More

    ಎಲ್ಲ ಯೋಜನೆಗಳಲ್ಲಿ ಫಲಾನುಭವಿಗಳಿಗೆ ವಂಶವೃಕ್ಷ ಸಲ್ಲಿಕೆ ಕಡ್ಡಾಯವಾಗಲಿ

    ಕೋಲಾರ: ಸರ್ಕಾರದ ಎಲ್ಲ ಯೋಜನೆಗಳಲ್ಲಿ ಫಲಾನುಭವಿಗಳಿಗೆ ವಂಶವೃಕ್ಷ ಸಲ್ಲಿಕೆ ಕಡ್ಡಾಯಗೊಳಿಸುವಂತೆ ವಿಧಾನ ಮಂಡಲದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ಅಧ್ಯಕ್ಷ ಎಸ್.ಕುಮಾರ್ ಬಂಗಾರಪ್ಪ ಜಿಲ್ಲಾಡಳಿತಕ್ಕೆ ಸಲಹೆ ನೀಡಿದರು.

    ಜಿಪಂ ಸಭಾಂಗಣದಲ್ಲಿ ಬುಧವಾರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ರಾಜ್ಯದಲ್ಲಿ ವಸತಿ ಯೋಜನೆಯಡಿ ಸಾಕಷ್ಟು ಗೋಲ್‌ಮಾಲ್ ಆಗಿದೆ. ಫಲಾನುಭವಿಗಳ ವಂಶವೃಕ್ಷ ಕಡ್ಡಾಯಗೊಳಿಸಿದರೆ ಒಮ್ಮೆ ಸೌಲಭ್ಯ ಪಡೆದವರು ಮತ್ತೆ ಅರ್ಜಿ ಸಲ್ಲಿಸಿದರೆ ಸುಲಭವಾಗಿ ಪತ್ತೆ ಹಚ್ಚಬಹುದು. ಶಿವಮೊಗ್ಗದಲ್ಲಿ ಈ ಪ್ರಯತ್ನ ಫಲ ನೀಡಿದೆ. ಜಿಲ್ಲೆಯಲ್ಲೂ ಅನುಷ್ಠಾನಗೊಳಿಸಿ ಎಂದು ಸೂಚಿಸಿದರು.

    ವರದಿ ಸಲ್ಲಿಸಿ: ಹಾಸ್ಟೆಲ್‌ಗಳಲ್ಲಿ ಮೂಲಸೌಕರ್ಯ ಕೊರತೆ, ಹಾಸಿಗೆ ದಿಂಬು ಇಲ್ಲ, ಸ್ನಾನಕ್ಕೆ ಬಿಸಿನೀರು ಇಲ್ಲವೆಂದು ಹೆಣ್ಣುಮಕ್ಕಳು ಕಣ್ಣೀರು ಹಾಕಿದ್ದರು. ಅಧಿಕಾರಿಗಳನ್ನು ಕೇಳಿದರೆ ರಾಜ್ಯಮಟ್ಟದಲ್ಲಿ ಸಮಸ್ಯೆಯಿದೆ ಎನ್ನುತ್ತಾರೆ. ಸಭೆಗಳಲ್ಲಿ ತಪ್ಪು ಮಾಹಿತಿ ನೀಡುವುದು ಅಭ್ಯಾಸವಾಗಿದೆ ಎಂದು ಜಿಪಂ ಉಪಾಧ್ಯಕ್ಷೆ ಯಶೋದಾ ಕೃಷ್ಣಮೂರ್ತಿ ದೂರಿದರು. ಸ್ಪಂದಿಸಿದ ಕುಮಾರ್ ಬಂಗಾರಪ್ಪ, ನಿಜ ಪರಿಸ್ಥಿತಿ ಫೋಟೋ ಸಮೇತ ತೋರಿಸುತ್ತಿದ್ದಾರೆಂದರೆ ಇಲಾಖೆ ಅಧಿಕಾರಿಗಳ ವೈಫಲ್ಯವಿದೆ. ಪತ್ರ ಹಾಕಿಕೊಂಡು ಕಾಯುವ ದಿನ ಇದಲ್ಲ. ತಂತ್ರಜ್ಞಾನ ಬಳಸಿ ತಕ್ಷಣ ಪ್ರಕ್ರಿಯೆ ಆರಂಭಿಸಿ. ಸೌಲಭ್ಯ ಕಲ್ಪಿಸಿರುವ ಬಗ್ಗೆ ಸಮಿತಿಗೆ ವರದಿ ನೀಡಿ ಎಂದು ಜಿಪಂ ಸಿಇಒಗೆ ಹಾಗೂ ಬಿಸಿಎಂ ಅಧಿಕಾರಿಗೆ ಸೂಚಿಸಿದರು.

    ವಕ್ಫ್ ಆಸ್ತಿ ರಕ್ಷಿಸಿ: ರಾಜ್ಯದಲ್ಲಿ ವಕ್ಫ್ ಆಸ್ತಿಗಳ ಸಂಖ್ಯೆ 43,000 ಇದೆ. ಸಾಕಷ್ಟು ಕಡೆ ಒತ್ತುವರಿ, ಪರಭಾರೆ ಆಗಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಜಿಲ್ಲೆಯಲ್ಲಿರುವ 1004 ಆಸ್ತಿಗಳ ಖಾತೆ ಮಾಡಿಸಿ, ಆದಾಯ ಸಂಗ್ರಹಣೆಗೆ ಒತ್ತು ನೀಡಿ. ಮದರಸಾಗಳಲ್ಲಿ ಕನ್ನಡ, ಇಂಗ್ಲಿಷ್ ಪಠ್ಯ ಬೋಧನೆ ಕಡ್ಡಾಯಗೊಳಿಸಿ ಎಂದು ಅಲ್ಪಸಂಖ್ಯಾತರ ಕಲ್ಯಾಣ ಅಧಿಕಾರಿ ಮೈಲಾರಪ್ಪಗೆ ಸೂಚಿಸಿದರು.

    ಬಿಸಿಎಂ ಆಯುಕ್ತ ವಸಂತಕುಮಾರ್, ಹಾಸ್ಟೆಲ್‌ಗಳಿಗೆ ಮೂಲಸೌಲಭ್ಯ, ಆಹಾರ ಪದಾರ್ಥ ಸೇರಿ ಜಿಲ್ಲಾ ಹಂತದಲ್ಲೇ ಖರೀದಿಗೆ ಅಧಿಕಾರ ನೀಡಲಾಗಿದೆ. ಅಗತ್ಯ ಅನುದಾನ ಬಿಡುಗಡೆ ಮಾಡಲಾಗಿದೆ ಎಂದರು.

    ಸಮಿತಿ ಸದಸ್ಯ ಟಿ.ವೆಂಕಟರಾಮಯ್ಯ, ರೈತರಿಂದ ರಾಗಿ ಬೆಂಬಲ ಬೆಲೆಗೆ ಖರೀದಿಗೆ ನಿಗದಿಪಡಿಸಿದ ಮಾನದಂಡ ಸಡಿಲಗೊಳಿಸಲು ಸಮಿತಿ ಅಧ್ಯಕ್ಷರು ಸರ್ಕಾರದ ಮಟ್ಟದಲ್ಲಿ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.

    ಡಿಸಿ ಜೆ.ಮಂಜುನಾಥ್ ಜಿಲ್ಲೆಯ ಚಿತ್ರಣ ನೀಡಿ ಬಿಸಿಎಂ, ಅಲ್ಪಸಂಖ್ಯಾತರ ಕಲ್ಯಾಣ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಕಾಲ ಕಾಲಕ್ಕೆ ಪರಿಶೀಲನಾ ಸಭೆ ನಡೆಸಲಾಗುತ್ತಿದೆ. ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿರುವ ಹಾಸ್ಟೆಲ್, ಸ್ಮಶಾನ, ಸಮುದಾಯ ಭವನಕ್ಕೆ ಜಾಗ, ವಸತಿ ಯೋಜನೆ ಅನುಷ್ಠಾನಕ್ಕೆ ಕ್ರಮ ವಹಿಸಲಾಗಿದೆ ಎಂದರು.

    ಸಮಿತಿ ಸದಸ್ಯರಾಗಿರುವ ಶಾಸಕರಾದ ದಿನಕರ್ ಶೆಟ್ಟಿ, ಸುಭಾಷ್ ಗುತ್ತೇದಾರ್, ಡಿ.ವೇದವ್ಯಾಸ ಕಾಮತ್, ಉಮಾನಾಥ್ ಎ.ಕೋಟ್ಯಾನ್, ಬಳ್ಳಾರಿ ವಿರೂಪಾಕ್ಷ ರುದ್ರಪ್ಪ, ಬಿ.ಹರ್ಷವರ್ಧನ್, ಕುಸುಮಾವತಿ ಶಿವಳ್ಳಿ, ದೇವಾನಂದ್ ಚವ್ಹಾಣ್, ರಾಜಾ ವೆಂಕಟಪ್ಪ ನಾಯ್ಕ, ಕೆ.ಮಹದೇವ, ಐವನ್ ಡಿ.ಸೋಜಾ, ವಿವೇಕ್ ರಾವ್ ಪಾಟೀಲ್, ಜಿಪಂ ಅಧ್ಯಕ್ಷ ಸಿ.ಎಸ್.ವೆಂಕಟೇಶ್ , ಸಿಇಒ ಎಚ್. ವಿ.ದರ್ಶನ್ ಹಾಜರಿದ್ದರು.

    ಸುಳ್ಳು ಹೇಳಲು ಪ್ರಾಕ್ಟೀಸ್ ಮಾಡ್ಬೇಕು: ಸತ್ಯ ಹೇಳುವುದಕ್ಕೆ ಭಯ ಇರುವುದಿಲ್ಲ. ಆದರೆ ಸುಳ್ಳು ಹೇಳುವುದಕ್ಕೆ ಪ್ರಾಕ್ಟೀಸ್ ಮಾಡಬೇಕು, ನೀವು ಪ್ರಾಕ್ಟೀಸ್ ಮಾಡಿಲ್ಲವೆಂದು ಕಾಣುತ್ತದೆ ಎಂದು ಹಾಸ್ಟೆಲ್‌ಗೆ ಮೂಲಸೌಲಭ್ಯ ಕಲ್ಪಿಸಿರುವ ಬಗ್ಗೆ ಸಭೆಗೆ ಮಾಹಿತಿ ನೀಡಿದ ಬಿಸಿಎಂ ಜಿಲ್ಲಾ ಅಧಿಕಾರಿ ರಾಜಣ್ಣ ಅವರನ್ನು ಸಮಿತಿ ಸದಸ್ಯ ಡಿ.ವೇದವ್ಯಾಸ ಕಾಮತ್ ಛೇಡಿಸಿದರು.

    ಶಾಸಕರ ಸುಳಿವಿಲ್ಲ: ವಿಧಾನಮಂಡಲದ ಸಮಿತಿ ಜಿಲ್ಲೆಗೆ ಭೇಟಿ ನೀಡಿದ ವೇಳೆ ಜಿಲ್ಲೆಯ ಶಾಸಕರು ಹಾಜರಿದ್ದು ಬಿಸಿಎಂ, ಅಲ್ಪಸಂಖ್ಯಾತರ ಸ್ಥಿತಿಗತಿ ಬಗ್ಗೆ ಮನವರಿಕೆ ಮಾಡಿಕೊಡಬಹುದಾಗಿತ್ತು. ಆದರೆ ಜಿಲ್ಲಾ ಉಸ್ತುವಾರಿ ಸಚಿವರನ್ನು ಒಳಗೊಂಡು ಜಿಲ್ಲೆಯ ಯಾವೊಬ್ಬ ಶಾಸಕರೂ ಸುಳಿಯಲಿಲ್ಲ.

    ಪ್ರವಾಸೋದ್ಯಮ ಅಭಿವೃದ್ಧಿಪಡಿಸಿ: ಕೋಲಾರ ಜಿಲ್ಲೆಯನ್ನು ಪ್ರವಾಸೋದ್ಯಮ ತಾಣವಾಗಿ ಪರಿವರ್ತಿಸಿ ಜಿಲ್ಲೆಯ ಅಭಿವೃದ್ಧಿಗೆ ಕ್ರಮವಹಿಸಿ. ಕೋಲಾರ ಜಿಲ್ಲೆಯಲ್ಲಿ ಕೆಸಿ ವ್ಯಾಲಿಯಿಂದ ತುಂಬಿದ ಕೆರೆಗಳಲ್ಲಿ ಬೋಟಿಂಗ್ ವ್ಯವಸ್ಥೆ, ಪಾರ್ಕ್ ವ್ಯವಸ್ಥೆ ಮುಂತಾದ ಸೌಲಭ್ಯ ಕಲ್ಪಿಸಿ, ಜಿಲ್ಲೆಯ ಆದಾಯವನ್ನು ಹೆಚ್ಚಿಸಬಹುದು. ಜಿಲ್ಲೆಯು ರಾಜಧಾನಿಗೆ ಸಮೀಪವಿದ್ದು, ರಾಷ್ಟ್ರೀಯ ಹೆದ್ದಾರಿಗೆ ಜೋಡಣೆಯಾಗಿದೆ. ತಿರುಪತಿಯಂತಹ ಪ್ರಸಿದ್ಧ ಪ್ರವಾಸಿ ತಾಣದ ಮಧ್ಯದಲ್ಲಿದೆ. ಅಲ್ಲದೆ, ಸ್ಥಳೀಯವಾಗಿಯೂ ಐತಿಹಾಸಿಕ ಹಾಗೂ ಧಾರ್ಮಿಕ ಪ್ರವಾಸಿ ತಾಣಗಳು ಇದ್ದು, ಇದನ್ನು ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಬೇಕು ಎಂದು ಕುಮಾರ್ ಬಂಗಾರಪ್ಪ ಜಿಲ್ಲಾಡಳಿತಕ್ಕೆ ಸಲಹೆ ನೀಡಿದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts