More

    ಕಾಮಗಾರಿಗೂ ಮುನ್ನ ರೈತರ ಖಾತೆಗೆ ಹಣ ; ಶ್ರೀರಂಗ ಏತ ನೀರಾವರಿ ಕಾಮಗಾರಿ ಭೂ ಮಾಲೀಕರ ಸಭೆ ; ಆತಂಕ ಬೇಡ ಎಂದ ಎಡಿಸಿ ಕೆ.ಚನ್ನಬಸಪ್ಪ

    ಕುಣಿಗಲ್ : ಹೇಮಾವತಿ ನಾಲೆ ಕಾಮಗಾರಿಗೆ ಜಮೀನು ಬಿಟ್ಟು ಕೊಟ್ಟ ರೈತರಿಗೆ ಈವರೆಗೂ ಪರಿಹಾರ ನೀಡಲ್ಲ. ಈಗ ಶ್ರೀರಂಗ ಏತ ನೀರಾವರಿ ಯೋಜನೆಗೆ ಜಮೀನು ಪಡೆಯಲು ಬಂದಿದ್ದೀರಾ.. ಮೊಲದು ರೈತರ ಖಾತೆಗೆ ಹಣ ಹಾಕಿ ಬಳಿಕ ಜಮೀನು ಬಿಟ್ಟುಕೊಡುತ್ತೇವೆ ಎಂದು ಭೂ ಮಾಲೀಕರು ಆಕ್ರೋಶ ಹೊರಹಾಕಿದರು.

    ಹುತ್ರಿದುರ್ಗ ಹೋಬಳಿ ಹಾಲುವಾಗಲು ಗ್ರಾಮದಲ್ಲಿ ಮಂಗಳವಾರ ಭೂ ಮಾಲೀಕರ ಹಾಗೂ ಸಾರ್ವಜನಿಕರ ಸಭೆಯಲ್ಲಿ ಶ್ರೀರಂಗ ಏತನೀರಾವರಿ ಯೋಜನೆಗೆ ಜಮೀನು ವಶ ಪಡಿಸಿಕೊಳ್ಳುವ ಮುನ್ನ ರೈತರ ಖಾತೆಗೆ ಹಣ ಹಾಕದ ಹೊರತು ಜಮೀನು ಬಿಟ್ಟುಕೊಡುವುದಿಲ್ಲವೆಂದು ರೈತರು ಹಾಗೂ ಭೂ ಮಾಲೀಕರು ತಿರುಗಿಬಿದ್ದರು.

    ಸದಾ ಬರಗಾಲದಿಂದ ಕೂಡಿರುವ ಹುತ್ರಿದುರ್ಗ ಹೋಬಳಿಯ ರೈತರು ಇರುವ ಅಲ್ಪ ಸ್ವಲ್ಪ ಜಮೀನು ಇಟ್ಟುಕೊಂಡು ಮಳೆಯನ್ನೇ ಅವಲಂಬಿಸಿಕೊಂಡು ವ್ಯವಸಾಯ ಮಾಡುತ್ತಿದ್ದಾರೆ. ಈಗ ನೀರಾವರಿ ಯೋಜನೆಗೆ ಭೂಮಿ ಸ್ವಾಧೀನಪಡಿಸಿಕೊಂಡರೆ ರೈತ ಕುಟುಂಬಗಳು ಜೀವನಾಂಶಕ್ಕೆ ಏನು ಮಾಡಬೇಕು. ಕಸಬಾ ಹೋಬಳಿ ಕಿತ್ನಮಂಗಲ, ಕಾಡುಮತ್ತಿಕೆರೆ, ಸಂತೇಮಾವತ್ತೂರು ಸೇರಿ ಹಲವು ಗ್ರಾಮಗಳ ರೈತರ ಜಮೀನನ್ನು ಹೇಮಾವತಿ ನಾಲೆ ನಿರ್ಮಾಣ ಕಾಮಗಾರಿಗೆ ಬಿಟ್ಟುಕೊಟ್ಟು ಹತ್ತಾರು ವರ್ಷ ಕಳೆದರೂ ಈವರೆಗೂ ರೈತರಿಗೆ ಪರಿಹಾರ ಬಂದಿಲ್ಲ, ಹೀಗಾದರೇ ರೈತರ ಗತಿ ಏನು ಎಂದು ರೈತರು ಪ್ರಶ್ನಿಸಿದರು.

    ಆತಂಕ ಬೇಡ : ಶ್ರೀರಂಗ ಕುಡಿಯುವ ನೀರಿನ ಯೋಜನೆಯ ಮುಖ್ಯ ಕಾಲುವೆ ನಿರ್ಮಾಣದ ಉದ್ದೇಶಕ್ಕಾಗಿ ಭೂ ಮಾಲೀಕರ ಪುನರ್ ವಸತಿ ಹಾಗೂ ಪುನರ್ ನಿರ್ಮಾಣ ಕೈಗೊಳ್ಳಲು ಪಟ್ಟಿ ತಯಾರಿಸಿದ್ದು, ಯಾವುದೇ ಕಾರಣಕ್ಕೂ ಜಮೀನು ನೀಡಿದ ರೈತರಿಗೆ ಅನ್ಯಾಯವಾಗುವುದಿಲ್ಲ, ಶ್ರೀರಂಗ ಏತಾ ನೀರಾವರಿ ಕಾಮಗಾರಿ ಆರಂಭಕ್ಕೂ ಮುನ್ನ ಜಮೀನು ಬಿಟ್ಟುಕೊಟ್ಟ ರೈತರ ಖಾತೆಗೆ ಹಣ ಹಾಕಿದ ಬಳಿಕ ಕಾಮಗಾರಿ ಪ್ರಾರಂಭಿಸಲಾಗುವುದು. ಯಾರೂ ಆತಂಕಕ್ಕೊಳಗಾಗುವುದು ಬೇಡ ಎಂದು ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ ಭರವಸೆಯಿತ್ತರು.

    ಈ ಕಾಮಗಾರಿಗೆ ಹುತ್ರಿದುರ್ಗ, ಬೇಗೂರು, ಯಲಿಯೂರು ಗ್ರಾಪಂ ವ್ಯಾಪ್ತಿಯ ಹಳ್ಳಿಗಳಲ್ಲಿನ ರೈತರ ಸುಮಾರು 19 ಎಕರೆ ಜಮೀನನ್ನು ಕಾಲುವೆ ನಿರ್ಮಾಣಕ್ಕೆ ಸ್ವಾಧೀನಪಡಿಸಿಕೊಳ್ಳಲು ಉದ್ದೇಶಿಸಲಾಗಿದೆ. ಈ ಭಾಗದಲ್ಲಿ 19 ಕೆರೆಗಳಿಗೆ ನೀರು ತುಂಬಿಸಲಿದ್ದು ಜನ, ಜಾನುವಾರಗಳ ಕುಡಿಯುವ ನೀರಿಗೆ ಅನುಕೂಲವಾಗಲಿದೆ. ಶೇ.50 ಭೂಮಿ, ಮನೆ, ಅಂಗಡಿ ಮಳಿಗೆ ಕಳೆದುಕೊಂಡವರಿಗೆ ಪುನರ್ ವಸತಿ, ಹಕ್ಕು ನೀಡಲಾಗುವುದು. ಈ ಸಂಬಂಧ ಸೂಕ್ತವಾದ ದಾಖಲೆಗಳನ್ನು ತುಮಕೂರು ಉಪ ವಿಭಾಗಾಧಿಕಾರಿ, ಕುಣಿಗಲ್ ತಹಸೀಲ್ದಾರ್‌ಗೆ ನೀಡುವಂತೆ ರೈತರಲ್ಲಿ ಮನವಿ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts