಟಿಕೆ ತಡೆಯಬೇಕಾದ ಕರಾವಳಿ ಕಾವಲುಪಡೆ(ಸಿಎಸ್‌ಪಿ) ಕಾರವಾರದಲ್ಲಿ ಬೋಟ್ ಇಲ್ಲದೇ ಬಳಲಿದೆ.
    ಸಿಎಸ್‌ಪಿ ಸಿಬ್ಬಂದಿ, ಅಧಿಕಾರಿಗಳು ನೀರಿಗಿಳಿಯಬೇಕು ಎಂದರೆ ಪ್ರಮುಖ ಸಾಧನ ಬೋಟ್ ಆಗಿದೆ. ಅವರಿಗೆ ಸಮುದ್ರದಲ್ಲೇ ಕೆಲಸ ಆದರೆ, ಅದೇ ಹಾಳಾಗಿದ್ದು, ಇಲಾಖೆ ಮೂಲ ಉದ್ದೇಶಕ್ಕೇ ತೊಂದರೆಯಾಗಿದೆ.
    ಕರಾವಳಿ ಕಾವಲುಪಡೆ ಕಾರವಾರ ಠಾಣೆಗೆ ಎರಡು ಬೋಟ್‌ಗಳನ್ನು ನೀಡಲಾಗಿದೆ. ಒಂದು ಬೋಟ್ ಮೇಲ್ದರ್ಜೆಗೇರಿಸುವ ಕಾರ್ಯಕ್ಕಾಗಿ ಕಳೆದ ಹಲವು ದಿನಗಳ ಹಿಂದೆಯೇ ಗೋವಾ ಶಿಪ್‌ಯಾರ್ಡ್ಗೆ ತೆರಳಿದೆ. ಇನ್ನೊಂದು ಬೋಟ್ ಕೆಟ್ಟು ನಿಂತಿದ್ದು, ಕಾರ್ಯಾಚರಣೆ ಸಾಧ್ಯವಾಗುತ್ತಿಲ್ಲ. ತುರ್ತು ಸಂದರ್ಭಗಳಲ್ಲಿ ಸಮುದ್ರ ಸಹಾಯವಾಣಿ 1093 ಗೆ ಕರೆ ಮಾಡಿದರೆ, ನಾವು ಕೋಸ್ಟ್ಗಾರ್ಡ್, ಅಥವಾ ನೌಕಾಸೇನೆಗೆ ತಿಳಿಸುತ್ತೇವೆ ಎಂಬ ಉತ್ತರ ಸಿಗುತ್ತಿದೆ.
    ಹಳೆಯದಾದ ಬೋಟ್‌ಗಳು:
    ರಾಜ್ಯದ ಕರಾವಳಿಯಲ್ಲಿ ಒಟ್ಟು 9 ಸಿಎಸ್‌ಪಿ ಪೊಲೀಸ್ ಠಾಣೆಗಳಿದ್ದು, 12 ಸ್ಪೀಡ್ ಬೋಟ್‌ಗಳಿವೆ. ಅದರಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾರವಾರ, ಬೇಲೆಕೇರಿ, ತದಡಿ, ಹೊನ್ನಾವರ ಹಾಗೂ ಭಟ್ಕಳ ಸೇರಿ ಐದು ಕರಾವಳಿ ಕಾವಲು ಪೊಲೀಸ್ ಠಾಣೆಗಳಿವೆ. ಒಟ್ಟು 6 ಬೋಟ್‌ಗಳಿವೆ. ಹೆಚ್ಚಿನ ಬೋಟ್‌ಗಳು 2010 ರ ಅವಧಿಯಲ್ಲಿ ಪೂರೈಕೆಯಾದವು. ಅವು ಸಮರ್ಪಕ ನಿರ್ವಹಣೆ ಇಲ್ಲದೇ ಸಮುದ್ರ ಮಧ್ಯೆಯೇ ಕೆಟ್ಟು ನಿಲ್ಲುವ ಪರಿಸ್ಥಿತಿಯಲ್ಲಿದೆ. ಇದರ ನಿರ್ವಹಣೆಯನ್ನು ಕೇರಳದ ಖಾಸಗಿ ಕಂಪನಿಗೆ ಒದಗಿಸಲಾಗಿದೆ. ಬೋಟ್ ಕೆಟ್ಟರೆ ಅದೇ ಕಂಪನಿ ಬಂದು ರಿಪೇರಿ ಮಾಡಬೇಕು. ಒಮ್ಮೆ ಹಾಳಾಗಿ ನಿಂತರೆ ಕನಿಷ್ಠ ಒಂದು ವಾರವಾದರೂ ಅದರ ರಿಪೇರಿಗೆ ಬೇಕಾಗುತ್ತದೆ. ಅಲ್ಲಿಯವರೆಗೆ ಇದೇ ಪರಿಸ್ಥಿತಿ ಎನ್ನುತ್ತಾರೆ ಸಿಎಸ್‌ಪಿ ಸಿಬ್ಬಂದಿ.
    ಖಾಸಗಿ ಬೋಟ್ ಬಳಕೆ:
    ಕರಾವಳಿ ರಕ್ಷಾ ಕವಚ ಎಂಬ ಕಾರ್ಯಾಚರಣೆ ಗುರುವಾರ ಕಾರವಾರದಲ್ಲಿ ನಡೆಯಿತು. ಸಿಎಸ್‌ಪಿ ಬೋಟ್ ಕೆಟ್ಟಿದ್ದರಿಂದ ಅಧಿಕಾರಿಗಳು ಖಾಸಗಿ ಬೋಟ್‌ನ್ನು ಪಡೆದು ಸಮುದ್ರಕ್ಕಿಳಿಯಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.
    ಶೀಘ್ರ ರಿಪೇರಿ:
    ಸರ್ಕಾರ 24 ಕೋಟಿ ರೂ. ನೀಡಿದ್ದು, 12 ರಲ್ಲಿ ಏಳು ಬೋಟ್‌ಗಳನ್ನು ಮೇಲ್ದರ್ಜೆಗೇರಿಸುವ ಕಾರ್ಯ ಗೋವಾದಲ್ಲಿ ನಡೆಯುತ್ತಿದೆ. ಮೊದಲ ಹಂತದ ಕಾರ್ಯ ಮುಕ್ತಾಯದಲ್ಲಿದ್ದು, ಈ ತಿಂಗಳ ಕೊನೆಯ ಒಳಗೆ ಎಲ್ಲ ಬೋಟ್‌ಗಳು ಮರಳಿ ಕಾರ್ಯಾಚರಣೆಗೆ ಸಿಗಲಿವೆ. ನಂತರ 5 ಬೋಟ್‌ಗಳನ್ನು ಎರಡನೇ ಹಂತದಲ್ಲಿ ಮೇಲ್ದರ್ಜೆಗೇರಿಸುವ ಕಾರ್ಯ ಮಾಡಲಾಗುವುದು. ಅಲ್ಲಿಯವರೆಗೆ ಇದ್ದ ಬೋಟ್‌ನಲ್ಲೇ ಕಾರ್ಯನಿರ್ವಹಣೆ ಮಾಡುವುದು ಅನಿವಾರ್ಯ ಎಂದು ಕರಾವಳಿ ಕಾವಲುಪಡೆಯ ಡಿವೈಎಸ್‌ಪಿ ಕೇಡರ್‌ನ ಅಧಿಕಾರಿಯೊಬ್ಬರು “ವಿಜಯವಾಣಿಗೆ” ತಿಳಿಸಿದರು. ಕರಾವಳಿ ಕಾವಲುಪಡೆ ಎಸ್‌ಪಿ ಅವರು ವರ್ಗಾವಣೆಯಾಗಿದ್ದು, ಬೇರೆಯವರ ನೇಮಕವಾಗಿಲ್ಲ. ಹೀಗಾಗಿ ನಾವು ಅಧಿಕೃತವಾಗಿ ಮಾಧ್ಯಮಗಳಿಗೆ ಮಾಹಿತಿ ನೀಡುವಂತಿಲ್ಲ ಎಂಬುದು ಅವರ ವಿವರಣೆಯಾಗಿತ್ತು.

    ಇದನ್ನೂ ಓದಿ:ಕಲ್ಪಿತ ಕಾರ್ಯಾಚರಣೆ-ಬಂದರುಗಳಿಗೆ ಬಾಂಬ್‌ ಇಡಲು ಬಂದಿದ್ದ ಆಗಂತುಕರ ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts