More

    ಲಿಂಗಾಯತ ಧರ್ಮಕ್ಕಾಗಿ ಸ್ವಾರ್ಥ ಬಿಡಿ

    ಕೂಡಲಸಂಗಮ: ನಿಸ್ವಾರ್ಥಿಗಳ ತ್ಯಾಗದ ಮೇಲೆ ಲಿಂಗಾಯತ ಧರ್ಮ ನಿಂತಿದೆ. ಒಗ್ಗೂಡಲು ಪ್ರತಿಷ್ಠೆಯನ್ನು ಮರೆಯಬೇಕು. ಸ್ವಾರ್ಥ, ತ್ಯಾಗ ಬಿಡಬೇಕು ಎಂದು ಚಿತ್ರದುರ್ಗ ಮುರುಘರಾಜೇಂದ್ರ ಬೃಹನ್ಮಠದ ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.

    ಕೂಡಲಸಂಗಮದಲ್ಲಿ ನಡೆದ 34ನೇ ಶರಣ ಮೇಳದ ಎರಡನೇ ದಿನವಾದ ಬುಧವಾರ ಶರಣ ಮೇಳ ಉದ್ಘಾಟಿಸಿ ಮಾತನಾಡಿ ದುಷ್ಟರು, ನೀಚರನ್ನು ಪರಿವರ್ತನೆ ಮಾಡಿ ಬಸವಣ್ಣ ಶರಣ ಧರ್ಮ ಸ್ಥಾಪಿಸಿದರು. ದಿವ್ಯ ದೃಷ್ಟಿ, ದೂರ ದೃಷ್ಟಿ ಸೇರಿದಾಗಲೇ ಸಮಗ್ರ ದೃಷ್ಟಿ ಬರುವುದು. ಶರಣರು ಜೀವನದುದ್ದಕ್ಕೂ ಸಮಗ್ರ ದೃಷ್ಟಿಯಲ್ಲಿಯೇ ಬದುಕಿದರು. ಶರಣರು ನೀತಿವಂತರು, ದಯಾಪರರು ಆಗಿದ್ದರಿಂದಲೇ 12ನೇ ಶತಮಾನದಲ್ಲಿ ಅರಿವಿನ ಸ್ಫೋಟವಾಯಿತು. ಅರಿವಿನ ಸ್ಫೋಟಕ್ಕೆ ಮೂಲ ಕಾರಣ ವೈಚಾರಿಕತೆ ಎಂದರು.

    ಶರಣರು ಸದುದ್ದೇಶಕ್ಕಾಗಿಯೇ ಕಲ್ಯಾಣದಲ್ಲಿ ಸೇರಿದರು, ಸದ್ದುದೇಶಕ್ಕಾಗಿಯೇ ಕಲ್ಯಾಣದಿಂದ ಅಗಲಿದರು. ಶರಣರ ಜೀವನದಲ್ಲಿ ಸೇರಲು, ಅಗಲಲು ಸದ್ದುದೇಶ ಇದೆ. ಲಿಂಗಾನಂದ ಸ್ವಾಮೀಜಿ, ಮಾತಾಜಿಯವರಲ್ಲಿ ಬಸವ ಶಕ್ತಿ ಇದ್ದುದರಿಂದಲೇ ಇಂತಹ ಶರಣ ಮೇಳ ಕಳೆದ 34 ವರ್ಷದಿಂದ ನಿರಂತರವಾಗಿ ನಡೆಯುತ್ತ ಬಂದಿದೆ. ಆರೋಗ್ಯ ಪೂರ್ಣ ಸಮಾಜ ಕಟ್ಟಲು ಇಂತಹ ಶರಣ ಮೇಳದ ಅಗತ್ಯ ಇದೆ. ಒಕ್ಕೂಟ ವ್ಯವಸ್ಥೆಯಿಂದಲೇ ಜಗತ್ತಿನಲ್ಲಿ ಸಂಘಟನೆ ಸಾಧ್ಯವಾಗಿದೆ, ವಿಶ್ವಸಂಸ್ಥೆ ಸ್ಥಾಪನೆಗೂ ಪೂರ್ವದಲ್ಲಿ 12ನೇ ಶತಮಾನದಲ್ಲಿ ಬಸವಣ್ಣ ಒಕ್ಕೂಟ ವ್ಯವಸ್ಥೆ ಸ್ಥಾಪಿಸಿದ್ದ ಎಂದರು.

    ಅಧ್ಯಕ್ಷತೆಯನ್ನು ಶಾಸಕ ದೊಡ್ಡನಗೌಡ ಪಾಟೀಲ ವಹಿಸಿ ಮಾತನಾಡಿ, ಮಾತಾಜಿಯವರ ಸಂಘಟನೆ, ಪರಿಶ್ರಮದ ಲವಾಗಿ ಇಂದು ಇಂತಹ ಶರಣ ಮೇಳ ನಡೆಯುತ್ತಿದೆ. ಪ್ರವಾಹ ಸಂಭವಿಸಿದ ಸಂಕಷ್ಟದ ಸಮಯದಲ್ಲಿ ಈ ಭಾಗದ ಜನರಿಗೆ ಆಶ್ರಯ ಕಲ್ಪಿಸುವ ಕಾರ್ಯವನ್ನು ಬಸವ ಧರ್ಮ ಪೀಠ ಮಾಡಿತ್ತು ಎಂದರು.

    ಸಾನ್ನಿಧ್ಯವನ್ನು ಬಸವ ಧರ್ಮ ಪೀಠದ ಜಗದ್ಗುರು ಮಾತೆ ಗಂಗಾದೇವಿ ವಹಿಸಿದ್ದರು. ಇಳಕಲ್ಲ ವಿಜಯಮಹಾಂತೇಶ್ವರ ಸಂಸ್ಥಾನ ಮಠದ ಗುರು ಮಹಾಂತ ಸ್ವಾಮೀಜಿ, ಬಸವ ಧರ್ಮ ಪೀಠದ ಸಾಮಾಜಿಕ ಜಾಲತಾಣ ಉದ್ಘಾಟಿಸಿದರು. ಸಮಾರಂಭದಲ್ಲಿ ಭೋವಿ ಗುರು ಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಮಡಿವಾಳ ಗುರು ಪೀಠದ ಬಸವ ಮಾಚಿದೇವ ಸ್ವಾಮೀಜಿ, ಬಸವ ಧರ್ಮ ಪೀಠದ ಮಹಾದೇಶ್ವರ ಸ್ವಾಮೀಜಿ, ಸಿದ್ದರಾಮೇಶ್ವರ ಸ್ವಾಮೀಜಿ, ಚನ್ನಬಸವಾನಂದ ಸ್ವಾಮೀಜಿ, ಬಸವಪ್ರಭು ಸ್ವಾಮೀಜಿ, ಬಸವಕುಮಾರ ಸ್ವಾಮೀಜಿ, ಹುನಗುಂದ ಕ್ಷೇತ್ರ ಶಿಕ್ಷಣಾಧಿಕಾರಿ ಮಹಾದೇವ ಬೆಳ್ಳನವರ, ರಾಷ್ಟ್ರೀಯ ಬಸವ ದಳದ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಧನ್ನೂರ ಮುಂತಾದವರು ಇದ್ದರು.

    ಬಸವಾತ್ಮಜಿ ಪ್ರಶಸ್ತಿ ಪ್ರದಾನ
    2021ರ ಎರಡನೇ ಬಸವಾತ್ಮಜಿ ಪ್ರಶಸ್ತಿಯನ್ನು ಬೆಂಗಳೂರಿನ ಸುಮಂಗಲಿ ಸೇವಾಶ್ರಮದ ಅಧ್ಯಕ್ಷೆ ಎಸ್.ಜಿ. ಸುಶೀಲಮ್ಮ ಅವರಿಗೆ ಪ್ರದಾನ ಮಾಡಿದರು. 51 ಸಾವಿರ ರೂ. ಹಾಗೂ ಸ್ಮರಣ ಲಕವನ್ನು ಹೊಂದಿತ್ತು. ಸಮಾರಂಭದಲ್ಲಿ ಮಾತೆ ಮಹಾದೇವಿ ಬರೆದ ‘ವಚನ ಸಂಗಮ’, ಪತ್ರಕರ್ತ ಶ್ರೀಧರ ಗೌಡರ ಸಂಪಾದನೆಯ ‘ವಚನ ಸಿಂಚನ’ ಪುಸ್ತಕ ಬಿಡುಗಡೆ ಮಾಡಲಾಯಿತು.

    ಕಾವಿ ದೀಕ್ಷೆ ಪಡೆದ ಡಿಪ್ಲೊಮಾ ಇಂಜಿನಿಯರ್
    ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಬೀದರ್ ಜಿಲ್ಲೆಯ ದಿಲೀಪ್ ಭತಮುರ್ಗೆ ಮಾತಾಜಿಯವರ ಪ್ರವಚನದಿಂದ ಪ್ರಭಾವಿತನಾಗಿ ರಾಷ್ಟ್ರೀಯ ಬಸವ ದಳದ ಸಂಘಟನೆಯಲ್ಲಿ ತೊಡಗಿಕೊಂಡಿದ್ದ, ಮಾತಾಜಿ ಅನಾರೋಗ್ಯ ಉಂಟಾದಾಗ ಉದ್ಯೋಗ ಬಿಟ್ಟು ಮಾತಾಜಿಯವರ ಸೇವೆ ಮಾಡಿದ. ಮಾತಾಜಿಯವರ ಇಚ್ಛೆಯಂತೆ ಬುಧವಾರ ಬೆಳಗ್ಗೆ ಮಾತಾಜಿ ಲಿಂಗೈಕ್ಯ ಸ್ಥಳದಲ್ಲಿ ಮಾತೆ ಗಂಗಾದೇವಿಯವರಿಂದ ಜಂಗಮ ದೀಕ್ಷೆ ಪಡೆದು ಬಸವ ಯೋಗಿ ಸ್ವಾಮೀಜಿಯಾದರು. ಡಿಪ್ಲೊಮಾ ಮೆಕಾನಿಕಲ್ ಅಧ್ಯಯನವನ್ನು ಮಾಡಿದ್ದಾರೆ.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts