More

    ಕೃಷ್ಣಾ ತೀರದಲ್ಲಿ ಪ್ರವಾಹ ಭೀತಿ

    ನಂದೇಶ್ವರ : ಕೃಷ್ಣಾ ನದಿ ಉಗಮ ಸ್ಥಳ ಮಹಾರಾಷ್ಟ್ರದ ಮಹಾಬಲೇಶ್ವರದಲ್ಲಿ ಭಾರಿ ಪ್ರಮಾಣದಲ್ಲಿ ಮುಂಗಾರು ಮಳೆ ಸುರಿಯುತ್ತಿದ್ದು, ಇತ್ತ ಅಥಣಿ ತಾಲೂಕಿನ ಕೃಷ್ಣಾ ನದಿ ದಡದ ಗ್ರಾಮಸ್ಥರಿಗೆ ಮತ್ತೆ ಈ ವರ್ಷವೂ ಪ್ರವಾಹದ ಭೀತಿ ಆವರಿಸಿದೆ.

    ಕಳೆದ ಬಾರಿ ಸಂಭವಿಸಿದ್ದ ಪ್ರವಾಹದಿಂದಾಗಿ ಇಲ್ಲಿನ ಗ್ರಾಮಸ್ಥರ ಬದುಕು ಬೀದಿಗೆ ಬಂದಿತ್ತು. ಮನೆ-ಮಠ ಕಳೆದುಕೊಂಡು ಒಂದ್ಹೊತ್ತಿನ ಊಟಕ್ಕೂ ಪರದಾಡಿದ್ದರು. ಬೆಳೆಗಳು ಕೊಚ್ಚಿ ಹೋಗಿ ಅಪಾರ ಹಾನಿ ಉಂಟಾಗಿತ್ತು. ಶಾಶ್ವತ ಮರು ವಸತಿ ಕಲ್ಪಿಸುವ ಸರ್ಕಾರದ ಭರವಸೆ ಇನ್ನೂ ಈಡೇರಿಲ್ಲ. ಈಗ ಮತ್ತೆ ಆಗಮಿಸಿರುವ ಮುಂಗಾರು ಮಳೆ ‘ಪ್ರವಾಹ ಭಯ’ ತಂದಿದೆ. ಪ್ರವಾಹದಿಂದ ಹಾನಿಯಾದ ಜನವಾಡ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಇನ್ನೂ ನಿರ್ಮಾಣವಾಗಿಲ್ಲ. ನೆರೆ ಪೀಡಿತ ಪ್ರದೇಶಗಳಲ್ಲಿನ ರಸ್ತೆಗಳು, ಮನೆಗಳು, ಇತರ ಕಟ್ಟಡಗಳು ಇನ್ನೂ ಸುಸ್ಥಿತಿಗೆ ಬಂದಿಲ್ಲ. ಸಂತ್ರಸ್ತರು ಎಷ್ಟೇ ಹೋರಾಟ ಮಾಡಿದರೂ ಇನ್ನೂ ಪರಿಹಾರ ದೊರೆತಿಲ್ಲ. ಸಮಸ್ಯೆ ಇನ್ನೂ ಜೀವಂತ ಇರುವಾಗಲೇ ಮತ್ತೆ ಮುಂಗಾರು ಮಳೆ ಶುರುವಾಗಿದೆ.

    ‘ಮಹಾ’ ಭೀತಿ: ಹಿಪ್ಪರಗಿ ಡ್ಯಾಂಗೆ ನಿತ್ಯ 23 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಒಳ ಹರಿವಿನಷ್ಟೇ ನೀರನ್ನು 2 ಗೇಟ್‌ಗಳ ಮುಖಾಂತರ ಹೊರಗೆ ಬಿಡಲಾಗುತ್ತಿದೆ. ಒಟ್ಟು 6 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯವಿರುವ ಹಿಪ್ಪರಗಿ ಜಲಾಶಯದಲ್ಲಿ 3 ಟಿಎಂಸಿಗೂ ಹೆಚ್ಚು ನೀರು ಸಂಗ್ರಹವಿದೆ. ಮಹಾರಾಷ್ಟ್ರದಲ್ಲಿಯೂ ಜೋರು ಮಳೆ ಪ್ರಾರಂಭವಾಗಿದ್ದು, ಒಂದು ವಾರದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಕರ್ನಾಟಕಕ್ಕೆ ಹರಿದು ಬರುತ್ತಿದೆ. ಕೃಷ್ಣಾ ನದಿಯಲ್ಲಿ ಮತ್ತೆ ಪ್ರವಾಹ ಉಂಟಾದರೆ ನಮ್ಮ ಸ್ಥಿತಿ ಹೇಗೆ ಎಂದು ಕೃಷ್ಣಾ ನದಿ ತಟದ ಗ್ರಾಮಸ್ಥರು ಚಿಂತಿತರಾಗಿದ್ದಾರೆ.

    ಗ್ರಾಮಗಳ ಸ್ಥಳಾಂತರಿಸಿ: ನಿಯೋಜಿತ ಜಿರೋ ಪಾಯಿಂಟ್ ಮರು ವಸತಿ ಕೇಂದ್ರಕ್ಕೆ ನಂದೇಶ್ವರ, ಮಹಿಷವಾಡಗಿ, ಜನವಾಡ ಗ್ರಾಮಗಳು ಸ್ಥಳಾಂತರವಾಗಬೇಕಿದೆ. ಆದರೆ, ಅಲ್ಲಿ ಮೂಲ ಸೌಲಭ್ಯಗಳ ಅಭಿವೃದ್ಧಿ ಕೆಲಸ ನಿಧಾನಗತಿಯಲ್ಲಿ ಸಾಗಿದೆ. ರಡ್ಡೇರಹಟ್ಟಿ ಸಮೀಪದ ಮರು ವಸತಿ ಕೇಂದ್ರ ಸಿದ್ಧವಾಗಿದ್ದರೂ ಅಲ್ಲಿಗೆ ಸ್ಥಳಾಂತರವಾಗಬೇಕಿದ್ದ ದೊಡವಾಡ, ನಾಗನೂರ ಪಿ.ಕೆ., ಅವರಖೋಡ ಗ್ರಾಮ ಇನ್ನೂ ಸ್ಥಳಾಂತರವಾಗಿಲ್ಲ. ಸತ್ತಿ ಹಾಗೂ ಹಲ್ಯಾಳ ಗ್ರಾಮವನ್ನು ಸಂಪೂರ್ಣ ಮುಳುಗಡೆ ಗ್ರಾಮಗಳೆಂದು ಘೋಷಿಸಿ, ಈಗಲೇ ಅಗತ್ಯ ಸೌಕರ್ಯ ಕಲ್ಪಿಸಲು ಜಿಲ್ಲಾಡಳಿತ ಮುಂದಾಗಬೇಕು ಎಂದು ಕೃಷ್ಣಾ ನದಿ ಹಿಪ್ಪರಗಿ ಡ್ಯಾಂ ಹಿನ್ನೀರಿನ ಹಿತರಕ್ಷಣಾ ಸಮಿತಿ ಅಧ್ಯಕ್ಷ ರಮೇಶಗೌಡ ಪಾಟೀಲ ಒತ್ತಾಯಿಸಿದ್ದಾರೆ.

    ಮಹಾ ಸರ್ಕಾರಕ್ಕೆ ನೀರು ಬಿಡದಂತೆ ಸೂಚನೆ ನೀಡಿ

    ಅಥಣಿ ತಾಲೂಕಿನಲ್ಲಿ 24ಕ್ಕೂ ಹೆಚ್ಚು ಗ್ರಾಮಗಳು ಕೃಷ್ಣಾ ನದಿ ಪ್ರವಾಹಕ್ಕೆ ತುತ್ತಾಗುತ್ತವೆ. ಕಳೆದ ವರ್ಷ ಇಲ್ಲಿನ ಪ್ರಮುಖ ಬೆಳೆಯಾದ ಕಬ್ಬು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿ ಅಪಾರ ನಷ್ಟ ಉಂಟಾಗಿತ್ತು. ಆದರೂ ಈ ಬಾರಿ ರೈತರು ಮತ್ತೆ ಸಾಲ ಮಾಡಿ, ಧೈರ್ಯದಿಂದ ಕಬ್ಬು ನಾಟಿ ಮಾಡಿದ್ದಾರೆ. ಬೆಳೆಯೂ ಉತ್ತಮವಾಗಿ ಬಂದಿದೆ. ಆದರೆ, ಮತ್ತೆ ಪ್ರವಾಹ ಬಂದು ಬೆಳೆ ಹಾನಿಯಾದರೆ ಯಾವ ರೈತರೂ ಸುಖವಾಗಿ ಜೀವನ ಸಾಗಿಸಲು ಸಾಧ್ಯವಿಲ್ಲ. ಹೀಗಾಗಿ ರಾಜ್ಯ ಸರ್ಕಾರ ಸರ್ವಪಕ್ಷ ನಿಯೋಗದೊಂದಿಗೆ ಮಹಾರಾಷ್ಟ್ರ ಮುಖ್ಯಮಂತ್ರಿಯನ್ನು ಭೇಟಿಯಾಗಿ ಕೊಯ್ನ ಡ್ಯಾಂನಿಂದ ಕೃಷ್ಣಾ ನದಿಗೆ ಏಕಾಏಕಿ ನೀರು ಹರಿಸದಂತೆ ಸೂಚನೆ ನೀಡಬೇಕು ಎನ್ನುತ್ತಾರೆ ನದಿ ತಟದ ರೈತರು.

    ಕೃಷ್ಣಾ ನದಿಗೆ ಪ್ರವಾಹ ಬರುವ ಕುರಿತು ಅಥಣಿ ತಾಲೂಕಿನ ನದಿ ದಡದ ಗ್ರಾಮಗಳ ಜನರು ಆತಂಕಪಡಬೇಕಿಲ್ಲ. ಸದ್ಯ ಮಹಾರಾಷ್ಟ್ರದಲ್ಲಿ ಮಳೆ ಪ್ರಮಾಣ ಕಡಿಮೆ ಇದೆ. ಅನಿರೀಕ್ಷಿತವಾಗಿ ಪ್ರವಾಹ ಉಂಟಾದರೆ ಅದನ್ನು ಎದುರಿಸಲು ತಾಲೂಕಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಸ್ಥಳೀಯರು ಭಯಪಡುವ ಅಗತ್ಯವಿಲ್ಲ.
    | ದುಂಡಪ್ಪ ಕೋಮಾರ ತಹಸೀಲ್ದಾರ್, ಅಥಣಿ

    | ಚಿದಾನಂದ ಅ. ಪಾಟೀಲ, ನಂದೇಶ್ವರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts