More

    ಸಹಾಯದಿಂದ ವ್ಯಕ್ತಿಯ ಮನೋಬಲ ವೃದ್ಧಿ

    ಕೂಡ್ಲಿಗಿ: ದಾನ ಮತ್ತು ನಿಸ್ವಾರ್ಥ ಸಮಾಜ ಸೇವೆ ಮಾಡುವುದರಲ್ಲಿ ಇರುವ ಸುಖ ಮತ್ತಾವುದರಲ್ಲೂ ಇಲ್ಲ ಎಂದು ಹರಿಹರ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ ಹೇಳಿದರು.

    ಪಟ್ಟಣದಲ್ಲಿ ಶ್ರೀ ಬಂಗಾರು ಹನುಮಂತು ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಹಾಗೂ ಮುತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಮತ್ತು ಶ್ರೀಬಂಗಾರು ನಿಲಯದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯವಹಿಸಿ ಶುಕ್ರವಾರ ಮಾತಾನಾಡಿದರು.

    ಒಬ್ಬ ವ್ಯಕ್ತಿಯಿಂದ ಏನನ್ನಾದರೂ ಸ್ವೀಕಾರ ಮಾಡಿದರೆ ಆ ಸಹಾಯದ ಋಣ ತೀರಿಸುವ ಸೌಜನ್ಯದ ಭಾರ ನಮ್ಮ ಹೆಗಲೇರುತ್ತದೆ. ಆದರೆ ಫಲಾಪೇಕ್ಷೆಯಿಲ್ಲದೆ ಬೇರೆಯವರಿಗೆ ನಾವೇ ಸಹಾಯ ಮಾಡಿದರೆ ಮನಸ್ಸು ಪ್ರಫುಲ್ಲವಾಗುತ್ತದೆ. ಇದರಿಂದ ಸಮಾಜದಲ್ಲಿ ಉನ್ನತ ಸ್ಥಾನವೂ ಲಭಿಸುತ್ತದೆ ಎಂದರು.

    ಹೆಚ್ಚು ಸಹಾಯ ಮಾಡಿದಷ್ಟು ವ್ಯಕ್ತಿಯ ಮನೋಬಲ ವೃದ್ಧಿಯಾಗುತ್ತದೆ. ಆತನಿಗೆ ತನ್ನನ್ನು ತಾನು ಕಂಡುಕೊಂಡ ತೃಪ್ತಿ ಸಿಗುತ್ತದೆ. ನನ್ನಿಂದಾಗಿ ಮತ್ತೊಬ್ಬರ ಬದುಕಿನಲ್ಲಿ ಬೆಳಕು ಮೂಡುತ್ತಿದೆ ಎಂಬ ಭಾವ ಬೆಳೆಯುತ್ತದೆ. ಹೀಗಾಗಿಯೇ ದಾನಿಗಳ ಮನಸ್ಸು ಸದಾ ಸಂತೋಷದಿಂದ ಕೂಡಿರುತ್ತದೆ ಎಂದು ತಿಳಿಸಿದರು.

    ಬಂಗಾರು ಹನುಮಂತು ಟ್ರಸ್ಟ್ ಬಂಗಾರು ಹನುಮಂತು ಗೃಹ ಪ್ರವೇಶ ನೆಪದಲ್ಲಿ ಸಾಮೂಹಿಕ ಮದುವೆ, ಮುತೈದೆಯರಿಗೆ ಉಡಿ ತುಂಬುವ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಮಾಡಿರುವುದು ಶ್ಲಾಘನಾರ್ಹ ಕಾರ್ಯ. ಮನುಷ್ಯ ತಾನು ಬದುಕುವ ಜತೆ ಸಮಾಜವು ಬದುಕಲಿ ಎಂಬ ಬಯಕೆ ಆತನನ್ನು ಉತ್ತುಂಗಕ್ಕೆ ಕರೆದುಕೊಂಡು ಹೋಗಲು ಸಹಾಯ ಮಾಡುತ್ತದೆ ಎಂದರು.

    ಉನ್ನತ ಶಿಕ್ಷಣ ಸಚಿವ ಸಿ.ಎನ್. ಅಶ್ವತ್ಥನಾರಯಣ, ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನನಾಂದ ಸ್ವಾಮೀಜಿ, ಕೂಡ್ಲಿಗಿ ಹಿರೇಮಠದ ಶ್ರೀ ಪ್ರಶಾಂತ ಸಾಗರ ಶಿವಾಚಾರ್ಯ ಸ್ವಾಮೀಜಿ, ಹಿರೇಹಡಗಲಿಯ ಹಾಲಸ್ವಾಮೀಜಿ, ಕಾನಮಡುಗು ಶರಣಾರ್ಯರು ಕಾರ್ಯಕ್ರಮ ಕುರಿತು ಮಾತಾನಾಡಿದರು. ಇದೇ ಸಂಧರ್ಭದಲ್ಲಿ ಹನ್ನೊಂದು ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟವು. ಸಾವಿರಾರು ಮುತೈದೆಯರಿಗೆ ಉಡಿ ತುಂಬಲಾಯಿತು. ಸಮಾಜದ ನಾನಾ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಮಾಡಲಾಯಿತು. ಸಂತ ಸೇವಾಲಾಲ್ ಪ್ರಕಾಶ್ ಸ್ವಾಮೀಜಿ, ಮಾದರ ಚನ್ನಯ್ಯ ಸ್ವಾಮೀಜಿ, ಉದ್ಯಮಿ ಗುಳಿಗೆ ವೀರೇಂದ್ರ, ಬಂಗಾರು ಸೋಮಣ್ಣ, ಬಂಗಾರು ಹುಲಿಗೆಮ್ಮ, ಬಂಗಾರು ಹನುಮಂತು ಉಪಸ್ಥಿತರಿದ್ದರು. ತಾಲೂಕಿನ ಸಾವಿರಾರು ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts