More

    2ಎ ಮೀಸಲಿಗೆ ರಸ್ತೆ ಸಂಚಾರ ತಡೆದು ಆಕ್ರೋಶ: ಕುಕನೂರು ತಾಲೂಕು ವೀರಶೈವ ಲಿಂಗಾಯತ ಪಂಚಮಸಾಲಿ ಸಂಘ ಪ್ರತಿಭಟನೆ

    ಕುಕನೂರು: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಕೂಡಲಸಂಗಮದ ಶ್ರೀಬಸವಜಯ ಮೃತ್ಯುಂಜಯ ಸ್ವಾಮೀಜಿ ಕೈಗೊಂಡಿರುವ ಧರಣಿ 50ನೇ ದಿನ ಪೂರೈಸಿದ್ದರಿಂದ ತಾಲೂಕು ವೀರಶೈವ ಲಿಂಗಾಯತ ಪಂಚಮಸಾಲಿ ಸಂಘ ಶನಿವಾರ ಬನ್ನಿಕೊಪ್ಪ-ಕುಕನೂರು ರಸ್ತೆ ಸಂಚಾರ ತಡೆದು ಒಂದು ಗಂಟೆಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿತು.

    ಸಂಘದ ಜಿಲ್ಲಾಧ್ಯಕ್ಷ ಬಸನಗೌಡ ತೊಂಡಿಹಾಳ ಮಾತನಾಡಿ, ನಮ್ಮ ಸಮಾಜದಲ್ಲಿ ಬಡವರಿದ್ದಾರೆ. ಆದರೆ, ಸರ್ಕಾರ ನಮ್ಮ ಬೇಡಿಕೆ ಈಡೇರಿಸುವಲ್ಲಿ ತಾರತಮ್ಯ ಮಾಡುತ್ತಿದೆ. 2ಎ ಮೀಸಲಾತಿ ನೀಡುವಂತೆ ಕೂಡಲಸಂಗಮ ಶ್ರೀಗಳು ಹಲವು ದಿನಗಳಿಂದ ಧರಣಿ ನಡೆಸುತ್ತಿದ್ದರೂ ರಾಜ್ಯ ಸರ್ಕಾರ ನಿರ್ಲಕ್ಷಿಸುತ್ತಿದೆ ಎಂದು ದೂರಿದರು. ಪಂಚಮಸಾಲಿ ಕೃಷಿಕ ಸಮಾಜವಾಗಿದ್ದು, ನಮ್ಮ ಮಕ್ಕಳು ಎಷ್ಟೇ ಅಂಕ ಪಡೆದರೂ ಅವರಿಗೆ ಸೂಕ್ತ ಉದ್ಯೋಗ ದೊರೆಯುತ್ತಿಲ್ಲ. ಆದ್ದರಿಂದ ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ ಕೇಳುತ್ತಿದ್ದೇವೆ. ಸಿಎಂ ಬಸವರಾಜ ಬೊಮ್ಮಾಯಿ ನಮ್ಮ ಬೇಡಿಕೆಯನ್ನು ಶೀಘ್ರ ಈಡೇರಿಸಬೇಕು ಎಂದು ಆಗ್ರಹಿಸಿದರು.

    ವಕೀಲ ಎಸ್.ಎ.ನಿಂಗೋಜಿ ಮಾತನಾಡಿದರು. ಸಂಘದ ಕುಕನೂರು ತಾಲೂಕು ಅಧ್ಯಕ್ಷ ಈರಣ್ಣ ಅಣಿಗೇರಿ, ಪ್ರಮುಖರಾದ ಈಶಪ್ಪ ಆರೇರ್, ಕೆ.ಜಿ.ಪಲ್ಲೇದ್, ಆರ್.ಎಸ್.ನಿಂಗೋಜಿ, ಮಂಜುನಾಥ ನಾಡಗೌಡ, ಶರಣಪ್ಪ ರಾಂಪುರ, ಮುದಕಪ್ಪ ದೇವರ, ಮಹೇಶ ಮೈನಳ್ಳಿ, ಪ್ರಭುರಾಜ ಹಳ್ಳಿ, ರುದ್ರಗೌಡ ಸೊಲಬಗೌಡ, ಮಂಜುನಾಥಗೌಡ ಹಿರೇಗೌಡ, ಮುತ್ತಣ್ಣ ಕಲಹಳ್ಳಿ, ವೀರನಗೌಡ ಮಾಲಿಪಾಟೀಲ್, ಶರಣಪ್ಪ ದೇವರ, ನೀಲನಗೌಡ ಮಾಲಿಪಾಟೀಲ್, ಲಿಂಗನಗೌಡ ಪಾಟೀಲ್ ಇತರರಿದ್ದರು.

    ಆಂಬುಲೆನ್ಸ್‌ಗೂ ದಾರಿ ಬಿಡಲಿಲ್ಲ: ಪ್ರತಿಭಟನೆ ಸಮಯದಲ್ಲಿ ತುರ್ತಾಗಿ ಕುಕನೂರು ಸರ್ಕಾರಿ ಆಸ್ಪತ್ರೆಗೆ ಹೋಗುತ್ತಿದ್ದ ಬನ್ನಿಕೊಪ್ಪ ಗ್ರಾಮದ ಪಿಎಚ್‌ಸಿ ಆಂಬುಲೆನ್ಸ್‌ಗೂ ಸಂಘದ ಸದಸ್ಯರು ದಾರಿಬಿಡಲಿಲ್ಲ. ಬೇರೆ ರಸ್ತೆ ಮೂಲಕ ಹೋಗುವಂತೆ ಆಂಬುಲೆನ್ಸ್ ಚಾಲಕಗೆ ತಾಕೀತು ಮಾಡಿದರು. ನಂತರ ಕುಕನೂರಿಗೆ ಬೇರೆ ರಸ್ತೆ ಮೂಲಕ ತೆರಳಬೇಕಾಯಿತು. ಇನ್ನೂ ಸಾರಿಗೆ ಬಸ್‌ಗಳು ಕೂಡ ಹೊಲದ ದಾರಿಯಲ್ಲಿ ಸಾಗಿದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts