More

    ಜನರ ನಂಬಿಕೆಯಂತೆ ಕೆಲಸ ನಿರ್ವಹಿಸಿರುವೆ

    ಕೂಡ್ಲಿಗಿ: ಹಿಂದುಳಿದ ತಾಲೂಕನ್ನು ಸರ್ವಾಂಗೀಣ ಅಭಿವೃದ್ಧಿ ಮಾಡುವ ಮೂಲಕ ಕ್ಷೇತ್ರದ ಜನರ ನಂಬಿಕೆ ಉಳಿಸಿಕೊಂಡಿದ್ದೇನೆ ಎಂದು ಶಾಸಕ ಎನ್.ವೈ.ಗೋಪಾಲಕೃಷ್ಣ ಹೇಳಿದರು.

    ತಾಲೂಕಿನ ಹಿರೆಹೆಗ್ಡಾಳ್ ಬಳಿ 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲಾ ಕಟ್ಟಡ ಲೋಕಾರ್ಪಣೆಗೊಳಿಸಿ ಶುಕ್ರವಾರ ಮಾತನಾಡಿದರು. ಕಳೆದ ಐದು ವರ್ಷಗಳಲ್ಲಿ ಶಿಕ್ಷಣ, ವಸತಿ, ನೀರಾವರಿ ಸೇರಿದಂತೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಯೋಜನೆ ಹಾಗೂ ಮೂಲ ಸೌಕರ್ಯ ಒದಗಿಸುವ ಕೆಲಸ ಮಾಡಿದ್ದೇನೆ. 2,600 ಕೋಟಿ ರೂ. ಅನುದಾನದಲ್ಲಿ ಕ್ಷೇತ್ರ ಅಭಿವೃದ್ಧಿಪಡಿಸಿದ ಆತ್ಮತೃಪ್ತಿ ನನಗಿದೆ ಎಂದರು.

    ಶಿಕ್ಷಣವಿದ್ದರೆ ಮನುಷ್ಯ ಎಲ್ಲಾದರೂ ಬದುಕಬಹುದೆಂಬ ದೃಷ್ಟಿಯಿಂದ 450 ಸರ್ಕಾರಿ ಶಾಲೆಗಳಿಗೆ ಕೊಠಡಿ, ಕಾಂಪೌಂಡ್, ಶೌಚಗೃಹ, 65 ಶಾಲೆಗಳಿಗೆ ಸ್ಮಾರ್ಟ್‌ಕ್ಲಾಸ್ ನೀಡಿದ್ದೇನೆ. 10 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಡಿಪ್ಲೊಮಾ ಕಾಲೇಜು ಕಟ್ಟಡ ನಿರ್ಮಾಣ ಮಾಡಿದ್ದು ಇದರಿಂದ ಗ್ರಾಮೀಣ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಕಾಲೇಜಿಗೆ ಹೊಸ ವಿಭಾಗಗಳನ್ನು ತೆರೆಯಲು ಸರ್ಕಾರದ ಮಟ್ಟದಲ್ಲಿ ಮಾತಾನಾಡಿ ಮಂಜೂರು ಮಾಡಿಸಿದ್ದೇನೆ. ಗ್ರಾಮೀಣ ಮಕ್ಕಳ ಶಿಕ್ಷಣಕ್ಕಾಗಿ ಅಂಬೇಡ್ಕರ್ ವಸತಿ ಶಾಲೆಗೆ 9 ಕೋಟಿ ಹಾಗೂ ಏಕಲವ್ಯ ವಸತಿ ಶಾಲೆಗೆ 15 ಕೋಟಿ ರೂ. ಅನುದಾನ ನೀಡಿದ್ದೇನೆ ಎಂದು ತಿಳಿಸಿದರು.

    ಸುಂದರ ಪಟ್ಟಣಕ್ಕಾಗಿ ಬಸವೇಶ್ವರ ವೃತ್ತದಿಂದ ಕೊಟ್ಟರು ರಸ್ತೆ ವರೆಗೆ 2.25 ಕೋಟಿ ರೂ. ವೆಚ್ಚದಲ್ಲಿ ನವೀಕೃತ ವಿದ್ಯುತ್ ದೀಪ ಅಳವಡಿಕೆ ಕಾಮಗಾರಿ, ಡಿಎಂಎಫ್ ಯೋಜನೆಯ 1.40 ಕೋಟಿ ವೆಚ್ಚದಲ್ಲಿ ಗುರುಭವನ ಕಾಮಗಾರಿ, 3.22 ಕೋಟಿ ವೆಚ್ಚದಲ್ಲಿ ತಾಲೂಕಿನ ಬಡೇಲಡಕು, ತುಪ್ಪಕನಹಳ್ಳಿ, ಟಿ.ಬಸಾಪುರ, ಸುಂಕದಕಲ್ಲು, ಉಜ್ಜಿನಿ, ಮಂಗಾಪುರ, ಹಿರೆವಡ್ಡರಹಳ್ಳಿಯ ಕೆರೆ ದುರಸ್ತಿ ಕಾಮಗಾರಿಗೆ ಭೂಮಿಪೂಜೆ ನೇರವೇರಿಸಲಾಗಿದೆ. 2.20 ಕೋಟಿ ರೂ. ವೆಚ್ಚದಲ್ಲಿ ಚೌಡಾಪುರ ಕೆರೆ ಏರಿಯ ಮೇಲಿನ ರಸ್ತೆ ಅಭಿವೃದ್ಧಿಗೂ ಚಾಲನೆ ನೀಡಿರುವುದಾಗಿ ತಿಳಿಸಿದರು.

    ಪಪಂ ಉಪಾಧ್ಯಕ್ಷೆ ರೇಣುಕಾ ದುರುಗೇಶ್, ಗ್ರಾಪಂ ಅಧ್ಯಕ್ಷೆ ಅಶ್ವಿನಿ ಪಕ್ಕಿರಪ್ಪ, ತಾಪಂ ಇಒ ವೈ.ರವಿಕುಮಾರ್, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಗುಂಡುಮುಣುಗು ತಿಪ್ಪೇಸ್ವಾಮಿ, ಮುಖಂಡರಾದ ಕೆ.ಎಂ.ತಿಪ್ಪೇಸ್ವಾಮಿ, ಪಪಂ ಸದಸ್ಯರಾದ ಪಿ.ಚಂದ್ರು, ಕಾವಲಿ ಶಿವಪ್ಪನಾಯಕ, ಬಿ.ಭೀಮೇಶ್, ಸುರೇಶ್, ಎಸ್.ದುರುಗೇಶ್, ನಾರಾಯಣ, ಎಸ್ಟಿ ಅಧಿಕಾರಿ ಮೆಹಬೂಬ್ ಬಾಷಾ, ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಪ್ರಾಚಾರ್ಯ ನಾಗರಾಜ್ ಕನ್ನಿಹಳ್ಳಿ, ಸಣ್ಣ ನಿರಾವರಿ ಇಲಾಖೆ ಎಇಇ ರಾಮಾಂಜನೇಯ, ಲೋಕೋಪಯೋಗಿ ಇಲಾಖೆ ಎಇಇ ಸುದರ್ಶನ ರೆಡ್ಡಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts