More

    ಯುಗಾದಿ ಬಂದರೆ ಈ ಮನೆಗಳಲ್ಲಿ ಸೂತಕದ ಛಾಯೆ!

    ಹಬ್ಬ ಆಚರಿಸದ ಕುಟುಂಬಗಳು, ಸ್ನಾನ-ಪೂಜೆಯೂ ಇಲ್ಲ ಬೇವಿನ ಸೊಪ್ಪನ್ನು ಮುಟ್ಟುವುದಿಲ್ಲ

    ಕೂಡ್ಲಿಗಿ ಪಟ್ಟಣದ ಗುಪ್ಪಾಲ್-ಜಿಂಕಾಲ್ ಓಣಿಗಳಲ್ಲಿ ಕಾಣದ ಯುಗಾದಿ ಸಂಭ್ರಮ.

    ವೀರೇಶ ಅಂಗಡಿ


    ಕೂಡ್ಲಿಗಿ: ಭಾರತದ ಪ್ರಮುಖ ಹಬ್ಬಗಳಲ್ಲಿ ಯುಗಾದಿ ಕೂಡ ಒಂದು. ಈ ಹಬ್ಬವನ್ನು ಹಿಂದುಗಳು ಚೈತ್ರ ಮಾಸದ ಮೊದಲ ದಿನ ಆಚರಿಸುತ್ತಾರೆ. ಅಚ್ಚರಿಯೆಂದರೆ ಪಟ್ಟಣದ ಹಲವೆಡೆ ಮತ್ತು ತಾಲೂಕಿನ ಕೆಲ ಗ್ರಾಮಗಳಲ್ಲಿ ಯುಗಾದಿ ಹಬ್ಬ ನಿಷಿದ್ಧ ಎಂದರೆ ನಂಬಲೇಬೇಕು.

    ಪಟ್ಟಣದ ಗುಪ್ಪಾಲ್, ಕಾವಲ್ಲಿ, ಜಿಂಕಾಲ್, ಭಂಗಿ, ಮಲ್ಲಾಪುರದ ವಂಶಸ್ಥರು ಹಾಗೂ ತಾಲೂಕಿನ ಅಗ್ರಹಾರದ ದೊಡ್ಡಮನೆ ಕುಟುಂಬದವರು ಸೇರಿದಂತೆ ತಾಲೂಕಿನ ಬಾರಿಕರು, ಉಪ್ಪಾರು ಮನೆಗಳಲ್ಲಿ ಯುಗಾದಿ ಆಚರಿಸುವುದಿಲ್ಲ. ಇಡೀ ಪ್ರಕೃತಿ ಹೊಸತನಕ್ಕೆ ಹಾತೊರೆಯುವಾಗ ಇಲ್ಲಿ ಮಾತ್ರ ಹಬ್ಬ ಸೂತಕವಂತೆ. ಈ ಕುಟುಂಬಗಳಿಗೆ ಯುಗಾದಿ ಸೂತಕದ ಛಾಯೆ. ಹಬ್ಬ ಆಚರಿಸಿದರೆ ಕೇಡಾಗುತ್ತದೆ ಎನ್ನುವ ನಂಬಿಕೆ ಇಲ್ಲಿದೆ. ಹೀಗಾಗಿ ವಂಶಪಾರಂಪರ್ಯವಾಗಿ ಯುಗಾದಿ ಆಚರಿಸುತ್ತಿಲ್ಲ. ಇನ್ನೂ ಅಚ್ಚರಿಯೆಂದರೆ ಯುಗಾದಿ ಅಮಾವಾಸ್ಯೆ ಹಾಗೂ ಪಾಡ್ಯ ದಿನ ಈ ಕುಟುಂಬಗಳ ಮನೆಗಳಲ್ಲಿ ಸ್ನಾನವೂ ನಿಷಿದ್ಧ. ಪೂಜೆ-ಪುನಸ್ಕಾರಗಳು ಸಹ ನಡೆಯಲ್ಲ. ಪದಾರ್ಥಗಳನ್ನು ಕರಿಯುವಂತಿಲ್ಲ ಮತ್ತು ತಿನ್ನುವಂತಿಲ್ಲ. ಬೇವಿನ ಸೊಪ್ಪನ್ನು ಮುಟ್ಟುವುದಿಲ್ಲ. ಆದರೆ, ಹಬ್ಬ ಆಚರಿಸುವ ಸುತ್ತಲಿನ ಮನೆಯವರು, ಸ್ನೇಹಿತರು, ಹಿತೈಷಿಗಳು ಇವರಿಗೆ ಬೇವು-ಬೆಲ್ಲದ ಮಿಶ್ರಣದ ಪುಡಿ ಮತ್ತು ಸಿಹಿ ಪದಾರ್ಥವನ್ನು ತಿನ್ನಿಸಿದಾಗಲೆ ಇವರು ಮೈಲಿಗೆಯನ್ನು ಕಳೆಯುತ್ತಾರಂತೆ. ನಂತರವೇ ಇವರು ಸ್ನಾನ, ಪೂಜಾ ಕೈಂಕರ್ಯ ನಡೆಸುತ್ತಾರೆ. ಅಲ್ಲಿಯವರೆಗೂ ಇವರ ಮನೆಗಳಲ್ಲಿ ನೀರವ ಮೌನ.

    ಗುಪ್ಪಾಲ್ ವಂಶದಲ್ಲಿ ಹಿಂದೊಮ್ಮೆ ಪೂರ್ವಜರು ಯುಗಾದಿ ದಿನ ಬಾಗಿಲಿಗೆ ತೋರಣ ಕಟ್ಟಲು ಮಾವಿನ ಎಲೆ ತರಲು ತೋಟಕ್ಕೆ ಹೋಗಿ, ಮರದಿಂದ ಬಿದ್ದು ಮೃತಪಟ್ಟಿದ್ದರು. ಇದರಿಂದಾಗಿ ಇವರು ಯುಗಾದಿ ಆಚರಣೆ ಕೈಬಿಟ್ಟಿದ್ದಾರೆ. ಅಗ್ರಹಾರ ಗ್ರಾಮದ ದೊಡ್ಡಮನೆ ಕುಟುಂಬದ ಪೂರ್ವಿಕರು ಹಬ್ಬದ ದಿನ ಬೇವಿನ ಎಲೆ ತರಲು ಹೋಗಿ ಹಾವಿನಿಂದ ಕಚ್ಚಿಸಿಕೊಂಡು ಸಾವಿಗೀಡಾಗಿದ್ದರು. ಈ ಕಾರಣಕ್ಕೆ ಇವರೂ ಹಬ್ಬವನ್ನು ಸೂತಕ ಎಂದು ನಂಬಿದ್ದು, ಆಚರಿಸುವುದಿಲ್ಲ. ಆದರೆ, ನೆರೆಯ ಸ್ನೇಹಿತರು, ಹಿತೈಷಿಗಳು ಇದೊಂದು ಮೂಢನಂಬಿಕೆ, ಇದನ್ನು ಕೈಬಿಡಿ ಎಂದು ಹಬ್ಬ ಆಚರಿಸಲು ಒತ್ತಾಯಿಸಿದ್ದರು. ಆಗ ಆಚರಣೆಗೆ ಮುಂದಾದಾಗ ಕಾಕತಾಳೀಯವೆಂಬಂತೆ ಹಬ್ಬ ಆಚರಿಸಿದ ದಿನವೇ ಮನೆಗಳಲ್ಲಿ ಸಾವುಗಳು ಉಂಟಾಗಿವೆ ಎನ್ನುತ್ತಾರೆ ಗುಪ್ಪಾಲ್ ಕಾರಪ್ಪ, ಅಗ್ರಹಾರದ ದೊಡ್ಡಮನೆ ಸಿದ್ದಲಿಂಗಪ್ಪ. ಆದ್ದರಿಂದ ಹಬ್ಬವನ್ನು ಸಂಪೂರ್ಣ ಕೈ ಬಿಡಬೇಕಾಯಿತು ಎನ್ನುತ್ತಾರೆ ಕುಟುಂಬದವರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts