More

    ಮೂಲೆ ಸೇರಿದ ದವಸ ಸಂಗ್ರಹ ಡಬ್ಬಿಗಳು

    ಕೂಡಲಸಂಗಮ: ಕೂಡಲಸಂಗಮ ಸಂಗಮೇಶ್ವರ ದೇವಾಲಯದಲ್ಲಿ ಭಕ್ತರು ದಾಸೋಹಕ್ಕೆ ಕೊಡುವ ದವಸ ಧಾನ್ಯಗಳು ದೇವಾಲಯ ಮಂಡಳಿಗೆ ಸಂಬಂಧಿಸಿದ ಖಾಸಗಿ ವ್ಯಕ್ತಿಗಳ ಪಾಲಾಗುತ್ತಿದ್ದು, ಅಭಿವೃದ್ಧಿ ಮಂಡಳಿ ಅಧಿಕಾರಿಗಳು ಮೌನ ವಹಿಸಿರುವುದು ಹಲವು ಸಂದೇಹಗಳಿಗೆ ಕಾರಣವಾಗಿದೆ.

    ಮಂಡಳಿ ಹಿಂದಿನ ಆಯುಕ್ತರು ಭಕ್ತರು ಕೊಡುವ ದವಸ ಧಾನ್ಯ ದಾಸೋಹಕ್ಕೆ ವಿನಿಯೋಗವಾಗಲಿ ಎಂದು ದೇವಾಲಯ ಪ್ರವೇಶ ದ್ವಾರದಲ್ಲಿ ಎಡಕ್ಕೆ ಮೂರು, ಬಲಕ್ಕೆ ಮೂರು ಡಬ್ಬಿಗಳನ್ನು ಇಟ್ಟಿದ್ದರು. ಅದರ ಮೇಲೆ ಪ್ರತಿದಿನ ಭಕ್ತರ ಪ್ರಸಾದಕ್ಕೆ ಧಾನ್ಯಗಳ ಸ್ವೀಕರಿಸುವ ದಾಸೋಹ ಡಬ್ಬಿ ಎಂದು ಬರೆಸಿದ್ದರು. ಓರ್ವ ಸಿಬ್ಬಂದಿ ನಿಯೋಜಿಸಿ ಧಾನ್ಯ ಕೊಟ್ಟವರ ಹೆಸರು ದಾಖಲಿಸಿಕೊಳ್ಳುವ ವ್ಯವಸ್ಥೆ ಮಾಡಿದ್ದರು. ಪ್ರತಿ ಅಮಾವಾಸ್ಯೆ ದಿನ ದವಸ ಧಾನ್ಯ ಸ್ವೀಕರಿಸಲು ನಾಲ್ಕರಿಂದ ಐದು ಸಿಬ್ಬಂದಿಯನ್ನು ನಿಯೋಜಿಸುತ್ತಿದ್ದರು. ಅಂದು 2 ರಿಂದ 4 ಕ್ವಿಂಟಾಲ್, ಉಳಿದ ದಿನ ಸ್ವಲ ಮಟ್ಟದ ದವಸ ಧಾನ್ಯ ಸಂಗ್ರಹವಾಗುತಿತ್ತು. ಪ್ರತಿ ತಿಂಗಳು ಸಂಗ್ರಹವಾದ ದವಸ ಧಾನ್ಯದ ವಿವರವನ್ನು ಮಂಡಳಿ ಕಾರ್ಯಾಲಯದ ನಾಮಲಕಕ್ಕೆ ಹಾಕುತ್ತಿದ್ದರು. ದವಸ ಧಾನ್ಯಗಳನ್ನು ಮಂಡಳಿಯಿಂದ ನಡೆಯುವ ದಾಸೋಹದಲ್ಲಿ ಬಳಸಲಾಗುತ್ತಿತ್ತು. ಶೇ.90 ರಷ್ಟು ಭಕ್ತರು ದೇವಾಲಯ ಪ್ರವೇಶ ದ್ವಾರದ ದಾಸೋಹ ಡಬ್ಬಿಗೆ ದವಸ ಧಾನ್ಯ ಹಾಕುವರು, ಉಳಿದ ಶೇ.10 ರಷ್ಟು ಭಕ್ತರು ಕಾರ್ಯಾಲಯದಲ್ಲಿ ಕೊಡುವರು. ಆಯುಕ್ತರ ಸೂಚನೆ ಇಲ್ಲದೆ ಮಂಡಳಿಯ ಕೆಲವು ಸಿಬ್ಬಂದಿ ಉದ್ದೇಶ ಪೂರ್ವಕವಾಗಿ ದಾಸೋಹ ಡಬ್ಬಿಗಳನ್ನು ತೆಗೆಯಿಸಿ ಖಾಸಗಿ ವ್ಯಕ್ತಿಗಳಿಗೆ ಸೇರುವಂತೆ ಮಾಡುತ್ತಿದ್ದಾರೆ. ದಾಸೋಹಕ್ಕೆ ಕೊಟ್ಟ ಕೆಲವು ದವಸ ಧಾನ್ಯ ಮಂಡಳಿಯ ಸಿಬ್ಬಂದಿ ಮನೆಗೂ ಸೇರುತ್ತಿವೆ. ತಡೆಯುವ ಕಾರ್ಯವನ್ನು ಮೇಲಧಿಕಾರಿಗಳು ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

    ಪ್ರತಿ ಅಮಾವಾಸ್ಯೆ ಸಂಗಮನಾಥನ ದರ್ಶನಕ್ಕೆ ಬರುತ್ತೇನೆ. ಬರುವಾಗ ದಾಸೋಹಕ್ಕೆ ಎಂದು ಕೆಲವು ದವಸ ಧಾನ್ಯ ತರುತ್ತೇನೆ. ಕೊಡಲು ಕಾರ್ಯಾಲಯಕ್ಕೆ ಹೋದರೆ ಸಿಬ್ಬಂದಿಯೇ ಇರುವುದಿಲ್ಲ. ಪ್ರವೇಶ ದ್ವಾರದ ಡಬ್ಬಿಗಳಿಗೆ ಹಾಕಬೇಕು ಎಂದರೆ ಡಬ್ಬಗಳೇ ಇಲ್ಲ. ಕಳೆದ ಐದು ಅಮಾವಾಸ್ಯೆಯಿಂದ ಈ ತೊಂದರೆ ಉಂಟಾಗುತ್ತಿದೆ ಎಂದು ಜಮಖಂಡಿಯ ಭಕ್ತ ಪ್ರಕಾಶ ಸಂಗಮ ಹೇಳುತ್ತಾರೆ.

    ದವಸ ಧಾನ್ಯ ಸಂಗ್ರಹ ಡಬ್ಬಿ ತೆಗೆದ ಮಾಹಿತಿ ಗಮನಕ್ಕೆ ಬಂದಿಲ್ಲ. ಕೂಡಲೇ ಡಬ್ಬಿಗಳನ್ನು ಇಡಿಸುತ್ತೇನೆ.
    ರಘು ಎ.ಇ., ಆಯುಕ್ತರು, ಕೂಡಲಸಂಗಮ ಅಭಿವೃದ್ಧಿ ಮಂಡಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts