More

    ಪುರ ಪ್ರವೇಶಿಸಿದ ಶಕ್ತಿದೇವತೆ ಬರಗೇರಮ್ಮ

    ಚಿತ್ರದುರ್ಗ: ಕೋಟೆನಗರಿಯ ಶಕ್ತಿದೇವತೆ ಬರಗೇರಮ್ಮನ ಜಾತ್ರೆ ದಿನೇ ದಿನೆ ಕಳೆಗಟ್ಟುತ್ತಿದ್ದು, ಮಹೋತ್ಸವದ ಅಂಗವಾಗಿ ಮಂಗಳವಾರ ರಾತ್ರಿ ದೇವಿಯ ಎರಡು ಉತ್ಸವ ಮೂರ್ತಿಗಳನ್ನು ವಿವಿಧ ಬಗೆಯ ಪುಷ್ಪಗಳಿಂದ ವಿಶೇಷವಾಗಿ ಅಲಂಕರಿಸಿ ಪೂಜಿಸಲಾಯಿತು. ನಂತರ ದೇಗುಲದಿಂದ ಹೊರಟು ಪುರ ಪ್ರವೇಶಿಸುತ್ತಿದ್ದಂತೆ ಭಕ್ತೋತ್ಸಾಹ ಮುಗಿಲುಮುಟ್ಟಿತು.

    ಬುರುಜನಹಟ್ಟಿಯ ದೇವಿಯ ಪಾದದ ಗುಡಿಯಿಂದ ಹೊಳಲ್ಕೆರೆ ರಸ್ತೆಯ ಮೂಲ ದೇಗುಲಕ್ಕೆ ಮೆರವಣಿಗೆ ಮೂಲಕ ಜಾತ್ರೆಯ ಸಂಪ್ರದಾಯದಂತೆ ಕರೆತರಲಾಯಿತು. ಉರುಮೆ, ತಮಟೆ, ಕಹಳೆ ಸೇರಿ ಮಂಗಳವಾದ್ಯಗಳು ಮೆರುಗು ನೀಡಿದವು. ಉಧೋ ಉಧೋ ಹಷೋದ್ಗಾರ ಮೊಳಗಿತು.

    ಸುಸಜ್ಜಿತ ಉಚ್ಛಾಯದಲ್ಲಿ ಪ್ರತಿಷ್ಠಾಪಿಸಿದ್ದ ಉತ್ಸವ ಮೂರ್ತಿಯನ್ನು ದೇವಿಯ ತವರೂರು ಎಂದೇ ಕರೆಯಲಾಗುವ ಕರಿಯಟ್ಟಿಗೆ ನೂರಾರು ಭಕ್ತರು ಕರೆತಂದರು. ನಂತರ ಗ್ರಾಮಸ್ಥರು ವಿಶೇಷ ಪೂಜೆ ಸಲ್ಲಿಸಿ, ಮಡಿಲಕ್ಕಿ ಸಮರ್ಪಿಸಿದರು. ಅಲ್ಲಿಂದ ವಿಶೇಷ ಅಲಂಕಾರ ಸೇವೆಯೊಂದಿಗೆ ಐತಿಹಾಸಿಕ ಚಂದ್ರವಳ್ಳಿಗೆ ಮೇ 1ರಂದು ಭಕ್ತರು ಕರೆತರಲಿದ್ದಾರೆ. ಅಂದು ಕೆರೆ ಆವರಣದಲ್ಲಿ ಗಂಗಾ ಪೂಜೆ, ಕುಂಭಾಭಿಷೇಕವೂ ಸಾವಿರಾರು ಭಕ್ತರ ಸಮ್ಮುಖದಲ್ಲಿ ಜರುಗಲಿದೆ.

    ಬುರುಜನಹಟ್ಟಿ ಮುಖ್ಯ ರಸ್ತೆ ಈಗಾಗಲೇ ವಿಶೇಷವಾಗಿ ವಿದ್ಯುದ್ದೀಪಾಲಂಕಾರದಿಂದ ಸಿಂಗಾರಗೊಂಡು ಕಂಗೊಳಿಸುತ್ತಿದ್ದು, ದೇವಿಯ ಮೂಲ ದೇಗುಲವೂ ಇದಕ್ಕೆ ಹೊರತಾಗಿಲ್ಲ.

    ಮೂಲ ಗುಡಿಗೆ ಪ್ರವೇಶ: ಉಜ್ಜಯನಿ ಮಠದ ರಸ್ತೆಯಲ್ಲಿರುವ ತ್ರಿಪುರಸುಂದರಿ ತಿಪ್ಪನಘಟ್ಟಮ್ಮ ದೇವಿಯ ಪಾದದ ಗುಡಿಯಿಂದ ಹೊರಟ ಉತ್ಸವ ಮೂರ್ತಿಯನ್ನು ಜೋಗಿಮಟ್ಟಿ ರಸ್ತೆಯಲ್ಲಿರುವ ಮೂಲ ಸನ್ನಿಧಿಗೆ ಮಂಗಳವಾರ ಕರೆತರಲಾಯಿತು. ಇದಕ್ಕೂ ಮುನ್ನ ಕೆಂಚನಾರಹಟ್ಟಿಯಲ್ಲಿರುವ ಕಾಟಲಿಂಗೇಶ್ವರ ಸ್ವಾಮಿ ದೇಗುಲದ ಗುಡಿಕಟ್ಟಿನ ಅಣ್ಣ-ತಮ್ಮಂದಿರು, ಕೆಳಗೋಟೆಯ ಗೌಡರ ವಂಶಸ್ಥರಿಂದ ಎಡೆ, ಬಿಡಾರ ಮೀಸಲು ಸಮರ್ಪಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts